ಕವಿಯಾಗು

ಕವಿಯಾಗು

ಬರಹ

ಕವಿಯಾಗು, ಕಾವ್ಯದ ತರಂಗಗಳ ಸೆಲೆಯಾಗು
ಭೋರ್ಗರೆವ ಭಾವಗಳ ನಯ ನಿದರ್ಶಕನಾಗು ||
ರಾಗಗಳ, ರಂಜನೆಯ, ರಸಗಳಾ ನೆಲೆಯಾಗು
ಅರ್ಥಯಿಸೊ ಪದಗಳನು ಬೆಸೆವ ಕುಸುರಿಗನಾಗು || ೧ ||

ಜಗದಲ್ಲಿ ಹರಿದಿರ್ಪ ಹುಚ್ಚು ಹೊಳೆ ತೊರೆಗಳನು
ಚಕ್ರದಲಿ ಸಿಲುಕಿರ್ಪ ಜೀವಜಂತುಗಳನ್ನು ||
ಸಾವಕಾಶದಿ ನಿಂತು, ಸಾವಧಾನಿಸಿ ಕಂಡು
ಸೌಂದರ್ಯ ತೋರ್ಗೊಡಿಸೊ ಪ್ರಕೃತಿಯಾ ಕಣ್ಣಾಗು || ೨ ||

ಸಾರವಿಲ್ಲದ ಸಾರೆಯನು ಪೋಷಿಸಿ ಬೆಳೆಸುತ
ಸವಿಯಾದ ಸೊಗಸಾದ ತೊಳೆಯಾಗಿ ಸಂಸ್ಕರಿಸಿ ||
ಹಸಿದು ಹಂಬಲಿಪರ್ಗೆ ಪ್ರೀತಿಯಿಂದರ್ಪಿಸುತ
ಮೆರೆವ ಹಲಸಿನ ತೆರದಿ ತನಿರಸದ ಹಣ್ಣಾಗು || ೩ ||

ತನ್ನೆಲ್ಲ ಹೊಂಗನಸಿನಾಸೆಗಳ ನೆಲೆಯಲ್ಲಿ
ಬಿತ್ತಿದಾ ಬೀಜಕ್ಕೆ ಅಂಗಾಂಗ ಬೆಳೆಸುತಲಿ ||
ಜೀವವನು, ಭಾವವನು, ಅಂದವನು, ಚೆಂದವನು
ಹಡೆವ ತಾಯಿಯ ತೆರದಿ ಕ್ರಿಯೆಯಲ್ಲಿ ಹೆಣ್ಣಾಗು || ೪ ||

ರಸಿಕ ಮನಗಳ ಲಹರಿ ಹರಿಸುವಂಥವನಾಗು
ಕದಡು ಮನಗಳನು ತಿಳಿಗೊಳಿಪ ಸ್ಫಟಿಕವಾಗು ||
ಭಾವಾರ್ಥ ಕಲ್ಪನೆಗೆ ಮನವ ಮಿಡಿಸುವನಾಗು
ದನಿಯಾಗು, ತನಿಯಾಗು, ಸವಿಯಾಗು, ಕವಿಯಾಗು || ೫ ||