ಕವಿ ಮನಸ್ಸಿನ ಅಜಾತಶತ್ರು - ಅಟಲ್ ಬಿಹಾರಿ ವಾಜಪೇಯಿ

ಕವಿ ಮನಸ್ಸಿನ ಅಜಾತಶತ್ರು - ಅಟಲ್ ಬಿಹಾರಿ ವಾಜಪೇಯಿ

ಡಿಸೆಂಬರ್ ೨೫ ಎಂದೊಡನೆ ನಮ್ಮ ಮನಸ್ಸಿಗೆ ಬರುವುದು ಒಂದು ಕ್ರಿಸ್ ಮಸ್ ಹಬ್ಬ ಮತ್ತೊಂದು ಭಾರತ ಕಂಡ ಧೀಮಂತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಹೌದು, ಡಿಸೆಂಬರ್ ೨೫ ವಾಜಪೇಯಿಯವರ ಜನ್ಮದಿನ. ಭಾರತದ ಪ್ರಧಾನಿಯಾಗಿ ಅವರು ಮಾಡಿದ ಕಾರ್ಯಗಳು ಸದಾ ಕಾಲ ನೆನಪಿನಲ್ಲಿ ಉಳಿಯುವಂಥವು. ಅವರನ್ನು ‘ತಪ್ಪು ಪಕ್ಷದಲ್ಲಿರುವ ಉತ್ತಮ ವ್ಯಕ್ತಿ' (Good Man in wrong Party) ಎಂದು ಪ್ರತಿಪಕ್ಷಗಳ ಸದಸ್ಯರು ಸದಾಕಾಲ ಹೇಳುತ್ತಿದ್ದರು. ಆದರೆ ವಾಜಪೇಯಿಯವರು ತಾವು ನಂಬಿದ ಆರ್ ಎಸ್ ಎಸ್ ನ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿದ್ದರು. ಜನ ಸಂಘದ ಪ್ರಾರಂಭದ ದಿನಗಳಿಂದ ಭಾರತೀಯ ಜನತಾ ಪಕ್ಷದ ಉಗಮದವರೆಗೆ ಅವರು ಅವಿರತ ದುಡಿದವರು. ಲೋಕ ಸಭೆಯಲ್ಲಿ ೨ ಸೀಟಿನಿಂದ ಪ್ರಾರಂಭಗೊಂಡ ಅವರ ಪಕ್ಷದ ಸಾಧನೆ ಈಗ ೩೦೩ ಸೀಟು ಗಳಿಸುವ ಮೂಲಕ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದು ಕೂರಿಸಿದೆ. ಇದರ ಹಿಂದೆ ಇದ್ದ ದೊಡ್ದ ಶಕ್ತಿ ಅಟಲ್ ಬಿಹಾರಿ ವಾಜಪೇಯಿ. ಕವಿ ಹೃದಯದ, ಮೃದು ಮನಸ್ಸಿನ ಅವಿವಾಹಿತ ರಾಜಕೀಯ ಮುತ್ಸದ್ದಿಯನ್ನು ಎಲ್ಲರೂ ಪ್ರಶಂಸಿಸುತ್ತಾರೆ. ಅವರ ಜನ್ಮ ದಿನದ ಸಂದರ್ಭದಲ್ಲಿ ಅವರು ಸಾಗಿಬಂದ ಹಾದಿಯನ್ನು ಒಮ್ಮೆ ಮೆಲುಕು ಹಾಕೋಣ. ನಾನಿಲ್ಲಿ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸದ ವಿವಿಧ ಮಜಲುಗಳನ್ನು ಮಾತ್ರ ಬರೆಯಲು ಹೊರಟಿರುವೆ. ರಾಜಕೀಯ ಪ್ರವೇಶ, ಪ್ರಧಾನಿಯಾದ ನಂತರದ ವಿಷಯಗಳು ಬಹುತೇಕರಿಗೆ ತಿಳಿದೇ ಇದೆ.

೧೯೨೪ ಡಿಸೆಂಬರ್ ೨೫ರಂದು ಕೃಷ್ಣಾದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿಯವರ ಪುತ್ರರಾಗಿ ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ‘ಶಿಂದೆ ಕಿ ಚವಾನಿ' ಎಂಬ ಗ್ರಾಮದಲ್ಲಿ ಜನಿಸಿದರು. ವಾಜಪೇಯಿಯವರ ಕುಟುಂಬ ಉತ್ತರ ಪ್ರದೇಶದ ಬಟೇರಾ ಎಂಬ ಗ್ರಾಮದಿಂದ ಹೊಟ್ಟೆಪಾಡಿನ ಸಲುವಾಗಿ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಗೆ ವಲಸೆ ಬಂದಿತ್ತು. ಇವರದ್ದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬ. ‘ವಾಜಪೇಯಿ' ಎಂಬುದು ಇವರ ಕುಟುಂಬದ ಸರ್ ನೇಮ್ (ಅಡ್ಡ ಹೆಸರು). ಇವರ ಅಜ್ಜ ವೇದಾಧ್ಯಯನ ಪಂಡಿತರಾದ ಶ್ಯಾಮಲಾಲ್ ವಾಜಪೇಯಿ. ಇವರ ಮಗನಾದ ಕೃಷ್ಣ ಬಿಹಾರಿ ವಾಜಪೇಯಿಯವರು ಶಿಕ್ಷಕರಾಗಿದ್ದರು. ಇವರ ಏಳು ಮಂದಿ ಮಕ್ಕಳಲ್ಲಿ ಒಬ್ಬರಾಗಿ ಹುಟ್ಟಿದವರೇ ಅಟಲ್. ಅಟಲ್ ಅವರ ತಂದೆ ಉತ್ತಮ ಕವಿ ಆಗಿದ್ದರು. ಅದೇ ಪ್ರತಿಭೆ ಮಗನಿಗೂ ಬಂದಿರಬೇಕು. ಅಟಲ್ ಅವರೂ ಉತ್ತಮ ಕವಿ ಆಗಿದ್ದರು. ಆದರೆ ರಾಜಕಾರಣವು ಅವರ ಕವಿಯನ್ನು ನುಂಗಿತು ಎಂದು ಹಲವಾರು ಬಾರಿ ಅವರೇ ಹೇಳಿಕೊಂಡದ್ದಿದೆ. 

ಕೃಷ್ಣ ಬಿಹಾರಿ ವಾಜಪೇಯಿಯವರ ೭ ಮಂದಿ ಮಕ್ಕಳಲ್ಲಿ ೪ ಗಂಡು ಹಾಗೂ ೩ ಮಂದಿ ಹೆಣ್ಣು ಮಕ್ಕಳು. ನಾಲ್ಕು ಮಂದಿ ಗಂಡು ಮಕ್ಕಳಲ್ಲಿ ಸಣ್ಣವರೇ ಅಟಲ್, ಅಟಲ್ ಅವರ ದೊಡ್ದ ಅಣ್ಣನ ಹೆಸರು ಅವಧ್ ಬಿಹಾರಿ. ಇವರು ಮಧ್ಯಪ್ರದೇಶ ಸರಕಾರದಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಎರಡನೇ ಅಣ್ಣ ಸುದಾ ಬಿಹಾರಿ. ಇವರು ಪುಸ್ತಕ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದರು. ಮೂರನೇ ಅಣ್ಣ ಪ್ರೇಮ್ ಬಿಹಾರಿ. ಇವರು ಸಹಕಾರಿ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಇವರ ಸಹೋದರಿಯರ ಹೆಸರು ವಿಮಲಾ ಮಿಶ್ರಾ, ಕಮಲಾದೇವಿ ಹಾಗೂ ಉರ್ಮಿಳಾ ದೇವಿ. 

ಮೊದಲೇ ತಿಳಿಸಿದಂತೆ ಕೃಷ್ಣ ಬಿಹಾರಿಯವರದ್ದು ಮಧ್ಯಮ ವರ್ಗದ ಕುಟುಂಬ. ಅವರ ಜೀವನವೆಂಬುದು ಸುಖ ದುಃಖಗಳ ಸಮ್ಮಿಲನ. ಸಹೋದರ ಸಹೋದರಿಯರ ನಡುವೆ ಪ್ರೀತಿ ವಿಶ್ವಾಸಗಳಿಗೇನೂ ಕೊರತೆಯಿರಲಿಲ್ಲ. ಅಮ್ಮನ ಪ್ರೀತಿಯ ಮಗನಾಗಿ ಅಟಲ್ ಬೆಳೆದರು. ದೇಶಪ್ರೇಮ, ಸಂಸ್ಕಾರಗಳು ಅಟಲ್ ಅವರಲ್ಲಿ ಬಾಲ್ಯದಿಂದಲೇ ಬೇರೂರಿದ್ದವು. ಎಲ್ಲರಂತೆ ಇವರಿಗೆ ತಾಯಿಯೇ ಮೊದಲ ಗುರುವಾಗಿದ್ದರು. ಇವರ ತಂದೆಯವರು ವೃತ್ತಿಯಿಂದ ಶಿಕ್ಷಕರಾಗಿದ್ದುದರಿಂದ ಬಾಲ್ಯದಲ್ಲೇ ಅಟಲ್ ಅವರಿಗೆ ಉತ್ತಮ ಭೋಧನೆ ಲಭ್ಯವಾಗಿತ್ತು. ಸರಸ್ವತಿ ವಿದ್ಯಾಮಂದಿರದಲ್ಲಿ ಅಟಲ್ ಅವರ ಪ್ರಾಥಮಿಕ ಶಿಕ್ಷಣ ನಡೆಯಿತು. ನಂತರ ಗ್ವಾಲಿಯರ್ ನ ವಿಕ್ಟೋರಿಯಾ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಇವರಲ್ಲಿ ವಿದ್ಯಾರ್ಜನೆಯ ಹಸಿವು ಬಹಳವಾಗಿತ್ತು. ಪಾಠಗಳ ನಡುವೆ ಪಠ್ಯೇತರ ಚಟುವಟಿಕೆಗಳಲ್ಲೂ ಅಟಲ್ ಅವರದ್ದು ಎತ್ತಿದ ಕೈ. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಇವರಿಗೆ ಬಹಳ ಹಿಡಿತವಿತ್ತು. ವಿಕ್ಟೋರಿಯಾ ಕಾಲೇಜಿನಲ್ಲಿ ಇವರು ಪದವಿ ಮುಗಿಸಿ ನಂತರ ಕಾನ್ಪುರದ ಡಿ.ಎ.ವಿ. ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.

ಬಾಲ್ಯದಲ್ಲೇ ಬ್ರಿಟೀಷರಿಂದ ಭಾರತೀಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಕಂಡು ನೊಂದಿದ್ದ ಅಟಲ್ ಗೆ ಅವರ ಬಗ್ಗೆ ಅಸಹನೆ ಮತ್ತು ಕೋಪವಿತ್ತು. ಅಟಲ್ ಅವರ ಕುಟುಂಬವೂ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಲು ನಿರ್ಧಾರ ಮಾಡಿದಾಗ ಇವರೂ ಸಹಮತ ವ್ಯಕ್ತ ಪಡಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು. ಆ ಸಮಯದಲ್ಲೇ ರಾಜಕೀಯದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ವಾಜಪೇಯಿಯವರದ್ದು ಕವಿ ಹೃದಯ. ಆದರೆ ಅವರ ಮನಸ್ಸು ಅವರ ಹೆಸರಿನಂತೆಯೇ ಅಟಲ. ದೃಢನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಅವರೆಂದೂ ಹಿಂದೆ ಸರಿದವರಲ್ಲ. ಉತ್ತಮ ವಾಗ್ಮಿಯೂ ಆಗಿದ್ದ ಕಾರಣದಿಂದ ಇವರ ಭಾಷಣಗಳಿಗೆ ಜನರು ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಿದ್ದರು. ಅವರೊಳಗೆ ಒಬ್ಬ ಪತ್ರಕರ್ತನೂ ಅಡಗಿದ್ದ ಕಾರಣ, ಅವರು ಉತ್ತಮ ಲೇಖಕರೂ ಆಗಿದ್ದರು. ರಾಜಕೀಯವನ್ನು ತಮ್ಮ ಮೊದಲ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಅಟಲ್ ಉತ್ತಮ ಪತ್ರಕರ್ತರಾಗಿರುತ್ತಿದ್ದರು ಎಂದು ಅವರ ಸಹವರ್ತಿಗಳ ಅಭಿಪ್ರಾಯ. 

೧೯೪೨ರಲ್ಲಿ ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಕರೆಕೊಟ್ಟ ಸಮಯದಲ್ಲಿ ಅಟಲ್ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ. ಮೊದಲಿಗೆ ‘ಸಂಸ್ಥಾ ಕಾಂಗ್ರೆಸ್' ನಲ್ಲಿದ್ದ ಅಟಲ್ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅದನ್ನು ತೊರದು ‘ಜನ ಸಂಘ' ಸೇರಿಕೊಳ್ಳುತ್ತಾರೆ. ನಂತರ ಭಾರತೀಯ ಜನತಾ ಪಾರ್ಟಿಯ ಉದಯವಾದದ್ದು ಎಲ್ಲವೂ ಈಗ ಇತಿಹಾಸ. ಅಟಲ್ ಅವರು ಸ್ವಾತಂತ್ರ್ಯಾ ಪೂರ್ವದಲ್ಲಿ ಬಾಳಾ ಸಾಹೇಬ್ ಆಪ್ಟೆ ಅವರಿಂದ ಪ್ರಭಾವಿತರಾಗಿ ೧೯೩೯ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿಕೊಳ್ಳುತ್ತಾರೆ. ಆಗ ಅವರಿಗೆ ಕೇವಲ ೧೫ ವರ್ಷ ಪ್ರಾಯ. ನಂತರದ ದಿನಗಳಲ್ಲಿ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ದೇಶವಿಡೀ ಸುತ್ತಾಡಿದ ಇವರು ಹಲವಾರು ಜನರ ಪರಿಚಯವನ್ನು ಮಾಡಿಕೊಂಡರು. ದೀನ ದಯಾಳ ಉಪಾಧ್ಯಾಯರ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋದ ಅಟಲ್ ಅವರ ಸಮೀಪವರ್ತಿಯಾದರು. ಅವರು ನಡೆಸುತ್ತಿದ್ದ ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶದಂತಹ ಪತ್ರಿಕೆಗಳ ಉಸ್ತುವಾರಿಯನ್ನು ನೋಡಿಕೊಂಡರು. ಕೆಲವು ಪತ್ರಿಕೆಗಳ ಸಂಪಾದಕರೂ ಅವರಾಗಿದ್ದರು. ಆ ಪತ್ರಿಕೆಗಳಿಗೆ ಅಟಲ್ ಅವರು ಬರೆಯುತ್ತಿದ್ದ ಲೇಖನಗಳು ಪ್ರಭಾವಶಾಲಿಯಾಗಿದ್ದು, ಜನಮನ ಸೂರೆಗೊಂಡವು. 

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯರಾಗಿ, ಅದರ ಅಧ್ಯಕ್ಷರಾಗಿ, ಲೋಕ ಸಭಾ, ರಾಜ್ಯಸಭಾ ಸದಸ್ಯರಾಗಿ, ವಿದೇಶಾಂಗ ಮಂತ್ರಿಯಾಗಿ ನಂತರ ದೇಶದ ಪ್ರಧಾನಿಯಾಗಿ ಅಟಲ್ ನೀಡಿದ ಕೊಡುಗೆ ಅವರ್ಣನೀಯ. ೨೦೦೫ರಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿದ ಅಟಲ್ ಅವರಿಗೆ ೨೦೧೫ರಲ್ಲಿ ಭಾರತ ರತ್ನ ಪ್ರಶಸ್ತಿಯ ಗೌರವ ಸಮರ್ಪಣೆಯಾಗಿದೆ. ೨೦೧೮ ಆಗಸ್ಟ್ ೧೬ರಂದು ಭಾರತದ ಧೀಮಂತ ನಾಯಕ ನಿಧನರಾದರು. ಅವರ ಜನ್ಮದಿನವನ್ನು ಭಾರತ ಸರಕಾರ ‘ಉತ್ತಮ ಆಡಳಿತ ದಿನ' ಎಂದು ಆಚರಿಸುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಒಂದು ಶಕ್ತಿ. ಅವರ ಸಾಧನೆಗಳ ಹಾಗೂ ಬರಹಗಳ ನೆನಪು ಸದಾ ಚಿರನೂತನ. 

ಚಿತ್ರ ಕೃಪೆ : ಅಂತರ್ಜಾಲ ತಾಣ