ಕಷ್ಟದಲ್ಲಿಯೂ ಇಷ್ಟದ ಬದುಕು
'ಗಿಡುಗ' ನಮಗೆಲ್ಲ ಗೊತ್ತು. ಅದು ಅಂದಾಜು 70 ವರ್ಷ ಬದುಕುವ ಪಕ್ಷಿ. ಆ ಗಿಡುಗನ ಜೀವನದಲ್ಲಿ ಮಹತ್ವವಾದ ಕಷ್ಟದ ಘಟ್ಟವೊಂದು ಬರುತ್ತದೆ. ಆ ಕಷ್ಟದ ದಾರಿಯಲ್ಲಿ ಗಿಡುಗನ ಮುಂದೆ ಪರಿಹಾರದ ಮೂರು ದಾರಿಗಳು ಕಾಣಸಿಗುತ್ತವೆ. ಎರಡು ಸರಳವಾದ ಮತ್ತು ಇನ್ನೊಂದು ಅತೀ ಕಷ್ಟಕರವಾದ ದಾರಿಗಳು. ಆ ಗಿಡುಗ ಕಷ್ಟದ ದಾರಿಯನ್ನೇ ಆಯ್ಕೆ ಮಾಡಿಕೊಂಡು ತನ್ನ ಕಷ್ಟದಿಂದ ಹೊರಬರುತ್ತದೆ. ಇದೇ ಪಾಠ ಮನುಷ್ಯನು ಅನುಸರಿಸಿದರೆ ಕಷ್ಟಗಳನ್ನು ಗೆದ್ದಂತೆ.
ಗಿಡುಗ ತನ್ನ 70 ವರ್ಷದ ಬದುಕಲ್ಲಿ ನಲವತ್ತು ವರ್ಷ ಬಹಳ ಗಾಂಭೀರ್ಯದಿಂದ ಕಳೆಯುತ್ತದೆ. 40 ವರ್ಷ ಕಳೆಯುತ್ತಿದ್ದಂತೆ ವಯೋಮಾನ ಸಹಜ ಕೆಳಗಿನ ಮೂರು ಸಂಕಷ್ಟಗಳು ಬಂದೆರಗುತ್ತವೆ.
* ನಲವತ್ತು ವರ್ಷ ಕಳೆಯುತ್ತಿದ್ದಂತೆ ಗಿಡುಗನ ಕಾಲಿನ ಉಗುರು (Claws) ಗಳು ಉದ್ದ ಬೆಳೆದು ಮೃದುವಾಗಿಬಿಡುತ್ತವೆ. ಹೀಗಾಗಿ ಬೇಟೆಯನ್ನು ಗಟ್ಟಿಯಾಗಿ ಕಾಲಿನಿಂದ ಹಿಡಿಯಲು ಕಷ್ಟವಾಗುತ್ತದೆ. ಹಿಡಿದ ಬೇಟೆ ಕಾಲಿನಿಂದ ಜಾರಿ ಹೋಗಲು ಪ್ರಾರಂಭಿಸುತ್ತದೆ.
* ಗಿಡುಗನ ನೇರವಾಗಿದ್ದ ಕೊಕ್ಕೆಯು ಮಣಿದು ಬಾಗಿಕೊಳ್ಳುತ್ತದೆ. ಹಿಡಿದ ಬೇಟೆಯ ಆಹಾರವನ್ನು ಕುಕ್ಕಿ ಕುಕ್ಕಿ ತಿನ್ನಲು ಸಾಧ್ಯವಾಗದೆ ಸುಸ್ತಾಗಿಬಿಡುತ್ತದೆ. ಉಪವಾಸದ ಅನುಭವ ಬಂದೆರಗುತ್ತದೆ.
* ಗಿಡುಗನ ಬಲಿಷ್ಠ ರೆಕ್ಕೆಗಳು ವಯಸ್ಸಿನ ಕಾರಣ ಬೆಳೆದು ಭಾರವಾಗಿ ಹಾರಲು ಸಹಕರಿಸದಂತಾಗುತ್ತವೆ. ಹೀಗಾಗಿ ತನ್ನ ಆಹಾರ ಹುಡುಕಿಕೊಂಡು ಹೋಗಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಬಂದೆರಗುತ್ತದೆ. ಆಹಾರವಿಲ್ಲದ ದಿನಗಳು ಎದುರಾಗುತ್ತವೆ.
ಹೀಗೆ ಆಹಾರವನ್ನು ಹುಡುಕುವ, ಆಹಾರವನ್ನು ಗಟ್ಟಿಯಾಗಿ ಹಿಡಿಯುವ ಮತ್ತು ಹಿಡಿದ ಆಹಾರವನ್ನು ಹೆಕ್ಕಿ ತಿನ್ನುವ ಸಾಮರ್ಥ್ಯ ಇಲ್ಲವಾಗುತ್ತದೆ. ಈ ಹಂತದಲ್ಲಿ ಗಿಡುಗನ ಮುಂದೆ ಪರಿಹಾರವಾಗಿ ಮೂರು ಆಯ್ಕೆಗಳಿರುತ್ತವೆ. ಒಂದು ಸನ್ಯಾಸಿಯಂತೆ ಎಲ್ಲವನ್ನೂ ತ್ಯಜಿಸಿ ದೇಹತ್ಯಾಗ ಮಾಡುವುದು. ಇನ್ನೊಂದು ತನ್ನ ಜೀವಂತ ಪ್ರಾಣಿಯನ್ನು ಬೇಟೆಯಾಡಿ ತಿನ್ನುವ ಪ್ರವೃತ್ತಿಯನ್ನು ಬಿಟ್ಟು ರಣ ಹದ್ದುಗಳಂತೆ ಸತ್ತ ಶವಗಳನ್ನು ತಿನ್ನುವ ಆಯ್ಕೆ. ಮೂರನೆಯ ಪರಿಹಾರದ ದಾರಿ ಅತೀ ಕಷ್ಟಕರವಾದದ್ದು. ಹಳೆಯದಾದ ತನ್ನ ಕಾಲಿನ ಉಗುರುಗಳು, ಬಾಗಿದ ಕೊಕ್ಕೆ ಮತ್ತು ಭಾರವಾದ ರೆಕ್ಕೆಗಳನ್ನು ಕಿತ್ತುಕೊಂಡು ಮೊದಲಿನಂತೆ ಸರಿ ಮಾಡಿಕೊಳ್ಳುವ ಪ್ರಯತ್ನ.
ಈ ಮೂರು ಆಯ್ಕೆಗಳಲ್ಲಿ ಗಿಡುಗ ಕಷ್ಟಕರವಾದ ಮೂರನೇ ದಾರಿಯನ್ನು ಆಯ್ಕೆ ಮಾಡಿಕೊಂಡು ಅತೀ ಎತ್ತರದ ಬೆಟ್ಟವನ್ನು ಹುಡುಕಿಕೊಂಡು ಹೋಗಿ ಅಲ್ಲಿ ಗಟ್ಟಿಯಾದ ಬಂಡೆಗಲ್ಲಿಗೆ ತನ್ನ ಕೊಕ್ಕಿನಿಂದ ಹೊಡೆಯಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆ ಅತ್ಯಂತ ನೋವಿನಿಂದ ಕೂಡಿರುತ್ತದೆ. ಆದರೂ ಆ ಗಿಡುಗ ತನ್ನ ಮೇಲಿನ ಬಾಗಿದ ಕೊಕ್ಕೆ ಮುರಿಯುವವರೆಗೆ ಕುಕ್ಕಿ ಕುಕ್ಕಿ ಸುಸ್ತಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರಕ್ತ ಒಸರುತ್ತದೆ. ವಿಪರೀತ ನೋವಾಗುತ್ತದೆ. ಆದರೂ ಛಲ ಬಿಡದೆ ನೋವನ್ನು ನುಂಗಿ ಮುಂದುವರೆಸುತ್ತದೆ. ಆ ಕೊಕ್ಕೆಯನ್ನು ಮುರಿದುಕೊಂಡು ಹೊಸ ಕೊಕ್ಕೆ ಬೆಳೆಯುವವರೆಗೆ ಕಾಯುತ್ತದೆ.
ಹಾಗೆಯೇ ಕಾಲಿನ ಉಗುರುಗಳು ಕೀಳುವವರೆಗೆ ಕಾಲನ್ನು ಬಂಡೆಗೆ ಹೊಡೆ ಹೊಡೆದು ಬೆಳೆದ ಉಗುರುಗಳನ್ನು ಕಿತ್ತುಕೊಳ್ಳುತ್ತದೆ. ಮತ್ತೆ ಆ ಉಗುರುಗಳು ಬೆಳೆಯುವವರೆಗೆ ಕಾಯುತ್ತದೆ. ಹೀಗೆ ಕೊಕ್ಕೆ ಮತ್ತು ಉಗುರು ಬೆಳೆದು ಮರು ಸ್ಥಾಪನೆ ಮಾಡಿಕೊಂಡ ನಂತರ ಅವುಗಳ ಸಹಾಯದಿಂದ ತನ್ನ ರೆಕ್ಕೆಗಳ ಒಂದೊಂದೇ ಪುಕ್ಕವನ್ನು ಹೆಕ್ಕಿ ಹೆಕ್ಕಿ ತೆಗೆದು ಹೊಸ ರೆಕ್ಕೆಗಾಗಿ ಕಾಯುತ್ತದೆ. ಹೊಸ ಪುಕ್ಕಗಳು ಬೆಳೆದು ಭಾರವಾಗಿ ಬೆಳೆದು ನಿಂತ ರೆಕ್ಕೆಯನ್ನು ಮೊದಲಿನಂತೆ ಹಾರಲು ಅನುವಾಗುವಂತೆ ಹಗುರಮಾಡಿಕೊಳ್ಳುತ್ತದೆ.
ನೂರಾ ಐವತ್ತು (150) ದಿನಗಳ ಅತ್ಯಂತ ಕಷ್ಟ ಮತ್ತು ಕಾಯುವಿಕೆಯ ನಂತರ ಮತ್ತೆ ಅದು ತನ್ನ ಭವ್ಯ ಮತ್ತು ಎತ್ತರವಾದ ಹಾರುವಿಕೆಯನ್ನು ಪ್ರಾರಂಭಿಸುತ್ತದೆ. ಇಲ್ಲಿಂದ ಮತ್ತೆ ತನ್ನ ಶಕ್ತಿ, ಸಾಮರ್ಥ್ಯ ಘನತೆಯೊಂದಿಗೆ ಇನ್ನೂ 30 ವರ್ಷಗಳ ಕಾಲ ಬದುಕುತ್ತದೆ.
ನಾವು ಈಗಾಗಲೆ ಕೇಳಿದಂತೆ "ಯಾರು ತನಗೆ ತಾನು ಸಹಾಯ ಮಾಡಿಕೊಳ್ಳುವುದಿಲ್ಲವೋ ಅಂತವನಿಗೆ ಆ ದೇವರೂ ಕೂಡ ಸಹಾಯ ಮಾಡಲಾರ. ಯಾರು ತನಗೆ ತಾನು ಸಹಾಯ ಮಾಡಿಕೊಳ್ಳುತ್ತಾನೆಯೋ ಅವನಿಗೆ ಆ ದೇವರು ಸಹಾಯ ಮಾಡದೇ ಇರಲಾರ ". ("God helps those who help themselves") ನಮ್ಮ ಬದುಕಿನ ಸಂಘರ್ಷದ ಪ್ರಯತ್ನವನ್ನು ದೇವರು ಸುಳ್ಳು ಮಾಡಲಾರ. ಈ ಗಿಡುಗನ ಜೀವನದಿಂದ ತುಂಬಾ ಕಲಿಯುವುದಿದೆ.
ಬದುಕು ಸುಮ್ಮನಿರುವವರಿಗಲ್ಲ. ಇಚ್ಛಾಶಕ್ತಿ ಇರುವವರಿಗೆ. ಇಚ್ಚೆಯೊಂದಿದ್ದರೆ ಕಷ್ಟಗಳ ದಾರಿಯಿದ್ದರೂ ಬದುಕಿನ ಎತ್ತರಕ್ಕೆ ನಾವು ತಲುಪಿಯೇ ತೀರುತ್ತೇವೆ. ವಯಸ್ಸು 40 ಕಳೆದರೆ ಸಾಕು ಜೀವನದ ಉತ್ಸಾಹವೇ ಇಲ್ಲದಂತೆ ಬದುಕುವ ಅನೇಕರನ್ನು ನಾವು ನೋಡುತ್ತೇವೆ. ಇಚ್ಚೆ, ಸಕ್ರಿಯತೆ ಮತ್ತು ಕಲ್ಪನೆಗಳಿಂದ ಎಂತಹ ಸ್ಥಿತಿಯಲ್ಲಿಯೂ ಬದುಕನ್ನು ಮರು ಸ್ಥಾಪಿಸಿಕೊಳ್ಳಬಹುದು. ಮರೆಯದಿರೋಣ.?
(ಸಂಗ್ರಹ) ಜನಾರ್ಧನ ಕಟಪಾಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ