ಕಾಡು

ಕಾಡು

ಕವನ

ಕಾಡು


ಕಾಡುತಿರಲಿ ಕಾಡು ಒಳಗೆ ಒಳಗೊಳಗೆ


ನಾಡಿನ ಸಾಫ್ ಸೀದಾ ದಾರಿಗಳಲ್ಲಿಯೂ


ಸೀದಾ ಅಲ್ಲದವರಿಗೆಲ್ಲಾ ಅರ್ಥವಿಲ್ಲದೆ ಹಲ್ಲು ಕಿರಿದು


ಕಳೆದುಕೊಂಡ ಅಸ್ಮಿತೆಯ ಕೂಡಿಸುವ ಕಾಡು ಕಾಡುತಿರಲಿ


ಆ ಬಳ್ಳಿ, ಆ ಪೊದೆ, ಆ ಹೆಮ್ಮರ


ನಮ್ಮ ಅಹಮ್ಮಿನ ಕೋಟೆಯ ಕಲ್ಲ ಕಳಚಿ


ನಮ್ಮತನದ ಬೇರನ್ನು ಗಟ್ಟಿಗೊಳಿಸಲಿ.


ನೀವು ಕಾಣಿರಾ, ನೀವು ಕಾಣಿರಾ ಎಂದಲೆದು


ಅಕ್ಕ ಕಾಡಿನಲಿ ತಡಕಾಡಿ ಕಂಡದ್ದನ್ನು


ಒಳಗಣ್ಣು ಕಾಣುವವರೆಗೂ ಕಾಡು ಕಾಡಿಸಲಿ.


ಎಷ್ಟಾದರೂ ನನ್ನನ್ನು, ನಿನ್ನನ್ನು, ನಮ್ಮ ಹಿರಿಯರನ್ನು


ಹರಸಿ ಕಳುಹಿಸಿ, ಮತ್ತೆ ಸೆಳೆದದ್ದು ಈ ಕಾಡೇ ತಾನೆ!


ನಾಡು ಸಾಕೆನಿಸಿದರೆ ನಡೆದುಬಿಡು ಕಾಡಿನೆಡೆಗೆ.


ಅರಿವು ಮೂಡಿದರೆ ಬಾಳಿಗೆ ಬಾ... ಎದ್ದ ಬುದ್ಧನಂತೆ,


ಒಳತುಂಬಿದ ಕತ್ತಲೆಯ ಕಳೆಯಲು ಬೆಳಕಿನಂತೆ.


 

Comments