ಕಾಡು ಕಾಡ್ತು

ಕಾಡು ಕಾಡ್ತು

ಪುಸ್ತಕದ ಲೇಖಕ/ಕವಿಯ ಹೆಸರು
ರೇಖಾ ಹೆಗಡೆ ಬಾಳೇಸರ
ಪ್ರಕಾಶಕರು
ಬಹುರೂಪಿ ಪ್ರಕಾಶನ, ಸಂಜಯ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೩

ಕಾಡು ಕಾಡ್ತು’ ರೇಖಾ ಹೆಗಡೆಯವರು ಕಾಡಿನ ಅನುಭವಗಳ ಕುರಿತು ಬರೆದ ಕೃತಿಯಾಗಿದೆ. ಇದಕ್ಕೆ ಅವರದ್ದೇ ಮುನ್ನುಡಿ ಬರಹವಿದೆ: ಅಡವಿಯೆಂದರೆ ಅದೇನು ಹುಚ್ಚೋ.. ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು ಪ್ರೀತಿಸಿದ್ದು ಅಡವಿಯನ್ನು ಮುಗಿಲಿಗೆ ಏಣಿ ಚಾಚುವ ಸಾಗವಾನಿ, ಮತ್ತಿ, ಹೆದ್ದೇಗ, ಬೀಟೆ ಮರಗಳು, ಗಾಳಿ ಬೀಸಿದಾಗೆಲ್ಲ. ಒಂಥರಾ 'ಸುಂಯ್' ಎಂದು ಸದ್ದು ಮಾಡುವ ಬಿದಿರು ಮಟ್ಟಿಗಳು, ಆ ಮಟ್ಟಿಗಳ ಬುಡದಲ್ಲಿ ಬಿದ್ದಿರುತ್ತಿದ್ದ ಪುಟ್ಟ ಪುಟ್ಟ ನವಿಲು ಗರಿಗಳು. ನುಣ್ಣನೆ ನುಣುಪಿನ ನಂದಿ- ಬಿರು ಬಿರುಸಿನ ಮತ್ತೆ ಮರಗಳು, ಕಾಡುಹಣ್ಣುಗಳನ್ನು ಎತ್ತಿ ಒಗೆದು ಕೊಕ್ಕಿನಲ್ಲಿ ಕ್ಯಾಕ್ ಮಾಡುತ್ತಿದ್ದ ಕೊಕ್ಕಾನಕ್ಕಿ (ಮಂಗಟ್ಟೆ)ಗಳು, ಚಂದದ ತೊಗಲಿನ ಕ್ಯಾಸಳಿಲು (ಮಲಬಾರ್ ಅಳಿಲು).. ಒಂದೊಂದು ಸ್ಪರ್ಶ, ಒಂದೊಂದು ಗಾನ, ಒಂದಿನಿತು ಮೌನ ಎಲ್ಲ ನನ್ನೊಳಗಿನ ಅಂತರ್ಮುಖಿ ಜೀವವನ್ನು ಬೆಚ್ಚಗೆ ತಬ್ಬಿಕೊಂಡ ಭಾವಗಳು, ನಾನು ಆಡದ ಮಾತುಗಳನ್ನು, ಹಾಡದ ಹಾಡನ್ನು ಒಂದು ಸೊಲ್ಲೂ ಬಿಡದೇ ಸಂಪೂರ್ಣ ಕೇಳಿಸಿಕೊಂಡವು ನನ್ನೂರ ಕಾಡು, ಮರ, ಕೆರೆ, ಕಲ್ಲುಗಳು. ಯಾವುದೋ ಒಂದು ಮರದ ಕೈಗೆಟಕುವ ಕೊಂಬೆ ಹತ್ತಿ ಕೂತು. ಕೈಲೊಂದು ಪುಸ್ತಕ ಹಿಡಿದು, ಚಿಲಿಪಿಲಿ ಹಕ್ಕಿಗಳ ಕೂಗು ಆಲಿಸುತ್ತಾ ಹಗಲುಗನಸಿನ ಲೋಕದಲ್ಲಿ ಕಳೆದುಹೋಗುತ್ತಿದ್ದ ಆ ಕ್ಷಣಗಳು ಆನಂದದ ತುರೀಯಾವಸ್ಥೆಯ ಕ್ಷಣಗಳೇ ಸೈ. ಅಂಥದ್ದೊಂದು ದಿವ್ಯಾನುಭೂತಿಯನ್ನು ದಿನದಿನ ದಯಪಾಲಿಸುತ್ತಿದ್ದ ಹನುಮಾಪುರದ ಪರಿಸರ, ಸುತ್ತಲಿನ ಕಾಡು ಹಾಗೂ ಅವುಗಳ ಜೊತೆಗಿದ್ದ ನನ್ನ ಒಡನಾಟದ ನೆನಪುಗಳ ಸಂಕಲನ ಇದು. 

ನಾನು ಬಾಲ್ಯದ ಮೊದಲಾರು ವರ್ಷಗಳನ್ನು ಕಳೆದ ಹನುಮಾಪುರ, ಉತ್ತರ ಕನ್ನಡದ ಮುಂಡಗೋಡು ತಾಲ್ಲೂಕಿನ ಒಂದು ಕುಗ್ರಾಮ. ಆ ಸಮಯದಲ್ಲಿ ವಿದ್ಯುತ್, ಟಾರು ರಸ್ತೆ, ಬಸ್ ಸಂಪರ್ಕ ಏನನ್ನೂ ಕಾಣದ, ಶಾಲೆಯಿದ್ದೂ ಉತ್ತಮ ಶಿಕ್ಷಕರಿಲ್ಲದ ಕಾಡು ಹಳ್ಳಿ, ಹೇರಳ ಜನಸಂಖ್ಯೆ, ಧಾರಾಳ ಬಡತನ, ಅನಕ್ಷರತೆ- ಇವಿಷ್ಟೇ ಆಗ ಆ ಊರಿನ ಆಸ್ತಿ. ಅಂಥ ಪರಿಸರದ ಊರಿನಿಂದ ಸುಮಾರು ಒಂದು ಮೈಲು ದೂರದ ದೇವಗುಂಡಿ ಎಂಬಲ್ಲಿ ನಮ್ಮ ಒಂಟಿ ಮನೆ ಮತ್ತು ಜಮೀನು. ದೇವಗುಂಡಿಯಲ್ಲಿ ವಾಸವಿದ್ದರೂ, ನಮ್ಮ ಮನೆಯನ್ನು ನಾವು ಹನುಮಾಪುರದ ವಿಸ್ತರಣೆ ಎಂದೇ ಗುರುತಿಸುತ್ತಿದ್ದೆವು.

ಅಷ್ಟು ಜನಸಂಪರ್ಕ ಬಿಟ್ಟರೆ ಉಳಿದಂತೆ ಕಾಡು, ಕಾಡು ಮತ್ತು ಎಲ್ಲೆಲ್ಲೂ ಕಾಡು. ಮನೆಯ ಎದುರಿದ್ದ ದೇವಗುಂಡಿ ಕೆರೆ, ಅದಕ್ಕೆ ತಾಗಿ ಇದ್ದ ಒಂದಿಷ್ಟು ಗದ್ದೆ ಬಯಲು, ಸುಮಾರು ಒಂದೂವರೆ ಮೈಲು ದೂರದಲ್ಲಿ ಕಾಡ ನಡುವಲ್ಲಿದ್ದ ಮಾಸ್ತಮ್ಮನ ಗುಡಿ ಮತ್ತು ಅದರ ಹೆಸರನ್ನೇ ಹೊತ್ತ ಸನಿಹದ ಹಳ್ಳ, ಕೂಲಿ ಕೆಲಸಕ್ಕೆ ಬರುತ್ತಿದ್ದ ಊರಿನ ಜನ, ಮನೆಯ ಸದಸ್ಯರಾಗಿದ್ದ ದನಕರುಗಳು, ನಾಯಿ ಬೆಕ್ಕುಗಳು- ಇವೆಲ್ಲ ನಮ್ಮ ಒಡನಾಟದ ಅವಿಭಾಜ್ಯ ಅಂಗಗಳಾಗ. ಇವಷ್ಟೇ ಅಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಬದುಕಿನೊಂದಿಗೆ ತಳಕು ಹಾಕಿಕೊಂಡಿದ್ದ ಹುಲಿ, ಕಿರುಬ, ಆನೆ, ಹಂದಿ, ಮಂಗಗಳಂತಹ ಕಾಡು ಪ್ರಾಣಿಗಳೂ ಅನಿವಾರ್ಯ ಒಡನಾಡಿಗಳೇ ಆಗಿದ್ದವು.

ಇಲ್ಲಿ ನಾವು ಎಂದರೆ ನಾನು, ಅಪ್ಪ-ಅಮ್ಮ, ನನಗೆ ಚಿಕ್ಕಪ್ಪನಂತಿದ್ದ ಗೋಪಾಲಣ್ಣ, ಆತನ ಪತ್ನಿ ಗೌರತ್ತಿಗೆ ಮತ್ತು ಅಕ್ಟೋಬರ್, ಮೇ ರಜೆಗಳಲ್ಲಿ ನಮ್ಮನ್ನು ಸೇರಿಕೊಳ್ಳುತ್ತಿದ್ದ ಅಣ್ಣ-ಅಕ್ಕ. ಮುಂದೆ ಶಾಲೆಗೆ ಸೇರಿ ವಲಸೆ ಹಕ್ಕಿಯಾದ ನಾನೂ ಅಣ್ಣ-ಅಕ್ಕನವರಂತೆ ರಜಾಕಾಲದ ವಿದ್ಯಮಾನವಾದೆ. ಸುಮಾರು ಮೂವತ್ತಾರು ವರ್ಷ ಹನುಮಾಪುರದಲ್ಲಿ ಜೀವನ ಮಾಡಿದ ಅಪ್ಪ, ಈಗೊಂದು ಹತ್ತು ವರ್ಷಗಳ ಹಿಂದೆ ಅನಿವಾರ್ಯ ಕಾರಣಗಳಿಂದ ಅಲ್ಲಿಯ ಜಮೀನು ಮಾರಿ, ತನ್ನ ಹುಟ್ಟೂರಾದ ಸಿದ್ದಾಪುರ ತಾಲ್ಲೂಕಿನ ಬಾಳೇಸರಕ್ಕೆ ವಾಪಸ್ಸಾಗಿದ್ದಾನೆ. ಹನುಮಾಪುರದಿಂದ ದೂರವಾಗಿ ಎಷ್ಟೇ ಕಾಲವಾದರೂ, ಬಿಟ್ಟು ಬರುವ ಮುನ್ನ ಕಟ್ಟಿಕೊಂಡು ಬಂದ ಬುತ್ತಿ ನೆನಪುಗಳು ಇನ್ನೂ ತಾಜಾ ಇವೆ. ಬಾಲ್ಯದ ವಿವಿಧ ಹಂತಗಳಲ್ಲಿ ಅಲ್ಲಿನ ಪರಿಸರದ ಜೊತೆ ನಡೆಸಿದ ಗುದುಮುರಿಗೆ, ಗೆಳೆತನಗಳ ನೆನಪೆಲ್ಲ ಇಂದಿನ ಧಾವಂತದ ಬದುಕಿನಲ್ಲೂ ಮಳೆಗಾಲದ ಹಬ್ಬಗಳಂತೆ ಪದೇ ಪದೆ ಎದುರಾಗಿ ತನಿಸು ಉಣಿಸುತ್ತಿವೆ. ನನ್ನೊಳಗಿನ ಬರಹಗಾರ್ತಿಯನ್ನು ಕಟ್ಟಿದ ಪ್ರೋಟಿನ್‌ಗಳು ಅವು.

ಅಡವಿಯೆಂದರೆ ಅದೇನು ಹುಚ್ಚೋ... ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು ಪ್ರೀತಿಸಿದ್ದು ಅಡವಿಯನ್ನು. ಮುಗಿಲಿಗೆ ಏಣಿ ಚಾಚುವ ಸಾಗವಾನಿ, ಮತ್ತಿ, ಹೆದ್ದೇಗ, ಬೀಟೆ ಮರಗಳು, ಗಾಳಿ ಬೀಸಿದಾಗೆಲ್ಲ ಒಂಥರಾ 'ಸುಂಯ್' ಎಂದು ಸದ್ದು ಮಾಡುವ ಬಿದಿರು ಮಟ್ಟಿಗಳು, ಆ ಮಟ್ಟಿಗಳ ಬುಡದಲ್ಲಿ ಬಿದ್ದಿರುತ್ತಿದ್ದ ಪುಟ್ಟ ಪುಟ್ಟ ನವಿಲು ಗರಿಗಳು, ನುಣ್ಣನೆ ನುಣುಪಿನ ನಂದಿ- ಬಿರು ಬಿರುಸಿನ ಮತ್ತಿ ಮರಗಳು, ಕಾಡುಹಣ್ಣುಗಳನ್ನು ಎತ್ತಿ ಒಗೆದು ಕೊಕ್ಕಿನಲ್ಲಿ ಕ್ಯಾಚ್ ಮಾಡುತ್ತಿದ್ದ ಕೊಕ್ಕಾನಕ್ಕಿ (ಮಂಗಟ್ಟೆ)ಗಳು, ಚಂದದ ತೊಗಲಿನ ಕ್ಯಾಸಳಿಲು (ಮಲಬಾರ್ ಅಳಿಲು)... ಒಂದೊಂದು ಸ್ಪರ್ಶ, ಒಂದೊಂದು ಗಾನ, ಒಂದಿನಿತು ಮೌನ ಎಲ್ಲ ನನ್ನೊಳಗಿನ ಅಂತರ್ಮುಖಿ ಜೀವವನ್ನು ಬೆಚ್ಚಗೆ ತಬ್ಬಿಕೊಂಡ ಭಾವಗಳು. ನಾನು ಆಡದ ಮಾತುಗಳನ್ನು ಹಾಡದ ಹಾಡನ್ನು ಒಂದು ಸೊಲ್ಲೂ ಬಿಡದೇ ಸಂಪೂರ್ಣ ಕೇಳಿಸಿಕೊಂಡವು ನನ್ನೂರ ಕಾಡು, ಮರ, ಕೆರೆ, ಕಲ್ಲುಗಳು.

ಯಾವುದೋ ಒಂದು ಮರದ ಕೈಗೆಟಕುವ ಕೊಂಬೆ ಹತ್ತಿ ಕೂತು, ಕೈಲೊಂದು ಪುಸ್ತಕ ಹಿಡಿದು, ಚಿಲಿಪಿಲಿ ಹಕ್ಕಿಗಳ ಕೂಗು ಆಲಿಸುತ್ತಾ ಹಗಲುಗನಸಿನ ಲೋಕದಲ್ಲಿ ಕಳೆದುಹೋಗುತ್ತಿದ್ದ ಆ ಕ್ಷಣಗಳು ಆನಂದದ ತುರೀಯಾವಸ್ಥೆಯ ಕ್ಷಣಗಳೇ ಸೈ. ಅಂಥದ್ದೊಂದು ದಿವ್ಯಾನುಭೂತಿಯನ್ನು ದಿನದಿನ ದಯಪಾಲಿಸುತ್ತಿದ್ದ ಹನುಮಾಪುರದ ಪರಿಸರ, ಸುತ್ತಲಿನ ಕಾಡು ಹಾಗೂ ಅವುಗಳ ಜೊತೆಗಿದ್ದ ನನ್ನ ಒಡನಾಟದ ನೆನಪುಗಳ ಸಂಕಲನ ಇದು.” ಸುಮಾರು ೧೦೦ ಪುಟಗಳ ಈ ಕೃತಿ ಪರಿಸರದ ಮಡಿಲಲ್ಲಿ ತಮ್ಮ ಜೀವನ ಕಳೆದವರಿಗೆ ನಿಜಕ್ಕೂ ಆಪ್ತವೆನಿಸುತ್ತದೆ.