ಕಷ್ಟ ಪಟ್ಟರೆ ಫಲವಿದೆ...!

ತನ್ನ ಎರಡು ಹೆಣ್ಣು ಮಕ್ಕಳನ್ನು ಮತ್ತು ಕುಡುಕ ಗಂಡನನ್ನು ಕಟ್ಟಿಕೊಂಡು ಶಾರದೆ ಪಡಬಾರದ ಕಷ್ಟ ಪಡುತ್ತಿದ್ದಳು.' ಎರಡೂ ಹೆಣ್ಣು ಹೆತ್ತಿದ್ದೀಯಾ, ಗಂಡು ಹುಳ ನಿನ್ನ ಹಣೆಲಿ ಬರೆದಿಲ್ಲ' ಎಂಬ ಅತ್ತೆಯ ಬಿರುನುಡಿಗಳನ್ನು ಕೇಳಿ ಕೇಳಿ ಶಾರದೆಯ ಕಿವಿ ಜಡ್ಡುಕಟ್ಟಿತ್ತು. ಎಷ್ಟೋ ಸಲ ಮನಸ್ಸಿನಲ್ಲಿಯೇ ಹೇಳಿಕೊಂಡಿದ್ದಳು 'ಇದಕ್ಕೆ ನಿಮ್ಮ ಮಗನೇ ಕಾರಣ' ಎಂದು. ಆದರೂ ಹಿರಿಯರಿಗೆಂದೂ ಎದುರು ಮಾತನಾಡುವ ಸ್ವಭಾವ ಆಕೆಯದಲ್ಲ. ಅದು ಅವಳಿಗೆ ಹೆತ್ತವರಿಂದ ಬಳುವಳಿಯಾಗಿ ಬಂದ ಸಂಸ್ಕಾರವಾಗಿತ್ತು. ಹಾಗೆ ಮನೆ ಮುಂದಿನ ಮಾಡಿನ ಕೊಂಡಿಗೆ ಸಿಕ್ಕಿಸಿದ್ದ, ದೀಪಾವಳಿ ಹಬ್ಬದ ಗೂಡುದೀಪವನ್ನು ನೋಡುತ್ತಾ ಮೈಮರೆತ್ತಿದ್ದ ತನ್ನೆರಡು ಮುದ್ದು ಮಕ್ಕಳಾದ ಶಾಲಿನಿ ಮತ್ತು ಮಾಲಿನಿಯವರನ್ನು ನೋಡುತ್ತಾ ನೆನಪುಗಳು ಹಿಂದಕ್ಕೋಡಿತು.
ಬಡತನವಿದ್ದರೂ ತಂದೆ ತಾಯಿ ಪ್ರೀತಿಗೆ ಕೊರತೆಯಿಲ್ಲದೆ ಬೆಳೆದು, ೧೦ ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದ ಶಾರದೆ, ಹತ್ತಿರವೇ ಇದ್ದ, ಹೊಲಿಗೆ ಕೇಂದ್ರದಲ್ಲಿ, ಹೊಲಿಗೆ ತರಬೇತಿ ಪಡಕೊಂಡಳು. ಸಾಲ ಮಾಡಿ ಒಂದು ಹೊಲಿಗೆ ಯಂತ್ರ ತೆಗೆದುಕೊಂಡಿದ್ದಳು. ಸುತ್ತಮುತ್ತಲಿನವರಿಗೆ ಬಟ್ಟೆ ಹೊಲಿದು ಕೊಡುತ್ತಿದ್ದಳು. ಪಕ್ಕದೂರಿನ ದೊಡ್ಡಮ್ಮನ ಮನೆಗೆ ಹೋಗಿದ್ದ ಶಾರದೆಯನ್ನು ನೋಡಿದ ಸುಂದರನ ಹೆತ್ತವರು ಮಾತುಕತೆ ನಡೆಸಿ ವಿವಾಹ ಮಾಡಿಯೇ ಬಿಟ್ಟರು. ಸುರದ್ರೂಪಿ ಸುಂದರ ಶಾರದೆಗೂ ಇಷ್ಟವಾದ. ಒಳಗಿನ ವಿಷಯಗಳು ಸೌಂದರ್ಯದಲ್ಲಿ ಅಡಗಿಹೋಯಿತು.
ಮದುವೆಯಾಗಿ ಗಂಡನ ಮನೆಗೆ ಬಂದು ಸ್ವಲ್ಪ ದಿವಸ ಎಲ್ಲವೂ ಸರಿಯಾಗಿತ್ತು. ನಂತರ ಒಂದೊಂದೇ ಹೊರ ಬರಲಾರಂಭಿಸಿದಾಗ ಶಾರದೆ ಬೆದರಿದ ಹರಿಣಿಯಂತಾದಳು. ಬಿಸಿತುಪ್ಪ ಗಂಟಲಲ್ಲಿ ಸಿಲುಕಿದಂತಾಯಿತು. ಯಾವುದನ್ನು ಸಹ ತನ್ನ ಹೆತ್ತವರಲ್ಲಿ ಹೇಳಬಾರದೆಂಬ ಅತ್ತೆಯ ಆಜ್ಞೆ, ಒಂದಿನಿತು ಪ್ರೀತಿ, ವಿಶ್ವಾಸ ಮಾವನವರಿಂದ ಮಾತ್ರ. ಸದಾ ಕುಡಿದು ತೂರಾಡುವ ಸುಂದರ ಯಾರಿಗೋ ಸಾಲಕೊಡಿಸಿದ್ದೇ ನೆಪವಾಗಿ, ಇರುವ ಒಂದಷ್ಟು ಹೊಲ, ತೋಟ ಪರರ ಪಾಲಾಯಿತು. ಮನೆಯೊಂದು ಉಳಿದುಕೊಂಡಿತು. ಸುಂದರನ ತಂದೆ ಇದೇ ಕೊರಗಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಈ ನಡುವೆ ಶಾರದೆ ಎರಡು ಹೆಣ್ಣು ಮಕ್ಕಳ ತಾಯಿಯೂ ಆಗಿದ್ದಳು.
ತನ್ನ ತವರು ಮನೆಯಿಂದ ಹೊಲಿಗೆ ಯಂತ್ರವನ್ನು ತಂದಳು. ಮನೆಯ ಹತ್ತಿರವೇ ಇದ್ದ ಶ್ಯಾಮರಾಯರ ಮನೆಗೆ ಅಡುಗೆ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಶ್ಯಾಮರಾಯರ ಪತ್ನಿ ಬಹಳ ಗುಣವಂತರಾದ ಕಾರಣ, ಶಾರದೆಯ ಮಕ್ಕಳಿಗೆ ಒಂದಷ್ಟು ಒಳ್ಳೆಯ ತಿನಿಸು, ಬಟ್ಟೆ ಎಲ್ಲಾ ಸಿಗುತ್ತಿತ್ತು.
ದೀಪಾವಳಿ ಬಂದೇ ಬಿಟ್ಟಿತು. ಶ್ಯಾಮರಾಯರ ಮನೆಯಲ್ಲಿ ಗೂಡುದೀಪ, ಪಟಾಕಿ ಸಂಭ್ರಮ. ಅಲ್ಲಿರುವ ಆಕಾಶಬುಟ್ಟಿ, ಗೂಡುದೀಪದ ಅಲಂಕಾರವನ್ನು ನೋಡಿ ಶಾರದೆಯ ಮಕ್ಕಳು ಆಸೆ ಕಣ್ಣುಗಳಿಂದ ನೋಡುತ್ತಿದ್ದರು. ಅಡುಗೆ ಕೆಲಸ, ಇನ್ನಿತರ ಮನೆಕೆಲಸ ಮಾಡುತ್ತಿದ್ದ ಶಾರದೆ, ಏನಾದರೂ ಮಾಡಿ ಮಕ್ಕಳಿಗೆ ಕೊಡಿಸಬೇಕೆಂದು ಆಸೆ ಪಟ್ಟಳು.
ವಾರದ ಸಂತೆಗೆ ಹೋದ ಶಾರದೆ ಮಕ್ಕಳು ಇಷ್ಟಪಟ್ಟಂತೆ ಗೂಡು ದೀಪ ಖರೀದಿಸಿ ತಂದಿದ್ದಳು. ಮಕ್ಕಳಿಗೆ ಹಬ್ಬದಡುಗೆ ಮಾಡಿ ಇಟ್ಟು,, ಹೊಸಬಟ್ಟೆ ತೊಡಿಸಿ ಅಲಂಕರಿಸಿದಳು. ಗೂಡು ದೀಪವನ್ನು ಮಕ್ಕಳಿಗೆ ಗೊತ್ತಾಗದ ಹಾಗೆ ನೇತು ಹಾಕಿದ್ದಳು. ಮಕ್ಕಳೇ, 'ಬನ್ನಿ ಇಲ್ಲಿ, ನಿಮಗೇನೋ ತೋರಿಸಬೇಕು' ಎಂದು ಕರೆದುಕೊಂಡು ಹೊರಗೆ ಬಂದಳು. ಮನೆಯ ಮಾಡಿನ ಜಂತಿಗೆ ತೂಗು ಹಾಕಿದ ಹೊನ್ನಿನ ಬಣ್ಣದ ಗೂಡುದೀಪ ನೋಡಿದ ಮಕ್ಕಳು ' ನಮ್ಮ ಮನೆಯಲ್ಲಿ ಗೂಡುದೀಪ, ಅಮ್ಮ ನಮ್ಮ ಪ್ರೀತಿಯ ಅಮ್ಮ' ಎನ್ನುತ್ತಾ ನಲಿದಾಡಿದರು. ಹಾಗೆ ಸಂತಸ ಪಡುತ್ತಿದ್ದ ಮಕ್ಕಳನ್ನು ನೋಡುತ್ತ ವಾಸ್ತವಕ್ಕೆ ಬಂದಳು ಶಾರದೆ. ಒಂದೊಂದು ಪೈಸೆಯನ್ನು ಸಹ ಗಂಡನ ಕಣ್ಣು ತಪ್ಪಿಸಿ ಇಟ್ಟದ್ದೇ ಒಂದು ಪವಾಡವಾಗಿತ್ತು. ಅಂತೂ ‘ಕಷ್ಟ ಪಟ್ಟರೆ ಫಲವಿದೆ’, ತಾಳ್ಮೆ ಮುಖ್ಯ ಎಂದು ಅಂದುಕೊಂಡಳು. ಮಕ್ಕಳ ಸಂಭ್ರಮದಲ್ಲಿ ಸೇರಿ ಕಷ್ಟವನ್ನೆಲ್ಲ ಮರೆತಳು ಶಾರದೆ.
-ರತ್ನಾ ಕೆ.ಭಟ್ ತಲಂಜೇರಿ