ಕಾಡುಕೋಣಗಳಿಗೆ ಧಾರವಾಡ ಈಗ ಮಾವನ ಮನೆ!

ಕಾಡುಕೋಣಗಳಿಗೆ ಧಾರವಾಡ ಈಗ ಮಾವನ ಮನೆ!

ಬರಹ

ಬಹುಶ: ನಮ್ಮ ನಾಡಿನ ಕಾಡುಕೋಣಗಳಿಗೆ ಧಾರವಾಡ ಮಾವನ ಮನೆಯಾಗುತ್ತಿದೆ!

ಆರು ತಿಂಗಳ ಹಿಂದೆ ಕಾಡುಕೋಣವೊಂದು ಕಾಂಕ್ರೀಟ್ ನಗರಿ ಧಾರವಾಡಕ್ಕೆ ಭೇಟಿ ನೀಡಿತ್ತು. ಚುಮುಚುಮು ಬೆಳಕು ಹರಿಯುತ್ತಿದ್ದ ಹೊತ್ತಿನಲ್ಲಿ ಎಲ್ಲರ ಮೈ ಛಳಿ ಬಿಡಿಸಿತ್ತು ಆ ಆಗಂತುಕ ಕಾಡು ಪ್ರಾಣಿ. ನಡು ಬೀದಿಯಲ್ಲಿ ರಾಜಾರೋಷವಾಗಿ ಓಡಾಡಿ, ಎಲ್ಲರ ನೋಟ ತನ್ನತ್ತ ಸಮೀಕರಿಸಿಕೊಂಡಿತ್ತು ಅಪರೂಪದ ಕಾಡುಕೋಣ. ಸ್ಥಳೀಯರ ಸಹಕಾರದಿಂದ ಕೊನೆಗೆ ಅರಣ್ಯ ಇಲಾಖೆಯವರ ಕೈಗೆ ಸೆರೆ ಸಿಕ್ಕು, ನಾಡು ಪಾಲಾಗಿದ್ದ ಕಾಡುಕೋಣ ಕಾಡು ಪಾಲಾಯಿತು. ಅಂತೂ ಅಪರೂಪದ ಅಥಿತಿ ತನ್ನ ಹಿಂಡು ಸೇರಿತ್ತು. ಹೀಗೆ ಪ್ರಕರಣ ಸುಖಾಂತ್ಯ ಕಂಡು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು.

ಆದರೆ. ಮತ್ತೆ ಪುನ: ಕಳೆದ ಭಾನುವಾರ ಮತ್ತೊಂದು ಕಾಡುಕೋಣ ನಗರಕ್ಕೆ ಆಗಮಿಸಿತ್ತು. ಮೂಕಪ್ರಾಣಿ ತನ್ನ ಹಕ್ಕಿಗಾಗಿ ಧರಣಿ ನಡೆಸಿದಂತೆ, ಯಾರಿಗೂ ಅಂಜದೇ-ಅಳುಕದೇ ಗಜ ಗಾಂಭೀರ್ಯದಲ್ಲಿ ಊರು ಸುತ್ತು ಹೊಡೆಯಿತು. ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದ ಕೋಣ...ನೇರವಾಗಿ ನುಗ್ಗಿದ್ದು ವಿದ್ಯಾಗಿರಿಯ ಜೆ.ಎಸ್.ಎಸ್. ಮಹಾವಿದ್ಯಾಲಯದ ಆವರಣಕ್ಕೆ. ಸಾವಿರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಕಾಡುಕೋಣ ನೋಡಿ..ದಿಕ್ಕಾಪಾಲಾಗಿ ಚದುರಿದರು. "ಬಿಟ್ಟುಬಿಡದೇ ಅಸೈನ್ ಮೆಂಟ್ ಗಳನ್ನು ಕೊಟ್ಟು, ಜೀವ ತಿನ್ನುವ ನಮ್ಮ ಮಾಸ್ತರ್ ಕೋಣನ ಕೈಗೆ ಸಿಗಲಿ" ಎಂದು ಹಾಸ್ಯ ಚಟಾಕಿ ಕೂಡ ಕೆಲವರು ಹಾರಿಸಿದರು. ಯಾವುದರ ಪರಿವೆಯೂ ಇಲ್ಲದೇ, ‘ನಾನು ನಿಮ್ಮಂತೆ ಹೆಸರು ಹಚ್ಚಿಸಿಕೊಳ್ಳಲು ಬಂದಿದ್ದೇನೆ’ ಎಂಬುವಂತಿತ್ತು ಅವನ ಠೀವಿ!

ಜನ ನೋಡಲು ಮುಗಿಬಿದ್ದು, ತನ್ನನ್ನು ಬೆಂಬತ್ತಿದ್ದು ತಿಳಿಯುತ್ತಲೇ ಕೋಣ, ಮಹಾವಿದ್ಯಾಲಯದ ೧೨ ಫೂಟ್ ಎತ್ತರದ ತಡೆಗೋಡೆಯನ್ನು ಒಂದೇ ನೆಗೆತಕ್ಕೆ ಛಂಗನೇ ಹಾರಿ ಪಕ್ಕದ ಸ್ಮಶಾನಕ್ಕೆ ನುಗ್ಗಿತು. ಪರೀಕ್ಷೆಗಳು ನಡೆದಾಗ ‘ಕಾಪಿ’ ನೀಡಲು ಗಿಡ ಹತ್ತಿ, ಕಾಲೇಜ್ ಕಂಪೌಂಡ್ ಎಗರುತ್ತಿದ್ದ ಉಡಾಳರನ್ನು ಮೀರಿಸುವಂತಿತ್ತು ನೆಗೆತ. ಆದರೆ, ಕೋಣ ಹಾರಿದ್ದು ಜೀವನದ ಪರೀಕ್ಷೆ ಎದುರಿಸುತ್ತ! ಹಾಗೆಯೇ ಜೀವಂತ ಇದ್ದವರ ಕಾಟ ತಡೆಯಲಾರದೇ, ಸತ್ತು ಮಲಗಿರುವವರ ಸ್ಮಶಾನದಲ್ಲಾದರೂ ತನಗೆ ನೆಮ್ಮದಿ ಸಿಕ್ಕೀತು ಎಂದು ಅರಸಿತ್ತು ಅದು. ಆದರೂ ಜನ ಬಿಡಲಿಲ್ಲ. ಎಸ್.ಎಂ.ಎಸ್ ಸಂದೇಶಗಳನ್ನು ರವಾನಿಸುತ್ತ ತಮ್ಮ ಇಡೀ ಬಳಗವನ್ನೇ ಸ್ಥಳಕ್ಕೆ ಕರೆಸಿದ್ದರೂ ನಾಡ ಪ್ರಾಣಿಗಳು. ಇಷ್ಟೆಲ್ಲ ಆದರೂ ಕಾಡುಕೋಣ ವನ್ನು ಬೆನ್ನಟ್ಟಿದವರು ಮಾಧ್ಯಮದವರು. ಅರಣ್ಯ ಇಲಾಖೆಯ ಸಿಬ್ಬಂದಿ ಇನ್ನೂ ಸ್ಥಳಕ್ಕೆ ಬಂದಿರಲಿಲ್ಲ!

ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮದವರಿಂದ ಸುದ್ದಿ ಪಡೆದು, ಯಾವ ಸಿದ್ಧತೆಯೂ ಇಲ್ಲದೇ ಕೇವಲ ಜೀಪ್ ಹತ್ತಿ ಸ್ಥಳಕ್ಕೆ ಬಂದರು. ಇನ್ನು ಮಾಡುವುದೇನು? ಸರಿ..ಜೀಪ್ ಹತ್ತಿ ಅದನ್ನು ಕಾಡಿನ ತನಕ ಓಡಿಸುವ ನಿರ್ಧಾರ ಮಾಡಿದರು. ಕಾಡುಕೋಣ ‘ಬನ್ನಿ ನೋಡೋಣ’ ಎಂದು ಸವಾಲೆಸೆದು, ಗೊರಸುಗಳನ್ನು ನೆಲಕ್ಕೆ ತಿಕ್ಕಿ ನಾಗಾಲೋಟದಲ್ಲಿ ಓಡಿದರೆ..ಎಲ್ಲರ ದಿಕ್ಕೇ ತಪ್ಪಿತು! ಪೊಲೀಸರು ಸಹ ತಮ್ಮ ವಾಕಿ- ಟಾಕಿ ಗಳೊಂದಿಗೆ ‘ಲೋಕೆಷನ್’ ಗುರುತಿಸುತ್ತ ಹೊರಟರು. ಆಗಲೇ ತನ್ನ ಮೈಗೆ, ಮೂಗಿಗೆ ಹಾಗು ಗೊರಸುಗಳಿಗೆ ತರಚಿದ ಗಾಯಗಳನ್ನು ಮಾಡಿಕೊಂಡಿದ್ದ ಕೋಣ, ತನ್ನ ಪ್ರಯಾಸದ ಪ್ರವಾಸದಿಂದ ಬಸವಳಿದಿತ್ತು. ಬಾಯಿಯಿಂದ ನೊರೆ ಬೀಳುತ್ತಿತ್ತು. ಆದರೂ ಹೂಂಕಾರ ಕಡಿಮೆ ಯಾಗಿರಲಿಲ್ಲ!

ಹಾಗೂ ಹೀಗೂ ಹೊಸಯಲ್ಲಾಪೂರದ ಕೂಟಿನ ವರೆಗೆ ಒಯ್ದು, ಗಾಂಧಿ ನಗರಕ್ಕೆ ಕೋಣವನ್ನು ತಿರುಗಿಸುವುದರೊಳಗೆ ದೇವರು ನೆನಪಾಗಿದ್ದ. ಅರಣ್ಯ ಇಲಾಖೆಯ ಜೀಪ್ ಬೆನ್ನಟ್ಟಿ, ರೈಲು ಹಳಿ ದಾಟಿಸುವಲ್ಲಿ ಯಶಸ್ವಿಯಾಯಿತು. ಸುದೈವದಿಂದ ಯಾವುದೇ ರೈಲು ಆಗ ಅಲ್ಲಿ ಹೊರಟಿರಲಿಲ್ಲ. ಕಾಡುಕೋಣ ರಜತಗಿರಿಯ ಶ್ರೀ ಧರ್ಮಸ್ಥಳ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲದ ಆವರಣ ತೂರಿತು. ಪೊಲೀಸರು ಎಚ್ಚರಿಕೆಯ ಸೈರನ್ ಮೊಳಗಿಸುತ್ತ, ಕಾಲೇಜು ಆವರಣದಲ್ಲಿ ಸೂಚನೆ ನೀಡುತ್ತ ಆಗಂತುಕ ಅಥಿತಿಯ ಆಗಮನ ಅರುಹಿದರು. ಭಾವಿ ಅಭಿಯಂತರರು ಹೌಹಾರಿದರು. ಪ್ರಾಧ್ಯಾಪಕರು ಸಹ ಅಚ್ಚರಿಪಟ್ಟರು. ಇನ್ನೇನು ಆವರಣದಿಂದ ಹೊರ ಓಡಿಸಬೇಕು ಎನ್ನುವಷ್ಟರಲ್ಲಿ, ಯಾರೋ ಹಾರ್ನ್ ಬಾರಿಸಿದರು. ಕಾಡುಕೋಣನ ಸಿಟ್ಟು ನೆತ್ತಿಗೇರಿತು. ಸ್ಟ್ಯಾಂಡಿನಲ್ಲಿ ನಿಂತಿದ್ದ ‘ಬಜಾಜ್ ವಿಕ್ಟರ್’ ಬೈಕ್ ನ್ನು ತನ್ನ ಒಂದೇ ಕೊಂಬಿನಲ್ಲಿ ಎತ್ತಿ ನೆಲಕ್ಕೆ ಅಪ್ಪಳಿಸುವಂತೆ ಒಗೆಯಿತು. ಇದಂತೂ ಸಾತ್ವಿಕ ಸಿಟ್ಟಾಗಿರಲಿಲ್ಲ!

ಮಹಾವಿದ್ಯಾಲಯದ ಹಸಿರು ಹಾಸಿನ ಮೇಲೆ ತುಸು ವಿಶ್ರಾಂತಿ ಪಡೆದ ಕೋಣ, ಮತ್ತೆ ತನ್ನ ಗುರಿ ಸಾಧಿಸುವಂತೆ ಅಣಿಯಾಯಿತು. ರಭಸದಿಂದ ಗಾಳಿ ಗುದ್ದುತ್ತ, ಕ್ಷಣಾರ್ಧದಲ್ಲಿ ಕ್ಯಾಂಪಸ್ ಹೊರಗಿತ್ತು! ಹಾಗೆಯೇ ಅನಾಯಾಸವಾಗಿ ಮೂರು ಗುಡ್ಡಗಳನ್ನು ಹತ್ತಿ ಇಳಿದು ಸೋಮೇಶ್ವರ ಕೊಳ್ಳಕ್ಕೆ ಇಳಿಯಿತು. ಎಲ್ಲರೂ ಅತ್ತ ಧಾವಿಸಿದರು. ಶಾಲ್ಮಲಾ ನದಿ ತಟದಲ್ಲಿ ನೀರು ಕುಡಿದು, ತುಸು ಸಾವರಿಸಿಕೊಂಡ ಕಾಡುಕೋಣ ಯಾರ ಅಪ್ಪಣೆಗೂ ಕಾಯದೇ ಅಳ್ನಾವರ ಕಾಡಿನತ್ತ ನಿರ್ಲಿಪ್ತವಾಗಿ ಪ್ರಯಾಣ ಬೆಳೆಸಿತು. ಅಗಾಗ ನಿಂತು, ಹಿಂತಿರುಗಿ ನೋಡಿ, ಸಿಂಹಾವಲೋಕನ ಮಾಡಿದಂತೆ ಮಾಧ್ಯಮದವರಿಗೆ ಪೋಸು ನೀಡುತ್ತ..‘ಮತ್ತೆ ಬರುತ್ತೇನೆ ಸದ್ಯದಲ್ಲಿಯೇ’ ಎಂದು ಸೂರ್ಯ ಮುಳುಗುವ ಹೊತ್ತಿಗೆ ಕಾಡುಕೋಣ ತನ್ನ ನಾಡು ಸೇರಿತು.

ಕಾಡುಕೋಣದ ಪೌರುಷ ಸೆರೆ ಹಿಡಿಯಲು ೨೦ಕ್ಕೂ ಹೆಚ್ಚು ಕಿ.ಮೀಗಳನ್ನು ಓಡಿದ, ಹೆಣಗಿದ ಮಾಧ್ಯಮಗಳ ಛಾಯಾಪತ್ರಕರ್ತರು ೩ ದಿನಗಳ ಕಾಲ ಆರೈಕೆಯಾದರು. ಆದರೆ ಅರಣ್ಯ ಇಲಾಖೆಯವರು ಯಥಾ ಪ್ರಕಾರ ಮತ್ತೆ ಬೆಳಿಗ್ಗೆ ನೌಕರಿಗೆ ಅಣಿಯಾಗಿದ್ದರು! ಏಕೆಂದರೆ ಅವರು ಬೆನ್ನಟ್ಟಿದ್ದು ಜೀಪಿನಲ್ಲಿ! ಇಂದಿಗೂ ನಮ್ಮ ಊರಿನ ಅರಣ್ಯ ಇಲಾಖೆಯ ಕಚೇರಿ ಅಧಿಕಾರಿಗಳು ಅರವಳಿಕೆ ಚುಚ್ಚುಮದ್ದು ಸಂಗ್ರಹಿಸಿ ಇಟ್ಟಿಲ್ಲ. ಹಾಗೆಯೇ ಈ ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಯಾವ ಪೂರ್ವ ತಯಾರಿ, ಅಥವಾ ವಿಪತ್ತು ನಿರ್ವಹಣಾ ತರಬೇತಿ ಸಿಬ್ಬಂದಿಗೆ ಕೊಟ್ಟಿಟ್ಟಿಲ್ಲ.

ಈ ಕಾಡುಕೋಣ ಸಾಂಸ್ಕೃತಿಕ ನಗರಿಗೆ ಭೇಟಿ ನೀಡಿದ ಸುಸಂಸ್ಕೃತ ಕಾಡುಕೋಣ ಇದ್ದಿರಬಹುದು! ನಸೀಬುಗಟ್ಟಿತ್ತು ಬದುಕಿ ಕಾಡುಪಾಲಾಯಿತು. ನಾಡಿನ ಪ್ರಾಣಿಗೆ ಈ ಕಾಡು ಪ್ರಾಣಿ ಆಕಸ್ಮಾತ್ ತನ್ನ ಪ್ರಾಣಭಯದಿಂದ ಪ್ರಾಣಘಾತುಕವಾಗಿ ಪರಿಣಮಿಸಿದ್ದರೆ? ಪೊಲೀಸರ ಗುಂಡಿಗೆ ಬಲಿಯಾಗಬೇಕಿತ್ತು. ಹಕ್ಕುಗಳ ಬಗ್ಗೆ ಮಾತ್ರ ಜಾಗರೂಕರಾಗಿರುವ ನಮಗೆ ಬುದ್ಧಿ ಅಷ್ಟು ಬೇಗ ಬರಲಾರದು. ಹಾಗಾಗಿ ಆದಷ್ಟು ಇಂತಹ ಸುಸಂಸ್ಕೃತ ಕಾಡು ಪ್ರಾಣಿಗಳೇ ಧಾರವಾಡಕ್ಕೆ ಭೇಟಿ ನೀಡುತ್ತಿರಲಿ..ಯಾವಾಗಲೊಮ್ಮೆ! ಎಂಬುದೇ ನನ್ನ ಆಸೆ.