ಕವಿಯ ಇನ್ವಿಜಿಲೇಷನ್ ಡ್ಯೂಟಿ! - ೭

ಕವಿಯ ಇನ್ವಿಜಿಲೇಷನ್ ಡ್ಯೂಟಿ! - ೭

ಉದಯರವಿಯ ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗಲೇ ಗಮನ ಸೆಳೆದ ಬೇರೊಂದು ಕವಿತೆಯ ಕಾರಣದಿಂದಾಗಿ, ನನ್ನ ದಾರಿ ಒಂದು ಹೊರಳುವಿಕೆಯನ್ನು ಕಂಡಿದೆ. ಮತ್ತೆ ಉದ್ಯಾನವನಕ್ಕೆ ಬರುವ ಮೊದಲು, ನೇರ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನ ಉಪನ್ಯಾಸ ಮಂದಿರಕ್ಕೆ ಒಂದು ಬೇಟಿ ಕೊಟ್ಟುಬಿಡೋಣ!?

’ಇನ್ನೂ ನಾಲ್ಕು ಪೀರಿಯಡ್ ಹೆಚ್ಚಿಗೆ ಪಾಠ ಬೇಕಾದರೆ ಮಾಡಬಹುದು, ಇನ್ವಿಜಿಲೇಷನ್ ಡ್ಯೂಟಿ ಮಾಡುವುದು ಮಾತ್ರ ಆಗುವುದಿಲ್ಲ’ ಎಂದು ಗೊಣಗಿಕೊಳ್ಳುವ ಅಧ್ಯಾಪಕ ಮಿತ್ರರನ್ನು ನಾನು ಕಂಡಿದ್ದೇನೆ. ಗ್ರಂಥಪಾಲಕನಾಗಿರುವ ನನಗೆ, ಕೆಲಸಕ್ಕೆ ಸೇರಿದ ಹೊಸತರಲ್ಲಿ ಇನ್ವಿಜಿಲೇಷನ್ ಡ್ಯೂಟಿ ಮಾಡಬೇಕಾಗಿದ್ದುದರಿಂದ ಅದರ ತಾಪವನ್ನು ನಾನೂ ಅನುಭವಿಸಿದ್ದೇನೆ. ಒಂದು ದೊಡ್ಡ ಹೋರಾಟದ ನಂತರವೇ ನಾನು ಆ ಕರ್ಮದಿಂದ ವಿನಾಯ್ತಿ ಪಡೆದಿದ್ದೇನೆ. ಈಗ ಮತ್ತೆ ಅಧ್ಯಾಪನಕ್ಕಿಳಿದಿರುವುದರಿಂದ ಅದನ್ನು ಅನುಭವಿಸಲೇ ಬೇಕಾಗಿದೆ. ಅದು ಒತ್ತಟ್ಟಿಗಿರಲಿ. ಈಗ ಅದರಿಂದಲೂ ಉಪಯೋಗ ಪಡೆಯಬಹುದು ಎಂಬುದನ್ನು ನೋಡೋಣ.

೧೯.೦೯.೧೯೪೦ ಪರೀಕ್ಷಾ ಹಾಲ್ ಆಗಿದ್ದ ಇಂಟರ್ ಮೀಡಿಯೇಟ್ ಕಾಲೇಜಿನ ಉಪನ್ಯಾಸ ಮಂದಿರದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಅದಕ್ಕೆ ಇನ್ವಿಜಿಲೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು ಕೆ.ವಿ. ಪುಟ್ಟಪ್ಪ. ಸ್ಥಾವರ ಪ್ರಕೃತಿಯವರಾದ ಅವರಿಗೆ ಏಕಾಂತವೂ ಅಚ್ಚುಮೆಚ್ಚಿನ ಹವ್ಯಾಸ. ಆ ಏಕಾಂತದಲ್ಲಿ ಅವರ ಮನಸ್ಸು ಕಾಲದೇಶಗಳನ್ನು ಮೀರಿ ವಿಹರಿಸುತ್ತಿರುತ್ತದೆ! ಇನ್ವಿಜಿಲೇಷನ್ ಡ್ಯೂಟಿಯಲ್ಲಿ ಸುಮಾರು ಮೂರು-ಮೂರೂವರೆ ಗಂಟೆಗಳ ಕಾಲ ಆ ದೊಡ್ಡ ಹಾಲಿನಲ್ಲಿ ಇದ್ದ ಅಷ್ಟೂ ಹುಡುಗರ ಪರೀಕ್ಷಾ ಕರ್ಮಕ್ಕೆ ಸಾಕ್ಷಿಯಾಗಬೇಕಾದ ಸಂದರ್ಭ. ಕುಳಿತಲ್ಲೇ ರಸಸಮಾಧಿಯನ್ನೇರಬಲ್ಲ ಕವಿಚೇತನ ಅಲ್ಲಿನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಪರೀಕ್ಷೆಯೆಂಬ ಕರ್ಮವನ್ನು ಅನುಭವಿಸಲೇಬೇಕಾದ ವಿದ್ಯಾರ್ಥಿವೃಂದ ತೀವ್ರತರವಾದ ಶ್ರದ್ದೆಯಿಂದ ಉತ್ತರಿಸುವ ಕ್ರಿಯೆಯಲ್ಲಿ ತೊಡಗಿತ್ತು. ದೊಡ್ಡ ಹಾಲ್. ಹಾಲಿನ ಗೋಡೆಗಳಲ್ಲಿ ನೇತುಹಾಕಿದ್ದ ಹಲವಾರು ವರ್ಣಚಿತ್ರಗಳು. ಅವುಗಳನ್ನು ಗಮನಿಸುತ್ತಾ, ವರ್ಣಸೌಂದರ್ಯವನ್ನು ಆಸ್ವಾದಿಸುತ್ತಾ, ಅಜ್ಞಾತ ಕಲಾಕಾರನ ಸೌಂದರ್ಯ ಪ್ರಜ್ಞೆಯನ್ನು ಮೆಚ್ಚುತ್ತಾ ಸಾಗುವ ಕವಿಯ ಮನಸ್ಸು ಒಂದು ಚಿತ್ರದ ಮೇಲೆ ನೆಟ್ಟುಬಿಡುತ್ತದೆ. ಹಿಮಾಲಯದ ಬೆಟ್ಟ ಕಣಿವೆಗಳಲ್ಲಿ ಸೂರ್ಯನ ಬಿಸಿಲು ನಿರ್ಮಿಸಿದ ಬೆಳಕು-ನೆರಳಿನಾಟವನ್ನು ಕಲಾವಿದ ಸೆರೆಹಿಡಿದಿರುತ್ತಾನೆ. ಅದನ್ನು ನೋಡುತ್ತ ನೋಡುತ್ತಲೇ ಇನ್ವಿಜಿಲೇಟರ್ ಪುಟ್ಟಪ್ಪ ಹಿಂದೆ ಸರಿದು ಕವಿ ಕುವಂಪು ಜಾಗೃತನಾಗಿಬಿಡುತ್ತಾನೆ. ಆಗ ಮೂಡಿಬಿಡುತ್ತದೆ ’ಇನ್‌ವಿಜಿಲೇಷನ್ ಅಥವಾ ಒಂದು ಚಿತ್ರಕ್ಕೆ’ ಎಂಬ ಕವಿತೆ!

 

ಇನ್ವಿಜಿಲೇಷನ್ ಎಂಬ ಅನಿವಾರ್ಯ ಕರ್ಮದಿಂದ ಕ್ಷಣಮಾತ್ರದಲ್ಲಿ ಮುಕ್ತಿಹೊಂದಿ ರಸಸಮಾಧಿಯನ್ನೇರಿದ ಕವಿಯ ಹೃದಯ ಹೀಗೆ ಹಾಡುತ್ತದೆ.

ಎಂತಹ ರಸಕ್ಷಣಂ ಕ್ಷಣಿಕದಿಂ ಪಾರಾಗಿ 
ಪಡೆದಿದೆ ಚಿರತ್ವಮಂ ವರ್ಣಶಿಲ್ಪಿಯ ಕಲಾ
ಮಂತ್ರದಿಂದೀ ಚಿತ್ರದಲ್ಲಿ!

ಚಿತ್ರದಲ್ಲಿ ಹಿಮಪರ್ವತಗಳ ಕಣಿವೆಗಳ ಮೇಲೆ ಬೆಳಕು ಮೂಡಿಸಿದ ಚಿತ್ತಾರ, ಚಲನೆಯನ್ನು ಕಳೆದುಕೊಂಡು ಸ್ಥಿರವಾಗಿ ನಿಂತಂತೆ ಕಾಣುತ್ತಿರುವ ಸರೋವರ, ಅದರ ದಡದಲ್ಲಿ ಚಲನೆಯನ್ನು ಪ್ರತಿನಿಧಿಸುವಂತೆ ಕಾಣುತ್ತಿರುವ ಹರಿಣ ದಂಪತಿಗಳು - ಇವುಗಳ ಚಿತ್ರಣವನ್ನು ಕವಿ ಹೀಗೆ ಕಟ್ಟಿ ಕೊಡುತ್ತಾರೆ.

-ಮೂಡುವ ಬಿಸಿಲ್
ಚುಂಬಿಸಿದೆ ದೂರದ ಹಿಮಾಲಯದ ನರೆನವಿರ
ಶೃಂಗಮಂ; ಕಣಿವೆಯಡವಿಯ ತೋಳ್ಗಳಪ್ಪುಗೆಯ
ಸರಸದಲಿ ರತಿನಿದ್ರೆಗದ್ದಿದೆ ಸರೋವರಂ;
ಸರಸಿಯೆದೆಯಿಂ ಕೆಲಕ್ಕೋಸರಿಸಿದಂಚಲದ
ತೆರನ ಕೊಳದಂಚಿನಲಿ ಹರಿಣ ದಂಪತಿಯೆಂತು
ನಿಂತಿರುವುವದೊ ಚಲಚ್ಚರಣ ವಿನ್ಯಾಸದಿಂ
ಚಕಿತವೆಂಬಂತೆ!

ಕೇವಲ ಚಿತ್ರಕೃತಿಯ ಆಸ್ವಾದನೆ, ವರ್ಣನೆ ಇಷ್ಟಕ್ಕೆ ಕವಿಚೇತನ ವಿಶ್ರಮಿಸುವುದಿಲ್ಲ. ನೀರಸವಾಗಿ ಕಳೆದುಹೋಗಬಲ್ಲ ಮೂರು ಘಂಟೆಗಳ ಕಾಲ, ತನ್ನನ್ನು ಕಾಲದೇಶಗಳ ಆಚೆಗೆ ಕರೆದೊಯ್ದು, ಕಲಾಯಾತ್ರೆ ಮಾಡಿಸಿದ ವರ್ಣಚಿತ್ರ ಮತ್ತು ಅದರ ಕರ್ತೃವಿಗೊಂದು ನಮಸ್ಕಾರವನ್ನು ಹೇಳಿ ಉಪಕಾರ ಸ್ಮರಣೆಯನ್ನೂ ಮಾಡಿಬಿಡುತ್ತದೆ, ಹೀಗೆ.

-ಪರಕಾಲ ದೇಶಂಗಳಂ
ಪೊಕ್ಕೆನ್ನ ಮನಕೆ ದೊರೆಕೊಂಡತ್ತು ವಿಪಿನಗಿರಿ
ಸುಂದರ ಕಲಾಯಾತ್ರೆ. ಮೂರು ಘಂಟೆಯ ದೀರ್ಘ
ನೀರಸ ಪರೀಕ್ಷೆಯೀ ಕಾಪು ನಿನ್ನಿಂದೆ, ಓ
ವರ್ಣಕೃತಿ, ರಸ ರಥೋತ್ಸವವಾಯ್ತು: ಧನ್ಯ ನೀಂ,
ಅಜ್ಞಾತವರ್ಣಶಿಲ್ಪಿ, ನಿನಗಿದೊ ನಮಸ್ಕಾರ!
ಚಿರಮಕ್ಕೆ ನೀನರಿಯದೀ ನಿನ್ನ ಉಪಕಾರ!

ಒಂದು ಕಲಾಕೃತಿ - ಸಾಹಿತ್ಯ, ಚಿತ್ರ, ಶಿಲ್ಪ ಯಾವುದೇ ಇರಲಿ, ಒಮ್ಮೆ ಕಲಾಕಾರನಿಂದ ನಿರ್ಮಾಣವಾದ ಮೇಲೆ ಕಲಾಕಾರನ ಕೆಲಸ ಮುಗಿದು ಹೋದಂತೆಯೇ! ನಂತರ ಏನಿದ್ದರೂ, ಆ ಕಲಾಕೃತಿಯೊಂದಿಗೆ ಮುಖಾಮುಖಿಯಾಗುವ ಸಹೃದಯ ಪ್ರತಿಭೆಯದ್ದೇ ಪೂರ್ಣ ಕಾರುಬಾರು! ತನ್ನ ಕೃತಿ ಯಾವಾಗ, ಎಂತಹ ಸಂದರ್ಭದಲ್ಲಿ, ಯಾರಿಗೆ ಯಾವ ರೀತಿಯ ಭಾವನೆಗಳನ್ನು ಬಡಿದೆಬ್ಬಿಸುತ್ತದೆಯೋ, ಚಿಂತನೆಗಳನ್ನು ಹುಟ್ಟು ಹಾಕುತ್ತದೆಯೋ, ಯಾವ ರೂಪದಲ್ಲಿ ಅವರಿಗೆ ಉಪಕಾರವಾಗುತ್ತದೆಯೋ ಎಂಬುದು ಮೂಲ ಕಲಾಕಾರನಿಗೆ ಗೊತ್ತಿರುವುದಿಲ್ಲ. ಉಪಕಾರ ಸ್ಮರಣೆ ಎಂಬುದು ಸಹೃದಯ ಪ್ರತಿಭೆಗಿರಬೇಕಾದ ಅಗತ್ಯ ಲಕ್ಷಣ! ಆ ಉಪಕಾರ ನಿತ್ಯವಾಗಬೇಕು. ’ಚಿರಮಕ್ಕೆ ನೀನರಿಯದ ಈ ನಿನ್ನ ಉಪಕಾರ’.

ಮೂರು ಘಂಟೆಗಳ ಕಾಲ ಕವಿಯ ಭಾವಲೋಕಕ್ಕೆ ದೀಪ್ತವಾಗಿದ್ದ ಆ ಚಿತ್ರದ ರಚನೆಕಾರ ಯಾರೆಂಬುದು ಕವಿಗೆ ಗೊತ್ತಿಲ್ಲ. ಅದು ಹಾಗೂ ಆ ಚಿತ್ರದ ಬಗ್ಗೆಯೂ ನಮಗೆ ಗೊತ್ತಿಲ್ಲ. ಆದರೆ ಏಕಕಾಲದಲ್ಲಿ ಚಿತ್ರವನ್ನು, ಚಿತ್ರಸೌಂದರ್ಯವನ್ನು, ಅದರಿಂದ ಉದ್ಬೋಧಗೊಂಡ ಕವಿಯ ಮನಸ್ಸಿನಿಂದ ಕೃತಿರೂಪಕ್ಕಿಳಿದ ಈ ಕವಿತೆಯನ್ನು ಆಸ್ವಾದಿಸುತ್ತಿರುವ ನಾವು ಆ ಕಲಾವಿಭೂತಿಗೆ ’ನಿನಗಿದೊ ನಮಸ್ಕಾರ! ಚಿರಮಕ್ಕೆ ನೀನರಿಯದೀ ನಿನ್ನ ಉಪಕಾರ!’ ಎಂದು ಹೇಳೋಣವೇ!?

ಕೊನೆಯ ಮಾತು: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಉಪಕಾರವನ್ನೂ ನಾವು ಸ್ಮರಣೆ ಮಾಡಬೇಕು! ಏಕೆಂದರೆ ಅವರು ಕವಿಗೆ, ಕವಿತೆಯ ಆವಿರ್ಭಾವಕ್ಕೆ ತೊಡಕಾಗಲಿಲ್ಲ, ನೆಪವಾದರು ಅವರಿಗರಿವಿಲ್ಲದೆ ಸಾಕ್ಷಿಯಾದರು, ಅದಕ್ಕೆ! ಅಂದು ಪರೀಕ್ಷೆ ಬರೆದ ಯಾರಾದರು ಈಗ ಅಂದರೆ ಸುಮಾರು ಎಪ್ಪತ್ತು ವರ್ಷಗಳ ನಂತರ (ಬಹುಶಃ ಈಗ ಅವರಿಗೆ ೯೦ ವರ್ಷಗಳಾದರೂ ಆಗಿದ್ದಿರಬೇಕು) ಈ ಕವಿತೆಯನ್ನು ಓದಿ ಪುಳಕಗೊಳ್ಳಬಹುದು.

Comments