---------------------------
ಎಂಐಟಿ:ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್ ಆರಂಭ
ಬೋಸ್ಟನ್ನ ಮಸಾಚ್ಯುಸೆಟ್ಸ್ ತಾಂತ್ರಿಕ ವಿದ್ಯಾಲಯವು ಸಂಪೂರ್ಣ ಆನ್ಲೈನ್ ಕೋರ್ಸ್ ಒಂದನ್ನು ಆರಂಬಿಸಲಿದೆ.ಮಾರ್ಚಿನಲ್ಲಿ ಆರಂಭವಾಗಲಿರುವ ಸರ್ಕೀಟ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಕೋರ್ಸ್ ಸಂಪೂರ್ಣ ಆನ್ಲೈನ್ ಕೋರ್ಸ್ ಆಗಿದ್ದು,ವಿಶ್ವದ ಯಾವುದೇ ಭಾಗದಲ್ಲಿದ್ದವರೂ,ಕಲಿತು ಪ್ರಮಾಣಪತ್ರ ಪಡೆಯಬಹುದು.ವಿಡಿಯೋ,ಪಾಡ್ಕಾಸ್ಟ್ ಮತ್ತು ಟಿಪ್ಪಣಿಯಂತಹ ಕೋರ್ಸ್ ಸಾಮಗ್ರಿಗಳನ್ನು ಆನ್ಲೈನ್ ಮೂಲಕ ಒದಗಿಸಿ,ಕಲಿಕೆ ಸಲೀಸಾಗಿರುವಂತೆ ವ್ಯವಸ್ಥೆಗೊಳಿಸಲಾಗಿದೆ.ಪರೀಕ್ಷೆಗಳೂ ಆನ್ಲೈನಿನಲ್ಲೇ ನಡೆಸಲಾಗುವುದು.ಅಭ್ಯರ್ಥಿಯು ಪರೀಖೆ ವೇಳೆ ಮೋಸ ಮಾಡನೆಂಬ ನಂಬುಗೆ ಮೇಲೆ ಸದ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದರೂ,ಮುಂದೆ ಪರೀಕ್ಷೆ ವೇಳೆ ಮೋಸಗೊಳಿಸಲು ಸಾಧ್ಯವಾಗದ ಹಾಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಸಂಸ್ಥೆ ತೀರ್ಮಾನಿಸಿದೆ.ಈ ಸರ್ಟಿಫಿಕೇಟ್ ಕೋರ್ಸ್ ಸಂಪೂರ್ಣ ಉಚಿತವಾಗಿರುವುದು ವಿಶೇಷ.ಸಂಸ್ಥೆಯ ವಿದ್ಯಾರ್ಥಿಗಳಿಗೂ ಈ ಕೋರ್ಸ್ ಮುಕ್ತವಾಗಿ ತೆರೆದಿದೆ.ಇಲ್ಲಿನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಐವತ್ತು ಸಾವಿರ ಡಾಲರುಗಳಷ್ಟು ಶುಲ್ಕ ಪಾವತಿಸುತ್ತಾರೆ.ಆನ್ಲೈನ್ ಕೋರ್ಸ್ ಆದರೂ,ಇದನ್ನು ಆಫ್ಲೈನ್ ಕೋರ್ಸ್ಗಳ ಮಟ್ಟದಲ್ಲೇ ನಡೆಸಲಾಗುತ್ತಿದೆ.ವಿದ್ಯಾರ್ಥಿಗಳು ಮಿಥ್ಯಾ ಪ್ರಯೋಗಾಲಯದ ಮೂಲಕ ಪ್ರಯೋಗಗಳನ್ನೂ ಮಾಡಬಹುದು.ಇ-ಪುಸ್ತಕಗಳೂ ಲಭ್ಯವಿವೆ.ಪ್ರತಿ ಅಧ್ಯಾಯ ಮುಗಿದೊಡನೆ ವಿದ್ಯಾರ್ಥಿಯ ಕಲಿಕೆಯನ್ನು ಪರೀಕ್ಷಿಸಲು ಅಭ್ಯರ್ಥಿಯು ಸಂವಹನ ಅಗತ್ಯವಿರುವ ಅಭ್ಯಾಸ ತೆಗೆದುಕೊಳ್ಳಬೇಕು.
---------------------------------------------------------
ಮೈಕ್ರೋಸಾಫ್ಟ್:ಹೊಸ ಲೋಗೋ
ವಿಂಡೋಸ್8 ಆಪರೇಟಿಂಗ್ ವ್ಯವಸ್ಥೆಯನ್ನು ಬಿಡುಗಡೆ ಮಾಡುವ ತಯಾರಿಯಲ್ಲಿರುವ ಮೈಕ್ರೋಸಾಫ್ಟ್ ಕಂಪೆನಿಯು ಹೊಸ ಲೋಗೋವನ್ನೂ ಬಳಸಲೂ ತೀರ್ಮಾನಿಸಿರುವ ಹಾಗಿದೆ.ಕಿಟಕಿಯ ಪಾರ್ಶ್ವ ನೋಟವನ್ನು ಹೊಸ ಲೋಗೋವಾಗಿ ಬಳಸಲಾಗುವುದು.ಕಂಪ್ಯೂಟರಿನಲ್ಲಿ ಕಿಟಕಿ-ವಿಂಡೋಗೆ ಹೆಚ್ಚು ಪ್ರಸ್ತುತತೆ ಇದೆ.ಹಾಗಾಗಿ ಲೊಗೋದಲ್ಲಿ ಇದರ ಬಳಕೆಗೆ ನಿರ್ಧರಿಸಲಾಗಿದೆ.ಪೆಂಟಾಗ್ರಾಮ್ ಎನ್ನುವ ವಿನ್ಯಾಸ ಕಂಪೆನಿಯು ಲೊಗೋವನ್ನು ರಚಿಸಿದೆ.
------------------------------
ಆಪ್ಲ್ನ ಪರ್ವತ ರಾಜ
ಆಪಲ್ ಕಂಪೆನಿಯ ಹೊಸ ಆಪರೇಟಿಂಗ್ ವ್ಯವಸ್ಥೆಯ ಹೆಸರು ಮೌಂಟೇನ್ ಲಯನ್ ಎಂದಾಗಿದೆ.1984ರಲ್ಲಿ ಮೊದಲ ಮ್ಯಾಕ್ ಆಪರೇಟಿಂಗ್ ವ್ಯವಸ್ಥೆಯು ಬಿಡುಗಡೆಯಾದ ಮೇಲೆ ಹಲವಾರು ಬಾರಿ,ಆಪರೇಟಿಂಗ್ ವ್ಯವಸ್ಥೆಯ ಹೊಸ ಆವೃತ್ತಿಗಳು ಬಿಡುಗಡೆಯಾಗಿವೆ.ಸಿಸ್ಟಮ್ಸ್7 ಎನ್ನುವ ಆವೃತ್ತಿಯು ಏಳು ವರ್ಷ ದೀರ್ಘಾವಧಿಗೆ ಬದಲಾಗದೆ ಉಳಿದದ್ದು ಬಿಟ್ಟರೆ,ಇತರೆಲ್ಲಾ ಆವೃತ್ತಿಗಳು ಆಗಿಂದಾಗ್ಗೆ ಬದಾಲಾಗುತ್ತಿದ್ದುವು.ಕಂಪ್ಯೂಟರ್ ಬಳಕೆಯನ್ನು ಸಲೀಸಾಗಿಸಿದ್ದು ಮ್ಯಾಕ್ ಓಎಸ್ನ ಹೆಚ್ಚುಗಾರಿಕೆ.ಮೌಸ್ ಮೂಲಕ ಕ್ಲಿಕ್ಕಿಸಿ ಕೆಲಸ ಮಾಡಿಸುವ ಬಳಕೆದಾರ ಸ್ನೇಹಿ ಕಂಪ್ಯೂಟರ್ ಬಳಕೆಯನ್ನು ಜನಪ್ರಿಯವಾಗಿಸಿದ್ದು ಆಪಲ್ ಕಂಪೆನಿಯೇ ಆಗಿದೆ.ಮಕ್ರೋಸಾಫ್ಟ್ ಇದನ್ನೇ ನಕಲಿ ಮಾಡಿ ತನ್ನ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯನ್ನು ರಚಿಸಿ,ಜನಮನ ಗೆದ್ದಿತು.
-------------------------------------------
ಟ್ವಿಟರ್:ಜಾಹೀರಾತು ಬಗ್ಗೆ ಜಾಗ್ರತೆ
ಟ್ವಿಟರಿನಲ್ಲಿ ವರ್ಗೀಕೃತ ಜಾಹೀರಾತು ನಮೂನೆಯ ಸಂದೇಶಗಳನ್ನು ಪ್ರಕಟಿಸಲಿನ್ನು ಅವಕಾಶ ಸಿಗಲಿದೆ.ಆದರದು ಅಮೆರಿಕನ್ ಎಕ್ಸ್ಪ್ರೆಸ್ ಕಂಪೆನಿಯ ಗ್ರಾಹಕರಿಗೆ ಮಾತ್ರಾ.ಹಾಗಾಗಿ ಕಾಕಪೋಕರು,ಜಾಹೀರಾತು ಹಾಕಲು ಬಾರದು.ಜಾಹೀರಾತುದಾರರು ಅದು ಯಾವ ಪ್ರದೇಶದಲ್ಲಿ ಪ್ರಕಟವಾಗ ಬೇಕೆಂದು ನಿಗದಿ ಪಡಿಸಲೂ ಸಾಧ್ಯ.ಎಷ್ಟು ಸಲ ಇದು ಪ್ರಕಟವಾಗ ಬೇಕೆಂದೂ ನಿಗದಿ ಪಡಿಸಬಹುದು.ಜಾಹೀರಾತುಗಳನ್ನು ಅಮೆರಿಕನ್ ಎಕ್ಸ್ಪ್ರೆಸ್ ಕಂಪೆನಿಯ ಮೂಲಕ ಟ್ವಿಟರಿಗೆ ಸಲ್ಲಿಸಬಹುದು.ಗ್ರಾಹಕರು ಸಂದೇಶಗಳಿಗೆ ಪ್ರತಿಕ್ರಿಯಿಸಿದರೆ ಮಾತ್ರಾ ಅದಕ್ಕೆ ದರ ವಿಧಿಸಲಾಗುತ್ತದೆ.ಸಂದೇಶವನ್ನು ರಿಟ್ವೀಟ್ ಮಾಡುವುದು,ಕಂಪೆನಿಯ ಹಿಂಬಾಲಕರಾಗುವುದು ಇತ್ಯಾದಿ ವರ್ತನೆಗಳ ಆಧಾರದಿಂದ ಇದನ್ನು ನಿರ್ಧರಿಸಲಾಗುತ್ತದೆ.ಟ್ವಿಟರ್ ಕೂಡಾ ತನ್ನ ಶೇರುಗಳನ್ನು ಸಾರ್ವಜನಿಕರಿಗೆ ಮಾರುವ ನಿರ್ಧಾರಕ್ಕೆ ಬಂದಿದೆ.ಆದರೆ ಅದರ ಬಗೆಗೆ ವಿವರಗಳಿಗಿನ್ನೂ ಕಾಯಬೇಕು.
-----------------------------------------------------
ಹೊಸತಾಣ ಪಿನ್ಟರೆಸ್ಟ್
http://pinterest.com ಎನ್ನುವುದು ಇನ್ನೊಂದು ಸಾಮಾಜಿಕ ಜಾಲತಾಣವಾದರೂ,ಹೊಸ ನಮೂನೆಯದ್ದು.ನಿಮಗೆ ಕುತೂಹಲ ಮೂಡಿಸಿದ ವಿಚಾರಗಳನ್ನು ಇತರರ ಗಮನಕ್ಕೆ ತರಲು,ಈ ತಾಣವನ್ನು ಬಳಸಬಹುದು.ನೀವು ಪಿನ್ಬೋರ್ಡ್ ಬಳಸುತ್ತಿರಬಹುದು.ಇದರಲ್ಲಿ ನಿಮ್ಮ ಯೋಜನೆಗಳ ಬಗ್ಗೆ,ನಿಮಗಿಷ್ಟವಾದ ಚಿತ್ರಗಳನ್ನು ಅಥವಾ ಸಂದೇಶಗಳನ್ನು ಪಿನ್ ಮಾಡಬಹುದು.ಪಿನ್ಟರೆಸ್ಟ್ ಕೂಡಾ ಇದಕ್ಕೆ ಅವಕಾಶ ಕೊಡುವ ಆನ್ಲೈನ್ ತಾಣವಾಗಿದೆ.ಇತರ ತಾಣಗಳಲ್ಲಿ ಕಂಡದ್ದನ್ನೂ ಪಿನ್ ಮಾಡಬಹುದು.ಆಗ,ಆ ಐಟಮ್ಗೆ ತಾಣದ ಕೊಂಡಿಯನ್ನು ನೀಡುವ ವ್ಯವಸ್ಥೆಯಿದೆ.ಹೀಗಾಗಿ,ಅದರ ಮೇಲೆ ಕ್ಲಿಕ್ಕಿಸಿದರೆ,ಮೂಲ ತಾಣಕ್ಕೆ ಸಾಗಬಹುದು.ಪಿನ್ಟರೆಸ್ಟಿನ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಕೂಡಾ ಲಭ್ಯವಿದೆ.ಹೀಗಾಗಿ,ನಿಮಗೆ ಮೆಚ್ಚಿಕೆಯಾದ ಪ್ರವಾಸಿ ತಾಣದ ಚಿತ್ರವನ್ನು ಸುಲಭವಾಗಿ ಪಿನ್ ಮಾಡಬಹುದು.ರುಚಿಕರವಾದ ತಿನಸು ತಿಂದರೆ,ಅದರ ಚಿತ್ರವನ್ನು ಪಿನ್ ಮಾಡಿ,ಇತರರ ಗಮನ ಸೆಳೆಯಬಹುದು.ಫೇಸ್ಬುಕ್ ಮತ್ತು ಟ್ವಿಟರ್ ಬಳಕೆದಾರರಿಗೆ ಮಾತ್ರಾ ಈ ತಾಣವೀಗ ಮುಕ್ತವಾಗಿದೆ.
-----------------------------------------
ಆಂಡ್ರಾಯಿಡ್ ಮುಕ್ತ ತಂತ್ರಾಂಶವೇ?
ಮುಕ್ತ ಮತ್ತು ಉಚಿತ ತಂತ್ರಾಂಶದ ಪ್ರತಿಪಾದಕರಾದ ರಿಚಾರ್ಡ್ ಸ್ಟಾಲ್ಮನ್ ಪ್ರಕಾರ ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ತಂತ್ರಾಂಶವನ್ನು ಮುಕ್ತ ತಂತ್ರಾಂಶವೆಂದು ಕರೆಯಲಾಗದು.ಆಂಡ್ರಾಯಿಡ್ನ ಮೂಲ ತಂತ್ರಾಂಶ ಸಾಲುಗಳು ಲಭ್ಯವಿದ್ದರೂ,ಸ್ಮಾರ್ಟ್ಪೋನಿನಲ್ಲಿ ಅದನ್ನು ಅನುಸ್ಥಾಪಿಸುವಾಗ,ಅದು ಯಂತ್ರಾಂಶದ ಮೇಲೆ ಅವಲಂಬಿತವಾಗುತ್ತದೆ.ಹಾಗಾಗಿ,ಯಾವುದೇ ಸ್ಮಾರ್ಟ್ಫೋನಿನಲ್ಲಿ ಅನುಸ್ಥಾಪಿಸಲಾಗುವ ಆಂಡ್ರಾಯಿಡ್ ಯಂತ್ರಾಂಶ ತಯಾರಕರ ನಿಯಂತ್ರಣದಲ್ಲಿರುತ್ತದೆಯೇ ವಿನ: ಬಳಕೆದಾರನ ನಿಯಂತ್ರಣದಲ್ಲ.ಹೀಗಾಗಿ,ಆಂಡ್ರಾಯಿಡ್ ನಿಜ ಅರ್ಥದಲ್ಲಿ ಮುಕ್ತ ಮತ್ತು ಉಚಿತ ತಂತ್ರಾಂಶವಾಗದು ಎನ್ನುವ ತರ್ಕ ಮಂಡಿಸುತ್ತಾರೆ.
ಅಂದಹಾಗೆ ರಿಚಾರ್ಡ್ ಸ್ಟಾಲ್ಮನ್ ಮುಕ್ತ ಮತ್ತು ಉಚಿತ ತಂತ್ರಾಂಶದ ಪ್ರತಿಪಾದಕ.ತಂತ್ರಾಂಶದ ಮೂಲವನ್ನು ಕೊಡದೆ,ಗ್ರಾಹಕರನ್ನು ಸುಲಿಯುವ ಪ್ರವೃತ್ತಿಗೆ ಅವರ ತೀವ್ರ ವಿರೋಧ.ತಂತ್ರಾಂಶದ ಸಾಲುಗಳನ್ನು ಬಹಿರಂಗಗೊಳಿಸಿ,ಅದನ್ನು ಬದಲಿಸಲು ಅವಕಾಶ ನೀಡಿಯೂ,ವ್ಯವಹಾರ ಕುದುರಿಸಲು ಬರುತ್ತದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ.
Udayavani
*ಅಶೋಕ್ಕುಮಾರ್ ಎ