ಕವಿಶೈಲ ಸುತ್ತೋಣ...
ಓ ಕವಿಶೈಲ...
ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯ ವೈವಿಧ್ಯಮಂ ರಚಿನೆ ನೀಂ ಭುವನದಲಿ
ಸ್ವರ್ಗವಾಗಿ ನನಗೆ !
ಎಂದು ಕುವೆಂಪು ‘ಕವಿಶೈಲ’ ವನ್ನು ಸ್ತುತಿಸುತ್ತ 6 ಸಾನೆಟ್ಗಳನ್ನು ರಚಿಸಿದ್ದಾರೆ.
ಆ ಪ್ರದೇಶವು ಅವರು ‘ಕವಿಶೈಲ’ ಎಂದು ಕರೆಯುವ ಮೊದಲು ಅಲ್ಲಿಯ ಅತಿ ಸಹಜ ಪ್ರಾಕೃತಿಕ ಉತ್ಸವದಂತಹ ಉಲ್ಲಾಸಕ್ಕೆ ಅವರ ಪೂರ್ವಿಕರು ‘ದಿಬ್ಬಣಗಲ್ಲು’ ಎಂದು ಕರೆಯುತ್ತಿದ್ದರಂತೆ. ಓಹ್ ಎಷ್ಟು ಅರ್ಥಪೂರ್ಣ ದೇಸಿ ಬೆಡಗು! ಕುವೆಂಪು ಅವರು ‘ಮಲೆನಾಡಿನ ಚಿತ್ರಗಳು’ ಗದ್ಯ ಚಿತ್ರಗಳ ಸಂಕಲನದ ಮುನ್ನುಡಿಯಲ್ಲಿ ಆ ಸ್ಥಳವನ್ನು ಕುರಿತು ಹೀಗೆ ವಿವರಣೆ ನೀಡಿದ್ದಾರೆ. "ಮನೆಯ ತೆಂಕಣ ದಿಕ್ಕಿಗೆ ಮನೆಗೆ ಮುಟ್ಟಿಕೊಂಡೇ ಏರಿ ಏರಿ ಹೋಗುವ ಬೆಟ್ಟದೋರೆಯಿದೆ. ಐದು ಹತ್ತು ನಿಮಿಷಗಳಲ್ಲಿಯೆ ಅದರ ನೆತ್ತಿಗೆ ಹೋಗಬಹುದು. ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು ಸುತ್ತಲೂ ಸ್ವಲ್ಪ ಬಯಲಾಗಿ ದೂರದ ದೃಶ್ಯಗಳನ್ನು ನೋಡಲು ಅನುಕೂಲವಾಗಿದೆ."
ಮಲೆನಾಡಿನ ಪರ್ವತಗಳಲ್ಲಿ ಅಂತಹ ಸ್ಥಾನಗಳು ಅಪೂರ್ವ. ಎಲ್ಲಿ ನೋಡಿದರೂ ಮಹಾರಣ್ಯಗಳೆ ತುಂಬಿರುವುದರಿಂದ ಶಿಖರಗಳಲ್ಲಿ ಬಂಡೆಗಳಿದ್ದು ಬಯಲಾಗಿರುವುದೇ ಕಷ್ಟ ! ಅದರಲ್ಲಿಯೂ ನಮ್ಮ ಮನೆಯಲ್ಲಿರುವಂತೆ ಐದು ಹತ್ತು ನಿಮಿಷಗಳಲ್ಲಿಯೆ ಶಿಖರವನ್ನು ಸೇರುವಷ್ಟು ಸಮೀಪದಲ್ಲಿ ಅಂತಹ ಶೈಲಸ್ಥಾನಗಳು ಮತ್ತೆಲ್ಲಿಯೂ ಇಲ್ಲವೆಂದೇ ಹೇಳಬೇಕು. ನಾನಂತೂ ನೋಡಿಲ್ಲ. ಆ ಸ್ಥಳಕ್ಕೆ ‘ಕವಿಶೈಲ’ ಎಂದು ನಾಮಕರಣವಾದುದು ಇತ್ತೀಚಿನ ಸಂಗತಿ !’ ಕುವೆಂಪು ಅವರು ‘ಕಾಡು ಮುತ್ತು ಕೊಡುತಲಿರುವ ಸೊಬಗು ವೀಡು ನನ್ನ ಮನೆಯನ್ನು ನೋಡಲು ಬನ್ನಿ’ ಎಂದು ತಮ್ಮ ಗುರು ಟಿ.ಎಸ್. ವೆಂಕಣ್ಣಯ್ಯ, ಸ್ನೇಹಿತ ತೀ.ನಂ.ಶ್ರೀಕಂಠಯ್ಯ, ಹಿರಿಯರಾದ ನಾ.ಕಸ್ತೂರಿಯವರನ್ನು 1935 ರ ಬೇಸಿಗೆಯಲ್ಲಿ ಕುಪ್ಪಳಿಗೆ ಕವಿಶೈಲಕ್ಕೆ ಕರೆದುಕೊಂಡು ಹೋಗಿದ್ದರು. ಆ ಎರಡು ಸಂದರ್ಭಗಳಲ್ಲಿ ಅವರೆಲ್ಲರೂ ಕವಿಶೈಲದ ಅರೆ ಬಂಡೆಯ ಮೇಲೆ ತಂತಮ್ಮ ಹೆಸರಿನ ಪ್ರಥಮಾಕ್ಷರಗಳನ್ನು ಕಲ್ಲುಗಳಿಂದ ಹೊಡೆದು ಕೆತ್ತಿದ್ದಾರೆ. ಅದು ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಇತಿಹಾಸ. ಆ ಬಂಡೆಯ ಪಕ್ಕದಲ್ಲಿಯೇ ಕುವೆಂಪು ಸಮಾಧಿ ಇದೆ.
ಹೊಳೆಗಳ ಸೆರಗಿನ ಪಚ್ಚೆಯ ಬಯಲು, ಬಿರುಮಳೆಗಂಜದ ಬೆಟ್ಟದ ಸಾಲುಗಳ ನಡುವೆ ಸೂರ್ಯ ತನ್ನ ಕೆಲಸ ಮುಗಿಸಿ ಆ ದಿನಕ್ಕೊಂದು ಶುಭ ವಿದಾಯ ಹೇಳುವ ಇಲ್ಲಿನ ಸನ್ನಿವೇಶ ಪ್ರಕೃತಿ ಪ್ರಿಯರಿಗೆ ರಸಗವಳವಿದ್ದಂತೆ. ಕುವೆಂಪು ಅವರು ತಮ್ಮ ಮೌನ, ಧ್ಯಾನದ ನಿಸರ್ಗ ನೆಲೆಯನ್ನು ‘ಕವಿಶೈಲ’ ಎಂದು ಕರೆದ ಅಂಕಿತನಾಮವು ಇಂದು ಅನ್ವರ್ಥನಾಮವಾಗಿ ಹೋಗಿದೆ.
ಕವಿಶೈಲ ಪ್ರಕೃತಿಯ ಸುಂದರ ಮೈಮಾಟ. ಅಲ್ಲಿ ಸೂರ್ಯೋದಯ, ಸೂರ್ಯಾಸ್ತ ಎರಡನ್ನೂ ಒಂದೇ ಕಡೆಯಲ್ಲಿ ಸವಿಯಬಹುದು. ರಮಣೀಯ ಕೆಂಪು ಬೆಳಗನ್ನು ಆಸ್ವಾದಿಸಬಹುದು. ಮೆಲ್ಲನೆ ಮೈ-ಮನ ತೀಡುವ ಸಂಜೆಯ ತಂಗಾಳಿ ಸ್ಪರ್ಶ ಅದ್ಭುತ ಅನುಭವ. ಮಾಗಿಯ ಚಳಿಯಲಿ ಗಡಗಡ ನಡುಗಬಹುದು. ಶರತ್ ಕಾಲದಲ್ಲಿ ಹಾರುವ ಮೋಡಗಳ ನಡುವಿನಲ್ಲಿ ನಿಂತು ಮೇಘಗಳ ನರ್ತನ ಕಣ್ಣು ತುಂಬಿಸಿಕೊಳ್ಳಬಹುದು.
'ಮೌನವೆ ಮಹತ್ತಿಲ್ಲಿ, ಈ ಬೈಗು ಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾಸಹ್ಯಗಿರಿ!’
ರಸಋಷಿ ಕುವೆಂಪು ಅವರ 'ಹಸುರು' ಪದ್ಯ
ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ!
ಹಸುರಾಗಸ; ಹಸುರು ಮುಗಿಲು;
ಹಸುರು ಗದ್ದೆಯಾ ಬಯಲು;
ಹಸುರಿನ ಮಲೆ; ಹಸುರು ಕಣಿವೆ;
ಹಸುರು ಸಂಜೆಯೀ ಬಿಸಿಲೂ!
ಅಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ;
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ!
ಅದೊ ಹುಲ್ಲಿನ ಮಕಮಲ್ಲಿನ
ಪೊಸಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
ಬೇರೆ ಬಣ್ಣವನೆ ಕಾಣೆ!
ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು!
ಹಕ್ಕಿಯ ಕೊರಲಿಂಪು ಹಸುರು!
ಹಸುರು ಹಸುರಿಳೆಯುಸಿರೂ!
ಹಸುರತ್ತಲ್! ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ!
ಕವಿಯ ಮನದಲ್ಲಿ ಮಿಂದು - ಹಸಿರೊಳಗೆ ಬೆರೆತು ಕುವೆಂಪು ಅವರ ತನ್ಮಯತೆಯ ಸ್ಪರ್ಶ ಪಡೆಯೋಣ ಸರ್ವಕಾಲಕ್ಕೂ - ಸರ್ವರಿಗೂ ಸಲ್ಲುವ ಅವರ ಕವಿ ಮನಸ್ಸಿಗೆ ನಮಿಸುವ ಬನ್ನಿ - ಕವಿಶೈಲಕ್ಕೆ...
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು