ಕಾಡು ಕಾವ್ಯ
ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾಡಿನ ವಿವಿಧ ಮುಖಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕ ಇದು. ಇಂಗ್ಲೀಷಿನಲ್ಲಿ “ವೈಲ್ಡ್ ವುಡ್-ನೋಟ್ಸ್” ಎಂಬ ಶೀರ್ಷಿಕೆ ಹೊಂದಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ಆರ್. ಆನಂದರಾಮಯ್ಯ.
ಇದರಲ್ಲಿರುವ 17 ಪುಟ್ಟ ಅಧ್ಯಾಯಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಮೊದಲ ಅಧ್ಯಾಯ “ವನ್ಯ ಆಕರ್ಷಣೆ”, ನಾವೆಲ್ಲರೂ ಮನೆಯಿಂದ ಹೊರಗೆ ವನಭೋಜನ ಅಥವಾ ರಜಾದಿನವನ್ನು ಏಕೆ ಪ್ರೀತಿಸುತ್ತೇವೆ? ಎಂಬ ಪ್ರಶ್ನೆಯಿಂದ ಶುರು. ಇದಕ್ಕೆ ಹಲವು ಉತ್ತರಗಳನ್ನು ಕೊಟ್ಟಿದ್ದಾರೆ ಲೇಖಕರು. ಗ್ರಾಮಾಂತರ ಪ್ರದೇಶಗಳಲ್ಲಿ ನಾವು ಕಾಣಬಹುದಾದ ಸಸ್ಯಗಳು, ಹೂಗಳು, ಹಣ್ಣುಗಳು, ಪ್ರಾಣಿಗಳು, ಪಕ್ಷಿಗಳು, ಕೀಟಗಳು ಇತ್ಯಾದಿಗಳನ್ನು ಪ್ರಸ್ತಾಪಿಸಿದ್ದಾರೆ.
“ಕಾಡುತನ ನಮ್ಮಲ್ಲಿ ಇನ್ನೂ ಜೀವಂತವಾಗಿದೆ” ಎಂಬ 2ನೇ ಅಧ್ಯಾಯದಲ್ಲಿ, ನಮ್ಮಲ್ಲಿನ ಅನೇಕ ಸ್ವಭಾವಸಿದ್ಧ ಹೆದರಿಕೆ ಮತ್ತು ಸುಖಾನುಭವಗಳು, ಮಾನವಕುಲದ ಆದಿ ಜೀವನದ ಅಸ್ಪಷ್ಟ ಭಾವನೆಗಳಿಂದಾಗಿ ಮೂಡಿ ಬರುತ್ತವೆ ಎಂದು ವಿವರಿಸಿದ್ದಾರೆ. ಉದಾಹರಣೆಗೆ, ಕತ್ತಲೆಯ ಹೆದರಿಕೆ; ಮಕ್ಕಳಿಗೆ ಉಯ್ಯಾಲೆ ಮತ್ತು ಮರ ಹತ್ತುವ ಬಗೆಗಿನ ಒಲವು.
ಮೂರನೇ ಅಧ್ಯಾಯ “ಸಸ್ಯಗಳಿಲ್ಲದೆ ಜೀವವಿಲ್ಲ”. ಇದರಲ್ಲಿ, ಎಲ್ಲ ಜೀವಿಗಳಿಗೂ ಆಹಾರ ಬೇಕು, ಆಹಾರವನ್ನು ಉತ್ಪಾದಿಸುವುದು ಸಸ್ಯಗಳು, ಹಾಗಾಗಿ ಸಸ್ಯಗಳಿಲ್ಲದೆ ಜೀವವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. “ಸಸ್ಯಗಳಿಲ್ಲದ ಪ್ರಪಂಚ ಒಂದು ಸತ್ತ ಪ್ರಪಂಚದಂತೆ. ಏಕೆಂದರೆ ಆಹಾರವಿಲ್ಲದಿದ್ದರೆ ಸಸ್ಯಾಹಾರಿ ಜೀವಿಗಳು ಹಸಿವಿನಿಂದ ಮೊದಲು ಸಾಯುತ್ತವೆ. ಅನಂತರ ಇವನ್ನು ತಿನ್ನುವ ಇತರ ಜೀವಿಗಳು ಸಾಯುತ್ತವೆ” ಎಂಬ ವಿವರಣೆ ನೀಡಿದ್ದಾರೆ.
ಮುಂದಿನ ಎರಡು ಅಧ್ಯಾಯಗಳು: “ಮಾನವ ಮರುಭೂಮಿಗಳನ್ನು ಸೃಷ್ಟಿಸುತ್ತಾನೆ” ಮತ್ತು “ಕಾಡು ಕಡಿತದ ಅನರ್ಥಗಳು”. “ಈ ಪುಸ್ತಕ ಬರೆಯುತ್ತಿದ್ದಾಗ, ಉಪಗ್ರಹಗಳು ತೆಗೆದ ಫೋಟೋಗಳು 1976ರಲ್ಲೇ (ಸುಮಾರು 50 ವರುಷಗಳ ಮುಂಚೆ) ದಕ್ಷಿಣ ಅಮೆರಿಕಾದ ವಿಶಾಲ ಅಮೆಜಾನ್ ಅರಣ್ಯಗಳಲ್ಲಿ ಒಂದು ಲಕ್ಷ ಚದರ ಕಿ.ಮೀ. ಕಾಡನ್ನು ಕೈಗಾರಿಕೆ ಮತ್ತು ದನ ಸಾಕಣೆ ಕೇಂದ್ರಗಳ ಸ್ಥಾಪನೆಗಾಗಿ ಕಡಿದು ಹಾಕಿದ್ದನ್ನು ತೋರಿಸಿದವು. ಇಂತಹ ನಿರ್ಲಕ್ಷ್ಯದ ಕಾಡುಕಡಿತ ಅತಿ ಶೀಘ್ರದಲ್ಲಿ ನಿಲ್ಲದಿದ್ದರೆ, ಇನ್ನು 35 ವರುಷಗಳಲ್ಲಿ 50 ಲಕ್ಷ ಚದರ ಕಿ.ಮೀ. ದಟ್ಟ ಕಾಡು ಮರುಭೂಮಿಯಾಗಲಿದೆ ಎಂದು ವಿಜ್ಞಾನಿಗಳು ಭಯಪಡುತ್ತಾರೆ” ಎಂಬುದಾಗಿ ಲೇಖಕರು ಎಚ್ಚರಿಸಿದ್ದಾರೆ. ಆ ಭಯ ಈಗ ನಿಜವಾಗಿದೆ ಎಂಬುದನ್ನು ನಾವು ಕಾಣುತ್ತಿದ್ದೇವೆ.
“ಪ್ರಪಂಚದ ಭಾರೀ ಮತ್ತು ಪುರಾತನ ಜೀವಿಗಳ” ಬಗೆಗಿನ 6ನೇ ಅಧ್ಯಾಯದಲ್ಲಿ ಪ್ರಧಾನವಾಗಿ ಭೂಮಿಯ ದೈತ್ಯ ಮರಗಳ ಮಾಹಿತಿ ಲಭ್ಯ. ನಂತರದ ಅಧ್ಯಾಯದಲ್ಲಿದೆ, “ವನ್ಯ ಜೀವಿಗಳ ಬಗ್ಗೆ ತಪ್ಪು ಅಭಿಪ್ರಾಯಗಳ” ಮಾಹಿತಿ. ಉದಾಹರಣೆ: ಮುಳ್ಳು ಹಂದಿಗಳು ತಮ್ಮ ಮುಳ್ಳುಗರಿಗಳನ್ನು ಶತ್ರುಗಳ ಮೇಲೆ ಬಾಣಗಳಂತೆ ಹಾರಿಸುತ್ತವೆ ಎಂಬುದು ತಪ್ಪು ಅಭಿಪ್ರಾಯ. ಅವು ಹಾಗೆ ಮಾಡೋದಿಲ್ಲ ಮತ್ತು ಮಾಡಲಾರವು. ಅವು ಮಾಡುವುದೇನೆಂದರೆ, ತಮ್ಮ ಮುಳ್ಳುಗಳನ್ನು ನಿಮಿರಿಸಿ, ಅವನ್ನು ಶತ್ರುವಿನ ದೇಹದಲ್ಲಿ ಆಳವಾಗಿ ಹೊಕ್ಕಿಸಲು ಹಿಂದಕ್ಕೆ ಓಡುವುದು! ನಂತರದ ಅಧ್ಯಾಯ “ಹಾವುಗಳು ನಮ್ಮ ಶತ್ರುಗಳಲ್ಲ”. ಹಲವಾರು ನೈಜ ಘಟನೆಗಳನ್ನು ಉದಾಹರಿಸಿ, ಈ ಸಂಗತಿಯನ್ನು ವಿವರಿಸಿದ್ದಾರೆ.
ಮುಂದಿನ ಅಧ್ಯಾಯದಲ್ಲಿ ಮಾನವ ಅಪಾಯಕರ ಪ್ರಾಣಿಗಳಿಗಿಂತಲೂ ಮಹಾ ಕ್ರೂರಿ ಎಂಬ ಸತ್ಯವನ್ನು ಮನಮುಟ್ಟುವಂತೆ ತಿಳಿಸಿದ್ದಾರೆ ಲೇಖಕರು. ಇದಕ್ಕೆ ಹಲವು ಪ್ರಾಣಿ ಮತ್ತು ಸಸ್ಯ ಪ್ರಬೇಧಗಳು ನಿರ್ನಾಮ ಆಗಿರುವುದೇ ಪುರಾವೆ.
ಹುಲಿಗಳು ಮನುಷ್ಯನ ಶತ್ರುಗಳಲ್ಲ ಮತ್ತು ಹುಲಿಗಳು ಕೊಲ್ಲುವುದು ಬದುಕುವುದಕ್ಕಾಗಿ - ಇವು ಮುಂದಿನ ಎರಡು ಅಧ್ಯಾಯಗಳಲ್ಲಿರುವ ಮಾಹಿತಿ. ಇದಕ್ಕೆ ಪೂರಕವಾಗಿ ಹಲವು ಘಟನೆಗಳನ್ನು ಪ್ರಸ್ತಾಪಿಸಿದ್ದಾರೆ.
ಅಧ್ಯಾಯ 14 “ಭೂತಾಕಾರದ ಹುಲ್ಲು - ಬಿದಿರು” ಬಗ್ಗೆ ತಿಳಿಸಿದರೆ, ನಂತರದ ಅಧ್ಯಾಯದಲ್ಲಿ ಮನೆಗುಬ್ಬಿಯ ಬಗ್ಗೆ ಕುತೂಹಲಕರ ಮಾಹಿತಿಗಳಿವೆ. ಕೊನೆಯ ಎರಡು ಅಧ್ಯಾಯಗಳು “ಪ್ರಾಣಿಗಳನ್ನು ಪಳಗಿಸುವುದು” ಮತ್ತು “ಮುದ್ದಿನ ಪ್ರಾಣಿಗಳಾಗಿ ವನ್ಯ ಜೀವಿಗಳು”.
“ಕಾಡು ಜನಗಳ ಮಾನವೀಯತೆ” ಅಧ್ಯಾಯದಲ್ಲಿ ಲೇಖಕರು ನಮ್ಮ ಕಣ್ಣು ತೆರೆಸುವ ಘಟನೆಯೊಂದನ್ನು ದಾಖಲಿಸಿದ್ದಾರೆ. ಅವರೊಮ್ಮೆ ಕಾಡಿನೊಳಗೆ ಸುತ್ತಾಡಿದ್ದಾಗ, ಒಬ್ಬ ಹಳ್ಳಿಯವನು ಬಹಳ ಸಹಾಯ ಮಾಡಿದ್ದ ಮತ್ತು ಸ್ನೇಹಭಾವದಿಂದಿದ್ದ. ಅಲ್ಲಿಂದ ಹೊರಡುವಾಗ, ಲೇಖಕರು ಅವನಿಗೆ ಸ್ವಲ್ಪ ಹಣ ನೀಡಲು ಮುಂದಾಗುತ್ತಾರೆ. ಆಗ ಆ ಸರಳ ಮನುಷ್ಯ ನೊಂದುಕೊಂಡು ಹೇಳುತ್ತಾನೆ: “ನಾನು ನಿಮಗೆ ನನ್ನ ಪ್ರೀತಿಯನ್ನು ಕೊಟ್ಟೆ ಮತ್ತು ಅದಕ್ಕೆ ಬದಲಾಗಿ ನನಗೆ ಬೇಕಾದದ್ದು ನಿಮ್ಮ ಪ್ರೀತಿ ಮಾತ್ರ. ನಾವು ಜೊತೆಯಾಗಿ ನಡೆಯುತ್ತಿದ್ದಾಗ ನಮ್ಮ ಸುಖದುಃಖಗಳನ್ನು ಹಂಚಿಕೊಂಡೆವು. ಅದು ಅಷ್ಟಕ್ಕೇ ನಿಲ್ಲಬೇಕು. ನಿಮ್ಮಿಂದ ಹಣ ತೆಗೆದುಕೊಂಡರೆ ನಾನು ಮರ್ಯಾದಸ್ಥನಾಗುವುದಿಲ್ಲ.”