ಕವನ ಮತ್ತು ಕವಿತೆಗಳಲ್ಲಿನ ವ್ಯತ್ಯಾಸಗಳು

ಕವನ ಮತ್ತು ಕವಿತೆಗಳಲ್ಲಿನ ವ್ಯತ್ಯಾಸಗಳು

ಎಷ್ಟೋ ಜನರು ಒಂದು ಕವನವನ್ನು ಕವಿತೆ ಎಂದು, ಕವಿತೆಯನ್ನು ಕವನವೆಂದು ಕರೆಯುವುದನ್ನು ಬಹುಷಃ ಎಲ್ಲರೂ ಸಹಜವಾಗಿ ನೋಡಿಯೇ ಇರುತ್ತೀವಿ. ಆದರೇ... ಓದುಗನಿಗೆ ಅದು ಒಂದು ವಿಷಯವೇ ಅಲ್ಲದಿರಬಹುದು. ಯಾಕೆಂದರೇ ಒಂದು ಕವನ ಅಥ್ವಾ ಕವಿತೆಯನ್ನು ಓದಿದನಂತರ ಅದ್ಭುತ ಇಲ್ಲವಾದರೇ ಸೂಪರ್ ಎಂದು ತನ್ನ ಮೆಚ್ಚುಗೆ ತಿಳಿಸಿ ಬರೆದವನಿಗೆ ಪ್ರೋತ್ಸಾಹಿಸಿ ಸುಮ್ಮನಾಗಿಬಿಡುತ್ತಾನೆ.

ಆದರೇ ಇದರಿಂದ ಬರೆಹಗಾರನಿಗೆ ಅಷ್ಟಾಗಿ ಸಂತೋಷ ಸಿಗುವುದಿಲ್ಲ ಎನ್ನಬಹುದು. ಯಾಕೆಂದರೆ... ಆತ ಒಂದು ಕಾವ್ಯ ರಚನೆ ಮಾಡುವ ಮುನ್ನ ತನ್ನ ಅನುಭವ ಮತ್ತು ಕಲ್ಪನೆಗಳ ಆಧಾರದಿಂದ ಮನಸ್ಸಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರದ ರೂಪ ನೀಡಿ, ತನ್ನದೇ ಆದ ಶೈಲಿಯಿಂದ ಪದ ಚಮತ್ಕಾರವನ್ನುಂಟು ಮಾಡಿ ಬರೆದಿರುತ್ತಾನೆ. ಅವನ ಆಶಯ ತನ್ನ ಬರೆಹ ಸ್ವಲ್ಪ ಜನರಿಗಾದರೂ ಸರಿಯಾಗಿ ಅರ್ಥವಾದರೇ ಸಾರ್ಥಕ ಎನ್ನುವಂಥ ಮನಸ್ಥಿತಿ ಎಲ್ಲ ಕವಿಗಳಲ್ಲೂ ಸಹಜವಾಗಿಯೇ ಇರುವಂತಹದ್ದು.
ಅದನ್ನು ಅರಿತ ಜನರು ಕವನಕ್ಕೆ ತಕ್ಕಂತೆ ವಿಮರ್ಶೆ ಮಾಡಿದಾಗ ಅವನಲ್ಲಿ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಈ ನಿಟ್ಟಿನ ಪ್ರಶಂಸೆಗಳು ಸಮಾಜಕ್ಕೆ ಆತನು ಇನ್ನಷ್ಟು ಕೊಡುಗೆ ನೀಡಲು ಪ್ರೇರೆಪಿಸುತ್ತವೆ.

ಆದರೆ ಸುಮ್ಮನೆ ಬರೆದ ಸಾಲುಗಳು ಕವನ ಅಥ್ವಾ ಕವಿತೆಯಾಗುವುದಿಲ್ಲ.
ಬರೆಹಗಾರನಲ್ಲಿ ಒಂದು ವಿಷಯವಸ್ತು ನಿರ್ಧಿಷ್ಟವಾದ ಸ್ಥಾನದಲ್ಲಿದ್ದು ಅದಕ್ಕೆ ಪದಗಳನ್ನು ಬೆಸೆದಾಗ ಅದು ಕವನದ ರೂಪ ಪಡೆದು ಜನರಿಗೆ ಓದಲು ಮುದನೀಡುತ್ತದೆ. ಮತ್ತು ಮನಸಿನಲ್ಲಿ ಕೆಲಕಾಲ ಅದರ ಪ್ರಭಾವ ಸಂಚಾರವಾಗುತ್ತದೆ.

ಇನ್ನು ವಿಷಯಕ್ಕೆ ಬರೋಣ...
ಈ ಮೇಲೆ ಹೇಳಿದಂತೆ ಕವಿತೆ ಮತ್ತು ಕವನಕ್ಕೆ ಇರುವ ವ್ಯತ್ಯಾಸಗಳೇನು..? ಆಪ್ತವಲಯದಲ್ಲಿ ಹಲವುಭಾರಿ ಇಂತಹದ್ದೊಂದು ಪ್ರಶ್ನೇ ಆಗಾಗ್ಗೆ ಪ್ರತಿಧ್ವನಿಸಿದ ಕಾರಣ ಈ ಉತ್ತರಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇನೆ.

ಕವನ
1). ಇದರಲ್ಲಿ ನಾಲ್ಕು ಅಥವಾ ಆರು ಸಾಲಿನ ಚೌಕಟ್ಟಿರುತ್ತದೆ.
2). ಕವನದಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳು ಹೆಚ್ಚಾಗಿರುತ್ತವೆ.
3). ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿರುತ್ತದೆ.
4). ನವ, ನವೀನವಾದ ಪದಗಳ ಬಳಕೆಗೆ ಹೆಚ್ಚಿನ ಆಧ್ಯತೆ ಇರುತ್ತದೆ.
5). ಇದರಲ್ಲಿನ ವಿಷಯವಸ್ತು ಶೃಂಗಾರ ಹಾಸ್ಯದಿಂದ ಹಿಡಿದು ಎಲ್ಲವನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿರುತ್ತದೆ.
6). ಆಧುನಿಕತೆಗೆ ಒತ್ತು ನೀಡಿ ರಚಿಸಲಾಗುತ್ತದೆ.
7). ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುತ್ತದೆ.
8). ಕೆಲವುಕಡೆ ವಿವಿಧ ರೀತಿಯ ಪ್ರಾಸಕ್ಕೆ ತುಂಬಾ ಪ್ರಾಮುಖ್ಯತೆ ನೀಡಿ ರಚಿಸಲಾಗುತ್ತದೆ.
9). ಎರಡು ಅಥವಾ ಮೂರು ಸಾಲಿನಿಂದ ರಚಿತವಾದ ಕವನಗಳಿಗೆ ಹೈಕು/ಹನಿಗವನ/ಚುಟುಕು ಎಂದು ಕರೆಯಲಾಗಿದ್ದು, ಇದನ್ನು ಮನೋಹರವಾಗಿ, ಲಘುವಾಗಿ ರಚಿಸಬಹುದಾಗಿದೆ.
10). ವರ್ಣರಂಜಿತ ಪದಗಳಿಂದ ತುಂಬಿದ್ದು ಸಕಾರ ಮತ್ತು ವಿರಾಳ ಭಾವವನ್ನು ಮೂಡಿಸುವುದರಲ್ಲಿ ಸಫಲತೆಯನ್ನು ಕಂಡುಕೊಂಡಿರುತ್ತದೆ.
_________________________

ಕವಿತೆ
1). ಇದರಲ್ಲಿ ಯಾವ ಚೌಕಟ್ಟುಗಳು ಇರುವುದಿಲ್ಲ.
2). ಇದರಲ್ಲಿ ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ವಿಷಯಗಳನ್ನಿಟ್ಟುಕೊಂಡು ಬರೆಯಬಹುದಾಗಿದೆ.
3). ಎಲ್ಲ ರೀತಿಯ ಪದಗಳ ಬಳಕೆ ಮಾಡಿ ಬರೆಯಲಾಗುತ್ತದೆ.
4). ಕವಿತೆ ಪ್ರಾಸ, ಸರಳತೆ ಹಾಗೂ ಲಯಬದ್ಧತೆಯಿಂದ ಕೂಡಿರುತ್ತದೆ.
5). ಬಹುತೇಕ ರಚನೆಗಳು ಹೆಚ್ಚೆಚ್ಚು ಸಾಲುಗಳಿಂದ ಕೂಡಿದ್ದು ಉತ್ತಮವಾದ ಸಂದೇಶವನ್ನು ನೀಡುತ್ತವೆ.
6). ಕೆಲವರು ಕ್ಲಿಷ್ಟಕರವಾದ ಪದಗಳ ಬಳಕೆ ಮಾಡಿದರೆ, ಇನ್ನೂ ಕೆಲವರು ತೀರಾ ಸರಳವಾದ ಪದಗಳನ್ನು ಬಳಸಿ ಬರೆಯುವುದು ಕವಿತೆಯ ವೈಶಿಷ್ಟ್ಯತೆ.
7). ಎಲ್ಲರಲ್ಲಿ ಉತ್ತಮ ಮನೋಭಾವ ಮೂಡಿಸಲು ಕವಿತೆ ಸಹಕಾರಿಯಾಗುವಂತೆ ರಚಿಸಬೇಕಾಗುತ್ತದೆ.
8). ಇದರಲ್ಲಿನ ಉದ್ದೇಶ ಸಮಾಜ ಸುಧಾರಣೆಗೆ ಹೆಚ್ಚಿನ ಒತ್ತು ಕೊಡುವಂತಿರಬೇಕು.
9). ಒಂದು ಕವಿತೆಯಲ್ಲಿ ಹಲವು ರೀತಿಯ ಆಯಾಮಗಳು ಒಗ್ಗೂಡಿಸಿ ಬರೆಯಬಹುದು.
10). ಮನಸ್ಸಿನಲ್ಲಿ ಮೂಡುವ ನೋವು-ನಲಿವು, ಕಷ್ಟ-ಸುಖ, ಸರಸ-ವಿರಸ ಎಲ್ಲಾ ಭಾವನೆಗಳಿಗೆ ವಿಸ್ತಾರ ರೂಪಕೊಟ್ಟು ಬರೆಯಬೇಕೆನ್ನುವುದು ಕವಿತೆಯಲ್ಲಿನ ವಿಶೇಷತೆಯಾಗಿರುತ್ತದೆ.
________________________

ಈ ಪೈಕಿಯ ಹತ್ತು ವ್ಯತ್ಯಾಸ-ಗಳನ್ನೊಳಪಟ್ಟ ಉತ್ತರಗಳು ಎಲ್ಲರಿಗೂ ಎಷ್ಟರಮಟ್ಟಿಗೆ ಸರಿ/ತಪ್ಪು ಅನಿಸಿದೆಯೋ ನನಗೆ ತಿಳಿದಿಲ್ಲ.
ಆದರೇ ಒಬ್ಬ ಕವಿ ಯಾವ್ಯಾವ ವಿಷಯಗಳನ್ನು ನೆನಪಿಡಬೇಕೆಂದು ತಿಳಿಸುವುದೇ ನನ್ನ ಉದ್ದೇಶವಾಗಿದೆ.

ಒಂದು ಕವಿತೆ ಎಂದರೆ ಅದು ಬರೀ ಕವಿತೆಯಷ್ಟೇ ಎಂದು ಪರಿಗಣಿಸಲಾಗುವುದಿಲ್ಲ. ಅದನ್ನು ಕವಿ ತನ್ನ ಮನದಿಂದ ತಿಳಿಸಬಹುದಾದ ಸಂದೇಶವನ್ನು ಈ ರೂಪದಲ್ಲಿ ಬರೆದೊಪ್ಪಿಸಲು ಆಯ್ದುಕೊಂಡ ಮಾರ್ಗವಾಗಿರುತ್ತದೆ. ಹೀಗೆ ಎಲ್ಲ ವಿಚಾರಗಳನ್ನು ಒಳಗೊಂಡ ರಚನೆ ಎಲ್ಲರಿಗೂ ಮಾದರಿಯಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಅಂಶವನ್ನು ನಾವೆಲ್ಲರೂ ಗುರುತಿಸಬಹುದು.

ಹೂವ ತುಂಬಿಕೊಂಡ ಮಾಮರವ ಕೇಳಿದೆ ಕವಿತೆ ಏಂದರೇನು?
ಮಾಮರ ಹೇಳಿತು, ಕವಿತೆ ಎಂದರೆ ಮಣ್ಣ ಸಾರವ ಹೀರಿ ಸಿಹಿಹಣ್ಣ ನೀಡುವುದು. ಹಸಿರ ಬಯಲಲ್ಲಿ ಮೇಯುತ್ತಿದ್ದ ಹಸುವ ಕೇಳಿದೆ, ಕವಿತೆ ಎಂದರೇನು? ಕವಿತೆ ಎಂದರೆ ಅಂಬಾ ಎನ್ನುವ ಕರುವಿಗೆ ಹಾಲುಣಿಸುವಂತಹ ವರ್ಣಿಸಿಲಾಗದ ಪುಳಕ.
ತೊದಲ ನುಡಿವ ಮಗುವ ಕೇಳಿದೆ, ಕವಿತೆ ಎಂದರೇನು?
ಮಗು ನಕ್ಕು, ನಗುವೇ ಕವಿತೆ ಎಂದಿತು.
ಕೇಳಿದೆ ಮಳೆಯ, ಕವಿತೆ ಎಂದರೇನು? ಕವಿತೆ ಎಂದರೇ ಮಳೆಯ ಸ್ಪರ್ಶದಿಂದ ಭುವಿಯಲ್ಲಿ ಪಸರಿಸಿದ ಘಮಲು.
ಮುದ್ದಾದ ಮಗುವನ್ನು ಮಡಿಲಲ್ಲಿ ಲಾಲಿಸುವ ತಾಯಿಯ ಬಳಿ ಕೇಳಿದೆ, ಕವಿತೆ ಎಂದರೇನು?
ಕವಿತೆ ಎಂದರೆ, ತೊದಲಾಡುವ ಕಂದನ ಮೊದಲಕ್ಷರದ ನುಡಿ.
ಕಟ್ಟೆಯ ಮೇಲೆ ಕುಳಿತ ವೃದ್ಥನ ಕೇಳಿದೆ ಕವಿತೆ ಎಂದರೇನು?
ಆತ ತಾನು ಸವೆಸಿದ ಬದುಕ ತೆರೆದಿಟ್ಟು ಇದೇ ಅದ್ಭುತ ಕವಿತೆ ಎಂದ.
ಬೀಜ ತನ್ನೊಳಗೆ ಉದುಗಿಸಿಕೊಂಡ ಫಲವತ್ತಾದ ಕಪ್ಪು ನೆಲವ ಕೇಳಿದೆ ಕವಿತೆ ಎಂದರೇನು? ಬೀಜದಿಂದ ಚಿಗುರ ಹೊರ ಇಣುಕಿಸಿ ನಸುನಕ್ಕಿತು.
ಪ್ರೆಶ್ನೆಗಳ ಹೆಚ್ಚಿದಷ್ಟು ಕವಿತೆಯ ಅರ್ಥ ಮತ್ತಷ್ಟು ವಿಸ್ತಾರವಾಗತೊಡಗಿತು. ಕವಿತೆ ಮತ್ತಷ್ಟು ರಂಗು ಪಡೆಯತೊಡಗಿತು...

ಹೀಗೆ ಬಗೆದಷ್ಟು ಮುಗಿಯದ ವಿಷಯಗಳು ಈ ಕವಿತೆಯಲ್ಲಿ ಅಡಕವಾಗಿವೆ. ಸಧ್ಯಕ್ಕೆ ಇಷ್ಟಕ್ಕೆ ವಿರಾಮವಿಡುತ್ತೇನೆ.

ಧನ್ಯವಾದಗಳೊಂದಿಗೆ
ನಿಮ್ಮ ವಿನು.