ಕಸದ ಗುಂಡಿಯಮ್ಮ!

ಕಸದ ಗುಂಡಿಯಮ್ಮ!

ಕವನ

 
ನೆತ್ತಿಯ ಮೇಲೊಂದತ್ತು ಅಣಕಿಸುವ ಅಣಬೆಗಳು
ಕೊಳೆತ ಸುಡು ಬಿಸಿಯ ಸೆಗಣಿ
ಒಳಗಿನ ಬೆಳ್ಳನೆಯ ನುಣ್ಣನೆಯ ಕಾಗೆ ಕಡುಬು
ನಾಲಿಗೆ ಸವರಿಕೊಂಡು ನಿಂತ ನಾಯಿ, ಕಾಗೆ, ಕೋಳಿಗಳು
ನೆತ್ತಿಗೇರಿದ ಚೆಡ್ಡಿಯ ಕೀರಿಟಗಳು
ಗಂಜಲದ ಗಮಲು, ಎಂಜಲೆಲೆಯ ಅನ್ನದಮಲು
ಬಾಣಂತಿಯ, ಋತುಮತಿಯ ಮೈಲಿಗೆಯ ಬಟ್ಟೆಗಳು
ಸತ್ತವರ ಹಾಸಿಗೆ ದಿಂಬುಗಳು-ಕೊಂಬುಗಳು
ಅರ್ಧ ಸುತ್ತುವರಿದ ಜಾಲಿ ಮುಳ್ಳಿನ ಹಂದರ
ಕೆದಕೆದಕಿ ಬೆದಕಿ ಹಾಯ್ದು ತಿನ್ನುತ್ತಿರುವ ಕೋಳಿ, ಮರಿಗಳು
ಒಂಟಿಯಾದರೇ ಸಾಕೆಂದು ಹೊಂಚು ಹಾಕುತ್ತಿರುವ ಹಾವು, ಹದ್ದುಗಳು
ತಿಂದು, ತೇಗಿ, ಬಿದ್ದು ಹೊರಳಾಡುತ್ತಿರುವ ಹಂದಿ
ಕೇವಲ ಹೆಣ್ಣೆಂದು ಎಸೆದ ಎಳೆಯ ಕಂದಮ್ಮಗಳು
ಹೀಗೆ ಲೋಕದ ಎಲ್ಲರ ತೀಟೆ ತೀರದ ಮೇಲೆ ಬಿಸಾಕೋ ಕೊಳಕನ್ನೆ ಮಡಿಲು ತುಂಬಿಕೊಳ್ಳುತ್ತಾಳೆ
ಸುಮ್ಮನೆ ಸಹಿಸುತ್ತಾಳೆ, ಪತಿತಪಾವನಿ ಕಸದ ಗುಂಡಿಯಮ್ಮ