ಕಾಗೆಗಳ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳು
ಕಾಗೆ, ಕಪ್ಪು ಎಂದು ಹಿಯಾಳಿಸುವ ಮೊದಲು ಕಾಗೆ ಎಂಬ ಬಹು ಉಪಕಾರಿ ಪಕ್ಷಿಯ ಬಗ್ಗೆ ನಾವು ತಿಳಿದುಕೊಳ್ಳೋದು ಬಹಳಷ್ಟಿದೆ. ಕಾಗೆಗಳು ನಮ್ಮ ಪ್ರಕೃತಿಯ ನೈಜ ಸ್ವಚ್ಛತಾ ರಾಯಭಾರಿಗಳು. ನಾವು ತಿಂದು ಬಿಸಾಕಿದ ವಸ್ತುಗಳು, ಸತ್ತ ಪ್ರಾಣಿ, ಪಕ್ಷಿಗಳು ಇವುಗಳನ್ನು ತಿಂದು ಪರಿಸರವನ್ನು ಸ್ವಚ್ಛವಾಗಿಡಲು ಸಹಕರಿಸುತ್ತದೆ. ಧಾರ್ಮಿಕವಾಗಿಯೂ ಕಾಗೆಗಳಿಗೆ ಮಹತ್ವವಿದೆ. ಪಿತೃ ಪಕ್ಷದಂದು ಅಥವಾ ಮರಣದ ನಂತರದ ಉತ್ತರ ಕ್ರಿಯಾದಿಗಳ ಸಮಯದಲ್ಲಿ ಕಾಗೆಗಳಿಗೆ ಮೊದಲು ಅನ್ನವಿಡುತ್ತಾರೆ. ನಮ್ಮ ಅಗಲಿದ ಹಿರಿಯರು ಕಾಗೆಗಳ ರೂಪದಲ್ಲಿ ಬಂದು ಆಹಾರವನ್ನು ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇದೆ.
ಕಾಗೆಗಳು ಪರೋಪಕಾರಿ ಪಕ್ಷಿಗಳು. ತನಗೆ ಸಿಕ್ಕಿದ ಆಹಾರವನ್ನು ಇತರ ಕಾಗೆಗಳ ಜೊತೆ ಹಂಚಿ ತಿನ್ನುವುದೇ ಇದರ ಪರಮ ಧರ್ಮ. ಕಾಗೆಗಳು ಯಾವತ್ತೂ ಒಬ್ಬರೇ ತಿನ್ನುವುದಿಲ್ಲ. ತನ್ನ ಬಳಗದ ಇತರ ಕಾಗೆಗಳನ್ನು ಕರೆದು ಒಟ್ಟಿಗೆ ಆಹಾರವನ್ನು ತಿನ್ನುತ್ತವೆ. ಕಾಗೆಗಳ ಬಗ್ಗೆ ಇನ್ನೂ ಕೆಲವು ಸ್ವಾರಸ್ಯಕರ ಸಂಗತಿಗಳಿವೆ. ಬನ್ನಿ ಒಂದೊಂದಾಗಿ ಓದೋಣ..
* ಕಾಗೆಗಳು ಸಾಮಾನ್ಯವಾಗಿ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಸುಮಾರು ೩ ರಿಂದ ೭ ಮೊಟ್ಟೆಗಳನ್ನು ಒಮ್ಮೆಗೇ ಇಡುತ್ತದೆ. ಕೆಲವು ಸಲ ಕೋಗಿಲೆ ಕಾಗೆಯ ಗೂಡಿನಲ್ಲಿ ತನ್ನ ಮೊಟ್ಟೆಯನ್ನು ಇಡುತ್ತದೆ. ಇದಕ್ಕಾಗಿ ಅದು ಕಾಗೆಯ ಮೊಟ್ಟೆಯನ್ನು ಕದಿಯುತ್ತದೆ.
* ಕಾಗೆಯ ಮರಿಗಳು ಹಾರಲು ಶುರು ಮಾಡಿದ ಮೇಲೆ, ತಂದೆ ತಾಯಿಗೆ ಗೂಡನ್ನು ಕಾಯುವುದು ಮತ್ತು ಹೊಸ ಮರಿಗಳು ಹುಟ್ಟಿದಾಗ ಅದನ್ನು ನೋಡಿಕೊಳ್ಳಲು ಸಹಾಯ ಮಾಡುತ್ತವೆ. ಮರಿಗಳಿಗೆ ತಂದೆ ತಾಯಿ ಆಹಾರ ಒದಗಿಸಿದರೆ ಕೆಲವೊಮ್ಮೆ ಇವುಗಳೂ ಸಣ್ಣ ಮರಿಗಳಿಗೆ ಆಹಾರವನ್ನು ತಿನ್ನಿಸುವುದನ್ನು ಗಮನಿಸಲಾಗಿದೆ. ಈ ಪ್ರಕ್ರಿಯೆ ಸುಮಾರು ಐದು ವರ್ಷಗಳ ವರೆಗೆ ನಡೆಯುತ್ತದೆ.
* ಒಂದು ಕಾಗೆ ಸತ್ತರೆ ಅದರ ಸುತ್ತಲೂ ಹಲವು ಕಾಗೆಗಳು ಅರಚುತ್ತಾ ಕೂಗುತ್ತವೆ. ಇದು ಸತ್ತ ಕಾಗೆಗೆ ಉಳಿದ ಕಾಗೆಗಳು ನೀಡುವ ಅಂತಿಮ ಗೌರವ. ಇದರ ಜೊತೆಗೆ ಉಳಿದ ಕಾಗೆಗಳಿಗೆ ಈ ಸಾವಿನ ಹಿಂದಿನ ಪರಿಸ್ಥಿತಿಯನ್ನು ತಿಳಿಸುವ ಮತ್ತು ಎಚ್ಚರಿಸುವ ವಿಧಾನ. ಇದರಿಂದ ಜಾಗೃತಗೊಳ್ಳುವ ಉಳಿದ ಕಾಗೆಗಳು ಆ ಪರಿಸರವನ್ನು ತುಂಬಾ ಆಳವಾಗಿ ಅಧ್ಯಯನ ಮಾಡುತ್ತವೆ ಮತ್ತು ಸಾಮಾನ್ಯವಾಗಿ ಭವಿಷ್ಯದಲ್ಲಿ ಆ ಸ್ಥಳವನ್ನು ಪ್ರವೇಶಿಸಲು ಹಿಂದೇಟು ಹಾಕುತ್ತವೆ.
* ಕಾಗೆಗಳು ಎಷ್ಟು ಬುದ್ಧಿವಂತ ಪಕ್ಷಿಗಳೆಂದರೆ ಅವುಗಳನ್ನು ‘ಆಕಾಶದ ಗರಿ ಮಂಗಗಳು' (Feathered aps) ಎಂದು ಕರೆಯುತ್ತಾರೆ.
* ಕಾಗೆಗಳು ಉಳಿದ ಸಮಕಾಲೀನ ಪಕ್ಷಿಗಳಿಗಿಂತ ಹೆಚ್ಚಿನ (ದೇಹದ ಅನುಪಾತಕ್ಕೆ ಹೊಂದಿಕೊಂಡು) ಗಾತ್ರದ ಮೆದುಳು ಇರುತ್ತದೆ. ಅವುಗಳ ಮುಂಭಾಗದ ಮೆದುಳಿನ ಭಾಗದಲ್ಲಿ ನ್ಯೂರಾನ್ ಗಳು ಹೇರಳವಾಗಿವೆ. ಆದುದರಿಂದ ಬುದ್ಧಿವಂತಿಕೆಯಲ್ಲಿ ಪಕ್ಷಿಗಳಲ್ಲಿ ಕಾಗೆಯೇ ಸರ್ವಶ್ರೇಷ್ಟ.
* ನಿಮಗೆ ಗೊತ್ತೇ? ಕಾಗೆಗಳು ಸುಮಾರು ೨೦ ಬಗೆಯ ವಿವಿಧ ದ್ವನಿಗಳನ್ನು ಹೊರಡಿಸಬಲ್ಲವು. ಒಂದು ಪ್ರದೇಶದ ಕಾಗೆಗಳ ಧ್ವನಿ (accent) ಮತ್ತೊಂದು ಪ್ರದೇಶದ ಕಾಗೆಗಳ ಧ್ವನಿಯಂತೆ ಇರುವುದಿಲ್ಲ. ನಮ್ಮ ಕಿವಿಗೆ ಆ ಧ್ವನಿಗಳು ಒಂದೇ ರೀತಿಯಂತೆ ಕೇಳಿಸಿದರೂ ಅವುಗಳ ಶಬ್ಧ ತರಂಗಗಳಲ್ಲಿ ಮನುಷ್ಯರಲ್ಲಿರುವಂತೆ ವ್ಯತ್ಯಾಸವಿರುತ್ತದೆ.
* ಕಾಗೆಗಳು ಮನುಷ್ಯರ ಮುಖ ಮತ್ತು ಧ್ವನಿಯನ್ನು ಬಹಳ ಚೆನ್ನಾಗಿ ಗುರುತು ಹಿಡಿಯಬಲ್ಲವು. ಈ ಕಾರಣದಿಂದಲೇ ಕಾಗೆಗಳ ಜೊತೆ ವೈರತ್ವ ಮಾಡಿಕೊಳ್ಳಬಾರದು ಎನ್ನುತ್ತಾರೆ. ಏಕೆಂದರೆ ಕಾಗೆಗಳು ತಮಗೆ ತೊಂದರೆ ನೀಡಿದ ವ್ಯಕ್ತಿಯನ್ನು ಗುರುತಿಸಿ ಕೊಕ್ಕಿನಲ್ಲಿ ಕುಕ್ಕುತ್ತವೆ. ಸುಮಾರು ಐದು ವರ್ಷಗಳ ತನಕ ಕಾಗೆಗಳಿಗೆ ಈ ಬಗೆಗಿನ ನೆನಪು ಶಕ್ತಿ ಇರುತ್ತದಂತೆ.
* ಯುರೋಪಿನಲ್ಲಿ ಕಾಗೆಯನ್ನು ‘Spirit Animal’ ಎಂದು ಕರೆಯುತ್ತಾರೆ. ಏಕೆಂದರೆ ಮನುಷ್ಯ ಸತ್ತ ಬಳಿಕ ಆತನ ಆತ್ಮವನ್ನು ಪುನರ್ಜನ್ಮದ ಕಡೆಗೆ ಒಯ್ಯುವ ಪಕ್ಷಿ ಕಾಗೆಯಂತೆ.
* ವಿದೇಶಗಳಲ್ಲಿ ಮನೆಯಲ್ಲಿ ಸಾವಿನ ನಂತರ ೧೨ ದಿನಗಳೊಳಗೆ ಕಾಗೆ ಮನೆಯ ಎದುರು, ಕಿಟಕಿ ಮೇಲೆ, ಬಾಗಿಲಲ್ಲಿ, ಉಯ್ಯಾಲೆ ಮೇಲೆ ಬಂದು ಕೂತರೆ ಅಥವಾ ಕೂಗಿದರೆ ಆ ಮನೆಯಲ್ಲಿ ಸತ್ತ ವ್ಯಕ್ತಿ ಮರಳಿ ಜನ್ಮ ತಾಳುತ್ತಾನೆ ಎಂಬ ಒಂದು ನಂಬಿಕೆ ಇದೆ.
* ಕಾಗೆಗಳು ಕೇವಲ ಕಪ್ಪು ಬಣ್ಣದಲ್ಲಿ ಮಾತ್ರವಲ್ಲದೇ ಬಿಳಿ ಬಣ್ಣದಲ್ಲೂ ಕಂಡು ಬರುತ್ತವೆ. ಮೈಸೂರು ಮೃಗಾಲಯದಲ್ಲಿ ಬಿಳಿ ಕಾಗೆಯೊಂದು ಹಲವು ವರ್ಷಗಳ ಹಿಂದೆ ಇತ್ತು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ