ಕಸದಿಂದ ಕಾಗದ
ಹದಿನೈದು ವರುಷಗಳ ಉದ್ದಕ್ಕೂ ಅಡ್ರಿಯನ್ ಪಿಂಟೋ ಗಮನಿಸುತ್ತಲೇ ಇದ್ದರು: ದೇಶದ ಉದ್ದಗಲದಲ್ಲಿ ಹರಡಿರುವ ದ್ರಾಕ್ಷಿಯ ವೈನ್ ತಯಾರಿಸುವ ಘಟಕಗಳು ಟನ್ನುಗಟ್ಟಲೆ ದ್ರಾಕ್ಷಿಕಸ ಉತ್ಪಾದಿಸುವುದನ್ನು. ಆಗೆಲ್ಲ ಅವರಿಗೊಂದೇ ಯೋಚನೆ: ಈ ಕಸದಿಂದ ಏನಾದರೂ ಉಪಯುಕ್ತ ವಸ್ತು ಉತ್ಪಾದಿಸಬಹುದೇ?
ಸ್ಪಿರಿಟ್ ಉತ್ಪಾದಕಾ ಘಟಕ “ಪೆರ್ನೊಡ್ ರಿಕಾರ್ಡ್ ಇಂಡಿಯಾ”ದಲ್ಲಿ ಹಿರಿಯ ಮೆನೇಜರ್ ಆಗಿದ್ದ ಪಿಂಟೋ ಈ ಬಗ್ಗೆ ಸಂಶೋಧನೆ ಆರಂಭಿಸಿದ್ದು ೨೦೧೨ರಲ್ಲಿ. ಅದೊಂದು ದಿನ ದ್ರಾಕ್ಷಿಕಸದ ನಾರಿನಿಂದ ಕಾಗದ ತಯಾರಿಸಬಹುದು ಎಂದು ಅವರಿಗೆ ಹೊಳೆಯಿತು. ಒಂದು ಬ್ಲೆಂಡರ್ ಮತ್ತು ಬಲೆ ಬಳಸಿ, ತನ್ನ ಅಡುಗೆಕೋಣೆಯಲ್ಲಿ ದ್ರಾಕ್ಷಿಕಸದಿಂದ ಕಾಗದ ತಯಾರಿಸುವ ಪ್ರಯೋಗಕ್ಕಿಳಿದರು. ಮೊದಲ ಯತ್ನದಲ್ಲೇ ಯಶಸ್ಸು. “ಆ ಕಾಗದದ ಬಣ್ಣ ಮತ್ತು ರಚನೆ ಕಂಡು ಖುಷಿಯಾಯಿತು” ಎನ್ನುತ್ತಾರೆ ಪಿಂಟೋ.
ಅನಂತರ, ಈ ಕಿರುಉದ್ದಿಮೆ ಮುನ್ನಡೆಸಲಿಕ್ಕಾಗಿ ಅಹ್ಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟಿನ ಒಂದು ಕೋರ್ಸಿಗೆ ಸೇರಿಕೊಂಡರು. ಹಾಗೆಯೇ ಮೇ ೨೦೧೬ರಲ್ಲಿ ಜಾಗತಿಕ ಬೌದ್ಧಿಕ ಸೊತ್ತಿನ ಸಂಸ್ಥೆಗೂ ಪೇಟೆಂಟಿಗಾಗಿ ಅರ್ಜಿ ಸಲ್ಲಿಕೆ; ದ್ರಾಕ್ಷಿಕಸದ ಕಾಗದ ಉತ್ಪಾದನೆಗಾಗಿ “ಗ್ರೀನ್ ಪೇಪರ್ ವರ್ಕ್ಸ್” ಸ್ಥಾಪನೆ.
ಮುಂಬೈಯಲ್ಲಿರುವ ಈ ಘಟಕ, ಈ ವರುಷ ೧೫೦ ಟನ್ ದ್ರಾಕ್ಷಿಕಸದ ಕಾಗದ ಉತ್ಪಾದಿಸಿದೆ. ಅರೆಬಿಳಿ ಹಿನ್ನೆಲೆಯಲ್ಲಿ ಕಪ್ಪು ಚುಕ್ಕೆಗಳಿರುವ ಈ ಕಾಗದದ ನೋಟ ಆಕರ್ಷಕ. ಫೈಲ್, ಫೋಲ್ಡರ್, ಪೆಟ್ಟಿಗೆ ರಚಿಸಲು ಮತ್ತು ಪ್ಯಾಕ್ ಮಾಡಲು ಈ ಕಾಗದ ಸೂಕ್ತ. ನಮ್ಮ ದೇಶದಿಂದ ಹಾಗೂ ವಿದೇಶಗಳಿಂದ ಗಣನೀಯ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಅಡ್ರಿಯನ್ ಪಿಂಟೋ.
ಸಾವಯವ ಕಸದಿಂದ ಯಂತ್ರರಹಿತವಾಗಿ ಕಾಗದ ತಯಾರಿಸುವ ಇನ್ನೊಂದು ಘಟಕದ ಸಾಧನೆಯೂ ವಿಶೇಷ. ಯಾಕೆಂದರೆ, ಅದು ಕಾಗದ ತಯಾರಿಸುವುದು ಆನೆಲದ್ದಿಯಿಂದ. “ಹಾಥಿ ಚಾಪ್” ಎಂಬ ಹೆಸರಿನ ಈ ಕಾಗದ ಉತ್ಪಾದನಾ ಘಟಕದ ರೂವಾರಿ ಮಹಿಮಾ ಮೆಹ್ರಾ. ಒಂದು ದಶಕದ ಹಿಂದಿನ ಮಾತು. ಡೆಲ್ಲಿಯ ಕಾಗದ ಉತ್ಪಾದನಾ ಕಂಪೆನಿ “ಪಾಪೆಟೆರಿ”ಯ ಮುಖ್ಯಸ್ಥರಾದ ಮಹಿಮಾ ಜೈಪುರಕ್ಕೆ ಹೋಗಿದ್ದರು. ಹತ್ತಿರದ ಅಮೆರ್ ಕೋಟೆಗೆ ಅವರು ಭೇಟಿಯಿತ್ತಾಗ, ಅಲ್ಲಿ ರಾಶಿರಾಶಿ ಆನೆಲದ್ದಿಯ ವಾಸನೆ. ಆದರೆ, ಮಹಿಮಾ ಮೆಹ್ರಾ ಅವರ ಗಮನ ಸೆಳೆದದ್ದು ಆನೆಲದ್ದಿಯ ನಾರುಗಳು ಮತ್ತು ಕಾಗದ ತಯಾರಿಗೆ ಬಳಸುವ ನಾರುಗಳ ಸಾಮ್ಯತೆ. ಆಗ ಅವರ ಮನಸ್ಸಿನಲ್ಲಿ ಮೊಳಕೆಯೊಡೆದ ಯೋಜನೆ ಆನೆಲದ್ದಿಯಿಂದ ಕಾಗದ ತಯಾರಿಸುವುದು.
ಆನೆ ಸೇವಿಸಿದ ಆಹಾರ ಅವಲಂಬಿಸಿ, “ಹಾಥಿ ಚಾಪ್” ಕಾಗದದ ಬಣ್ಣ, ನಸುಕಂದುವಿನಿಂದ ತೊಡಗಿ ಕಡುಕಂದು ವರೆಗೆ ವಿಭಿನ್ನ. “ನಾವು ರಾಜಸ್ಥಾನದ ಅಮೆರಿನಿಂದ ಆನೆಲದ್ದಿ ತರಿಸುತ್ತೇವೆ. ಅದು ಪುಕ್ಕಟೆಯಾಗಿ ಸಿಗುತ್ತದೆ. ಕೆಲಮೊಮ್ಮೆ, ಹಣ ಕೊಡಬೇಕಾದಾಗ, ಕಬ್ಬು ಅಥವಾ ಧಾನ್ಯ ಖರೀದಿಸಿ ಕೊಡುತ್ತೇವೆ’ ಎನ್ನುತ್ತಾರೆ ಮೆಹ್ರಾ. ಬ್ಯಾಗುಗಳು, ಚೌಕಟ್ಟುಗಳು, ಫೋಟೋ ಆಲ್ಬಂಗಳು, ನೋಟ್-ಪುಸ್ತಕಗಳು, ಕಾರ್ಡುಗಳು, ಟ್ಯಾಗುಗಳು – ಇವುಗಳ ತಯಾರಿಗಾಗಿ ಆನೆಲದ್ದಿ ಕಾಗದಕ್ಕೆ ಬೇಡಿಕೆ.
ಇಂತಹ ಮತ್ತೊಂದು ಘಟಕದ ಸಾಧನೆ ಬಾಳೆದಿಂಡು ಮತ್ತು ಬಾಳೆಸಿಪ್ಪೆಯಿಂದ ಯಂತ್ರರಹಿತವಾಗಿ ಕಾಗದ ತಯಾರಿ. ಹತ್ತಿಯಿಂದ ಕಾಗದ ಉತ್ಪಾದಿಸುವ ಜೈಪುರದ ತಾಜ್ ಪೇಪರ್ ಉದ್ಯೋಗ್ ಎಂಬ ಆ ಘಟಕಕ್ಕೆ ೧೯೯೨ರಲ್ಲೊಂದು ದಿನ ಬಂದ ಬೇಡಿಕೆ: “ಲ್ಯಾಂಪ್ ಷೇಡುಗಳಿಗೆ ಬೇಕಾದ ಕಾಗದ ಕಳಿಸಿ.” ಅದರ ಕುಶಲಕರ್ಮಿಗಳು ಹಲವು ಕಚ್ಚಾವಸ್ತುಗಳಿಂದ ಕಾಗದ ಮಾಡಿ ಪರೀಕ್ಷಿಸಿದರು. ಅಂತಿಮವಾಗಿ, ಬಾಳೆದಿಂಡಿನ ನಾರಿನಿಂದ ಮಾಡಿದ ಕಾಗದದ ದಪ್ಪ ಮತ್ತು ಪಾರದರ್ಶಕತೆ ಲ್ಯಾಂಪ್ ಷೇಡಿಗೆ ಸೂಕ್ತ ಎಂದು ತೀರ್ಮಾನಿಸಿದರು. ಈ ನಸುಕಂದು ಬಣ್ಣದ ಕಾಗದವನ್ನು ಫೈಲುಗಳು, ಫೋಲ್ಡರುಗಳು, ನೋಟ್-ಪುಸ್ತಕಗಳು, ಆರ್ಟ್ ಕಾಗದ ಮತ್ತು ಮುದ್ರಣಕಾಗದದ ತಯಾರಿಗೂ ಬಳಸಬಹುದು.
ಕೈಯಿಂದ ತಯಾರಿಸುವ ಇಂತಹ ಕಾಗದಗಳ ಖರೀದಿಗೆ ಹಲವರು ಆಸಕ್ತರು. ಅವರಿಂದಾಗಿಯೇ ಈ ಉದ್ದಿಮೆಗಳು ಮುನ್ನಡೆಯುತ್ತಿವೆ. ಯಾಕೆಂದರೆ ಈ ಕಾಗದಗಳ ಬೆಲೆ ಜಾಸ್ತಿ; ಪುನರ್ಬಳಕೆ ಮಾಡಿದ ಕಾಗದದಿಂದ ಅಥವಾ ಹತ್ತಿಯಿಂದ ತಯಾರಿಸಿದ ಕಾಗದಕ್ಕಿಂತ ಇವುಗಳ ಬೆಲೆ ಶೇ.೨೫ – ೩೦ ಜಾಸ್ತಿ. ಕಾಗದದ ದಪ್ಪ ಆಧರಿಸಿ, ಸ್ಟಾಂಡರ್ಡ್ ಅಳತೆಯ ದ್ರಾಕ್ಷಿಕಸ ಕಾಗದ ಹಾಳೆಯ ಬೆಲೆ ರೂ.೩೦ರಿಂದ ೪೦ ಮತ್ತು ಹಾಥಿ ಚಾಪ್ ಕಾಗದದ ಹಾಳೆಯ ಬೆಲೆ ರೂ.೨೦ರಿಂದ ೭೦.
“ನಿಮಗೆ ಆನೆಲದ್ದಿ ಪುಕ್ಕಟೆಯಾಗಿ ಸಿಗುತ್ತದಲ್ಲ. ಮತ್ಯಾಕೆ ಹಾಥಿ ಚಾಪ್ ಕಾಗದ ಹಾಳೆಗೆ ಬೆಲೆ ಜಾಸ್ತಿ? ಎಂಬುದು ಹಲವು ಗ್ರಾಹಕರ ಪ್ರಶ್ನೆ” ಎನ್ನುತ್ತಾರೆ ಮಹಿಮಾ ಮೆಹ್ರಾ. ಸಾವಯವ ಕಚ್ಚಾವಸ್ತುವಿನಿಂದ ಕೈಯಿಂದಲೇ ಕಾಗದ ತಯಾರಿಸಲು ಶ್ರಮ ಜಾಸ್ತಿ ಎಂದು ಉತ್ತರಿಸುತ್ತಾರೆ ಅವರು. ಜೊತೆಗೆ, ಆನೆಲದ್ದಿಯಿಂದ ಕಾಗದ ತಯಾರಿಸುವಾಗ ಅದನ್ನು ಸೋಂಕುರಹಿತ ಮಾಡುವ ಹಾಗೂ ನಾರುಗಳನ್ನು ಮೆದುವಾಗಿಸುವ ವೆಚ್ಚವೂ ಸೇರಿಕೊಳ್ಳುತ್ತದೆ.
ಸಾವಯವ ಕಸದಿಂದ ಉತ್ಪಾದಿಸುವ ಕಾಗದಗಳಿಂದಾಗಿ ನಮ್ಮ ದೇಶದ ಘನತ್ಯಾಜ್ಯದ ವಿಲೇವಾರಿ ವ್ಯವಸ್ಥೆ ಸುಧಾರಿಸಲು ಸಾಧ್ಯ. ಉದಾಹರಣೆಗೆ, ನಮ್ಮ ದ್ರಾಕ್ಷಿ ವೈನ್ ಘಟಕಗಳಿಂದ ಪ್ರತಿ ವರುಷ ಹೊರಬರುವ ದ್ರಾಕ್ಷಿಕಸದ ಪರಿಮಾಣ ೫,೦೦೦ ಟನ್. ಇದೆಲ್ಲವನ್ನು ದೊಡ್ದ ಹೊಂಡಗಳಿಗೆ ಸುರಿಯಲಾಗುತ್ತಿದೆ. ಹಾಗೆಯೇ, ನಮ್ಮ ದೇಶದ ಬಾಳೆತೋಟಗಳು ಉತ್ಪಾದಿಸುವ ಬಾಳೆದಿಂಡು ಮತ್ತು ಎಲೆಗಳ ಪರಿಮಾಣ ಅಗಾಧ. ಬಾಳೆದಿಂಡು ಎಲ್ಲವೂ ಹಾಳಾಗಿ ಹೋಗುತ್ತಿದೆ. ಅವುಗಳ ವಿಲೇವಾರಿ ಬಾಳೆ ಬೆಳೆಗಾರರ ದೊಡ್ಡ ಸಮಸ್ಯೆ. ಇವೆರಡು ಸಮಸ್ಯೆಗಳಿಗೂ ಒಂದು ಒಳ್ಳೆಯ ಪರಿಹಾರ: ಈ ಕಸದಿಂದ ಕಾಗದದ ಉತ್ಪಾದನೆ.
ಭಾರತದಲ್ಲಿ ಏರುತ್ತಿರುವ ಕಾಗದದ ಬೇಡಿಕೆಯ ಹಿನ್ನೆಲೆಯಲ್ಲಿ ಸಾವಯವ ಕಸದ ಕಾಗದದ ಉತ್ಪಾದನೆ ಮುಖ್ಯವಾಗಲು ಇನ್ನೊಂದು ಕಾರಣವೂ ಇದೆ. ಕೇಂದ್ರ ಪಲ್ಪ್ ಮತ್ತು ಕಾಗದ ಸಂಶೋಧನಾ ಸಂಸ್ಥೆಯ ವರದಿಯ ಅನುಸಾರ, ೨೦೧೦ರಿಂದ ೨೦೧೪ರ ಅವಧಿಯಲ್ಲಿ ನಮ್ಮ ಕಾಗದದ ಬಳಕೆಯ ಹೆಚ್ಚಳ ೧೧.೧೫ ದಶಲಕ್ಷ ಟನ್ನುಗಳಿಂದ ೧೬.೫೧ ದಶಲಕ್ಷ ಟನ್ (ಶೇಕಡಾ ೪೮). ವರುಷದಿಂದ ವರುಷಕ್ಕೆ ಕಾಗದದ ಬೇಡಿಕೆಯ ಏರಿಕೆಯ ದರ ಶೇ.೭ರಿಂದ ೮. ಇದರಿಂದಾಗಿ ನಮ್ಮ ಕಾಡುಗಳ ನಾಶವೂ ಹೆಚ್ಚಲಿದೆ. ಯಾಕೆಂದರೆ ನಮ್ಮ ದೇಶದ ೮೦೦ ಕಾಗದ ತಯಾರಿ ಕಾರ್ಖಾನೆಗಳಲ್ಲಿ ಶೇ.೨೪ ಕಾರ್ಖಾನೆಗಳಿಗೆ ಅರಣ್ಯದಿಂದಲೇ ಕಚ್ಚಾವಸ್ತು ಪೂರೈಕೆ.
ಒಟ್ಟಾರೆಯಾಗಿ, ಸಾವಯವ ಕಸದಿಂದ ಕಾಗದ ಉತ್ಪಾದನೆ ಕಸದ ಸದ್ಬಳಕೆಗೆ ಮತ್ತು ಅರಣ್ಯಗಳ ರಕ್ಷಣೆಗೆ ಪೂರಕ.