ಕಷ್ಟ - ಸುಖ

"ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿರುತ್ತೇವೆ. ಅತ್ಯಂತ ಸುಖಿಯೂ ಕಷ್ಟಗಳ ಬಗ್ಗೆ ಕರುಬುತ್ತಿರುತ್ತಾನೆ ಎಂದರೆ ಅತಿಶಯದ ಮಾತಾಗದು. ಕಷ್ಟ ಬಂದಾಗಲೇ ವೆಂಕಟರಮಣನಲ್ಲ, ಇಷ್ಟವಾದುದು ನೆರವೇರದೇ ಇದ್ದಾಗಲೂ ವೆಂಕಟರಮಣ ನನ್ನು ಹಂಗಿಸುವವರನ್ನು ಕಾಣುತ್ತೇವೆ. ದೇವರನ್ನೇ ನಂಬಿದ ನಮಗೆ ದೇವರೇ ದ್ರೋಹ ಮಾಡಿದನೋ ಎಂಬ ಭ್ರಮೆಯೊಳಗೆ ನಾವು ಸುತ್ತುವುದು ಅವಕಾಶವಾದವೋ, ಮಿತ ಜ್ಞಾನವೋ ಅರ್ಥವಾಗುವುದಿಲ್ಲ.
ವರ್ಷವಿಡೀ ಅಧ್ಯಾಪಕರು ಪಾಠ ಮಾಡುತ್ತಾರೆ. ಪಠ್ಯದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲು ಹರಸಾಹಸ ಪಡುತ್ತಾರೆ. ಪೂರಕ ತರಗತಿಗಳನ್ನು ನಡೆಸುತ್ತಾರೆ. ತಾವು ತಿಳಿಸಿದುದು ಮಕ್ಕಳಿಗೆ ಅರ್ಥವಾಯಿತೆಂದು ತಿಳಿದಾಗ ಅದೇ ಅಧ್ಯಾಪಕರು ಆನಂದ ತುಂದಿಲರಾಗುತ್ತಾರೆ. ಮಕ್ಕಳ ಬಗ್ಗೆ ಇಷ್ಟೆಲ್ಲ ಕಾಳಜಿ ತೋರುವ ಅಧ್ಯಾಪಕರು ಪರೀಕ್ಷೆಯೆಂಬ ಕಷ್ಟವನ್ನೂ ಕೊಡುವುದಿಲ್ಲವೇ? ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳು ಉತ್ತರಗಳನ್ನು ನೆನಪಿಸುವ ಜಂಜಾಟದೊಳಗೆ ಕಷ್ಟಪಡುತ್ತಿದ್ದರೂ ಮೌನವಾಗಿ ವೀಕ್ಷಿಸುತ್ತಾರಲ್ಲದೆ ಸಹಾಯಕ್ಕೆ ಬರುವುದಿಲ್ಲವಲ್ಲ! ಕೆಲವರು ಸ್ವಲ್ಪ ಕಠಿಣವಾಗಿಯೂ ವ್ಯವಹರಿಸುತ್ತಾರೆ. ಪರೀಕ್ಷೆ ಬಹಳ ಕಷ್ಟವಿದೆ ಎಂದರೂ, ಸುಲಭವಾಗಿದೆಯೆಂದರೂ ಅವರ ಪ್ರತಿಕ್ರಿಯೆ ನಗು ಮಾತ್ರ. ಅವರು ಯಾವುದೇ ಭಾವ ವಿಕಾರಗಳಿಗೆ ಒಳಗಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರು ನಮ್ಮನ್ನು ಕಷ್ಟಕ್ಕೊಳಪಡಿಸಿ ಮೋಜು ಮಾಡುತ್ತಾರೆ ಅಥವಾ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸುವುದು ತಪ್ಪಾಗುವುದಿಲ್ಲವೇ? ಭಗವಂತ ಮಾಡುವುದೂ ಇದನ್ನೇ.
ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸುವ ಧಾರಣಾ ಶಕ್ತಿ ಪಡೆಯಬೇಕಾದರೆ ಕಠಿಣ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಸವಾಲುಗಳೆದುರಾದಂತೆ ಯೋಚನಾ ಶಕ್ತಿ ಹೆಚ್ಚುತ್ತದೆ. ಗೆಲುವು ಗಳಿಸುವ ಹಪಾ ಹಪಿ ಹೆಚ್ಚುತ್ತದೆ. ತಾರ್ಕಿಕ ಚಿಂತನೆಯ ಹಲವು ಪಥಗಳು ತೆರೆದುಕೊಳ್ಳುತ್ತವೆ. ಸೃಜನ ಶೀಲ ಚಿಂತನೆಯ ನವ ನವ ಅಧ್ಯಾಯಗಳು ನಮ್ಮೊಳಗೆ ಬೆಳೆಯುತ್ತವೆ. ಪರೀಕ್ಷೆಯ ಕಷ್ಟವನ್ನು ಅಧ್ಯಾಪಕರ ಬಗ್ಗೆ ಆರೋಪಿಸುವುದಕ್ಕಿಂತ ಗೆಲುವಿನ ಸೋಪಾನವಾಗಿ ಸ್ವೀಕರಿಸಿದರೆ ಅಥವಾ ಅಂಗೀಕರಿಸಿದರೆ ಎಷ್ಟೊಂದು ಲಾಭವಾಗುವುದು? ಯಾವುದೋ ಕಾಯಿಲೆ ಬಂದಾಗ ಕಷ್ಟ ನೀಡಿದೆಯೆಂದು ದೇವರನ್ನು ದೂರುವ ಬದಲು ಆ ಕಾಯಿಲೆಯಿಂದಾಗಿ ಆಗುವ ಅನುಕೂಲತೆಗಳನ್ನು ಗಮನಿಸಿದರೆ ಕಷ್ಟದೊಳಗೂ ಸುಖವನ್ನರಸಬಹುದಲ್ಲವೇ? ದೇಹದ ರೋಗ ನಿರೋಧಕ ಶಕ್ತಿವರ್ಧನೆಗೂ ಕಾಯಿಲೆ ಕಾರಣವಾಗಬಹುದಲ್ಲ!
ಆವಶ್ಯಕತೆಯೇ ಕಲ್ಪನೆಯ ತಾಯಿ ಎಂಬ ಮಾತಿದೆ. ಕಷ್ಟ ಬಂದಾಗ ದೇವರನ್ನೋ, ಇನ್ಯಾರನ್ನೋ ಹೊಣೆಗೀಡುಮಾಡದೆ ಕಷ್ಟವನ್ನು ಸವಾಲಾಗಿ ಸ್ವೀಕರಿಸಿ ಗೆದ್ದ ಲಕ್ಷಾಂತರ ಉದಾಹರಣೆ ನಮ್ಮ ಮುಂದೆ ಇದೆ. ಮಾಲತಿ ಹೊಳ್ಳ, “ನಮ್ಮ ದೇಹಕ್ಕೆ ಸಿಗುವ ಪ್ರತಿಯೊಂದು ಕಷ್ಟವೂ ನಮ್ಮನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತೆ. ಹಾಗಾಗಿಯೇ ದೈಹಿಕ ಅಸಮರ್ಥತೆಯ ನಡುವೆಯೂ ನಾನು ಕ್ರೀಡೆಯನ್ನು ಆಯ್ಕೆಮಾಡಿಕೊಂಡೆ” ಎಂದು ಹೇಳುತ್ತಾರೆ. ಅದನ್ನು ಸಾಧಿಸಿ ತೋರಿಸಿದ್ದಾರೆ. ಕಷ್ಟವನ್ನು ಸುಖವಾಗಿ ಪರಿವರ್ತಿಸಲು ಮನಸ್ಸು ಮಾಡಬೇಕು. ಮನಸ್ಸೇ ಕಷ್ಟ ಸುಖಗಳ ಜನಕ.
ಕಷ್ಟವನ್ನು ಸೋಲು ಎಂದೂ ಹೇಳುವುದಿದೆ. ಸೋಲೆನ್ನುವುದು ಜೀವನಕ್ಕೆ ತಾಜಾ ಅನುಭವಗಳನ್ನೂ ನೀಡುತ್ತವೆ. ಸೋಲು ಕಠಿಣವಾಗಿ ಪರಿಶ್ರಮ ಪಡಲು ಕಲಿಸುತ್ತದೆ. ಪರಿಶ್ರಮದಿಂದಲಾಗಿ ಗೆಲುವು ಒದಗುತ್ತದೆ. ಕಷ್ಟಗಳು ಸುಖದ ಹುಟ್ಟಿಗೂ ಕಾರಣವಾಗುತ್ತದೆ. ಚಳಿಗಾಲದಲ್ಲಿ ವಿಪರೀತ ಚಳಿ, ಬಹಳ ಕಷ್ಟ. ಈ ಕಷ್ಟ ಶಾಶ್ವತವಲ್ಲ. ಮುಂದೆ ಬೇಸಗೆ ಬರುತ್ತದೆ. ಚಳಿ ಕಡಿಮೆಯಾಗುತ್ತದೆ. ಸುಖ ಸಿಗಲಾರಂಭಿಸುತ್ತದೆ ಎನ್ನುವಾಗಲೇ ಸೆಖೇಯೇರ ತೊಡಗುತ್ತದೆ. ಸಹಿಸಲಾಗದ ಸಖೆ, ಬಹಳ ಕಷ್ಟ ಎನ್ನೋಣವೇ? ಸ್ವಲ್ಪ ದಿನಗಳಲ್ಲಿ ಮಳೆ ಬಂದು ತಂಪಾಗುತ್ತದೆ. ಪ್ರತಿಯೊಬ್ಬರಿಗೂ ಕಷ್ಟ ಸುಖ ಬರುತ್ತಲೇ ಇರುತ್ತದೆ. ಕಷ್ಟ ಸುಖಗಳನ್ನು ಮೀರಿ ನಿಲ್ಲುವುದೇ ಜೀವನ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ