ಕವಿತೆ ಮುದುಡಿದೆ
ಕವಿತೆ ಬರೆಯದ ಕೈಗಳ ಮೇಲೆ,
ಮನಸ್ಸು ಮುನಿಸುಕೊಂಡಿದೆ
ಅಳುವ ಅದೆಷ್ಟೋ ಕಂದಮ್ಮಗಳ
ನೋವು ನಿಲ್ಲುವವರೆಗೂ !!!
ಕವಿತೆ ಹೊರ ಬರುವುದಿಲ್ಲ ಎಂದು
ಮನಸ್ಸೊಳಗೆ ಮುದುಡಿ ಕುಳಿತಿದೆ,,,
ಹುಣ್ಣಿಮೆಯಲಿ, ಬೆಳದಿಂಗಳು
ಕಳೆದು ಹೋದಂತೆ
ಬಿಸಿ ಸೂರ್ಯ ಕಣ್ಣಿಗೆ ಗೋಚರಿಸಿದರೂ
ಬೆಳಕು ನೀಡದೆ ಕೋಪಗೊಂಡಂತೆ
ಕವಿತೆ ಕೋಪಗೊಂಡಿದೆ
ಬೆವರು ಹರಿಸಿ, ಅನ್ನ ಬೆಳೆದ
ರೈತ ದಿನವೂ ಉಪವಾಸ ಮಲಗುವಂತೆ
ಕವಿತೆ ಉಪವಾಸ ಮಲಗಿದೆ,
ಮೇಣದ ಬತ್ತಿಯ ಕಾಲಿಯಾದ ನೆರಳು
ಮತ್ತದರ, ಗಟ್ಟಿ ಹನಿಯಂತೆ
ಕವಿತೆ ಜಡಗಟ್ಟಿದೆ
ಅಯ್ಯೋ ಇದು ಮಳೆಯಲ್ಲ,,,,
ಹೆಣ್ಣೊಬ್ಬಳ ಆಕ್ರಂದನ ಮುಗಿಲ ತುಂಬಾ
ತುಂಬಿ,,, ಆಕೆಯ ಕಣ್ಣೀರು
ಮಳೆಯಂತೆ ಸುರಿಯುತ್ತಿದೆ,
ನೆನೆದ ಮನಗಳು ಮುದುಡಿದಂತೆ ;
ನನ್ನ ಕವಿತೆ ಮುದುಡಿ ಕುಳಿತಿದೆ.
-- ನವೀನ್ ಜೀ ಕೇ
Comments
ಉ: ಕವಿತೆ ಮುದುಡಿದೆ
ಆತ್ಮೀಯ ನವೀನ್ ಜಿಕೆ ಜೀ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಉತ್ತಮ ಕವನವನ್ನು ನೀಡಿದ್ದೀರಿ. ಕಣ್ತಪ್ಪಿನಿಂದ 'ಖಾಲಿಯಾದ' ಅನ್ನುವುದು 'ಕಾಲಿಯಾದ' ಆಗಿದೆ ಅಂದಕೊತೀನಿ. ಸುಂದರ ಸಾಲುಗಳು. ವಂದನೆಗಳು.
In reply to ಉ: ಕವಿತೆ ಮುದುಡಿದೆ by lpitnal
ಉ: ಕವಿತೆ ಮುದುಡಿದೆ
ಭಾವಪೂರ್ಣ ಪ್ರತಿಕ್ರಿಯೆಗೆ ಒಂದನೆಗಳು ಇತ್ನಾಳರೇ
ಉ: ಕವಿತೆ ಮುದುಡಿದೆ
ನವೀನರೆ ನಮಸ್ಕಾರ, ಮುದುಡಿದ ಮನ ಕವಿತೆಯಾಗಿ ಅರಳಿದೆ ಎಂದರೆ ಸರಿಯೇನೊ; ಕವಿತೆ ಘನವಲ್ಲದ ದ್ರವವಲ್ಲದ ಅನಿಲವೂ ಅಲ್ಲದ ಅವ್ಯಕ್ತ ಅನುಭೂತಿಯ ಅಭಿವ್ಯಕ್ತಿಯಲ್ಲವೆ ? :-)
In reply to ಉ: ಕವಿತೆ ಮುದುಡಿದೆ by nageshamysore
ಉ: ಕವಿತೆ ಮುದುಡಿದೆ
ನಾಗೇಶರಿಗೆ ನಮಸ್ತೆ,,,,,,,, ನೀವು ಹೇಳಿದಂತೆ ಕಾವ್ಯ ಒಂದು ಅವ್ಯಕ್ತ ಅನುಭೂತಿಯ ಅಭಿವ್ಯಕ್ತಿ,,,,,,,,,, ಪ್ರತಿಕ್ರಿಯೆಗೆ ಧನ್ಯವಾದಗಳು