ಕಾಡುಕೋಣದ ‘ಬದುಕು ಜಟಕಾಬಂಡಿ..ವಿಧಿ ಅದರ ಸಾಹೇಬ’.

ಕಾಡುಕೋಣದ ‘ಬದುಕು ಜಟಕಾಬಂಡಿ..ವಿಧಿ ಅದರ ಸಾಹೇಬ’.

ಬರಹ

"ಸಂಸ್ಕೃತಿ" -ಎಂದರೆ ಸಮಯಕ್ಕೆ ತಕ್ಕಂತಹ ಕೃತಿಯಲ್ಲಿ ತೊಡಗಿಸಿಕೊಂಡಿರುವುದು. ಬಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಮಾತೊಂದನ್ನು ಪರಿಸರವಾದಿ ಪ್ರೊ. ಗಂಗಾಧರ ಕಲ್ಲೂರ್ ವಿವರಿಸುತ್ತ ಹೊರಟಿದ್ದರು. ಹಾಗೆ ನಾವ್ಯಾರು ಮಾಡುವುದಿಲ್ಲ ಎಂಬುದು ಸಾಧಿಸಬೇಕಾದ ಪ್ರಮೇಯವೇನಲ್ಲ!

ಕಲ್ಲುಗಳು ಎದ್ದು ನಿಂತ, ಹದಗೆಟ್ಟ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಶರವೇಗದಲ್ಲಿ ನಮ್ಮ ಜೀಪ್ ‘ರೇಷ್ಮೆ ಗ್ರಾಮ’ ಕಳಸನಕೊಪ್ಪಕ್ಕೆ ಹೊರಟಿತ್ತು. ಗೋಧೂಳಿಯ ವೇಳೆ ರಸ್ತೆಯ ಧೂಳು ಗಾಜುಗಳ ಕಿಂಡಿಯಿಂದ ಆಗಾಗ ಒಳಗೆ ಇಣುಕಿ ನಮ್ಮನ್ನು ಕೆಮ್ಮುವಂತೆ ಮಾಡಿತ್ತು. ನೀವೇ ಊಹಿಸಿ ನಾವು ಮೊದಲು ನನ್ನ ಸ್ಕೂಟರ್ ಮೇಲೆ ತೆರಳುವ ಆಲೋಚನೆಮಾಡಿದ್ದೆವು! ಇಂತಹ ಭಯಂಕರ ಯೋಚನೆಗಳು ನನಗೆ ಆಗಾಗ ಹೊಳೆಯುತ್ತಿರುತ್ತವೆ. ಅನುಭವಿಸುವ ಕರ್ಮ ನನ್ನ ಜೊತೆಗಾರರದ್ದು.

ಮೇಲೆ ಹೇಳಿದ ಶ್ರೀಗಳ ಮಾತು.. ಈಗ ನನಗೇ ಅನ್ವಯ!

ಕಾರಣ ಅಣ್ಣ ಛಾಯಾಪತ್ರಕರ್ತ ಕೇದಾರನಾಥ್ ಅವರ ಆಗ್ರಹ ಹಾಗಿತ್ತು. ದೈತ್ಯಾಕಾರದ ಕಾಡುಕೋಣವೊಂದು ನೀರು ಅರಸಿ ಕಳಸನಕೊಪ್ಪದ ಹೊರವಲಯದ ಕೊಳ್ಳಕ್ಕೆ ಬಂದಿತ್ತು. ರಾತ್ರಿಯ ವೇಳೆ ದಾಹ ತೀರಿಸಿಕೊಳ್ಳುವ ಭರದಲ್ಲಿ ನೀರಿರದ ಆಳ ಕೊಳ್ಳದಲ್ಲಿ ಇಳಿಯುವ ಸಾಹಸ ಮಾಡಿತ್ತು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ೮ ರಿಂದ ೯ ಕ್ವಿಂಟಲ್ ತೂಗಬಲ್ಲ ಬೃಹತ್ ಕಾಡುಕೋಣ ತನ್ನ ಆಯತಪ್ಪಿತು. ಆಕಸ್ಮಿಕವಾಗಿ ತೋಲತಪ್ಪಿ ಮುಂಗಾಲು ಮುಗುಚಿ ನೆಲಕ್ಕೆ ಬಿತ್ತು. ಇಳಿಜಾರಿನಲ್ಲಿದ್ದ ಗಟ್ಟಿ ಮರವೊಂದರ ಟಿಸಿಲೊಡೆದ ಬೊಡ್ಡೆಯಲ್ಲಿ ಕೋಡು ಸಿಲುಕಿತು. ಎಡ ಕಣ್ಣು ಹಾಗು ಎಡಗಾಲಿಗೆ ತೀವ್ರ ಸ್ವರೂಪದ ಗಾಯಗಳಾದವು. ಹಾಗೆಯೇ ಎಡಗಾಲು ಮತ್ತು ಕತ್ತು ಸಹ ಮುರಿದಿರುವ ಸಾಧ್ಯತೆ ಇದೆ. (ನಾಳೆ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಅಧಿಕೃತವಾಗಿ ಸಾವಿನ ಕಾರಣ ಘೋಷಣೆಯಾಗಬಹುದು.) ಆದರೂ ಬದುಕುವ ಇಚ್ಛೆ ಯಮನ ವಾಹನವಾದ ಕೋಣಕ್ಕೆ ಬಲವಾಗಿತ್ತು ಎನಿಸುತ್ತದೆ. ಬದುಕುಳಿಯಲು ಶತಾಯುಗತಾಯು ಪ್ರಯತ್ನ ಮಾಡಿದ ಕೋಣ, ಮೊರದ ಬೊಡ್ಡೆಯ ಟಿಸಿಲಿನಿಂದ ತನ್ನ ಕೋಡು ಬಿಡಿಸಿಕೊಳ್ಳಲಾಗದೇ ಕನಿಷ್ಠ ೨ ದಿನ ಒದ್ದಾಡಿ ಜವರಾಯನ ತೆಕ್ಕೆಗೆ ಜಾರಿತು.

ಕಳಸನಕೊಪ್ಪದಿಂದ ಹುಲಿಕೊಪ್ಪಕ್ಕೆ ಹೋಗುವ ರಸ್ತೆಯ ಮೇಲೆ ೨ ಕಿ.ಮೀ. ದೂರ ಸಾಗಬೇಕು. ರಸ್ತೆಯ ಪಕ್ಕದಲ್ಲಿ ಬಲ ಬದಿಗೆ ಸುಮಾರು ೧ ಕಿ.ಮೀ. ನಡೆದರೆ ದಟ್ಟ ಕಾಡು. ಮಟ್ಟಿಮಾಡ ಹಳ್ಳ ಎಂದು ಕರೆಯುವ ಶಾನುಭೋಗರ ಕೆರೆಯ ಬರಿದಾದ ಕಾಲುವೆಯ ಎತ್ತರದ ದಂಡೆಯ ಎಡ ಬದಿಯಲ್ಲಿ ಈ ಸತ್ತು ಬಿದ್ದಿರುವ ಪ್ರೌಢ ಕಾಡುಕೋಣವನ್ನು ಇಂದು (ಸೋಮವಾರ) ಬೆಳಿಗ್ಗೆ ಗುರುತಿಸಲಾಗಿದೆ. ದನ ಮೇಯಿಸಲು ನಿತ್ಯ ಕಾಡಿಗೆ ತೆರಳುವ ಗ್ರಾಮದ ಕೆಲ ಮಕ್ಕಳು ಕೊಳೆತು ನಾರುತ್ತಿರುವ ಪ್ರಾಣಿ ಹುಡುಕುತ್ತ ಉತ್ಸುಕತೆಯಿಂದ ಈ ಜಾಗೆಗೆ ಹೋಗಿದ್ದಾರೆ. ಊರಿಗೆ ಮಧ್ಯಾನ್ಹದ ವೇಳೆಗೆ ಸುದ್ದಿ ಮುಟ್ಟಿಸಿದ್ದಾರೆ. ಹಿರಿಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಂಜೆಯ ವೇಳೆಗೆ ಮಾಧ್ಯಮಗಳಿಗೆ ತಲುಪಿತು.

ಛಾಯಾಪತ್ರಕರ್ತ ಕೇದಾರನಾಥ ಅವರ ಗೆಳೆಯ ಸತೀಶ್ ಜಂಬಗಿ ಕಳಸನಕೊಪ್ಪದ ಪ್ರಾಥಮಿಕ ಶಾಲೆಯಲ್ಲಿ ಮಾಸ್ತರಾಗಿದ್ದಾರೆ. ಅವರು ಕೇದಾರಣ್ಣನಿಗೆ ಸುದ್ದಿ ತಿಳಿಸುತ್ತಿದ್ದಂತೆಯೇ ನಮಗೂ ವಿಷಯ ಗೊತ್ತಾಯಿತು. ನಾವೆಲ್ಲ ಜಾಗೃತರಾಗಿ ಸ್ಥಳದ ಭೇಟಿಗೆ ಸಜ್ಜಾದೆವು. ಪರಿಸರವಾದಿ ಪ್ರೊ.ಕಲ್ಲೂರ್ ವಿಷಯ ಅರಿತು ನನಗೆ ವಿವರಿಸಬಲ್ಲವರು. ಹಾಗಾಗಿ ಅವರಿಲ್ಲದೇ ನಾನು ಹೊರಡುವಂತಿಲ್ಲ. ಈ ಪಂಚಾಯ್ತಿಯಲ್ಲಿ ಕೇದಾರಣ್ಣನನ್ನು ನಿಲ್ಲಿಸಿಕೊಳ್ಳುವಂತಿಲ್ಲ. ಮಬ್ಬು ಕವಿದರೆ ಫೋಟೊ ಹೊಡೆಯುವುದು ಕಷ್ಟ. ಹಾಗಾಗಿ ಗೆಳೆಯ ಛಾಯಾಪತ್ರಕರ್ತ ಜೆ.ಜಿ.ರಾಜ್ ಅವರೊಂದಿಗೆ ಕೇದಾರಅಣ್ಣ ಮೊದಲೇ ಹೊರಟು ಬಿಟ್ಟರು. ನಂತರ ನನ್ನ ಸ್ನೇಹಿತ ಸಂತೋಷ ಓಸ್ವಾಲ್ ತಮ್ಮ ಜೀಪು ತರಲು ಒಪ್ಪಿದರು. ಅಂತೂ ಕಳಸಕೊಪ್ಪಕ್ಕೆ ಹೊರಟೆವು.

ಆಗಲೇ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಸುತ್ತಮುತ್ತಲಿನ ಗ್ರಾಮದ ಮಕ್ಕಳು, ಹೆಣ್ಣು ಮಕ್ಕಳು ಸಹಿತ ಜನರೆಲ್ಲ ಸ್ಥಳಕ್ಕೆ ಬಂದು; ಮೂಗು ಮುಚ್ಚಿಕೊಂಡು ನಿಂತು, ಕಾಡುಕೋಣದ ಶವ ನೋಡಿ ಮರುಗುತ್ತಿದ್ದರು. ‘ಪಾಪ ಸಾವು ಹೆಂಗ ಬಂದೈತಿ ನೋಡ ಅದಕ. ಕಾಡನ್ಯಾಗಿನ ನರಿಗೋಳು ಕಿವಿನೂ ತಿಂದ ಬಿಟ್ಟಾವ’ ಎಂದು ಮರುಕ ಪಟ್ಟು ಮಾತನಾಡುತ್ತಿದ್ದರು. ಅರಣ್ಯ ಇಲಾಖೆಯ ರಕ್ಷಕರು ಹಿರಿಯ ಅಧಿಕಾರಿಗಳ ಆಗಮನಕ್ಕೆ, ಅಪ್ಪಣೆಗಾಗಿ ಅಲ್ಲಿಯೇ ಕಾದು ಕುಳಿತಿದ್ದರು. ಧಾರವಾಡ ಅರಣ್ಯ ವಿಭಾಗದವರು, ಈ ಪ್ರಕರಣ ಕಲಘಟಗಿ ಅರಣ್ಯ ವಿಭಾಗಕ್ಕೆ ಸೇರಿದ್ದು ಎಂದು, ಅವರು ಧಾರವಾಡದವರಿಗೆ ಸೇರಿದ್ದು ಎಂದು ಕೋಳಿ ಜಗಳ ಕಾಯ್ದಿದ್ದರು. ಆದರೂ ನಮ್ಮನ್ನು ನೋಡಿ ದೇಶಾವರಿ ನಗೆ ನಕ್ಕರು. ಪರಸ್ಪರ ಸಹಕಾರ ನೀಡುತ್ತಿರುವುದಾಗಿ ನಮ್ಮನ್ನು ನಂಬಿಸಲು ಯತ್ನಿಸಿದರು. ನಕ್ಕು ಸುಮ್ಮನಾದೆವು.

ಇತ್ತ ಕಲ್ಲೂರ್ ಅವರು ಆಚೆ ಬದಿಗೆ ಇಳಿದು ಹೋಗಿ, ಕೋಣವನ್ನು ಮುಟ್ಟಿ ನೋಡಿ ಪರೀಕ್ಷಿಸಿದರು. ನನ್ನನ್ನು ಸಹ ಆಚೆ ಬದಿ ಕರೆಸಿಕೊಂಡು ಕಾಡುಕೋಣ ‘ಶವದ’ ಎಲ್ಲ ಭಾಗ ಮುಟ್ಟಿಸಿ, ಒಂದೊಂದು ವಿಷಯ ವಿವರಿಸಿ ಹೇಳಿದರು. ಕರವಸ್ತ್ರ ಮೂಗಿಗೆ ಅಂಟಿದ್ದರೂ ವಾಸನೆ ಎದ್ದು ಹೊಡೆಯುತ್ತಿತ್ತು. ಜೀವ ಮರುಕ ಪಟ್ಟಿತು. ಸಾಯುವ ಮೊದಲು ಅದು ಅನುಭವಿಸಿದ ಸಂಕಟ ನೆನೆದು ನಮ್ಮ ಕಣ್ಣು ಮಂಜಾದವು.

ಅವರ ಮಾತಿನ ಸಾರವಿಷ್ಟು. ಕಾಡುಕೋಣ ಸತ್ತು ೩ ರಿಂದ ೪ ದಿನಗಳಾಗಿದೆ. ಅದು ನೈಸರ್ಗಿಕ ಆದರೆ ಆಕಸ್ಮಿಕ ಸಾವು. ಏಕೆಂದರೆ ೨೦ ಜನ ಪೈಲ್ವಾನರು ಎತ್ತಿ ಹಿಡಿದು ಒಗಿತೀವಿ ಅಂದ್ರೂ ಮಿಸಿಗುದುಲ್ಲ. ಈ ಘಟನೆಯಲ್ಲಿ ವನ್ಯ ಜೀವಿ ಹಂತಕರ ಕೈವಾಡ ಇಲ್ಲ. ಶವದ ಸ್ಥಿತಿ ಗಮನಿಸಿದರೆ ಅದು ೭೨ ಗಂಟೆಗಳ ಆಚೆಗೆ ಸಾವನ್ನಪ್ಪಿದೆ. ಆ ಭಾಗದ ಕಾಡಿನಲ್ಲಿ ಗ್ರಾಮಸ್ಥರು ನಿತ್ಯ ದನ ಮೇಯಿಸುತ್ತಿರುವುದರಿಂದ, ಬೆದೆಗೆ ಬಂದ ಎಮ್ಮೆ ಸಂಧಿಸಲು ಎಮ್ಮೆಗಳ ಹಿಂಡನ್ನು ಬೆನ್ನಟ್ಟಿ ಕಾಡು ಕೋಣ ಗ್ರಾಮದ ಸಮೀಪಕ್ಕೆ ಬಂದಿದೆ. ಮಲೆನಾಡು ಆರಂಭವಾಗುವ ಈ ಭಾಗದಲ್ಲಿ ಗೌಳಿಗರು ರಾತ್ರಿಯ ವೇಳೆ ತಮ್ಮ ಎಮ್ಮೆಗಳನ್ನು ಮುದ್ದಾಮ್ ಕಾಡಿನಲ್ಲಿ ಮಲಗಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ರಾತ್ರಿಯ ವೇಳೆ ಕಾಡಿನ ಕೋಣ ಬಂದು ಈ ನಾಡಿನ ಎಮ್ಮೆಗಳ ಸಂಗ ಬೆಳೆಸಿದಾಗ ಒಳ್ಳೆಯ ತಳಿಯ ಕೋಣ ಹಾಗು ಎಮ್ಮೆ ಪಡೆಯಲು ಸಾಧ್ಯವಿದೆ. ನಮ್ಮೂರಿನ ಗೌಳಿಗರ ದೊಡ್ಡಿಯಲ್ಲಿ ಬಿಳಿ ಕಾಲುಚೀಲ ಹಾಕಿಕೊಂಡಂತೆ ಕಾಣಸಿಗುವ ಎಲ್ಲ ಎಮ್ಮೆ-ಕೋಣಗಳು ಕಾಡುಕೋಣದ ಸಂತಾನ ಎಂದು ಅವರು ನನಗೆ ವಿವರಿಸಿದರು.

ಕುತೂಹಲದಿಂದ ಕಳಸನಕೊಪ್ಪದ ಹಿರಿಯ ರೈತರೊಬ್ಬರನ್ನು ಕಾಡುಕೋಣದ ಸಾವಿನ ಕುರಿತು ಮಾತನಾಡಿಸಿದೆ. "ಏ ರೈತ್ರು ಈಗ ಮೊದ್ಲಿನ್ಹಾಂಗ ಸುದ್ದುಳ್ಳಾವರು ಉಳಿದಿಲ್ಲಳ್ರೀ. ಇವು ಬೆಳಿಗೆ ಭಾಳ ಲುಕ್ಸಾನ ಮಾಡಾಕತ್ಯಾವು. ಅದಕ ಆ ಬಾಜೂಕಿನ ಊರಾಗ ಹೊಲದ ಬದುವಿಗೆ ಕರೆಂಟಿನ ತಂತಿ ಬೇಲಿ ಹಾಯಿಸ್ಯಾರು. ಅದನ ದಾಟಿ ಬೆಳಿ ತಿನ್ನಾಕ ಹೋಗಿ ಇದು ಸತ್ತೈತಿ. ಇನ್ನ ಖೂನಿ ಮಾಡೇವಿ ಅಂತ ನಮ್ಮ ಮ್ಯಾಲೆ ಬರ್ತೈತಿ ಅಂತ ಯಾರೋ ತಂದು ಇಲ್ಲಿ ಕಂಟ್ಯಾಗ ಒಗದು ಹೋಗ್ಯಾರು. ಬಾಕಿ ಎಲ್ಲಾ ಕಟ್ಟಕತಿ..ತಮ್ಮ" ಅಂದ್ರು !

ಇನ್ನು ಕಳಸನಕೊಪ್ಪದ ಸಾಹುಕಾರು ಹೇಳಿದ್ರು.."ಮೊನ್ನೆ ಧಾರವಾಡಕ್ಕ ಬಂದಿತ್ತಲ್ಲ ಅದ ಕಾಡುಕೋಣ ಇದು. ಅವರು ಬರೋಬ್ಬರಿ ಕಾಡಿಗೆ ಓಡಿಸಿಲ್ಲ. ಮತ್ತ ಅದು ‘ಡೋಮೇಸ್ಟಿಕೇಟೆಡ್’ ಆದಾಂಗ ಆಗಿ ಇಲ್ಲಿಗೆ ಬಂದು ಸತ್ತ ಹೋತು!"

ಪ್ರೊ. ಕಲ್ಲೂರ್ ಈ ಎರಡೂ ಅಭಿಪ್ರಾಯಗಳನ್ನು ಸಾರಾಸಗಟಾಗಿ ಅಲ್ಲಗಳೆದರು. ಸುಖಾಸುಮ್ಮನೆ ವಿವಾದ ಹುಟ್ಟಿಸದಂತೆ ರೈತರಿಗೆ ಮನವಿ ಮಾಡಿದರು.

ಕಾಡಿನ ತಪ್ಪಲಿನಲ್ಲಿರುವ ಇದೇ ಗ್ರಾಮದಲ್ಲಿ ೨ ವರ್ಷಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ನಾಯಿ ಸಂಹಾರ ಮಾಡಿ, ಒಂದು ಮನೆಯ ಬಚ್ಚಲಿನಲ್ಲಿ ವಿರಮಿಸುತ್ತಿತ್ತು. ಅರಣ್ಯ ಇಲಾಖೆ ಸಕಾಲಿಕವಾಗಿ ಕ್ರಮ ಜರುಗಿಸದೇ, ಇಡೀ ದಿನ ಹೆಣಗಿ ಜೀವಂತ ಬಂಧಿಸಲು ವಿಫಲರಾದಾಗ ಗ್ರಾಮಸ್ಥರ ಆಕ್ರೋಷಕ್ಕೆ ತುತ್ತಾದ ಪೊಲೀಸರು ಅನಿವಾರ್ಯವಾಗಿ ಗುಂಡು ಹೊಡೆದು ಸಾಯಿಸಿದ್ದರು. ಇತ್ತೀಚೆಗೆ ದೊಡ್ಡ ಕರಡಿಯೊಂದು ಸಹ ಗ್ರಾಮದಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ ಎನ್ನುತ್ತಾರೆ ಗ್ರಾಮಸ್ಥರು. ಹಾಗೆಯೇ ಗ್ರಾಮಕ್ಕೆ ಅಂಟಿಕೊಂಡಿರುವ ಅರಣ್ಯದಿಂದ ನಾಟಾಗಳ ಕಳ್ಳ ಸಾಗಣೆ ಹಗಲು ದರೋಡೆಯ ತೆರದಿ ಜಾರಿಯಲ್ಲಿದೆ. ಅದಕ್ಕೆ ಪರೋಕ್ಷವಾಗಿ ಅರಣ್ಯ ಇಲಾಖೆಯ ಕುಮ್ಮಕ್ಕಿದೆ ಎಂದು ಆರೋಪಿಸುತ್ತಾರೆ.

"ಸಂಸ್ಕೃತಿ" -ಎಂದರೆ ಸಮಯಕ್ಕೆ ತಕ್ಕಂತಹ ಕೃತಿಯಲ್ಲಿ ತೊಡಗಿಸಿಕೊಂಡಿರುವುದು!