ಕಾಡುಹಂದಿಯ ಕಣ್ಣು ನನ್ನ ಮೇಲೆ..! (ಭಾಗ 1)
ನನ್ನ ಹೈಸ್ಕೂಲು ದಿನಗಳಲ್ಲಿ ಜೇನು ಹುಡುಕುವುದು ನನ್ನ ಸಾಮಾನ್ಯ ಹವ್ಯಾಸ ಆಗಿತ್ತು. ನಮ್ಮ ಸಂಬಂಧಿಕರಿಗೆಲ್ಲಾ ನಮ್ಮದು ಜೇನುತುಪ್ಪ ಸಪ್ಲೈ ಮಾಡುವ ಮನೆ ಆಗಿತ್ತು. ಯಾರ ಮನೆಯಲ್ಲೂ ಜೇನುತುಪ್ಪ ಇರಲಿಲ್ಲ ಅಂದ್ರೂ ನಮ್ಮ ಮನೆಯಲ್ಲಿ ಮಾತ್ರ ಕನಿಷ್ಟಪಕ್ಷ ಒಂದೋ ಎರಡೋ ಕ್ವಾಟರ್ ಬಾಟಲ್ ನಲ್ಲಿ ಖಂಡಿತಾ ಇದ್ದೇ ಇರುತಿತ್ತು. ಡಿಸೆಂಬರ್ ನಿಂದ ಆರಂಭವಾಗುತಿದ್ದ ಈ ಜೇನು ಬೇಟೆ ಕೊನೆಯಾಗುತ್ತಿದ್ದದು ಮತ್ತೆ ಜೂನ್ ಜುಲೈಗೆ. ಅಲ್ಲಿಯವರೆಗೂ ನಾನು ಪ್ರತಿದಿನ ಕನಿಷ್ಠ ಎರಡು ಮೂರು ಜೇನು ಖಾಯಂ ಆಗಿ ತಿಂದೇ ತಿನ್ನುತ್ತಿದ್ದೆ. ಕೆಲವೊಂದು ದಿನ ಒಂದೇ ದಿನಕ್ಕೇ ಹತ್ತು-ಹದಿನೈದು ಜೇನು ಕಿತ್ತು ತೆಗೆದಿರುವ ದಿನಗಳೂ ಇದ್ದಾವೆ. ಬೇಸಿಗೆಯ ದಿನಗಳಲ್ಲಿ ಏನೇ ಕೃಷಿ ಕೆಲಸಗಳಿದ್ದರೂ ಹನ್ನೋಂದು ಹನ್ನೆರಡು ಗಂಟೆಯವರೆಗೆ ಕೆಲಸ. ಆಮೇಲೆ ಪೂರ್ಣ ವಿರಾಮ. ಮೂರುವರೆ ನಾಲ್ಕು ಗಂಟೆಯವರೆಗಿನ ಸಮಯ ಸಂಪೂರ್ಣ ನನ್ನದೇ. ಆದ್ದರಿಂದ ನಮ್ಮ ಮನೆಯ ಕೇಂದ್ರದಿಂದ ಎರಡು ಕಿಮೀ 360° ನನ್ದೇ ಏರಿಯಾ. ಆ ವ್ಯಾಪ್ತಿಯೊಳಗಿನ ಶೇ90% ಜೇನುಗಳು ನನ್ನದೇ ಪಾಲಾಗುತ್ತಿದ್ದವು.
ಯಾರದ್ದೋ ತೋಟ, ಹೊಲ ಗದ್ದೆಗಳ ಬೇಲಿಯ ಸುತ್ತಲೂ ತಿರುಗಾಡುತ್ತಿದ್ದರೆ ಕೆಲವರು ಜೇನು ಕೀಳುವ ಹುಡುಗ ಬಂದಿದ್ದಾನೆಂದು, ಅವರುಗಳಿಗೆ ಆಕಸ್ಮಿಕವಾಗಿ ಕಂಡಂತಹ ಜೇನುಗಳನ್ನು ನನಗೆ ತೋರಿಸಿ ಕಿತ್ತುಕೊಡಲು ವಿನಂತಿಸುತ್ತಿದ್ದರು. ಅವರ ಕೋರಿಕೆಯನ್ನು ನಾನು ನಿರಾಕರಿಸಿದರೆ ಜೇನು ಕಿತ್ತುಕೊಟ್ಟರೆ ಎರಡು ಎಳನೀರನ್ನೋ, ಮೂರ್ನಾಲ್ಕು ತೆಂಗಿನಕಾಯಿಯನ್ನೋ ಕೊಡುವ ಆಫರ್ ಮಾಡುತ್ತಿದ್ದರು. ಇನ್ನೂ ಕೆಲವರು ಜೇನನ್ನು ನೀನೇ ಪತ್ತೆ ಹಚ್ಚಿ ಜೇನು ಬಿಡಿಸಿ ತುಪ್ಪದಲ್ಲಿ ಪಾಲು ಕೊಟ್ಟರೆ ಈ ತರಹದ ಆಫರ್ ಸಿಗುತ್ತಿದ್ದವು. ವಾರಕ್ಕೆ ಒಂದೋ ಎರಡೋ ಈ ತೆರನಾದ ಆಫರ್ ಗಳು ನನಗೆ ಖುಷಿಯನ್ನು ತಂದುಕೊಡುತ್ತಿದ್ದವು.
ಒಂದು ದಿನ ಹಾಗೆ ಜೇನು ಹುಡುಕಿಕೊಂಡು ಹಳ್ಳದ ದಂಡೆಗೆ ಹೋಗಿದ್ದೆ. ಅದು ಸುಮಾರು ಹತ್ತಾರು ಎಕರೆ ವಿಶಾಲವಾದ ಪ್ರದೇಶ. ಅಲ್ಲಿ ಸಾಧಾರಣ ಎತ್ತರದ ಬಳ್ಳಾರಿ ಜಾಲಿ, ಸೀಮೆಜಾಲಿ ಗಿಡಗಳು, ಸರ್ಕಾರಿ ಜಾಲಿ, ಅಥವಾ ರಿಜಿಲ್ ಗಿಡಗಳು ಎಂದು ಕರೆಯುವ ಗಿಡಗಳು ಯೆಥೇಚ್ಛವಾಗಿ ಇದ್ದವು. ಒಂಥರಾ ಅವುಗಳದೇ ಸಾಮ್ರಾಜ್ಯ.. ಅದು ಖಾಸಗಿ ವ್ಯಕ್ತಿಗಳ ಹತ್ತಾರು ವರ್ಷಗಳಿಂದ ಬೀಳುಬಿದ್ದ ಜಮೀನು ಆಗಿದ್ದರಿಂದ ಜಾಲಿ ಗಿಡಗಳು ಪಾರಂ ನಲ್ಲಿ ಬೆಳೆಸಿದ ಹಾಗೆ ಸೊಂಪಾಗಿ ಬೆಳೆದಿದ್ದವು. ಆ ಗಿಡಗಳ ಮಧ್ಯೆ ಸ್ವಾತಂತ್ರ್ಯದ ನಂತರದ ದಿನಗಳ ಕಾಲದಲ್ಲಿ ಕಾಲುವೆಯ ನೀರು ಹರಿಯುತಿತ್ತಂತೆ. ಅದನ್ನು ಮಾಗಾಣಿ ಎಂತಲೂ ಕರೆಯುತ್ತಿದ್ದರು. ಆ ಕಾಲುವೆಯ ಅವಶೇಷಗಳನ್ನು ಇಂದಿಗೂ ನಾವು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ನೋಡಬಹುದು. ಕಾಲುವೆಯ ನೀರು ಬರದೇ ಇರುವ ಕಾಲಕ್ಕೆ ಅವರವರ ಜಮೀನುಗಳಲ್ಲಿ ಬಾವಿಯನ್ನು ತೋಡಿಸಿಕೊಂಡು ಕೃಷಿ ಕೆಲಸವನ್ನು ಮಾಡುತ್ತಿದ್ದರು. ತೊಂಬತ್ತರ ದಶಕದ ಆರಂಭದಲ್ಲಿ ಬಹುತೇಕ ಎಲ್ಲಾ ಬಾವಿಗಳೂ ಕೂಡ ಅಂತರ್ಜಲ ಕುಸಿದು ಸೇರಿ ಬರಿದಾದವು. ಆಗಿನ ಕಾಲದಲ್ಲಿ ಬಳಸಿದ್ದ ನೀರಿನ ಕಾಲುವೆಯ ಅವಶೇಷ ಇದ್ದು ಅದರಲ್ಲಿ ಯಥೇಚ್ಛವಾಗಿ ಗಿಡ-ಗಂಟೆಗಳು ಬೆಳೆದಿದ್ದವು. ನನಗೆ ಹಗಲಲ್ಲೂ, ರಾತ್ರಿಯಲ್ಲು ಯಾವುದೇ ಭಯ ಇರಲಿಲ್ಲ. ಎಲ್ಲಿ ಬೇಕಾದರೂ ಧೈರ್ಯವಾಗಿ ನುಗ್ಗುತಿದ್ದೆ. ಹಾಗೆ ದಟ್ಟವಾದ ಗಿಡಗಳ ಮದ್ಯೆ ನುಗ್ಗಿದ ನಾನು ಅಲ್ಲೊಂದು ಮುಳ್ಳುಬೇಲಿಯ ಆಸರೆಯಿಂದ ಶೆಗುಣಸೆ ಗಿಡದ ಪೊದರೊಂದು ದಟ್ಟವಾಗಿ ಎತ್ತರಕ್ಕೆ ಹಬ್ಬಿಕೊಂಡಿತ್ತು.
ಈ ಪೊದರುಗಳಲ್ಲಿ ಸಾಮಾನ್ಯವಾಗಿ ಜೇನುಗಳು ಇದ್ದೇ ಇರುತ್ತಿದ್ದವು. ಈ ಪೊದರು ಬರೀ ಜೇನಷ್ಟೇ ಅಲ್ಲದೇ ಮೊಲಗಳು ಕೂರಲು, ಹಂದಿಗಳು ಹಗಲಿನಲ್ಲಿ ಮಲಗಲು, ಬಯಲುಸೀಮೆಯ ಬೆಳವ, ಗಾಗ್ಲರ್ ನಂತಹ ನಾನಾ ಜಾತಿಯ ಪಕ್ಷಿಗಳು ಗೂಡು ಕಟ್ಟಲು ಬಹು ಪ್ರಶಸ್ತವಾದ ಸ್ಥಳ ಆಗಿತ್ತು. ಕೆಲವು ಪೊದೆಗಳಲ್ಲಿ ಹಗಲು ಹೊತ್ತಿನಲ್ಲಿ ಇಲಿಗಳು ಓಡಾಡುತ್ತಾ ಜಾಲಿಕಾಯಿಯಂತಹ ಬೀಜಗಳನ್ನು ಕಡಿಯುತ್ತಾ ಇರುವುದನ್ನೂ ನಾನು ನೋಡಿದ್ದೇನೆ. ಒಂದು ಕಿಲೋಮೀಟರ್ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಈ ತರಹದ ಪೊದರುಗಳು ಹದಿನೈದು-ಇಪ್ಪತ್ತು ಇರುತ್ತಿದ್ದವು. ಇವುಗಳೇ ನಾನು ಜೇನು ಹುಡುಕಲು ನನ್ನ ಆದ್ಯತೆಯ ಪೊದರುಗಳಾಗಿದ್ದವು. ಇವುಗಳಲ್ಲಿ ತಪ್ಪದೇ ನೋಡುವುದೇ ಜೇನುಹುಡುಕುವ ವಿಧಾನಗಳಲ್ಲಿ ಒಂದಾಗಿತ್ತು. ಅಂದು ಜೇನು ಹುಡುಕಲು ಇಂತಹದ್ದೇ ಒಂದು ಪೊದರು ಬಳಿ ಹೋದಾಗ ಅದರ ಸುತ್ತಲೂ ಸಿಕ್ಕು ಸಿಕ್ಕಾಗಿ ಹಳೆಯ ಮುಳ್ಳುರೆಂಬೆಗಳು, ಹಸಿ ಮುಳ್ಳಿನ ಅರೆಗಳು ಬಹಳ ಒತ್ತೊತ್ತಾಗಿದ್ದವು. ಅದರೊಳಗೆ ನನಗಿಂತಲೂ ಎತ್ತರದಲ್ಲಿ ಒಂದು ಜೇನು ಕಾಣಿಸಿತು. ನಾನು ಸಾಮಾನ್ಯವಾಗಿ ಜೇನು ಕಂಡ ತಕ್ಷಣ ಸಣ್ಣ ಕಡ್ಡಿಯಿಂದ ಜೇನಿನ ತಲೆಯಭಾಗಕ್ಕೆ ನಿಧಾನವಾಗಿ ಕಡ್ಡಿಯಿಂದ ಹುಳು ಸರಿಸಿ ತುಪ್ಪ ಇದೆಯೋ ಇಲ್ಲವೋ ಎಂದು ಖಾತ್ರಿಪಡಿಸಿಕೊಂಡು ಆಮೇಲೆ ಅದನ್ನು ತೆಗೆಯುವ ನಿರ್ಧಾರ ಮಾಡುತ್ತಿದ್ದೆ. ತುಪ್ಪ ಇದ್ದರೆ ಕೋಶಗಳು ಮುಚ್ಚಿರುತ್ತಿದ್ದವು ಇಲ್ಲವಾದರೆ ಖಾಲಿ ಇರುತ್ತಿದ್ದವು. ಆ ಕೋಶಗಳು ಮುಚ್ಚಿದ್ದರೆ ಖಂಡಿತವಾಗಿಯೂ ಬಲಿ. ಖಾಲಿ ಇದ್ದರೆ ನೆಕ್ಸ್ಟ್ ರೌಂಡ್ ಗೆ ಕನ್ಪರ್ಮ ಆಗಿ ಅದು ಬಲಿಯಾಗುತ್ತಿತ್ತು.
ಹದಿನೈದು ದಿನಗಳಂತೆ ಒಂದು ಸೈಕಲ್ ನಂತೆ ತುಪ್ಪ ಇರುತ್ತಿತ್ತು. ಅಮಾವಾಸ್ಯೆಯ ಹಿಂದೆ ಮುಂದೆ ಗೂಡು ಕಟ್ಟಿದರೆ ಹುಣ್ಣಿಮೆಯ ಹೊತ್ತಿಗೆ ತುಪ್ಪ ರೆಡಿಯಾಗಿ ಸಿದ್ಧವಾಗಿರುತ್ತಿತ್ತು. ಹಾಗೇ ಪ್ರತಿ ಹತ್ತನೇ ದಿನದಿಂದ ಇಪ್ಪತ್ತನೇ ದಿನದವರೆಗೂ ಯಾವಾಗ ಬೇಕಾದರೂ ತುಪ್ಪ ಸಿಗುತ್ತದೆ. ಆಮೇಲೆ ಎಂಟತ್ತು ದಿನಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ತುಪ್ಪ ಲಭ್ಯ ವಾಗುತ್ತದೆ. ಅಂದು ಆ ಬೇಲಿಯಲ್ಲಿದ್ದ ಜೇನನ್ನು ಪರೀಕ್ಷಿಸಿದಾಗ ಅದರಲ್ಲಿ ಭಾಗಶಃ ತುಪ್ಪ ಇರುವುದು ಖಾತ್ರಿಯಾಯಿತು. ಆದರೆ ನಾನು ಪರೀಕ್ಷಿಸಿದ ನೇರಕ್ಕೆ ಜೇನು ತೆಗೆಯುವುದು ಇತರೆ ಹಸಿ ಮುಳ್ಳು ಕೊನೆಗಳು ಅಡ್ಡ ಇದ್ದುದರಿಂದ ಸುಲಭವಾಗಿ ತೆಗೆಯುವುದು ಸಾಧ್ಯ ಇರಲಿಲ್ಲ. ಆದರೆ ವಿರುದ್ಧ ದಿಕ್ಕಿನಿಂದ ಬಂದರೆ ಸುಲಭವಾಗಿ ಸಿಗುತ್ತಿತ್ತು. ಕೈಯಲ್ಲಿದ್ದದ್ದು ಈಚಲ ಗರಿ ಕೊಯ್ಯಲು ಬಳಸುತ್ತಿದ್ದ ತೆಳ್ಳಗಿನ ಉದ್ದನೆಯ ಕುಡುಗೋಲು ಮಾತ್ರ. ಅಲ್ಲಿಗೆ ತಲುಪಲು ನಾನು ಮುಳ್ಳಿನ ರೆಂಬೆ ಕೊಂಬೆ ಸರಿಸಿ ದೂರದಿಂದ ಈ ಕಡೆ ಬಂದು ಆ ಕಾಲುವೆಯ ಏರಿ ಮೇಲೆಯೇ ನಿಧಾನಕ್ಕೆ ಮುಳ್ಳುಗಳು ಸರಿಸುತ್ತಾ ಹೆಜ್ಜೆಮೇಲೆ ಹೆಜ್ಜೆ ಇಟ್ಟು ಜೇನಿನ ಕಡೆಬರುತ್ತಿದ್ದೆ. ನನ್ನ ಗಮನ ಇದ್ದದು ಆ ಜೇನಿನ ಮೇಲೆ ಯಾವ ಯಾವ ರೆಂಬೆ ಕಡಿದರೆ ಸರಳವಾಗಿ ಸಿಗುವುದೊ ಎಂಬ ಆಲೋಚನೆಯಲ್ಲಿ ಇದ್ದೆ.
ಅಚಾನಕ್ ಬಲಭಾಗದಲ್ಲಿ ಏನೋ ಕಪ್ಪಾಗಿ ಕಂಡ ಹಾಗೆ ಕಾಣಲು ತಕ್ಷಣವೇ ನೋಡಲು ಒಂದು ಕಾಡುಹಂದಿಯೊಂದು ಮಲಗಿದೆ. ಉದ್ದನೆಯ ಅದರ ಕೋರೆಹಲ್ಲುಗಳು ಕಾಣಿಸುತ್ತಿವೆ. ಕಣ್ಣು ತೆರೆದು ನನ್ನ ಚಲನವಲನದ ಮೇಲೆ ಅದು ಮಲಗಿದಲ್ಲೇ ನಿಗಾ ವಹಿಸಿದೆ. ನಾನು ಆ ಕಾಡುಹಂದಿ ನೋಡಿದ ತಕ್ಷಣ ಮೈ ರೋಮಾಂಚನ ಆಗಿ ಕೈ ಕಾಲು ನಡುಗತೊಡಗಿದವು. ಅದನ್ನು ಕಂಡಿದ್ದೇ ತಡ ಕ್ಷಣಾರ್ಧದಲ್ಲಿ ಮೈ ಬೆವರಿತು... ಶಬ್ಧ ಮಾಡಿದರೆ ಎದ್ದೇಳುವ ಅಪಾಯ ಇದ್ದೇ ಇತ್ತು. ಅದು ಅಪಾಯ ಸಂದರ್ಭದಲ್ಲಿ ಎದ್ದು ಅದರ ನೇರಕ್ಕೆ ಓಡಿದರೆ ತೊಂದರೆ ಇಲ್ಲ.
ಚಿತ್ರ - ಬರಹ :ನಾಗೇಂದ್ರ ಬಂಜಗೆರೆ, ಬಳ್ಳಾರಿ
(ಇನ್ನೂ ಇದೆ)