ಕಾಡುಪ್ರಾಣಿ ಆದರೇನು...ಮಾನವಗಿಂತ ಮೇಲು !
ಅನನಾಸ್ ತೋಟದಿಂದ ಹಣ್ಣನ್ನು ತಿಂದಿದೆ ಎಂದು ಅನನಾಸ್ ಒಳಗೆ ಬಾಂಬು ಇಟ್ಟು ಆನೆಯನ್ನು ಕೊಂದ ಕೇರಳದಲ್ಲಿ ಮೊನ್ನೆ ಜಲಪ್ರಳಯದ ಸಮಯದಲ್ಲಿ ಇಡೀ ಒಂದು ಕುಟುಂಬಕ್ಕೆ ಆನೆಯೇ ಆಶ್ರಯ ನೀಡಿ ಜೀವ ಉಳಿಸಿತಂತೆ. ವೈನಾಡ್ ದುರಂತದಲ್ಲಿ ಇದೊಂದು ಪವಾಡವೋ ಅಥವಾ ದೇವರ ಮಹಿಮೆಯೋ ಗೊತ್ತಿಲ್ಲ. ತಾಯಿ,ಮಗಳು, ಮಗಳ ಗಂಡ ಮೊಮ್ಮಗ ಇರುವ ಸಣ್ಣ ಕುಟುಂಬದ ಮನೆಗೆ ನೀರು, ಮರ ಅಪ್ಪಳಿಸಿ ಮನೆ ಮುರಿದು ಬೀಳುತ್ತೇ. ಮುರಿದು ಬಿದ್ದ ಮನೆಯಡಿಯಿಂದ ಹೇಗೋ ಹೊರಗೆ ಬಂದು ಮೇಲೆ ಎತ್ತರದ ಜಾಗಕ್ಕೆ ಆ ಮಧ್ಯ ರಾತ್ರಿ ಓಡುವಂತ ಸಂದರ್ಭದಲ್ಲಿ ಅವರ ಎದುರಿಗೆ ದೊಡ್ಡ ಕೊಂಬನ್ ಹೆಸರಿನ ಮತ್ತು ಮತ್ತೆರಡು ಕಾಡಾನೆಗಳು ಎದುರಾಗುತ್ತದೆ. ದಿಕ್ಕೇತೋಚದಾದ ಆ ಅಜ್ಜಿ ಆನೆಯಲ್ಲಿ "ದೊಡ್ಡ ದುರಂತದಿಂದ ಪಾರಾಗಿ ಬಂದಿದ್ದೇವೆ, ನಮಗೆ ಏನು ಮಾಡಬೇಡ" ಎಂದು ಕೈ ಮುಗಿದು ಬೇಡಿಕೊಂಡಾಗ ಆನೆಯ ಕಣ್ಣಲ್ಲಿಯೂ ನೀರು ಬಂತಂತೆ. ಆ ಕುಟುಂಬ ಬೆಳಿಗ್ಗಿನವರೆಗೆ ಅದೇ ಕಾಡಾನೆಗಳ ಸಮೀಪದಲ್ಲಿ ಆಶ್ರಯ ಪಡೆದು ಬದುಕುಳಿಯುತ್ತಾರೆ. "ಇನ್ನೇನು ಎಲ್ಲಾ ಮುಗಿಯಿತು ಎನ್ನುವಾಗ ದೇವರು ದಾರಿ ತೋರಿಸುತ್ತಾನೆ ಎನ್ನುವುದು ಇದಕ್ಕೇ ಆಗಿರಬೇಕು" ಅಲ್ಲವೇ?
***
ಹದವ ಮೀರಿದ ಮಳೆಗೆ ತುಂಬಿದ
ನದಿಗಳಾದವು ಸಾಗರ
ವಿಧಿಯ ಮುನಿಸಿನ ಸುಳಿಗೆ ಸಿಲುಕಿರೆ
ಬದುಕಿಗೆರಗಿತು ಸಂಕಟ
ವೃದ್ಧೆಯೊಬ್ಬಳು ನೆರೆಗೆ ಸಿಲುಕಿರೆ
ಮುದ್ದೆಯಾದಳು ನೀರಲಿ
ಮುದ್ದು ಕಂದನ ತಬ್ಬಿ ನಡೆಯಲು
ಸಿದ್ಧಗೊಂಡಳು ಇರುಳಲಿ
ಗಟ್ಟಿ ಮನದಲಿ ಮುಂದೆ ನಡೆದಳು
ಬೆಟ್ಟವೇರುತ ಸಾಗಲು
ದಿಟ್ಟಿಯಿಟ್ಟೆಡೆ ಗಜವ ಕಂಡಳು
ದಿಟ್ಟೆ ನೊಂದಳು ಭಯದೊಳು
ಕರವ ಮುಗಿಯುತ ಬೇಡಿಕೊಂಡಳು
ಹರಿಸಿ ಕಂಬನಿ ಕಣ್ಣಲಿ
ನೆರೆಯ ದುರಿತದೆ ಬೆಂದು ಬಂದೆವು
ಕರಿಯೆ ರಕ್ಷಿಸು ದಯದಲಿ
ನೋಡಿ ಆನೆಗೆ ಅರ್ಥವಾಯಿತೆ?
ಜೋಡಿ ಕಣ್ಣಲಿ ಕಂಬನಿ
ನೀಡಿ ರಕ್ಷಣೆ ಕಾಯುತಿದ್ದಿತು
ಕಾಡು ಪ್ರಾಣಿಯು ಇರುಳಲಿ||
(ಬರಹ- ಆಂಗ್ಲ ಬರಹವೊಂದರ ಆಧಾರ)
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ