ಕವಿತಳಿಲ್ಲದೆ, ಕವಿತೆ

ಕವಿತಳಿಲ್ಲದೆ, ಕವಿತೆ

ಬರಹ

ಕವಿತಳಿಲ್ಲದೆ, ಕವಿತೆ
ಮನಕೆ ಒಗ್ಗಿತು ಹೇಗೆ?
ಗಾಳಿಯಿಲ್ಲದೆ, ಗಂಧ
ಜಗಕೆ ಹಬ್ಬಿತು ಹೇಗೆ?

ಕವಿತಳನು, ಕವಿತೆಯನು
ಎದೆಯಲದುಮಿಕೊಂಡು
ಹೊಳೆಯ ದಾಟಿ, ಕಡಲನಾರಿ
ಪರನಾಡಲಿಳಿದುಕೊಂಡೆ।

ಅವಕಾಶವೊ, ಅನಿವಾರ್ಯವೊ?
ಬಾಳ್ವೆಯ ಸುದಿನವೊ, ದುರ್ದಿನವೊ
ಆರನರಿಯೆ, ಆರಕಾಣೆ
ಬರಿ ಗೊಂದಲವು, ಮನದೊಳಗೆ....

ಎದುರು ಗೊಂಡವರೆಲ್ಲ
ಹಲ್ಲು ಕಿರಿವಾಗ
ಇಷ್ಟವೊ, ಅನಿಷ್ಟವೊ
ಮುಖವರಳುವುದು ಅದರರಿವಿಲ್ಲದೆಯೆ।

------1------
ಸುತ್ತಲೆಂದರೆ, ಒಪ್ಪಿತೇಗೆ ಮನ
ಒಂಟಿಯಾಗಿ, ಒಬ್ಬೊಂಟಿಯಾಗಿ
ಬೇಸರದ ಆಸರಿಕೆಗೆ, ಅವಳಿಲ್ಲದೆ
ಕವಿತಳಿಲ್ಲದೆ, ಜೊತೆಯಾಗಿ

ತುಡಿತವೊ, ಎದೆ ಮಿಡಿತವೊ
ಭಾವತುಮುಲದ ತೀವ್ರತೆಯೊ
ನನ್ನೂರ ನೇಸರನ, ಬೇಸರಕೆ
ಜೊತೆ ಮಾಡಿದಳು, ಬೈಗಿನಲು ಬೆಳಗಿನಲು

ಕವಿತಳಿಲ್ಲದೆ, ಬಳಿಯಲ್ಲಿ
ಬರಿ ಕನಸು, ಇರುಳಲ್ಲಿ
ನಾ ನಿಲ್ಲಿ, ಅವಳಲ್ಲಿ
ಬರಿ ನೆನಪು ನಮ್ಮಲ್ಲಿ।

ಕವಿತಳನು, ಕವಿತೆಯನು
ನಾ ದೂರಮಾಡಿಕೊಂಡು
ಹಗಲು, ಇರುಳು ಬಡಿದಾಡುತಿರುವೆ
ಜಗದ ನೊಗವ ಮೇಲೇರಿಕೊಂಡಂತೆ

ಇರುವುದೊಂದೆ,ಸಮಾಧಾನ
ಇದು ಎಲ್ಲಾ ಬರಿ ನಾಲ್ಕುದಿವಸ
ಕವಿತೆಯನು, ಕವಿತಳನು ಕಾಣ್ವದಿನ
ದೂರವಿಲ್ಲವೆಂಬುದೆ, ಮನಕೆ ಹರುಷ
- ಜಯಪ್ರಕಾಶ ನೇ ಶಿವಕವಿ।