ಕವಲು ದಾರಿ

ಕವಲು ದಾರಿ

ಬರಹ

ದಿನಾಂಕ: ಎಪ್ರಿಲ್ ೯, ೨೦೦೮

ಕವಲು ದಾರಿ

ಇರುಳು ಕಳೆದು ಹಗಲು ಮುತ್ತಿದರೂ
ಬದುಕಿನ್ನೂ ಅರೆಗತ್ತಲಲಿ
ಊಹು! ಏನೂ ಕಾಣಿಸುತ್ತಿಲ್ಲ ಮನಸಿಗೆ
ಮುಚ್ಚಿದ ಕಣ್ಣು ತೆರೆದರೂ
ಬಂದಿಸಿದ ಭಾವನೆಗಳ ಬಿಡಿಸಿದರೂ
ಮನಸ್ಸು, ಕನಸು ಎಲ್ಲಾ
ಗೊಂದಲದ ಗೂಡು

ಜಾಡಿಸಿ ಓಡಿಸುವ ಬವಣೆ
ಕಿಟಕಿಯ ಪಟ ಪಟನೆ ಬಡಿವಂತೆ
ನೆಲಗಚ್ಚಿ ಕೂತ ರಾಡಿಯ ತೊಳೆವಂತೆ
ಮನದಲ್ಲಿ ಭಾವನೆಗಳ ತಿಕ್ಕಾಟ
ಉರಗಗಳ ಸರಸದಂತೆ
ಯೋಚನೆಗಳ ಹೊಯ್ದಾಟ
ನಿಂತ ನೀರ ಕಲುಕಿ
ಮಲಗಿದ್ದ ಭಾವನೆಗಳ ಕೆದಕಿ

ಕಟ್ಟಿದ ಕಂಬಿಗಳ ಕಿತ್ತು
ಬೆಳಕಿನೆಡೆ ಮುನ್ನುಗ್ಗುತಿರೆ
ಕಣ್ಣಲೇನೋ ನೋವು, ಸುಡುವ ಬಿಸಿಲು
ಕಣ್ಣ ತುಂಬಾ ರಾಚಿ
ಉದ್ವೇಗವ ಹತ್ತಿಕ್ಕಿ ಹೊರಬಿದ್ದೆ
ತೋರುವ ದಾರಿಯತ್ತ ಕಾಲ ನೆಟ್ಟು
ಹೊರ ಬಂದು ನಿಂತು ನೋಡಲು
ಮತ್ತದೇ ಕವಲುದಾರಿ