ಕಾಡು ಜೀವಿಗಳ ಉಳಿವಿಗಾಗಿ ವನ್ಯಜೀವಿ ದಿನ

ಕಾಡು ಜೀವಿಗಳ ಉಳಿವಿಗಾಗಿ ವನ್ಯಜೀವಿ ದಿನ

ಕಾಡು ಅಳಿಯುತ್ತಿದೆ ಕಾಂಕ್ರೀಟ್ ಕಾಡು ಬೆಳೆಯುತ್ತಿದೆ. ಇದು ನಮ್ಮ ಸದ್ಯದ ಸ್ಥಿತಿ. ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಅರಸುತ್ತಾ ನಾಡಿನತ್ತ ಬರುತ್ತಿವೆ. ಕಾಡು ಪ್ರಾಣಿಗಳ ವಾಸ ಸ್ಥಾನವನ್ನು ನಾವು ಆಧುನಿಕತೆ ಮತ್ತು ನಗರೀಕರಣದ ನೆಪಕ್ಕಾಗಿ ಅವುಗಳಿಂದ ಕಸಿದುಕೊಂಡಿದ್ದೇವೆ. ಕಾಡು ಕಮ್ಮಿಯಾಗಿದೆ, ಪ್ರಾಣಿಗಳಿಗೆ ಆಹಾರ ಸಾಕಾಗುತ್ತಿಲ್ಲ. ಮತ್ತೇನು ಮಾಡಬೇಕು? ಅನಿವಾರ್ಯವಾಗಿ ಹುಲಿ, ಚಿರತೆಯಂತಹ ಕ್ರೂರ ಮೃಗಗಳು ನಾಡಿನತ್ತ ಬರುತ್ತಿವೆ. ಮನುಷ್ಯರು ಸಾಕಿದ ನಾಯಿ, ಹಸು, ಕೋಳಿಗಳಂತಹ ಜೀವಿಗಳು ಅವುಗಳಿಗೆ ಬಲಿಯಾಗುತ್ತಿವೆ. ಈಗೀಗ ಮಾನವರೂ ಈ ಮೃಗಗಳಿಗೆ ಬಲಿಯಾಗುತ್ತಿದ್ದಾರೆ. ಹುಲಿ, ಚಿರತೆಗಳು ಮೊದಲು ದಟ್ಟ ಕಾನನದಲ್ಲಿ ಸುಖವಾಗಿದ್ದವು. ಅವುಗಳಿಗೆ ಅಲ್ಲಿ ನೀರು ಮತ್ತು ಆಹಾರ ಯಥೇಚ್ಚವಾಗಿತ್ತು. ಕಾಡು ಕಡಿದು ನಾವು ಅವುಗಳ ವಾಸ ಸ್ಥಾನವನ್ನು ಹಾಳು ಮಾಡಿದೆವು.

ಈಗ ನಾವು ಪ್ರತೀ ದಿನ ಪತ್ರಿಕೆಗಳಲ್ಲಿ 'ನಾಡಿಗೆ ಬಂದ ಚಿರತೆ', ‘ದನವನ್ನು ಎಳೆದೊಯ್ದ ಹುಲಿ', ಗ್ರಾಮಸ್ಥನ ಮೇಲೆ ಆಕ್ರಮಣ ಮಾಡಿದ ಪ್ರಾಣಿ' ಹೀಗೆ ಸುದ್ದಿಗಳನ್ನು ಓದುತ್ತಿದ್ದೇವೆ. ಮೊದಲೇ ಹುಲಿ, ಚಿರತೆಗಳ ಸಂಖ್ಯೆ ದಿನೇ ದಿನೇ ಕಮ್ಮಿ ಆಗುತ್ತಿದೆ. ನಾವು ಈ ರೀತಿಯಾಗಿ ಕಾಡಿನ ನಾಶ ಮಾಡುತ್ತಾ ಹೋದರೆ ಮುಂದೊಂದು ದಿನ ಈ ಪ್ರಾಣಿಗಳನ್ನು ಚಿತ್ರದಲ್ಲಿ ನೋಡ ಬೇಕಾಗುವುದೋ ಏನೋ?

ವನ್ಯ ಜೀವಿಗಳ ಉಳಿವಿಗೆ ಜಾಗ್ರತಿ ಮೂಡಿಸಲು ಮಾರ್ಚ್ ೩ನ್ನು ‘ವಿಶ್ವ ವನ್ಯಜೀವಿ ದಿನ' (World Wildlife Day) ಎಂದು ಘೋಷಿಸಲಾಗಿದೆ. ಡಿಸೆಂಬರ್ ೨೦, ೨೦೧೩ರಲ್ಲಿ ವಿಶ್ವ ಸಂಸ್ಥ್ರೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಉಳಿಸಿ ಬೆಳೆಸಲು, ಜಾಗೃತಿ ಮೂಡಿಸಲು ವಿಶ್ವ ವನ್ಯಜೀವಿ ದಿನ ಎಂದು ಮಾರ್ಚ್ ೩ ನ್ನು ಘೋಷಿಸಲಾಯಿತು. ೨೦೨೧ನೇ ಸಾಲಿನ ಘೋಷ ವಾಕ್ಯವಾದ ‘ಅರಣ್ಯ ಮತ್ತು ಜೀವನೋಪಾಯ: ಜನರ ಹಾಗೂ ಭೂಮಿಯ ಉಳಿಯುವಿಕೆ’ ಇದರಂತೆ ಅರಣ್ಯ ಉಳಿದರೆ ಭೂಮಿ ಉಳಿಯುತ್ತದೆ. ಭೂಮಿ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ. ಕಾಡಿನಲ್ಲಿ ಪ್ರಾಣಿಗಳ ಕೊರತೆಯಾದರೆ ಸಹಜವಾಗಿಯೇ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ. ಕಾಡುಗಳ ನಾಶಕ್ಕೂ ಪರ್ಯಾಯವಾಗಿ ಕಾರಣವಾಗುತ್ತದೆ. ಇದರಿಂದ ಮಳೆ ಕಮ್ಮಿಯಾಗುತ್ತದೆ. ಬೆಳೆಯ ಇಳುವರಿ ಕುಂಠಿತವಾಗುತ್ತದೆ. ನಿಧಾನವಾಗಿ ಇದರ ಕಾವು ನಮಗೆ ತಟ್ಟುತ್ತದೆ. ನಮಗೂ ಆಹಾರದ ಕೊರತೆಯುಂಟಾಗುತ್ತದೆ. ಬೆಲೆಗಳು ಹೆಚ್ಚಾಗುತ್ತವೆ. ಜೀವನ ದುರ್ಭರವಾಗುತ್ತದೆ. ಇವೆಲ್ಲವನ್ನೂ ಸರಿತೂಗಿಸಲು ವನ್ಯಜೀವಿಗಳ ಅಗತ್ಯ ಬಹಳವಿದೆ. 

ವನ್ಯಜೀವಿಗಳ ಬಗ್ಗೆ ಆಸಕ್ತಿ ಇರುವವರು ಮತ್ತು ಛಾಯಾಗ್ರಹಣದ ಹವ್ಯಾಸ ಹೊಂದಿರುವವರು ವನ್ಯಜೀವಿ ಛಾಯಗ್ರಾಹಕರಾಗಬಹುದು. ಅಪರೂಪದಲ್ಲಿ ಅಪರೂಪವಾದ ಪ್ರಾಣಿಗಳು, ಪಕ್ಷಿಗಳ ಚಿತ್ರಗಳನ್ನು ತೆಗೆದು ಅವುಗಳ ಬಗ್ಗೆ ಸಂಶೋಧನೆ ನಡೆಸಬಹುದು. ಮುಖ್ಯವಾಗಿ ಈ ರೀತಿಯ ಛಾಯಾಗ್ರಹಕರಿಗೆ ಬೇಕಾಗುವುದು ತಾಳ್ಮೆ. ಏಕೆಂದರೆ ಯಾವುದೇ ಕಾಡು ಮೃಗ ನಿಮಗೆ ‘ಫೋಸ್' ಕೊಡುವುದಕ್ಕಾಗಿಯೇ ಕಾದಿರುವುದಿಲ್ಲ. ನಾವು ಅದರ ಏಕಾಗ್ರತೆಗೆ ಭಂಗ ಬಾರದ ರೀತಿಯಲ್ಲಿ, ತೊಂದರೆಯಾಗದಂತೆ ದಿನಗಟ್ಟಲೆ ಕಾದು ಚಿತ್ರ ತೆಗೆಯಬೇಕಾಗುತ್ತದೆ. ನಿಮ್ಮ ಅದೃಷ್ಟ ಖುಲಾಯಿಸಿದರೆ ನಿಮ್ಮ ಒಂದು ಚಿತ್ರ ನಿಮಗೆ ಲಕ್ಷಾಂತರ ಹಣವನ್ನೂ ಗಳಿಸಿಕೊಡಬಹುದು. ಅಳಿದು ಹೋಗಿದೆ ಎಂದೇ ನಂಬಿರುವ ಹಲವಾರು ಜೀವಿಗಳು ಕಾಡಿನ ಯಾವುದೋ ಮೂಲೆಯಲ್ಲಿ ಇನ್ನೂ ಬದುಕಿರಬಹುದು. ಈ ಜೀವಿಯ ಚಿತ್ರವನ್ನು ನೀವು ಕ್ಲಿಕ್ಕಿಸಿದರೆ ನಿಮ್ಮ ಜೇಬೂ ತುಂಬಬಹುದು,  ಜೊತೆಗೆ ಆ ಪ್ರಾಣಿಯ ಸಂರಕ್ಷಣೆಯ ಕುರಿತು ಇನ್ನಷ್ಟು ಯೋಜನೆಗಳನ್ನೂ ಹಾಕಿ ಕೊಳ್ಳಬಹುದು.

ಬಹಳ ವರ್ಷಗಳ ಹಿಂದೆ ಉತ್ತರ ಕನ್ನಡದ ಕಾಡುಗಳಲ್ಲಿ ‘ಹಾರ್ನ್ ಬಿಲ್' (ಮಂಗಟ್ಟೆ ಹಕ್ಕಿಗಳು) ಗಳು ಯಥೇಚ್ಚವಾಗಿದ್ದುವು. ದೊಡ್ಡದಾದ ಕೊಕ್ಕನ್ನು ಹೊಂದಿರುವ, ಆಕರ್ಷಕ ವರ್ಣದ ಅಪರೂಪದ ಹಕ್ಕಿ ಇದು. ಕಾಲ ಕ್ರಮೇಣ ಇದರ ಸಂತತಿ ನಶಿಸಲು ಪ್ರಾರಂಭವಾಯಿತು. ಇದಕ್ಕೆ ಪಕ್ಷಿ ವಿಜ್ಞಾನಿಗಳು ಹಲವಾರು ಕಾರಣಗಳನ್ನು ಕೊಡುತ್ತಾರೆ. ಮುಖ್ಯವಾದ ಕಾರಣ ಆಹಾರ. ಕಾಡಿನಲ್ಲಿ ಹಣ್ಣು ಕೊಡುವ ಮರಗಳೇ ಕಮ್ಮಿ ಆಗಿವೆ. ಈ ಕಾರಣದಿಂದ ಹಕ್ಕಿಗಳು ದೂರ ದೂರ ಆಹಾರ ಅರಸಿ ಹೋಗಬೇಕಾದ ಪ್ರಮೇಯ ಬಂದಿದೆ. ದೂರ ಹೋಗಿ ಆಹಾರ ಅರಸಿ ಮತ್ತೆ ಮರಳಿ ಅದರ ಗೂಡಿಗೆ ತೆರಳಲು ಸಮಸ್ಯೆಗಳು ಆಗಬಹುದು. ಈ ಮಂಗಟ್ಟೆ ಹಕ್ಕಿಗಳು ಒಮ್ಮೆ ಸಂಗಾತಿಯ ಜೊತೆಯಾದರೆ ಸಾಯುವವರೆಗೆ ಒಟ್ಟಿಗೇ ಇರುತ್ತದೆ. ಹೆಣ್ಣು ಮೊಟ್ಟೆ ಇಟ್ಟು ಕಾವುಕೊಡಲು ಕುಳಿತರೆ ಗಂಡು ಹಕ್ಕಿ ಆಹಾರದ ಜವಾಬ್ದಾರಿ ಹೊತ್ತುಕೊಳ್ಳುತ್ತದೆ. ಒಂದೊಮ್ಮೆ ಆಹಾರ ಅರಸಿ ಹೋದ ಹಕ್ಕಿ ದಾರಿ ತಪ್ಪಿದರೆ, ಏನಾದರೂ ಅವಘಡ ಸಂಭವಿಸಿದರೆ ಗೂಡಿನಲ್ಲಿರುವ ಹೆಣ್ಣು ಹಕ್ಕಿಯೂ ಹಸಿವಿನಿಂದ ಸತ್ತು ಹೋಗುತ್ತದೆ. ಹೀಗಾಗಿ ಈ ಹಕ್ಕಿಗಳ ಸಂರಕ್ಷಣೆ ಅತೀ ಅಗತ್ಯ. ಇದರ ಬಗ್ಗೆ ಹಲವಾರು ಪಕ್ಷಿ ಪ್ರಿಯರು ದನಿ ಎತ್ತಿದ್ದರು. ಆ ಹಕ್ಕಿಗಳ ಸಂರಕ್ಷಣೆಗಾಗಿ ಈಗ ಸರಕಾರದ ಮಟ್ಟದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿ ಇದೆ. 

ಇದೇ ರೀತಿ ಕಳೆದ ಜುಲೈ ತಿಂಗಳಿನಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ಉದಯೋನ್ಮುಖ ಛಾಯಗ್ರಾಹಕನೊಬ್ಬ ಕ್ಲಿಕ್ಕಿಸಿದ ಕಪ್ಪು ಚಿರತೆಯ ಚಿತ್ರವೊಂದು ಜಾಲತಾಣದಲ್ಲಿ ಬಹಳ ಸುದ್ದಿ ಮಾಡಿತ್ತು. ಕಪ್ಪು ಚಿರತೆಗಳು ಇರುವುದು ಬಹಳ ಅಪರೂಪ. ಮಿರಿ ಮಿರಿ ಹೊಳೆಯುವ ಕಪ್ಪು ಮೈಬಣ್ಣ, ತೀಕ್ಷ್ಣವಾದ ಹೊಳೆಯುವ ಕಣ್ಣುಗಳು ನೋಡುವುದೇ ಒಂದು ಸೋಜಿಗ. ಈ ಚಿತ್ರವನ್ನು ತೆಗೆದ ಛಾಯಾಗ್ರಹಕ ಶಾಜ ಜಂಗ್ (Shaaz Jung) ದಿನ ಬೆಳಗಾಗುವುದರಲ್ಲಿ ಪ್ರಸಿದ್ಧನಾದ. ವಿದೇಶದಲ್ಲಿ ಉನ್ನತ ವ್ಯಾಸಾಂಗ ಮಾಡಿ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶವಿದ್ದರೂ ಶಾಜ ಆರಿಸಿಕೊಂಡದ್ದು ವನ್ಯಜೀವಿ ಛಾಯಾಗ್ರಹಣ. ಈ ಕಪ್ಪು ಚಿರತೆಯ ಚಿತ್ರ ಅವರಿಗೇನೂ ಸುಲಭದಲ್ಲಿ ಸಿಗಲಿಲ್ಲ. ಅದಕ್ಕಾಗಿ ಶಾಜ ಪ್ರತೀ ದಿನ ೧೨ ಗಂಟೆಯಂತೆ ನಾಲ್ಕು ವರ್ಷ ಕಾದಿದ್ದಾರೆ. ಅಂತರ್ಜಾಲ ತಾಣದಲ್ಲಿ ಇವರು ತೆಗೆದ ಕಪ್ಪು ಚಿರತೆಯ ವಿವಿಧ ಭಂಗಿಯ ಹಲವಾರು ಚಿತ್ರಗಳಿವೆ. ವನ್ಯಜೀವಿ ಛಾಯಾಗ್ರಹಣ ಒಂದು ಹವ್ಯಾಸವಾದರೂ ಇದರಿಂದ ನಿಮ್ಮ ಜೇಬೂ ಭರ್ತಿಯಾಗುವ ಸಾಧ್ಯತೆ ಇದೆ. ಪ್ರಾಣಿಗಳಿಂದ ಅಪಾಯದ ಸಾಧ್ಯತೆಯೂ ಇರುತ್ತದೆ.

ಈ ಅಪರೂಪದ ಕಪ್ಪು ಚಿರತೆಯ ತಳಿಯನ್ನು ಉಳಿಸಿ, ಇನ್ನಷ್ಟು ಬೆಳೆಸುವ ಕಾರ್ಯದಲ್ಲಿ ವನ್ಯ ಜೀವಿ ಸಂಶೋಧಕರು ಈಗ ನಿರತರಾಗಿದ್ದಾರೆ. ಹೀಗೆ ನೀವು ಮಾಡುವ ಕೆಲಸಗಳು ವನ್ಯಜೀವಿಯನ್ನು ಉಳಿಸುವ ನಿಟ್ಟಿನಲ್ಲಿ ಸಹಕಾರಿಯಾದರೆ ನೀವು ಈ ಭೂಮಿಗೆ ನೀಡುವ ದೊಡ್ದ ಕೊಡುಗೆ ಅದು. ನಾಡಿಗೆ ಬಂದ ಪ್ರಾಣಿಗಳು ನಮ್ಮವರ ಜೀವ ಹಾನಿ ಮಾಡುವಾಗ ನಮಗೆ ನೋವು, ಆಕ್ರೋಷ ಉಂಟಾಗುವುದು ಸಹಜ. ಆದರೆ ಆಹಾರ ಹಾಗೂ ನೆಲೆ ಇಲ್ಲದ ಪ್ರಾಣಿ ಮತ್ತೆ ಹೋಗುವುದಾದರೂ ಎಲ್ಲಿಗೆ? ಯೋಚಿಸಬೇಕಾದ ಸಂಗತಿ ಅಲ್ಲವೇ? ಈ ವಿಶ್ವ ವನ್ಯಜೀವಿಯ ದಿನದಂದು ನಾವು ಅರಣ್ಯ ಉಳಿಸುವ ಹಾಗೂ ಅದರಿಂದ ವನ್ಯಜೀವಿಗಳನ್ನು ಬೆಳೆಸುವ ಬಗ್ಗೆ ಯೋಚಿಸಬೇಕಾಗಿದೆ.

ಚಿತ್ರದಲ್ಲಿ ಶಾಜ ಜಂಗ್ ಹಾಗೂ ಅವರು ಕ್ಲಿಕ್ಕಿಸಿದ ಕಪ್ಪು ಚಿರತೆಯ ಚಿತ್ರ.

ಕೃಪೆ: ಅಂತರ್ಜಾಲ ತಾಣ