ಕಾಗದದಲ್ಲಿ ಕಲೆ

ಕಾಗದದಲ್ಲಿ ಕಲೆ

ಕವನ

ಗಿರಗಿರ ತಿರುಗುವ ಗಿರಿಗಿಟಿ ಬೇಕೇ?

ಹಕ್ಕಿಯ ಹೋಲುವ ವಿಮಾನ ಬೇಕೇ?

ಮೋಡವ ಮುಟ್ಟುವ ಗಾಳಿಯ ಪಟವು

ಬೇಕೇ ಗಿಡದಲಿ ಬೆಳೆಯದ ಹೂವು?      (೧)

ಗಗನಕೆ ಎರಗುವ ಸಪೂರ ರಾಕೆಟ್

ಹಣವನ್ನಿರಿಸಲು ಪುಟ್ಟದು ಪಾಕೆಟ್

ಮಸಾಲೆಯಿರಿಸಲು ಗುಳಿಯಿಹ ತಟ್ಟೆ

ನೂಲದೆ ನೇಯದೆ ಹುಡುಗನ ಬಟ್ಟೆ      (೨)

ನೀರಲಿ ತೇಲುವ ಪುಟಾಣಿ ನೌಕೆ

ಸಿಕ್ಕಿಸಬಹುದದರಲ್ಲೇ ಪತಾಕೆ 

ಕಳ್ಳನ ಬೆದರಿಸಿ ಓಡಿಸೆ ಕೋವಿ

ಹಾಸ್ಯದ ವೇಷದ ಸುರುಳಿ ಕುಲಾವಿ       (೩)

ಮಾಡಲಿದೆಲ್ಲವ ಬೇಕೇನೇನು?

ಕಾಗದ,ಕಡ್ಡಿ,ಚೂರು ಸಾಮಾನು!

ಎಲ್ಲಕೂ ಮಿಗಿಲಾದ್ದೊಂದಿದೆ ,ಹುಡುಗ,

ಕುಶಲತೆಯನು ಪಡೆ,ಕಲೆಯು ಸರಾಗ     (೪)

Comments