ಕಾಡು ತಿಳಿಸಿದ ಸತ್ಯಗಳು
‘ಕಾಡು ತಿಳಿಸಿದ ಸತ್ಯಗಳು' ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೨ನೇ ಭಾಗ. ಇದೊಂದು ವೈಚಾರಿಕ ಕಾದಂಬರಿ. ಮಲೆನಾಡಿನ ಸೊಗಸಾದ ಚಿತ್ರವನ್ನು ಹೊಂದಿರುವ ಮುಖಪುಟವನ್ನು ಹೊದ್ದಿಕೊಂಡಿರುವ ಈ ಪುಸ್ತಕ ಬಹಳ ರೋಚಕವಾಗಿದೆ.
ಗಿರಿಮನೆ ಶ್ಯಾಮರಾವ್ ಅವರೇ ತಮ್ಮ ಬೆನ್ನುಡಿಯಲ್ಲಿ ಕಾದಂಬರಿಯ ಕುರಿತು “ ಈ ಜಗತ್ತು ಅಧ್ಬುತ ! ವೈವಿಧ್ಯಮಯ ! ವಿಸ್ಮಯಗಳ ಆಗರ! ಜೊತೆಗೇ ನಿಗೂಢ! ದಿನನಿತ್ಯದ ಬದುಕಿಗಾಗಿ ಎಲ್ಲರೂ ಓಡಾಡುತ್ತಿರುತ್ತಾರೆ. ಕೆಲವೇ ಕೆಲವರು ಹಾಗೆ ಓಡುವವರನ್ನು ನೋಡುತ್ತಿರುತ್ತಾರೆ ! ಓಡುವಾಗ ಈ ಜಗತ್ತು ಮತ್ತು ಇಲ್ಲಿರುವ ಜೀವರಾಶಿಗಳ ಅದ್ಭುತ ವ್ಯವಹಾರಗಳ ಕಡೆ ಗಮನವೇ ಹರಿಯುವುದಿಲ್ಲ. ನಮ್ಮರಿವಿಗೆ ಬಂದಂತೆ ಅದನ್ನು ತಿಳಿದುಕೊಳ್ಳುವ ಶಕ್ತಿ ಇರುವುದು ಮನುಷ್ಯ ಜೀವಿಗಳಿಗೆ ಮಾತ್ರ ! ಗುಡ್ಡ, ಬೆಟ್ಟ, ನದಿ, ಸಮುದ್ರ, ಸೂರ್ಯ, ಚಂದ್ರ, ಗಾಳಿ, ನೀರು, ಬೆಂಕಿ ಇವುಗಳೊಳಗಿನ ಸಂಬಂಧ ! ಅವೆಲ್ಲವೂ ಒಂದು ವ್ಯವಸ್ಥೆಯಲ್ಲಿ ನಡೆಯುವ ರೀತಿ ; ಈ ಜಗತ್ತಿನ ನಿಯಮಗಳು ಇತ್ಯಾದಿಗಳ ಬಗ್ಗೆ ತಿಳಿಯುತ್ತಾ ಹೋದಂತೆ ಕಲ್ಪಿಸಲಾಗದ ಅದ್ಭುತ ಲೋಕ ನಮ್ಮೆದುರು ತೆರೆದುಕೊಳ್ಳುತ್ತದೆ. ಅದೆಷ್ಟು ಬಗೆಯ ಜೀವಿಗಳು? ಅಣುವಿನಿಂದ ಸೃಷ್ಟಿಯಾದ ಗ್ರಹ, ನಕ್ಷತ್ರ ರಾಶಿಗಳು? ಇವೆಲ್ಲದರ ಕಡೆ ಗಮನ ಹೋದಾಗಲೇ ಅದರ ಹಿಂದಿರುವ ನಿಜವಾದ ಸೃಷ್ಟಿಕರ್ತನ ಕಲ್ಪನೆ ಬರುವುದು ! ಅದಾಗದಿದ್ದರೆ ನಾನಾ ದೇವರ ಮೇಲೆ ಕಟ್ಟಿದ ನಾನಾ ಕತೆಗಳನ್ನು ಕೇಳಿ, ಮೂಢನಂಬಿಕೆಗೆ ಒಳಗಾಗಿ, ಸಂಕಷ್ಟಗಳಿಗೆ ತುತ್ತಾಗಿ ‘ನಾವು ಭ್ರಮಿಸಿದ್ದೇ ಸತ್ಯ' ಎಂದುಕೊಂಡು ಅಲ್ಲೇ ಗಿರಕಿ ಹೊಡೆಯುತ್ತೇವೆ. ವಿಚಾರವಂತಿಕೆಯ ಉತ್ತುಂಗಕ್ಕೇರಿದ ದಂಪತಿ ಹಾಗೆ ಬದುಕಿಗಾಗಿ ಓಡುವವರನ್ನು ನೋಡುತ್ತಾ ತಮ್ಮ ಪ್ರಶ್ನೆಗಳಿಗೆ ಸರಿ ಉತ್ತರ ಕಂಡುಕೊಳ್ಳುವುದೇ ಈ ಕಾದಂಬರಿಯ ಕಥಾವಸ್ತು" ಎಂದಿದ್ದಾರೆ.
“ಈ ಕೃತಿಯಲ್ಲಿ ನಮ್ಮ ಅನೇಕ ಮೂಢನಂಬಿಕೆ ಮತ್ತು ಜಗತ್ತಿನ ನಿಯಮಗಳ ಅನಾವರಣ ಮಾಡುವ ಪ್ರಯತ್ನ ಇದೆ. ಏಕೆಂದರೆ ಅವೆರಡೂ ಒಂದಕ್ಕೊಂದು ವಿರುದ್ಧವಾಗಿಯೇ ಇರುತ್ತದೆ. ಒಂದು ದುಃಖಕ್ಕೆ ದಾರಿಯಾದರೆ ಮತ್ತೊಂದು ಸುಖಕ್ಕೆ ದಾರಿ. ಒಂದನ್ನು ಅರಿಯದಿದ್ದರೆ ಮತ್ತೊಂದನ್ನು ಪೂರ್ತಿಯಾಗಿ ತಿಳಿಯಲಾಗುವುದಿಲ್ಲ. ಹಾಗೆ ಕಾರಣ ಹುಡುಕುವ ಶ್ರೀವತ್ಸ ಮತ್ತು ವಸುಧ ಎಂಬ ಕಾಲ್ಪನಿಕ ಚಿಂತನಶೀಲ ಪಾತ್ರಗಳ ಮೂಲಕ ಓದುಗರನ್ನು ಪ್ರಶಾಂತವಾದ ವಾತಾವರಣಕ್ಕೆ ಕರೆದೊಯ್ದು ಪ್ರಕೃತಿ ಹಾಗೂ ಜೀವ ಜಗತ್ತು ಮತ್ತು ಮೌಢ್ಯಗಳ ವಾಸ್ತವ ಚಿತ್ರಣ ಕೊಡುವ ಪ್ರಯತ್ನವೇ ಈ ಕಾದಂಬರಿ. ವಿದ್ಯೆ, ವಿಚಾರವಂತಿಕೆಯ ಉತ್ತುಂಗಕ್ಕೇರಿದ ದಂಪತಿ ತಮ್ಮ ಪ್ರಶ್ನೆಗಳಿಗೆ ಯಾವ ರೀತಿ ಸರಿ ಉತ್ತರ ಕಂಡುಕೊಳ್ಳುತ್ತಾರೆ ಎಂಬ ಸೂಕ್ಷ್ಮವೇ ಇದರ ಕಥಾವಸ್ತು. ಹಾಗಾಗಿ ಇದು ಬರೀ ಕಾದಂಬರಿ ಅಲ್ಲ. ಕಲ್ಪನೆಯ ಪಾತ್ರಗಳ ಜೊತೆಗೆ ವಿಚಾರಗಳೇ ಇದರಲ್ಲಿ ಜಾಸ್ತಿ. ಕೋಟಿ ಕೋಟಿ ವರ್ಷಗಳಲ್ಲಿ ಆಯಾ ಕಾಲಘಟ್ಟ, ಅವರವರ ಮಟ್ಟಕ್ಕೆ ತಕ್ಕಂತೆ ಅದೆಷ್ಟೋ ಜನ ಸತ್ಯಾನ್ವೇಷಣೆಯ ಹಾದಿ ತುಳಿದು ಮರೆಯಾಗಿ ಹೋಗಿದ್ದಾರೆ. ನಮಗೆ ಸಿಕ್ಕಿದ ಜ್ಞಾನದ ಹಿಂದೆ ಅವರ ಪರಿಶ್ರಮ ಇದೆ. ಮುಂದಿನವರಿಗೆ ನಮ್ಮಿಂದಲೂ ಒಂದಿಷ್ಟು ಸಿಗಬಹುದು” ಎನ್ನುತ್ತಾರೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು.
ಸುಮಾರು ೨೨೦ ಪುಟಗಳ ಈ ಕಾದಂಬರಿಯನ್ನು ಓದುತ್ತಾ ಓದುತ್ತಾ ನೀವು ಮಲೆನಾಡಿನ ಸುಂದರ ಆದರೆ ನಿಗೂಢ ಪರಿಸರದಲ್ಲಿ ಕಳೆದುಹೋಗುವ ಸಾಧ್ಯತೆ ಇದೆ.