ಕಾಂಗ್ರೆಸ್ ಅಧಿವೇಶನದಲ್ಲಿ ಹಲವು ನಿರ್ಣಯ

ಕಾಂಗ್ರೆಸ್ ಅಧಿವೇಶನದಲ್ಲಿ ಹಲವು ನಿರ್ಣಯ

ಛತ್ತೀಸಗಢದ ನವ ರಾಯಪುರದಲ್ಲಿ ಕಾಂಗ್ರೆಸ್ ನ ೮೫ನೇ ಮಹಾಧಿವೇಶನ ಭಾನುವಾರ ಸಂಪನ್ನಗೊಂಡಿತು.೨೦೨೪ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಸಮಾವೇಶಕ್ಕೆ ಮಹತ್ವ ಪ್ರಾಪ್ತವಾಗಿತ್ತು. ಈ ಮೂರು ದಿನಗಳ ಅಧಿವೇಶನದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದರಿಂದಾಗುವ ಅನುಕೂಲಗಳ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಾಗಿದೆ. ಪಕ್ಷದ ಉನ್ನತ ನೀತಿನಿರ್ಧಾರಕ ಅಂಗವಾದ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಆಂತರಿಕ ಚುನಾವಣೆ ಮೂಲಕ ನೇಮಕವಾಗಬೇಕು ಎಂಬ ಆಗ್ರಹ ಹಲವು ನಾಯಕರಿಂದ ಇದ್ದರೂ, ಹಾಗೆ ಆಗಿಲ್ಲ. ಈ ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಪೂರ್ಣ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮುಂದೆ ಇದಕ್ಕೆ ಆಕ್ಷೇಪ ಬರಬಹುದೇ ಎಂಬುದನ್ನು ಈಗಲೇ ಹೇಳಲಾಗದು. ಅಧ್ಯಕ್ಷೆಯಾಗಿ ಅನೇಕ ವರ್ಷ ಪಕ್ಷವನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರು ನಿವೃತ್ತಿಯ ಸುಳಿವು ನೀಡಿರುವುದು ವಿಶೇಷ. ಅವರು ನಿವೃತ್ತರಾಗುವುದಿಲ್ಲ ಎಂದು ನಂತರದಲ್ಲಿ ಸ್ಪಷ್ಟನೆ ನೀಡಲಾಗಿದ್ದರೂ, ವಯಸ್ಸು, ಆರೋಗ್ಯ ಇತ್ಯಾದಿ ಹಿನ್ನಲೆಯಲ್ಲಿ ಅವರ ಸಕ್ರಿಯತೆ ಎಷ್ಟರಮಟ್ಟಿಗಿರುತ್ತದೆಂಬುದು ಕುತೂಹಲಕರ. ಈ ಅಧಿವೇಶನದಲ್ಲಿ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿರುವುದು ನಿರೀಕ್ಷಿತ. ಅದರಲ್ಲೂ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬಂದಂದಿನಿಂದ ಕಾಂಗ್ರೆಸ್ ಇನ್ನಷ್ಟು ಸಂಕಷ್ಟ ಅನುಭವಿಸುತ್ತಿರುವುದು ಸ್ಪಷ್ಟಗೋಚರ. ಮೋದಿ ಸರಕಾರದ ಆರ್ಥಿಕ ನೀತಿ, ಚೀನಾ ಜತೆಗಿನ ಗಡಿ ತಂಟೆ ನಿರ್ವಹಣೆ, ಕೋಮು ಸಾಮರಸ್ಯ ಮುಂತಾದ ವಿಚಾರಗಳಲ್ಲಿ ಬಿಜೆಪಿ ಆಡಳಿತವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸುತ್ತದೆ. ಬಿಜೆಪಿಯನ್ನು ಕಟ್ಟಿಹಾಕಬೇಕೆಂದರೆ ವಿರುದ್ಧ ಪಕ್ಷಗಳೆಲ್ಲ ಏಕಕೊಡೆಯಡಿ ಬಂದು ಚುನಾವಣೆ ಎದುರಿಸಬೇಕು ಎಂಬ ಚಿಂತನೆ ಹೊಸದೇನಲ್ಲ. ಆದರೆ ಈ ಪಕ್ಷಗಳಲ್ಲಿನ ವಿಭಿನ್ನ ಮನೋಭಾವ ಮತ್ತು ಸಿದ್ಧಾಂತಗಳಿಂದಾಗಿ ಮೋದಿಗೆದುರಾಗಿ ಒಬ್ಬ ನಾಯಕನನ್ನು ಸರ್ವಾನುಮತದಿಂದ ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಚಿಂತನೆ ಕಾರ್ಯರೂಪಕ್ಕೆ ಬರುವುದು ಕಷ್ಟಸಾಧ್ಯವಾಗಿದೆ. ಪ್ರಸ್ತುತ ರಾಯಪುರ ಸಮಾವೇಶದಲ್ಲಿಯೂ ಈ ವಿಷಯ ಚರ್ಚೆಗೆ ಬಂದಿದ್ದು, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಸಮಾನಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಲಾಗಿದೆ. ಬೆನ್ನಿಗೇ, ದೇಶದ ಸದ್ಯದ ಕಷ್ಟದ ಸನ್ನಿವೇಶದಲ್ಲಿ ಕಾಂಗ್ರೆಸ್ ಗೆ ಮಾತ್ರ ಸಮರ್ಥ-ನಿರ್ಣಾಯಕ ನಾಯಕತ್ವ ನೀಡುವ ಸಾಮರ್ಥ್ಯ ಇದೆ ಎಂದೂ ಪ್ರತಿಪಾದಿಸಲಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಮೈತ್ರಿಗೆ ಕೊನೆ ಹಾಡಿ ಆರ್ ಜೆ ಡಿ ಜತೆ ಕೈಜೋಡಿಸಿರುವುದು ಬಿಜೆಪಿ ವಿರೋಧಿ ಕೂಟ ರಚಿಸುವ ಕನಸಿಗೆ ನೀರೆರೆಯುವ ಬೆಳವಣಿಗೆ ಎನಿಸಿದರೂ, ಮಹತ್ವಾಕಾಂಕ್ಷಿ ನಿತೀಶ್ ಅಂತರಂಗವನ್ನು ಅರಿಯುವುದು ಅಷ್ಟು ಸುಲಭವಲ್ಲ. ಹೀಗಾಗಿ ಈ ದಿಕ್ಕಿನಲ್ಲಿ ಭವಿಷ್ಯದ ಬೆಳವಣಿಗೆಗಳ ಆಧಾರದ ಮೇಲೆ ಲೋಕಸಭಾ ಅಖಾಡದ ಸ್ವರೂಪ ಗೊತ್ತಾಗುತ್ತದೆ. ಈ ನಡುವೆ, ಕಾಂಗ್ರೆಸ್ ಪ್ರಮುಖ ವಿಚಾರಗಳಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ಹೊಣೆ-ಪಾತ್ರ ಏನಿರುತ್ತದೆಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೭-೦೨-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ