ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!

ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!

ಬರಹ

ಕಾಡು ಹಂದಿ ಮತ್ತು ಮೈಕಲ್ ಜಾಕ್ಸನ್!

ನಾನು ಈ ಲೇಖನಕ್ಕೆ ನೀಡಿದ ಶೀರ್ಷಿಕೆ ತಮಾಷೆಯಾಗಿದೆ ಅಲ್ವೆ? ನೀವು ಯೋಚನೆ ಮಾಡ್ತಿರಬಹುದು. ನಮ್ಮೂರ ಕಾಡು ಹಂದಿಗೂ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕ ಮೈಕಲ್ ಜಾಕ್ಸನ್ ಅವರಿಗೂ ಅದ್ಯಾವ ಬಾದರಾಯಣ ಸಂಬಂಧ ಇದ್ದೀತು? ಇದೆ.

ಅದು ಹೀಗೆ...

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ಕಾಡು ಹಂದಿಗಳ (ಉ.ಕ. ಭಾಗದಲ್ಲಿ ಮಿಕ, ಅರ್ಥಾತ್ ಕೋರೆ ಇರುವ ಭಯಂಕರ ದೈತ್ಯ ಗಾತ್ರದ ಹಂದಿ) ಉಪಟಳ ವಿಪರೀತ. ನೇಗಿಲಯೋಗಿಯ ಬಿತ್ತನೆಗೆ, ಬೆಳೆಗೆ ಹಾಗು ಹೊಲದ ಬದುವಿಗೆ ಹಾಕಲಾದ ತಂತಿಯ ಬೇಲಿಗೆ ಈ ಮಿಕಗಳಿಂದ ಸಂಭವಿಸುವ ಹಾನಿ ಅವರ ನಿದ್ದೆ ಗೆಡಿಸಿದೆ. ಹಾಗಾಗಿ ಅವರು ಇವುಗಳ ನಿಯಂತ್ರಣಕ್ಕೆ ತಮ್ಮದೇ ಆದ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಆ ಅನುಭವದಲ್ಲಿ ಅಮೃತತ್ವವಿದೆ.

ಸಾಮಾನ್ಯವಾಗಿ ಈ ಕಾಡು ಹಂದಿಗಳ ಕಾಟ ಹೊಲದಲ್ಲಿ ಬೀಜ ಬಿತ್ತನೆ ಮಾಡಿದಾಗ, ಇಲ್ಲವೇ ಬೆಳೆ ಕಟಾವಿನ ಹಂತ ತಲುಪಿದಾಗ. ಅದು ರಾತ್ರಿಯ ವೇಳೆ ವಿಪರೀತ. ಅಕಸ್ಮಾತ್ ಕಾಡಿನ ಹೆಣ್ಣುಹಂದಿ ಮರಿಗಳನ್ನು ಹಾಕಿದ್ದರೆ ಮನುಷ್ಯರಿಗೆ ಪ್ರಾಣಘಾತುಕವಾಗಿ ಸಹ ಪರಿಣಮಿಸಬಹುದು. ಹಾಗಾಗಿ ಆ ಭಾಗದ ಕೃಷಿಕರು ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿ, ಪರಿಹಾರ ಸಿಗದೇ ಸುಸ್ತಾಗಿ ಈ ವರಾಹಗಳ ನಿಯಂತ್ರಣಕ್ಕೆ ತಮ್ಮದೇ ಆದ ದಾರಿ ಕಂಡುಕೊಂಡಿದ್ದಾರೆ.

ರಾತ್ರಿಯ ವೇಳೆ ಈ ಭಾಗದಲ್ಲಿ ಗದ್ದೆ, ತೋಟಪಟ್ಟಿ ಕಾಯಲು ರೈತರು ನಿದ್ದೆಗೆಡಬೇಕು. ಹಾಗಾಗಿ ಟೇಪ್ ರೆಕಾರ್ಡರ್ ಗಳನ್ನು ಸಾಕಿದ್ದಾರೆ! ಹೊಲದ ಮನೆಯಲ್ಲಿ ಇವುಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳುತ್ತಾರೆ. ಅದರಲ್ಲಿ ಹಾಡಿಸಲು-ಕಮ್-ಆ ಕಾಡು ಹಂದಿಗಳನ್ನು ಹೆದರಿಸಲು ಅವರು ಭರಪೂರ್ ಚಂಡೆ, ಮದ್ದಳೆಗಳೊಂದಿಗೆ ಭಾಗವತರು ಹಾಡಿದ ಯಕ್ಷಗಾನದ ಕ್ಯಾಸೆಟ್ ಗಳನ್ನು ಅಹೋರಾತ್ರಿ ಹಾಡಿಸುತ್ತಾರೆ! ಈ ಪ್ರಯೋಗದ ಮೂಲಕ ಅವರು ತಕ್ಕಮಟ್ಟಿಗೆ ಇವುಗಳ ಹಾವಳಿ ತಪ್ಪಿಸುವಲ್ಲಿ, ನಿದ್ರಾದೇವಿಯನ್ನು ದೂರ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಅವರ ನಿತ್ಯದ ರಾತ್ರಿ ಕಾಯಕ. ಒಮ್ಮೆ ಓರ್ವ ಪ್ರಗತಿಪರ ಕೃಷಿಕರ ಮನೆಯಲ್ಲಿ ಒಂದು ಘಟನೆ ನಡೆಯಿತು. ಸಾಫ್ಟವೇರ್ ಇಂಜಿನೀಯರ್ ಆಗಿರುವ ಅವರ ಸುಪುತ್ರ ಅಮೇರಿಕೆಯಿಂದ ಊರಿಗೆ ಬಂದ. ಕೆಲ ದಿನ ಊರು ಸುತ್ತಾಡಿದ. ಹಾಗೆಯೇ ಅಪ್ಪನ ಟೇಪ್ ರೆಕಾರ್ಡರ್ ನಲ್ಲಿ ಚಂಡೆ-ಮದ್ದಳೆಯ ಕ್ಯಾಸೆಟ್ ತೆಗೆದು ತಾನು ತಂದಿದ್ದ ‘ರಾಪ್’ ಸಂಗೀತದ ಮೈಕಲ್ ಜಾಕ್ಸನ್ ಕ್ಯಾಸೆಟ್ ಹಾಕಿ ಕೇಳಿದ. ಒಂದು ರಾತ್ರಿ ಅಪ್ಪ ಹೊಲಕ್ಕೆ ಹೋಗುವ ಧಾವಂತದಲ್ಲಿ ಕ್ಯಾಸೆಟ್ ಇದೆಯೋ..ಇಲ್ಲವೋ ಎಂಬುದನ್ನು ಮಾತ್ರ ಗಮನಿಸಿದರು. ಕ್ಯಾಸೆಟ್ ಯಾವುದಿದೆ ಎಂಬುದನ್ನು ಗಮನಿಸಲಿಲ್ಲ. ಅದನ್ನೇ ಕೈಯಲ್ಲಿ ಹಿಡಿದು ನಾಲ್ಕಾರು ಮೈಲಿ ದೂರದ ತೋಟಕ್ಕೆ ಹೋದರು.

ಕತ್ತಲು. ಬ್ಯಾಟರಿ ಸಹವಾಸ. ಆಗಲೇ ಉಪಟಳ ಆರಂಭಿಸಿದ್ದ ಕಾಡುಹಂದಿಗಳಿಗೆ ಹೆದರಿಸಲು ಟೇಪ್ ರೆಕಾರ್ಡರ್ ಆನ್ ಮಾಡಿದ್ದೇ ತಡ..ಎರ್ರಾಬಿರ್ರಿಯಾಗಿ ಮೈಕಲ್ ಜ್ಯಾಕ್ಸನ್ ನೂರೆಂಟು ವಾದ್ಯಗಳನ್ನು ಕುಟ್ಟಿ, ಮೈ ಛಳಿ ಬಿಟ್ಟು ಹಾಡಿರುವ ‘ರಾಪ್’ ಸಂಗೀತ ಅಲೆ ಅಲೆಯಾಗಿ ತೇಲಿಬಂತು. ಕೇಳಿದ ಇವರೇ ಭಯಭೀತರಾಗಿ ಬಿಳುಚಿಕೊಂಡರು. ತಟ್ಟನೇ ಆಫ್ ಮಾಡಿದರು. ಆದರೆ, ಮರಳಿ ಮನೆಗೆ ಹೋಗುವಂತಿಲ್ಲ. ಅನಿವಾರ್ಯ ಸ್ಥಿತಿ. ಹೇಗೋ ತಾಳಿಕೊಂಡು ಇದೇ ಭಯಂಕರವಾಗಿದ್ದ ಕ್ಯಾಸೆಟ್ ಹಾಕಿದರು. ‘ರಾಪ್’ ಸಂಗೀತಕ್ಕೆ ಹೆದರಿದ ಹಂದಿಗಳು ದಿಕ್ಕೆಟ್ಟು ಓಡಿದವು. ಆಶ್ಚರ್ಯ ಎಂದರೆ ಬೆಳಗಿನ ವರೆಗೆ ಒಂದು ಹಂದಿಯೂ ತೋಟದ ಮನೆಯತ್ತ ಸುಳಿಯಲಿಲ್ಲ! ಹಾಗಂತ..ಇಷ್ಟು ದಿನ ಯಕ್ಷಗಾನದ ಕ್ಯಾಸೆಟ್ ಹಾಕಿದಾಗ ಕೆಲವು ಮಿಕಗಳಾದರೂ ಅವರಿಗೆ ತ್ರಾಸು ಕೊಟ್ಟಿದ್ದವೋ ತಿಳಿಯದು!

ಮರುದಿನ ಬೆಳಿಗ್ಗೆ ಮನೆಗೆ ಬಂದವರೇ ಅಪ್ಪ ಮಗನಿಗೆ ಬಯ್ಯುವ ಬದಲು ಹೊಗಳಿದರು! ಊರಿಗೆ ಹೋಗುವಾಗ ಆ ಮೈಕಲ್ ಜಾಕ್ಸನ್ ಕ್ಯಾಸೆಟ್ ಬಿಟ್ಟು ಹೋಗುವಂತೆ, ಮತ್ತಷ್ಟು ಅಂತಹ ಕ್ಯಾಸೆಟ್ ಕಳುಹಿಸುವಂತೆ ಬೇಡಿಕೆ ಮುಂದಿಟ್ಟರು. ಮಗ ಊರು ತಲುಪಿದ ಒಂದೇ ತಿಂಗಳಲ್ಲಿ ಹತ್ತಾರು ಕ್ಯಾಸೆಟ್ ಕಳುಹಿಸಿ ಅಪ್ಪನ ಆಸೆ ಪೂರೈಸಿದ. ಕೆಲವೇ ತಿಂಗಳುಗಳಲ್ಲಿ ಈ ಸುದ್ದಿ ಬೆಳ್ತಂಗಡಿಯ ಹಾಗು ಸುತ್ತಮುತ್ತಲಿನ ತಾಲೂಕಿನ ಮನೆ-ಮನೆ ತಲುಪುವಲ್ಲಿ ಯಶಸ್ವಿಯಾಯಿತು. ಎಲ್ಲರೂ ಯಕ್ಷಗಾನದ ಕ್ಯಾಸೆಟ್ ಬದಲು ರಾತ್ರಿ ಪೂರ್ತಿ ಮೈಕಲ್ ಜ್ಯಾಕ್ಸನ್ ಹಾಡಿ-ಕುಣಿದ ಕ್ಯಾಸೆಟ್ ಹಾಕಲು ಮೊದಲು ಮಾಡಿದರು. ಕಾಡುಹಂದಿಯ ಉಪಟಳ ತಪ್ಪಿತು. ಆದರೆ ಯಕ್ಷಗಾನದ ಹಾಡು ಕೇಳುತ್ತ ನಿದ್ರೆಯನ್ನು ದೂರವಿರಿಸುತ್ತಿದ್ದವರಿಗೆ ಇದು ತಲೆನೋವಾಗಿತ್ತು! ಅದನ್ನು ಆಸ್ವಾದಿಸುತ್ತಿದ್ದರು..ಇದನ್ನು..ನೀವೇ ಊಹಿಸಿಕೊಳ್ಳಿ!

ಕೆಲ ತಿಂಗಳುಗಳಲ್ಲಿ ಕ್ಯಾಸೆಟ್ ಕಂಪನಿಯವರಿಗೆ ವಾಸನೆ ಬಡಿಯಿತು. ಅಧೇಗೆ ಇದ್ದಕ್ಕಿದ್ದಂತೆ ಮೈಕಲ್ ಜ್ಯಾಕ್ಸನ್ ಬೆಳ್ತಂಗಡಿಗೆ ಮನೆ ಮಗನಾದ? ಎಂಬ ಪ್ರಶ್ನೆ ಒಂದೆಡೆ..ಮತ್ತೊಂದೆಡೆಗೆ ಈ ಭಾಗದ ಜನರಿಗೆ ಇಂಗ್ಲೀಷ್ ಇಷ್ಟು ‘ಸ್ಟ್ರಾಂಗ್’ ಇದ್ದಕ್ಕಿದ್ದಂತೆ ಹೇಗೆ ಆಯಿತು? ಎಂಬ ಜಿಜ್ಞಾಸೆ ಮತ್ತೊಂದೆಡೆಗೆ. ಅಂತೂ ಇಂತೂ ತಮ್ಮ ಟೀಮ್ ತೆಗೆದುಕೊಂಡು ಸಮೀಕ್ಷೆಗೆ ಹೊರಟರು ಕಂಪನಿಯವರು. ಊರಿಗೆ ತಲುಪುತ್ತಲೇ ಎಲ್ಲ ಕ್ಯಾಸೆಟ್ ಅಂಗಡಿ ಹೊಕ್ಕು ತಮ್ಮ ಆಂಗ್ಲ ಕ್ಯಾಸೆಟ್ ಗಳಿಗಾಗಿ ತಡಕಾಡಿದರು. ಎಲ್ಲಿಯೂ ಮೈಕಲ್ ಜಾಕ್ಸನ್ ಕ್ಯಾಸೆಟ್ ಸಿಗಲಿಲ್ಲ. ಕೇಳಿದರೆ ಅಂಗಡಿಯವನಿಗೆ ಮಾಹಿತಿಯೂ ಇರಲಿಲ್ಲ. ಆದರೆ ವಿಷಯ ವಿವರಿಸಲಾಗಿ ಆತ ತಡವರಿಸಿ ಅರ್ಥಮಾಡಿಕೊಂಡ..

ಅಷ್ಟೆ ಕ್ಷೀಣ ಸ್ವರದಲ್ಲಿ ಕ್ಯಾಸೆಟ್ ಅಂಗಡಿಯ ಮಾಲೀಕ ಈ ಟೀಮ್ ಲೀಡರ್ ಗೆ ಹೇಳಿದ.."ಸಾರ್..ನೀವು ಹುಡುಕುತ್ತಿರುವ ಕ್ಯಾಸೆಟ್ ನಮ್ಮೂರಲ್ಲಿ ಗೊಬ್ಬರದ ಅಂಗಡಿಯಲ್ಲಿ ಸಿಗುತ್ತದೆ!" ಹೌಹಾರಿದರು ಇವರು. ‘ಅದೇಕೆ?’ ಎಂದರು. "ಏಕೆಂದರೆ ನಮ್ಮ ರೈತರು ಬೀಜ, ಗೊಬ್ಬರ, ರಸ ಗೊಬ್ಬರ ಹಾಗು ರಾಸಾಯನಿಕಗಳಿಗಾಗಿ ಹೆಚ್ಚು ಹೆಚ್ಚು ಭೇಟಿ ನೀಡುವುದು ಗೊಬ್ಬರದ ಅಂಗಡಿಗಳಿಗೆ. ಹಾಗಾಗಿ ಆ ಕ್ಯಾಸೆಟ್ ಭರ್ಜರಿ ಮಾರಾಟ ವಾಗುವುದು ಅಲ್ಲಿ..ಗೊಬ್ಬರದ ಅಂಗಡಿಯಲ್ಲಿ!" ಎಂದು ನಿರ್ಲಿಪ್ತವಾಗಿ ಹೇಳಿದ. ಇವರು ಎಚ್ಚರತಪ್ಪಿ ನೆಲಕ್ಕೊರಗಿದರು ಎಂದು ನಾನು ಬೇರೆ ಹೇಳಬೇಕಿಲ್ಲವಲ್ಲ!

*******************************************
*ಈ ಆಶ್ಚರ್ಯಕರ ಮಾಹಿತಿ ನಮ್ಮೊಂದಿಗೆ ಹಂಚಿಕೊಂಡವರು ಖ್ಯಾತ ಅಭ್ಯುದಯ ಪತ್ರಕರ್ತ, ಸಂಪಾದಕ ಶ್ರೀ ಈಶ್ವರ ದೈತೋಟ ಅವರು. ಅವರ ಅನುಭವದ ಮಾತು ಸಂಪದದ ಓದುಗರಿಗಾಗಿ ಇಲ್ಲಿ ನಾನು ಹೆಣೆದಿದ್ದೇನೆ. ಲೇಖನದ ಶ್ರೇಯ ಅವರಿಗೆ ಸಲ್ಲಬೇಕು.