ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)

ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)

ಕವನ

ಪುಟ್ಟನ ನಾಯಿಮರಿ

 

ನಾಯಿಯೊಂದು ಓಡಿಬಂದು
ಕಲ್ಲ ಮೇಲೆ ಕುಳಿತು ಕೊಂಡು
ಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು|


ಬೀದಿ ನಾಯಿ ಎಲ್ಲ ಸೇರಿ
ಬಾಲಎಳೆದು ಕಿವಿಯ ಕಚ್ಚಿ
ಹಿಂದೆ ಮುಂದೆ ಸೇರಿ ಅದನು ಕಾಡತೊಡಗಲು|


ಗೆಳೆಯರೊಡನೆ ಆಡುತಿದ್ದ
ಮುದ್ದು ಪುಟ್ಟ ಓಡಿಬಂದು
ಕಲ್ಲು ಎಸೆದು ಎಲ್ಲ ನಾಯ ದೂರ ಕಳಿಸಿದ|


ನಾಯಿಮರಿಯ ತಲೆಯ ಸವರಿ
ಎರಡು ಕೈಲಿ ಎತ್ತಿ ಹಿಡಿದು
ಮನೆಯದೆಲ್ಲಿ ಏಕೆ ಇಲ್ಲಿ ಬಂದೆ ಎಂದನು |


ತನ್ನ ಒಡೆಯ ತನ್ನ ತೊರೆದ
ಬೀದಿಯಲ್ಲಿ ನೂಕಿ ಹೋದ
ಎಂದು ನುಡಿದು ಮರಿಯು ಕಣ್ಣ ನೀರ ಸುರಿಸಿತು|


ಕೊರಗ ಬೇಡ ಮರಿಯೆ ನಿನ್ನ
ನನ್ನ ಮನೆಗೆ ಓಯ್ವೆನೆಂದು
ಪುಟ್ಟ ಮರಿಯ ಕಣ್ಣ ನೀರ ತಾನು ಒರೆಸಿದ|


ಗೆಳೆಯರೊಡನೆ ಕೂಡಿಕೊಂಡು
ನಾಯ ಕೊರಳಿಗೊಂದು ದಾರ ಕಟ್ಟಿ
ಮನೆಗೆ ಓಯ್ದು ಒಳಗೆ ಗಿಡದ ಬುಡಕ್ಕೆ ಕಟ್ಟಿದ|


ಎಲ್ಲಿ ತಂದೆ ಇದನು ಮೊದಲು
ಹೊರಗೆ ಕಳಿಸು ಎಂದು ನುಡಿದ
ತಾಯಿ ಅವನ ಕರೆದು ಬೆನ್ನ ಮೇಲೆ ಹೊಡೆದಳು|


ಮರಿಯ ಹೊರಗೆ ದೂಡೆ ತನಗೆ
ರಾತ್ರಿ ಊಟ ಬೇಡವೆಂದು  
ಬಿಡದೆ ಚಂಡಿ ಹಿಡಿದ ಪುಟ್ಟ ಹೊರಗೆ ಕುಳಿತನು|


ಮಗನ ಹಿಡಿದ ಹಟವ ಕಂಡು  
ಹೊರಗೆ ಬಂದೆ ಅವನ ತಂದೆ
ಮರಿಯು ಇರಲಿ ಒಳಗೆ ಬರಲಿ ಎಂದು ನುಡಿದನು|


ತಂದೆ ನುಡಿದ ಮಾತು ಕೇಳಿ
ಬಿಂಕದಿಂದ ತಾಯ ನೋಡಿ
ಮರಿಯ ಹೊತ್ತು ಕುಣಿದ ಪುಟ್ಟ ಒಳಗೆ ನಡೆದನು||

 

ಸೂಚನೆ: ಇದನ್ನು ತಿರುಕನೋರ್ವ ಊರಮುಂದೆ/ಕಾಗೆಯೊಂದು ಹಾರಿಬಂದು  ಎನ್ನುವ ಪದ್ಯದ ರೀತಿ ಓದಿಕೊಳ್ಳಬಹುದು

 

(ಶ್ರೀ ರಘುರವರ ಚೀಲದಲ್ಲಿ ಕೈಹಾಕಿ ತೆಗೆದುಕೊಂಡಿರುವ ಶೈಲಿ ಆದ್ದರಿಂದ ಅವರು ಕ್ಷಮಿಸಬೇಕು)

Comments