ಕಾಡಿನ ಶಾಲೆಯ ವಾರ್ಷಿಕೋತ್ಸವ
ಕವನ
ತಮ್ಮಯ ಮರಿಗಳು ವಿದ್ಯೆಯ ಕಲಿಯಲಿ
ಎಂದನು ಕೋತಿಗಳೆಜಮಾನ
ಕಾಡಿನ ನಡುವಲಿ ಶಾಲೆಯ ತೆರೆಯಲು
ಮರ್ಕಟ ರಾಜನ ತೀರ್ಮಾನ
ಕೋತಿಯ ಮರಿಗಳು ಶಾಲೆಗೆ ಸೇರುತ
ವಿದ್ಯೆಯ ಚಂದದಿ ಕಲಿತಿಹವು
ವರ್ಷವು ಉರುಳಿತು ಈದಿನ ನಡೆವುದು
ಶಾಲೆಯ ವಾರ್ಷಿಕ ಉತ್ಸವವು
ನಾನಾ ಸ್ಪರ್ಧೆಯು ನಡೆಯುತಲಿರುವುದು
ಮರ್ಕಟ ಮರಿಗಳ ನಡುವಿನಲಿ
ಛದ್ಮ ವೇಷದ ಸ್ಪರ್ಧೆಗೆ ಮರಿಯಿದು
ಸಿದ್ಧವಿದಾಗಿದೆ ಹುರುಪಿನಲಿ
ಮಾನವ ವೃದ್ಧನ ವೇಷವ ಧರಿಸಿದೆ
ಉಡುಪಲಿ ಮೈಯನು ಮುಚ್ಚಿಹುದು
ವೃದ್ಧರ ತರದಲಿ ಊರುವ ಕೋಲನು
ಚಂದದಿ ಕರದಲಿ ಹಿಡಿದಿಹುದು
ಮರಿಗಳ ನಟನೆಯು ಹೇಗಿದೆ ಹೇಳಿರಿ
ನೋಡಿರಿ ಸ್ಪರ್ಧೆಯ ಸಂಪೂರ್ಣ
ನಿಮ್ಮಯ ತೀರ್ಪನು ನೀಡಿರಿ ಬೇಗನೆ
ಯಾರಿಗೆ ಕೊಡುವಿರಿ ಬಹುಮಾನ||
(ಸುಮ್ಮನೆ ತಮಾಷೆಗಾಗಿ)
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ; ಇಂಟರ್ನೆಟ್ ತಾಣ
ಚಿತ್ರ್
