ಕಾಡು ನಾಶ ಮತ್ತು ಕೊರೊನಾ-೧೯ ವೈರಸ್ ಧಾಳಿ
ನಾವು ಕಾಡುಗಳನ್ನು ಹೇಗೆ ನಾಶ ಮಾಡುತ್ತಿದ್ದೇವೆ? ಈ ಬರಹದ ಜೊತೆಗಿರುವ ಫೋಟೋ ನೋಡಿದರೆ ನಿಮಗೆ ಅಂದಾಜಾದೀತು. ಇದು, ಅಂದೊಮ್ಮೆ ಬ್ರೆಜಿಲಿನಲ್ಲಿ ದಟ್ಟ ಅರಣ್ಯವಾಗಿದ್ದ ಭೂ ಪ್ರದೇಶ. ಈಗ ಹೇಗಾಗಿದೆ ನೋಡಿ! ಅಲ್ಲಿ ಈಗ ಒಂದೇ ಒಂದು ಮರ ಉಳಿದಿದೆ!
ಇಡೀ ಜಗತ್ತಿಗೆ ಬೇಕಾದ ಆಮ್ಲಜನಕದ ಶೇ.೧೮ರಷ್ಟು ಪೂರೈಸುತ್ತಿರುವುದು ಅಮೆಜಾನ್ ಅರಣ್ಯ. ಅದರ ಬಹುಪಾಲು ಬ್ರೆಜಿಲ್ ದೇಶದಲ್ಲಿದೆ. ಆದರೆ ಅಲ್ಲೀಗ ಅರಣ್ಯ ನಾಶ ನಿರಂತರ. ೨೦೧೯ರಲ್ಲಿ ಅಲ್ಲಿ ಲಕ್ಷಗಟ್ಟಲೆ ಹೆಕ್ಟೇರ್ ಅರಣ್ಯ ಬೆಂಕಿಗೆ ಬಲಿಯಾದಾಗ, ಬ್ರೆಜಿಲಿನ ಸರಕಾರ ಕ್ಯಾರೇ ಅನ್ನಲಿಲ್ಲ. ನಿಜ ಹೇಳಬೇಕೆಂದರೆ, ಅಮೆಜಾನ್ ಅರಣ್ಯದ ರಕ್ಷಣಾ ಇಲಾಖೆಯನ್ನೇ ಅಲ್ಲಿನ ಸರಕಾರ ನಿಷ್ಕ್ರಿಯಗೊಳಿಸಿತ್ತು. ಇತರ ಕೆಲವು ದೇಶಗಳು “ಅಮೆಜಾನ್ ಅರಣ್ಯ ನಾಶ ತಡೆಯಲು ಕ್ರಮ ಕೈಗೊಳ್ಳಿ” ಎಂದಾಗ ಅಲ್ಲಿನ ಪ್ರಧಾನಮಂತ್ರಿಯ ಪ್ರತಿಕ್ರಿಯೆ ಏನಾಗಿತ್ತು ಗೊತ್ತೇ? “ಇದು ನಮ್ಮ ದೇಶದ ಕಾಡು. ನಾವು ಏನಾದರೂ ಮಾಡಿಕೊಳ್ಳುತ್ತೇವೆ” ಎಂಬಂತಿತ್ತು.
ಜುಲಾಯಿ ೨೦೧೯ರಲ್ಲಿ, ಒಂದೇ ತಿಂಗಳಿನಲ್ಲಿ ಬ್ರೆಜಿಲಿನಲ್ಲಿ ೨,೨೫೪ ಚ.ಮೀ. ಅರಣ್ಯ ನಾಶ ಮಾಡಲಾಯಿತು (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ರೀಸರ್ಚ್ ವರದಿಯ ಅನುಸಾರ) ಇದಕ್ಕೆಲ್ಲ ಕಾರಣ ಏನು? ಅರಣ್ಯ ನಾಶ ಮಾಡಿದಾಗ ಸಿಗುವ ಫಲವತ್ತಾದ ಜಮೀನಿನಲ್ಲಿ ಹುಲುಸಾಗಿ ಸೋಯಾಬೀನ್ ಬೆಳೆಸಿ, ಅಮೇರಿಕದಂತಹ ದೇಶಗಳಿಗೆ ರಫ್ತು ಮಾಡಿ, ಕೋಟಿಗಟ್ಟಲೆ ಡಾಲರ್ ಲಾಭ ಮಾಡಿಕೊಳ್ಳುವ ದಂಧೆ. ಹಾಗೂ, ಆ ಫಲವತ್ತಾದ ಜಮೀನಿನಲ್ಲಿ ದನಗಳ ಮೇವು ಬೆಳೆಸಿ, ದನಗಳನ್ನು ಸಾಕಿ, ನಂತರ ಟನ್‌ಗಟ್ಟಲೆ ದನದ ಮಾಂಸ ರಫ್ತು ಮಾಡಿ ಭರ್ಜರಿ ಲಾಭ ಗಳಿಸುವ ದಂಧೆ.
ಆಸ್ಟ್ರೇಲಿಯಾದಲ್ಲಂತೂ ೨೦೧೯ರಲ್ಲಿ ಕಾಡಿಗೆ ಬಿದ್ದ ಬೆಂಕಿ ಫೆಬ್ರವರಿ ೨೦೨೦ರ ವರೆಗೆ ಸುಮಾರು ಆರು ತಿಂಗಳ ಕಾಲ ಉರಿದೇ ಉರಿಯಿತು. ಲಕ್ಷಗಟ್ಟಲೆ ಹೆಕ್ಟೇರ್ ಕಾಡು ನಾಶವಾಯಿತು. ವಿಮಾನಗಳಿಂದ ನೀರು ಸುರಿದರೂ ಅಲ್ಲಿನ ಸರಕಾರಕ್ಕೆ ಅದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಅಂತೂ ವರುಷವರುಷವೂ ಲಕ್ಷಲಕ್ಷ ಹೆಕ್ಟೇರ್ ಅರಣ್ಯ ನಾಶವಾಗುತ್ತಿದೆ. ಅರಣ್ಯ ನಾಶ, ಕೈಗಾರಿಕೆಗಳಿಂದ ಮತ್ತು ವಾಹನಗಳಿಂದ ಆಗುವ ವಾಯುಮಾಲಿನ್ಯ ಇತ್ಯಾದಿ ಕಾರಣಗಳಿಂದಾಗಿ ವಾತಾವರಣ ಬಿಸಿಯೇರುತ್ತಿದೆ.
ಈ ಹಿನ್ನೆಲೆಯಲ್ಲಿ, ಪ್ರತಿಯೊಬ್ಬರೂ ಚಿಂತಿಸಬೇಕಾದ ಪ್ರಶ್ನೆ: ಇದಕ್ಕೂ ಈಗ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ-೧೯ ವೈರಸ್ ಧಾಳಿಗೂ ಏನು ಸಂಬಂಧ? ಕಣ್ಣಿಗೆ ಕಾಣದ ಆ ವೈರಸ್ ಈಗಾಗಲೇ ೧೩,೦೧೭ ಜನರ ಜೀವದ ಬಲಿ ತೆಗೆದು ಕೊಂಡಿದೆ ಮತ್ತು ಮೂರು ಲಕ್ಷಕ್ಕಿಂತ ಅಧಿಕ ಜನರಿಗೆ ಅದರ ಸೋಂಕು ತಗಲಿದೆ.
“ಅಂತರರಾಷ್ಟ್ರೀಯ ಅರಣ್ಯ ದಿನ”ವಾದ ಮಾರ್ಚ್ ೨೧ರಂದು ಈ ಪ್ರಶ್ನೆ ಮತ್ತೆಮತ್ತೆ ಕಾಡುತ್ತದೆ. ವಿಶ್ವಸಂಸ್ಥೆ ೨೦೧೨ರಲ್ಲೇ ಈ ವಿಶೇಷ ದಿನವನ್ನು ಘೋಷಿಸಿದೆ. ಅರಣ್ಯಗಳ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ೧೫೦ ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರುಷವೂ ಈ ದಿನದ ಆಚರಣೆಯ ಲಕ್ಷ್ಯ (ಥೀಮ್) ಏನೆಂದು ವಿಶ್ವಸಂಸ್ಥೆ ನಿರ್ಧರಿಸುತ್ತದೆ. ಈ ವರುಷದ ಲಕ್ಷ್ಯ “ಅರಣ್ಯಗಳು ಮತ್ತು ಜೀವವೈವಿಧ್ಯತೆ”. ಯಾಕೆಂದರೆ, ಇದು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗಲಾರದ ಅಮೂಲ್ಯ ಸಂಪತ್ತು.
ಭೂಮಿಯ ಶೇ.೮೦ರಷ್ಟು ಜೀವವೈವಿಧ್ಯಕ್ಕೆ ಕಾಡುಗಳೇ ಆಸರೆ. ಯಾವುದೇ ಕಾಡಿನಲ್ಲಿ ೬೦ ಸಾವಿರದಷ್ಟು ಸಸ್ಯವೈವಿಧ್ಯ ಇರುತ್ತದೆಂದು ಅಂದಾಜಿಸಲಾಗಿದೆ. ಮನುಷ್ಯನ ಸಹಿತ ಭೂಮಿಯ ಜೀವಿಗಳೆಲ್ಲವೂ ಉಳಿಯಬೇಕಾದರೆ ಈ ಜೀವವೈವಿಧ್ಯ ಉಳಿಯುವುದು ಅಗತ್ಯ ಎಂಬುದನ್ನು ನೆನಪಿಡೋಣ.
ಮನುಷ್ಯನಿಂದಾಗಿ ನಿರ್ವಂಶವಾದ ಡೊಡೊ ಹಕ್ಕಿಯ ಪ್ರಕರಣ ಅರ್ಥ ಮಾಡಿಕೊಂಡರೆ,ಭೂಮಿಯಲ್ಲಿ ಜೀವವೈವಿಧ್ಯ ಯಾಕೆ ಉಳಿಯಬೇಕೆಂದು ಮನದಟ್ಟಾದೀತು. ಮೌರಿಷಶ್ ದ್ವೀಪದ ಹಾರಲಾಗದ ಹಕ್ಕಿ ಡೊಡೊ, ಆ ದ್ವೀಪಕ್ಕೆ ಮನುಷ್ಯ ಕಾಲಿಟ್ಟ ಸುಮಾರು ೧೭೫ ವರುಷಗಳಲ್ಲಿ, ೧೬೮೧ರಲ್ಲಿ ನಿರ್ನಾಮವಾಯಿತು. ಇದಕ್ಕೆ ಮಾಂಸಕ್ಕಾಗಿ ಮನುಷ್ಯರು ಆ ಹಕ್ಕಿಗಳನ್ನು ಕೊಂದದ್ದು ಒಂದು ಕಾರಣ; ಮನುಷ್ಯನಿಂದಾಗಿ ಆ ದ್ವೀಪಕ್ಕೆ ಬಂದ ಹಂದಿಗಳು, ಮಂಗಗಳು ಮತ್ತು ಇಲಿಗಳು ಡೊಡೊ ಹಕ್ಕಿಗಳ ಮೊಟ್ಟೆಗಳನ್ನು ಕಬಳಿಸಿದ್ದು ಇನ್ನೊಂದು ಕಾರಣ.
ಡೊಡೊ ನಿರ್ವಂಶವಾದದ್ದರ ಪರಿಣಾಮ ಏನಾಯಿತು? ಮೌರಿಷಶಿನ “ಡೊಡೊ ಮರ” ಎಂಬ ಒಂದು ಜಾತಿಯ ಮರವೂ ನಿರ್ವಂಶವಾಗುವ ಅಪಾಯ ಎದುರಾಯಿತು. ಈಗ ಆ ಜಾತಿಯ ಕೇವಲ ೧೩ ಮರಗಳು ಉಳಿದಿವೆ. ಅವೆಲ್ಲದರ ವಯಸ್ಸು ೩೦೦ ವರುಷ. ಡೊಡೊ ನಿರ್ವಂಶವಾದ ೧೬೮೧ರ ನಂತರ ಆ ಮರದ ಹೊಸ ಸಸಿ ಅಲ್ಲಿ ಹುಟ್ಟಿಯೇ ಇಲ್ಲ!
ಇದಕ್ಕೆ ಕಾರಣವೇನು? ಆ ಮರದ ಹಣ್ಣುಗಳನ್ನು ಡೊಡೊ ಹಕ್ಕಿಗಳು ತಿನ್ನುತ್ತಿದ್ದವು. ಆ ಹಣ್ಣಿನ ಬೀಜಗಳು, ಡೊಡೊ ಹೊಟ್ಟೆಯಲ್ಲಿ ಹಾದು ಬಂದರೆ ಮಾತ್ರ ಮೊಳಕೆ ಬರಲು ತಯಾರಾಗುತ್ತಿದ್ದವು! ಹಾಗಾಗಿ ಡೊಡೊ ಹಕ್ಕಿಗಳೆಲ್ಲ ಸತ್ತ ನಂತರ ಆ ಮರದ ಯಾವ ಬೀಜವೂ ಮೊಳೆತಿಲ್ಲ! ಇದರಿಂದಲಾದರೂ ಈ ಭೂಮಿಯಲ್ಲಿ ಉಳಿವಿಗಾಗಿ ಜೀವಿ-ಜೀವಿಗಳ ಪರಸ್ಪರ ಅವಲಂಬನೆಯನ್ನು ನಾವು ಒಪ್ಪಿಕೊಳ್ಳಬೇಕು, ಅಲ್ಲವೇ?
ಗಮನಿಸಿ: ಬೇರೊಂದು ಭೂಖಂಡದಲ್ಲಿ ಪಕ್ಷಿಸಂಕುಲವೊಂದು ಅಳಿವಿನ ಅಂಚಿನಲ್ಲಿದೆ. ಇನ್ನೊಂದು ಸಸ್ಯ ಸ್ಪಿಷೀಸ್ ನಿರ್ನಾಮವಾಗಲಿದೆ. ಅಂಟಾರ್ಟಿಕಾದಲ್ಲಿ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ. ಜಗತ್ತಿನ ತಾಪಮಾನ ಕಳೆದ ಹಲವು ಶತಮಾನಗಳಲ್ಲಿ ಇದ್ದದ್ದಕ್ಕಿಂತ ತೀವ್ರವಾಗಿ ಹೆಚ್ಚಾಗುತ್ತಿದೆ. ಇವೆಲ್ಲ ಸತ್ಯಸಂಗತಿಗಳು ತಂತ್ರಜ್ನಾನದಿಂದಾಗಿ ಕ್ಷಣಾರ್ಧದಲ್ಲಿ ನಮಗೆಲ್ಲರಿಗೂ ಗೊತ್ತಾಗುತ್ತಿದ್ದರೂ, ಬಹುಪಾಲು ಜನರು ತಮಗೇನೂ ಆಗುವುದಿಲ್ಲ ಎಂಬ ಭ್ರಾಂತಿಯಲ್ಲಿರುತ್ತಾರೆ. ಕರೋನಾ ವೈರಸಿನ ಧಾಳಿ ಇಂತಹ ದಿವ್ಯನಿರ್ಲಕ್ಷ್ಯಗಳನ್ನು ಬುಡಮೇಲು ಮಾಡಿದ ನಂತರವೂ ನಾವು ಎಚ್ಚರದಿಂದಿರಲು ಕಲಿಯದಿದ್ದರೆ ಏನಾದೀತು?
ಫೋಟೋ ಕೃಪೆ: ರಾಯಿಟರ್ಸ್ ಮತ್ತು ಫಸ್ಟ್ ಪೋಸ್ಟ್