ಕಾಗದದ ಸರಪಳಿ

ಕಾಗದದ ಸರಪಳಿ

ಕವನ

ಕದ್ದ ಕ್ಷಣಗಳನ್ನು ನೆನಪುಗಳೊಂದಿಗೆ ಗುಣಿಸಿ,
ತುಂಬಿಸುತ್ತಿರುವೆ ದಿನವೂ ಈ ಕಾಲದ ಸೀಸೆ...

ತಿರುಗಿ ಬರುವುದೇ ಆ ಕ್ಷಣ, ಕೈ ಸೇರುವುದೇ, ಕೈ ಜಾರಿದ ಯೌವ್ವನ,
ಎಂಬುದೊಂದೇ ಈಗ ಉಳಿದಿರುವ ಆಸೆ...

ಬರಿಯ ಚಿಕ್ಕ ಪದಗಳಿಗೆ ಮುರಿದು ಬೀಳುವುದೇ ಪ್ರೀತಿ,
ಕಾಗದದ ಸರಪಳಿಯಷ್ಟೇ ಏನು ಈ ಬಂಧನ...
ಬೇರೂರಿದ ನೂರ್ಮರಗಳನ್ನು ಬೀಳುಸುವೆಯೇನು,
ಬರಿಯ ಕೊಡಲಿಗೆ ಬರಿದಾಗ ಬಲ್ಲದೇ ನೀ ಬೆಳೆಸಿದ ಈ ನಂದನವನ...

ಕೊಟ್ಟ ಮುತ್ತುಗಳನ್ನು, ಕಿತ್ತು ಕೊಳ್ಳಬಲ್ಲೆಯೇನು ನೀನು,
ನಿನ್ನ ರುಚಿ ಈ ನಾಲಿಗೆಯಲ್ಲಿ ಎಂದೂ ಅನಂತ...
ನಿನ್ನ ಅಪ್ಪುಗೆಯಲ್ಲಿ, ಕರಗಿದ ನನ್ನನ್ನು, ಮತ್ತೆ ಗಟ್ಟಿಯಾಗಿಸುವೆಯೇನು,
ಸುಲಭದಿ ಸೋಲಪ್ಪುವನ್ನೇನೇ ಆ ಮನ್ಮಥ...

ಸವಿ ನೆನಪುಗಳನ್ನು ನೀ ಕಲ್ಲಾಗಿಸುತಿರೆ, ಈ ಹೃದಯ ಆಗುವುದು ಪರ್ವತ...

ಕುಸಿದು ಬೀಳುವುದು ಈ ಪರ್ವತವೂ ಒಂದು ದಿನ, ಇಲ್ಲೇನೂ ಇಲ್ಲ ನಿನ್ನ ವಿನಃ ಶಾಶ್ವತ...