ಕಷ್ಟಪಟ್ಟಾಗಲೇ ಕೌಶಲ

ಕಷ್ಟಪಟ್ಟಾಗಲೇ ಕೌಶಲ

ಒಬ್ಬ ಕರುಣಾಮಯಿ ವ್ಯಕ್ತಿಯಿದ್ದ. ಬೇರೆಯವರಿಗೆ ಸಹಾಯ ಮಾಡುವುದು ಎಂದರೆ ಅವನಿಗೆ ಎಲ್ಲಿಲ್ಲದ ಆಸಕ್ತಿ. ಯಾರೇ ಕಷ್ಣದಲ್ಲಿರಲಿ ಅಥವಾ ಕಷ್ಟಕ್ಕೆ ಸಿಕ್ಕಿಕೊಳ್ಳುವ ಸಂಭವ ಇರಲಿ. ಇವನು ಅಲ್ಲಿಗೆ ತಕ್ಷಣ ಧಾವಿಸುತ್ತಿದ್ದ ಮತ್ತು ಅವರು ಕೇಳುವ ಮೊದಲೇ ತನ್ನಿಂದಾದ ಸಹಾಯ ಮಾಡುತ್ತಿದ್ದ. ಬೇರೆಯವರು ಸಹಾಯ ಮಾಡಿ ವಿನಂತಿಸುವ ಮೊದಲೇ ಸಹಾಯ ಮಾಡುವುದು ತನ್ನ ಕರ್ತವ್ಯ ಎಂದು ಆತ ತಿಳಿದಿದ್ದ. 

ಇವನಿಂದ ಸಹಾಯ ಪಡೆದ ಹಲವಾರು ಮಂದಿ ಇವನ ಸಹಾಯಕ್ಕಾಗಿ ಧನ್ಯವಾದ ಹೇಳುತ್ತಿದ್ದರು. ಇವನಾಗಿಯೇ ಸಹಾಯ ಮಾಡಲು ಹೋದಾಗ, ಕೆಲವು ಬಾರಿ ಪುಟ್ಟ ಪುಟ್ಟ ಎಡವಟ್ಟುಗಳು ಆಗುವುದೂ ಇರುತ್ತಿತ್ತು. ಒಮ್ಮೊಮ್ಮೆ ಸಹಾಯದ ಬದಲು ತೊಂದರೆಯೂ ಆಗುತ್ತಿತ್ತು. ಆದರೂ, ಸಹಾಯ ಮಾಡುವುದು ತನ್ನ ಧರ್ಮ ಎಂದು ತಿಳಿದಿದ್ದ ಈ ಪರೋಪಕಾರಿ.

ಒಂದು ದಿನ ಇವನು ತನ್ನ ಮನೆಯ ಹಿಂದೆ ಇದ್ದ ಕೈತೋಟದಲ್ಲಿದ್ದ ಗಿಡದಲ್ಲಿ ಒಂದು ಕೋಶವನ್ನು ಕಂಡ. ಅದು ಚಿಟ್ಟೆಯೊಂದರ ಕೋಶ. ಓಹೋ, ಯಾವುದೋ ಚಿಟ್ಟೆ ಇಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತಿದೆ ಎಂದು ಊಹಿಸಿದ. ಪ್ರತಿ ದಿನ ಬೆಳಿಗ್ಗೆ ಆ ಕೋಶವನ್ನು ಗಮನಿಸುತ್ತಿದ್ದ. ಒಂದು ದಿನ ಆ ಕೋಶದಲ್ಲಿ ಸಣ್ಣ ಬಿರುಕು ಕಂಡು ಬಂದಿತು. ಚಿಟ್ಟೆಯು ಹೊರಗಿನ ಪ್ರಪಂಚಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಆತ ಊಹಿಸಿದ. ಅದನ್ನೇ ಗಮನಿಸಿದ, ಚಿಟ್ಟೆಯು ನಿಧಾನವಾಗಿ ಆ ಕೋಶದಿಂದ ಹೊರ ಬರಲು ಪ್ರಯತ್ನ ನಡೆಸಿತ್ತು. ಮಧ್ಯದಲ್ಲಿ ಕೆಲವು ನಿಮಿಷಗಳ ಕಾಲ ಅಲ್ಲಿ ಚಟುವಟಿಕೆ ಸ್ತಬ್ಧವಾದಂತೆ ಅವನಿಗೆ ಅನಿಸಿತು. ಅವನಿಗೆ ಒಂದು ಅನುಮಾನ ಬಂತು. ಪಾಪ, ಚಿಟ್ಟೆಗೆ ತನ್ನ ಕೋಶವನ್ನು ಬಿಡಿಸಿಕೊಂಡು ಬರಲು ಕಷ್ಟವಾಗುತ್ತಿರಬೇಕು ಎಂಬುದೇ ಆ ಅನುಮಾನ.

ಎಲ್ಲರಿಗೂ ಸಹಾಯ ಮಾಡುತ್ತಿದ್ದ ಈ ವ್ಯಕ್ತಿ ತಕ್ಷಣ ಕಾರ್ಯೋನ್ಮುಖನಾದ. ಮನೆಯಿಂದ ಒಂದು ಪುಟ್ಟ ಕತ್ತರಿ ತಂದು, ಆ ಕೋಶವನ್ನು ನಿಧಾನವಾಗಿ ಕತ್ತರಿಸಲು ಆರಂಭಿಸಿದ. ತಾನು ಮಾಡುತ್ತಿರುವ ಈ ಕೆಲಸದಿಂದಾಗಿ ಆ ಚಿಟ್ಟೆಯು ಹೊರಗಿನ ಪ್ರಪಂಚವನ್ನು ಸೇರಲು ಸಹಾಯವಾಗುತ್ತಿದೆ ಎಂದೇ ಆತನ ನಂಬಿಕೆ. 

ಬಹಳ ಜಾಗರೂಕತೆಯಿಂದ ಆ ಕೋಶವನ್ನು ಕತ್ತರಿಸಿದಾಗ, ಆ ಚಿಟ್ಟೆಯು ನಿಧಾನವಾಗಿ ಹೊರಗೆ ಬಂತು. ಆತನಿಗೆ ಬಹಳ ಖುಷಿ ಎನಿಸಿತು. ತಾನು ಇವತ್ತು ಒಂದು ಜೀವಿಗೆ ಸಹಾಯ ಮಾಡಿದೆ ಎಂಬ ತೃಪ್ತಿ ಆತನಿಗೆ. ಇನ್ನೇನು ಚಿಟ್ಟೆಯು ರೆಕ್ಕೆಗಳನ್ನು ಬಿಚ್ಚಿ ಹಾರಾಡುತ್ತದೆ ಎಂದು ಬಹಳ ಕುತೂಹಲದಿಂದ ನೋಡತೊಡಗಿದ. ಆದರೆ ಆ ಚಿಟ್ಟೆಯು ಗಿಡದ ರೆಂಬೆಯ ಮೇಲೆ ನಿಧಾನವಾಗಿ ನಡೆಯತೊಡಗಿತು. ಕೆಲವು ನಿಮಿಷಗಳ ನಂತರ ಅಲ್ಲಿಂದ ಜಾರಿ ಕೆಳಗೆ ಬಿತ್ತು. ನೆಲದ ಮೇಲೂ ನಿಧಾನವಾಗಿ ತೆವಳತೊಡಗಿತು. 

ಪರೋಪಕಾರಿ ವ್ಯಕ್ತಿಯು ಚಿಟ್ಟೆ ಈಗ ಹಾರುತ್ತದೆ ಎಂಬು ಬಹಳ ನಿರೀಕ್ಷಿಸಿದ. ಆದರೆ ಚಿಟ್ಟೆ ಹಾರಲೇ ಇಲ್ಲ.! ಆತ ಅತಿ ಉತ್ಸಾಹದಿಂದ ಸಹಾಯ ಮಾಡುತ್ತಿದ್ದಾಗ, ಕೋಶದ ಜತೆಯಲ್ಲೇ ಅದರ ರೆಕ್ಕೆಗಳನ್ನು ಕತ್ತರಿಸಿಹಾಕಿದ್ದ. ತನಗೆ ಗೊತ್ತಿಲ್ಲದೇ ಮಾಡಿದ ಈ ಕೆಲಸದಿಂದಾಗಿ, ಚಿಟ್ಟೆಯು ಜೀವನವಿಡೀ ಹಾರುವಂತಿರಲಿಲ್ಲ. ಈತ ಮಾಡಿದ ಸಹಾಯವು, ಲಾಭಕ್ಕಿಂತ ನಷ್ಟವನ್ನೇ ಮಾಡಿತ್ತು. ಆ ಪರೋಪಕಾರಿ ವ್ಯಕ್ತಿಯು ಕೈ ಕೈ ಹಿಸುಕಿಕೊಂಡು, ಚಿಟ್ಟೆಯು ನೆಲದ ಮೇಲೆ ತೆವಳುವುದನ್ನೇ ನೋಡಿ ಖಿನ್ನನಾದ.

ಈ ಪುಟ್ಟ ಕಥೆಯನ್ನು ಹಲವು ಆಯಾಮಗಳಿಂದ ನೋಡಬಹುದು. ಅತಿ ಉತ್ಸಾಹದಿಂದ ಸಹಾಯ ಮಾಡುವಾಗ, ಸಹಾಯ ಪಡೆಯುವವರಿಗೆ ಅದರಿಂದ ಅನುಕೂಲವಾಗಬೇಕೆಂಬ ತುಡಿತ ಮತ್ತು ಎಚ್ಚರಿಕೆ ಇರಬೇಕು ಎಂಬುದು ಮೊದಲ ಸರಳ ಆಯಾಮ, ಚಿಟ್ಟೆಯ ದೃಷ್ಟಿಕೋನದಿಂದ ನೋಡಿದರೆ ಅನಿರೀಕ್ಷಿತವಾಗಿ ದೊರೆತ ಈ ಸಹಾಯದಿಂದ, ಅದಕ್ಕೆ ಲಾಭಕ್ಕಿಂತ ಹಾನಿಯೇ ಜಾಸ್ತಿಯಾಗಿತ್ತು. 

ಈ ಕಥೆಗೆ ಇನ್ನೊಂದು ಆಯಾಮವೂ ಇದೆ. ನಮ್ಮ ಬದುಕಿನಲ್ಲಿ ಸಾಕಷ್ಟು ಕಷ್ಟ ಪಟ್ಟು ವಿಭಿನ್ನ ವಿಚಾರಗಳನ್ನು ಕಲಿತ ನಂತರ ಮಾತ್ರ ಆ ಕೆಲಸದಲ್ಲಿ ಕೌಶಲ್ಯವನ್ನು ತೋರಲು ಸಾಧ್ಯ. ಹೊಸದಾಗಿ ವೃತ್ತಿಯೊಂದಕ್ಕೆ ಸೇರಿದವರು, ಕಷ್ಟ ಪಟ್ಟು ವಿಭಿನ್ನ ಸನ್ನಿವೇಶಗಳನ್ನು ಎದುರಿಸಿದಾಗಲೇ, ಅಲ್ಲಿ ಸವಾಲುಗಳು ಅರ್ಥವಾಗುವುದು, ಆ ಸವಾಲನ್ನು ಏಕಾಂಗಿಯಾಗಿ ಎದುರಿಸುವ ದಾರಿ ಹೊಳೆಯುವುದು. ಆರಂಭದಲ್ಲಿ ಬಹಳ ಕಷ್ಟದಿಂದ ಮಾಡಿದ ಕೆಲಸಗಳು ನಂತರ ಸಾಕಷ್ಟು ಸುಲಭವಾಗುವುದೂ ಸಹ ಇದೇ ಕಾರಣಕ್ಕೆ. ನಾವೇ ಸ್ವತಃ ಕಷ್ಟಪಟ್ಟು ಕಲಿತಾಗಲೇ, ಯಾವುದೇ ವೃತ್ತಿಯಾಗಲಿ, ಕಲೆಯಾಗಲಿ, ಕೌಶಲವಾಗಲಿ ಕರಗತವಾಗಬಲ್ಲುದು. 

-ಶಶಾಂಕ್ ಮುದೂರಿ (ವಿಶ್ವವಾಣಿ ಪತ್ರಿಕೆಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ