ಕವಡೆ ಪಗಡೆ ಬದುಕು...
ಬೆಲೆಯಿಲ್ಲದ ಕಡೆ ಬದುಕೇ ದುಸ್ತರ
ಪಗಡೆಯಾಟದಾ ದಾಳ ಕವಡೆ ತರ
ಎಸೆದರು ಬಿದ್ದರೆ ಸರಿ, ಗರ ಅವರ ತರ
ಬರದಿದ್ದರೆ ಸರಿಯಂಕೆ, ಹೀಗಳೆದು ಬೈದರ ||
ಎಸೆದಾಗ ಒರಟು, ಬಿದ್ದಾಗ ನೋವು
ಗಟ್ಟಿ ನೆಲವು ಕುಟ್ಟಿ, ತರಚುವ ಬಾವು
ನಡೆಸೊ ಕಾಯಿಗೂ ಉಂಟು, ಮೆತ್ತೆ ಹಾಸಿನ ಭಾಗ್ಯ
ಪಗಡೆ ಕವಡೆಗೆ ಯಾಕೊ, ನೋವಿನ ದೌರ್ಭಾಗ್ಯ ||
ಹಸ್ತದಲ್ಲಿ ಕೂರಬಿಡದೆ ಸ್ವಸ್ಥ, ಉರುಳಿಸುತ ಸತತ
ಮತ್ತೊಂದು ಮುಚ್ಚಿ ಸುತ್ತ, ನಡುವೆ ಉಸಿರುಗಟ್ಟಿಸುತ
ಕುಲುಕಿಸಿ, ತಿರುವಿ, ರುಬ್ಬಿ, ದಬ್ಬಿ - ಎಸೆವಾಟ ಗೊತ್ತಾ?
ನೂರಾಟ ಆಡಿದರೂ ಯಾರು ಕೇಳರು - ಸುಸ್ತಾಯ್ತಾ ? ||
ಆದರೂ ದಾಳದ ಬದುಕು, ಅಂಕಿಯಲೆ ನಗಬೇಕು
ಸವೆದರು ಸಹಿಸುತ ಜನರ, ಸಂತಸಕೆ ಕುಣಿಯಬೇಕು
ವಿಧಿಯಾಟದ ಹೆಸರಲಿ ಯಾರೊ, ಆಡಿಸುವರು ಆಟ
ಗರ ಬೀಳದ ಹೊತ್ತಲ್ಲಿ ಮಾತ್ರ, ದಾಳಕಷ್ಟೆ ಬೈದಾಟ ||
ಚೌಕಾಭಾರ ಪಗಡೆಯಾಟ, ಮನರಂಜನೆ ವಕ್ತಾರ
ಯಾಕೊ ದಾಳವಾಗಿ ಹೋದೆ ? ಎಲ್ಲರಿಗು ಸದರ
ಬೆಲೆಯಿಲ್ಲದ ಕವಡೆಯ ಬದುಕು, ನಿಕೃಷ್ಟವಾಗಿ ನಿಸ್ಸಾರ
ಏಕಿಂತ ಜನ್ಮವೊ ಶ್ರೀ ಹರಿಯೇ, ದುರಿತವಿತ್ತೇನು ಅಪಾರ ? ||
- ನಾಗೇಶಮೈಸೂರು
(first picture from Kannada Wikipedia : https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%... Dice picture from wikipedia: https://en.m.wikipedia.org/wiki/File:6sided_dice.jpg)
Comments
ಉ: ಕವಡೆ ಪಗಡೆ ಬದುಕು...
ನಾಗೇಶ ಮೈಸೂರುರವರಿಗೆ ವಂದನೆಗಳು
ತಮ್ಮ ಈ ಕವನ ನಮ್ಮ ಬದುಕನ್ನು ಕವಡೆಯಾಟಕ್ಕೆ ಹೋಲಿಸಿ ನೋಡಿ ಕೊಳ್ಳುವಂತೆ ಮಾಡುತ್ತದೆ. ಪ್ರತಿಯೊದು ನುಡಿ ಮತ್ತು ಪದಗಳು ಅರ್ಥಪೂರ್ಣವಾಗಿ ರೂಪಗೊಂಡಿವೆ, ಬಹಳ ಅರ್ಥಪೂರ್ಣ ಕವನ ಧನ್ಯವಾದಗಳು.
In reply to ಉ: ಕವಡೆ ಪಗಡೆ ಬದುಕು... by H A Patil
ಉ: ಕವಡೆ ಪಗಡೆ ಬದುಕು...
ಪಾಟೀಲರೆ ನಮಸ್ಕಾರ. ತಮ್ಮ ಮೆಚ್ಚುಗೆಗೆ ಧನ್ಯವಾದಗಳು :-)
ಉ: ಕವಡೆ ಪಗಡೆ ಬದುಕು...
ನಮಸ್ತೆ, ನಾಗೇಶರೇ.
'ಪರಮಾತ್ಮ ಆಡಿಸಿದ್ಹಂಗೆ ಆಡುವೆ ನಾನು' ಹಾಡು ನೆನಪಿಗೆ ಬಂದಿತು!!
In reply to ಉ: ಕವಡೆ ಪಗಡೆ ಬದುಕು... by kavinagaraj
ಉ: ಕವಡೆ ಪಗಡೆ ಬದುಕು...
ಕವಿಗಳೇ ನಮಸ್ಕಾರ ಮತ್ತು ಧನ್ಯವಾದಗಳು. ಕವನ ಆ 'ಪರಮಾತ್ಮನ' ಕುರಿತದ್ದಲ್ಲವಾದರು ಹೇಗೊ ಪರಮಾತ್ಮನೊಬ್ಬನ ನೆನಪು ತರಿಸಿತಲ್ಲ, ಸಾಕು ಬಿಡಿ!