ಕಾಡಂಚಿನ ಜನರ ಆತಂಕ ಹೆಚ್ಚಳ

ಕಾಡಂಚಿನ ಜನರ ಆತಂಕ ಹೆಚ್ಚಳ

ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದ್ದು, ಗಣತಿಯಲ್ಲಿ ಒಟ್ಟು ೩೧೬೭ ಹುಲಿಗಳು ಪತ್ತೆಯಾಗಿರುವುದು ಹೆಮ್ಮೆ ಪಡುವಂತಹ ಸಂಗತಿ. ಜಗತ್ತಿನ ಬೇರಾವ ರಾಷ್ಟ್ರವೂ ಹುಲಿಗಳ ಸಂಖ್ಯೆಯಲ್ಲಿ ಸಾವಿರ ಗಡಿಯನ್ನೂ ದಾಟದ ಸಂದರ್ಭದಲ್ಲಿ ಭಾರತ ಹುಲಿಗಳ ಸಂತತಿಯಲ್ಲಿ ಸಿಂಹಪಾಲು ಸಾಧಿಸಿರುವುದು ನಿಜಕ್ಕೂ ರೋಮಾಂಚನಕಾರಿ. ಅಲ್ಲದೆ, ಈ ಹಿಂದೆ ಅತಿ ಹೆಚ್ಚು ಹುಲಿಗಳಿದ್ದ ಮಧ್ಯಪ್ರದೇಶವನ್ನು ಹಿಂದಿಕ್ಕಿ ಕರ್ನಾಟಕ ನಂ ೧ ಸ್ಥಾನ ಪಡೆದಿರುವ ಸಾಧ್ಯತೆ ಕೂಡ ಅಭಿಮಾನಪಡುವಂಥ ವಿಚಾರ.

ರಾಷ್ಟ್ರೀಯ ಹುಲಿ ಯೋಜನೆ ೫೦ ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಈ ಅಂಕಿ ಸಂಖ್ಯೆಗಳು ಪ್ರಕಟವಾಗಿರುವುದು ಗಮನಾರ್ಹವೇ ಆದರೂ ಇಲ್ಲಿ ತರ್ಕಕ್ಕೆ ಎತ್ತಿಕೊಳ್ಳುವ ಸಂಗತಿಗಳು ಹಲವಾರು ಇವೆ. ಹುಲಿಗಳ ಸಂತತಿ ಗಣನೀಯವಾಗಿ ಏರಿರುವುದು ಆಕರ್ಷಣೆಯ ವಿಚಾರವಾಗಿ, ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಸುದ್ದಿ ಆಗುತ್ತಿರುವುದು ನಿಜಕ್ಕೂ ಚರ್ಚಾರ್ಹ. ಏಕೆಂದರೆ, ೧೯೭೩ರಲ್ಲಿ ಹುಲಿ ಯೋಜನೆ ಆರಂಭಿಸುವಾಗ ಸುರಕ್ಷಿತ ಪರಿಸರ ವ್ಯವಸ್ಥೆಯಲ್ಲಿ ಹುಲಿಗಳನ್ನು ಸಂರಕ್ಷಿಸುವುದು ಮಾತ್ರವೇ ಪ್ರಮುಖ ಆದ್ಯತೆಯಾಗಿ ಸ್ವೀಕರಿಸಲಾಗಿತ್ತು. ಪ್ರವಾಸೋದ್ಯಮ ಆಕರ್ಷಣೆಯನ್ನು ಅಂದು ಪರಿಗಣಿಸಿರಲಿಲ್ಲ. ಆದರೆ ಹುಲಿ ಯೋಜನೆಯ ಇಂದಿನ ಉದ್ದೇಶ ಹೊಂಚ ಭಿನ್ನ ಹಾದಿಯನ್ನು ತುಳಿದಿದೆ.

ಕೆಲವು ಅಭಯಾರಣ್ಯಗಳಲ್ಲಿ ಹುಲಿಗಳು ಸುಲಭವಾಗಿ ಕಣ್ಣಿಗೆ ಬೀಳುವುದರಿಂದ ಪ್ರವಾಸೋದ್ಯಮ ಕೂಡಾ ಗರಿಗೆದರಿದೆ. ಸಫಾರಿಯ ದುಬಾರಿ ಶುಲ್ಕವನ್ನು ಪಾವತಿಸಿ, ಹುಲಿಯನ್ನು ನೋಡುವ ಟ್ರೆಂಡ್ ಕೂಡ ಹೆಚ್ಚುತ್ತಿದೆ. ಆದರೆ, ಇವೆಲ್ಲದರಾಚೆಗೆ ಆತಂಕ ಪಡುವಂಥ ಸಂಗತಿಯೂ ಈ ಬೆಳವಣಿಗೆಯ ಬೆನ್ನೇರಿದೆ. ಹುಲಿ ಸಂತತಿಯ ಹೆಚ್ಚಳವನ್ನು ಕಾಡು ಬದಿಯ ಗ್ರಾಮಗಳ ಜನರು ಸಂಭ್ರಮಿಸುತ್ತಿದ್ದಾರೆಯೇ ಎಂಬುದು ಮುಖ್ಯ ಪ್ರಶ್ನೆ.

ಗಣತಿ ವೇಳೆ ಕ್ಯಾಮರಾ ಟ್ಯಾಪಿಂಗ್ ಮೌಲ್ಯಮಾಪನದಲ್ಲಿ ಅರಣ್ಯ ಪ್ರದೇಶಗಳನ್ನು ಮೀರಿ ಹುಲಿಗಳ ಉಪಸ್ಥಿತಿ ಬಹಿರಂಗವಾಗಿರುವುದು ಕಳವಳಕಾರಿ ಅಂಶ. ವಿಶೇಷವಾಗಿ, ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಂಥ ತಾಣಗಳಲ್ಲಿ ಇದು ವ್ಯಕ್ತವಾಗಿರುವುದು ಅಭಯಾರಣ್ಯದಂಚಿನ ಜನರಲ್ಲಿ ಚಿಂತೆ ಹೆಚ್ಚಿಸಿದೆ. ಹುಲಿಗಳ ಆವಾಸ ಪ್ರದೇಶಗಳು ಒಟ್ಟಾರೆ ದೇಶದಲ್ಲಿ ೫೦೦೦-೧೦೦೦೦ ಚ ಕಿ ಮೀ ಹೆಚ್ಚಾಗಿರುವ ಬಗ್ಗೆ ತಜ್ಞರೂ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನಿಸಬೇಕಾಗಿದೆ.

ಹುಲಿ ಸದಾ ಕಾಡಿನ ಒಂದು ಕಡೆಯಿಂದ ಮತ್ತೊಂದು ಕಾಡಿಗೆ ಸಂಚರಿಸುತ್ತಲೇ ಇರುವಂಥ ಪ್ರಾಣಿ. ಈ ಸಂದರ್ಭದಲ್ಲಿ ಸಾಕಷ್ಟು ಹುಲಿಗಳು ಹಾದಿ ತಪ್ಪುವುದು ಕೂಡ ಸಹಜ. ಆದರೆ, ದಾರಿ ತಪ್ಪಿದ ಎಲ್ಲಾ ಹುಲಿಗಳನ್ನು ಸೆರೆ ಹಿಡಿದು ರಕ್ಷಣಾ ಕೇಂದ್ರಗಳಲ್ಲಿ ಇರಿಸುವ ಬಗ್ಗೆ ಸರಕಾರ ಎಂದಾದರೂ ಯೋಚಿಸಿದೆಯೇ? ಬಫರ್ ವಲಯಗಳನ್ನು ಹೆಚ್ಚಿಸಲು ಸಾಧ್ಯವಿಲ್ಲದೆ, ಗ್ರಾಮಸ್ಥರ ಸ್ಥಳಾಂತರವೂ ಸಾಧ್ಯವಾಗದೆ ಸರಕಾರ ತನ್ನ ಅಸಹಾಯಕತೆಯನ್ನು ಕಾಡಂಚಿನ ಜನರ ಮುಂದಿಡುತ್ತಲೇ ಬಂದಿದೆ.

ಕಾಡಂಚಿನ ಪ್ರದೇಶಗಳಲ್ಲಿ ಮಾನವ - ಹುಲಿ ಸಂಘರ್ಷಗಳನ್ನು ತಗ್ಗಿಸಲೂ ಸರಕಾರಗಳು ಮುಂದಾಗಬೇಕು. ಆಗ ಮಾತ್ರವೇ ಹುಲಿ ಯೋಜನೆ ಸಾರ್ಥಕ ಪಡೆದುಕೊಳ್ಳುತ್ತದೆ. ಹುಲಿಗಳ ಸಂಖ್ಯೆ ಆರೋಗ್ಯಕರವಾಗಿದ್ದಾಗ ಮಾತ್ರವೇ ಕಾಡಂಚಿನ ಜನರೂ ನೆಮ್ಮದಿಯಿಂದ ಬದುಕುತ್ತಾರೆ. ಸರಕಾರ ಅವರ ಹಿತವನ್ನೂ ಕಾಯ್ದುಕೊಳ್ಳಲು ಮುಂದಾಗಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೦೪-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ