ಕಾಡು ಮಾವಿನ ಪಾರಂಪರಿಕ ಆಹಾರ ವೈವಿಧ್ಯ

ಕಾಡು ಮಾವಿನ ಪಾರಂಪರಿಕ ಆಹಾರ ವೈವಿಧ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಸುಶೀಲಾ ಎಸ್.ಎನ್.ಭಟ್, ಪಾತನಡ್ಕ
ಪ್ರಕಾಶಕರು
ಚೈತನ್ಯ ಪಬ್ಲಿಕೇಶನ್ಸ್, ಪಾತನಡ್ಕ ಮನೆ, ಅಂಚೆ ಕೋಟೂರು ಕಾಸರಗೋಡು ಜಿಲ್ಲೆ – 671 542 094000 10336

ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು. 
ಈಚೆಗೆ ಮುಳಿಯ ಶಾಲೆಯಲ್ಲಿ ಜರುಗಿದ ‘ಕಾಡು ಮಾವಿನ ಮೆಲುಕು’ ಕಾರ್ಯಕ್ರಮದಲ್ಲಿ ಪಾತನಡ್ಕದ ಸುಶೀಲಾ ಎಸ್.ಎನ್.ಭಟ್ಟರ ಕಾಡು ಮಾವಿನ ಪಾಕೇತನಗಳ ಪುಸ್ತಕ ಬಿಡುಗಡೆಗೊಂಡಿತು. ಅಲ್ಲಿಂದಿಲ್ಲಿಂದ ಹೆಕ್ಕಿದ ಮಾಹಿತಿ ಇದರಲ್ಲಿಲ್ಲ. ತಮ್ಮ ಅಡುಗೆ ಮನೆಯಲ್ಲಿ ಮಾಡಿ, ರುಚಿ ನೋಡಿ ಗೆದ್ದ ಬಳಿಕವೇ ಕಾಗದಕ್ಕಿಳಿಸಿದ್ದಾರೆ. ಮಾವಿನ ತಳಿ ಸಂರಕ್ಷಣೆಯ ಜತೆಜತೆಗೆ ಅವುಗಳ ಪಾಕವೈವಿಧ್ಯಗಳ ದಾಖಲಾತಿಯೂ ಅಷ್ಟೇ ಮುಖ್ಯವಾಗುತ್ತದೆ. 
ಉಪ್ಪಿನಕಾಯಿ ಇಲ್ಲದೆ ಊಟವಿಲ್ಲ. ವಿವಿಧ ಕಂಪನಿಗಳ ಉಪ್ಪಿನಕಾಯಿಗಳು ಅಡುಗೆ ಮನೆಯಲ್ಲಿ  ಕುಳಿತಿವೆ. ಕೃತಕ ಸಂರಕ್ಷಕ, ವಿನೆಗರ್ ಮಿಶ್ರಿತಗೊಂಡು ನಗುತ್ತಿವೆ. ಇವುಗಳ ನಿರಂತರ ಸೇವನೆಯಿಂದ ಅಡ್ಡಪರಿಣಾಮ ಇಲ್ಲ ಎನ್ನುವಂತಿಲ್ಲ. ಗ್ರಾಮೀಣ ಭಾಗದಲ್ಲಿ ಈಗಲೂ ಉಪ್ಪಿನಕಾಯಿ ತಯಾರಿಸುವುದೊಂದು  ಸಂಭ್ರಮ.   ಹಿರಿಯ ಅಮ್ಮಂದಿರಿಗೆ ತಯಾರಿ ವಿಧಾನಗಳು ಬೆರಳ ತುದಿಯಲ್ಲಿದೆ. ಸುಶೀಲಕ್ಕ ತಯಾರಿಸುವ ಉಪ್ಪಿನಕಾಯಿಯ ಕೈರುಚಿ ಸವಿದವರಿಗೆ ಗೊತ್ತು.  
ಉಪ್ಪಿನಕಾಯಿಯ ಕಚ್ಚಾಸಾಮಗ್ರಿಗಳ ತಯಾರಿ - ಉಪ್ಪುನೀರು ಮಾಡುವ, ಗಂಜಿ ಉಪ್ಪು ತಯಾರಿಸುವ, ಮೆಣಸು-ಸಾಸಿವೆ ಹುಡಿ ಮಾಡುವ - ವಿಧಾನಗಳು ಪುಸ್ತಕದಲ್ಲಿವೆ. ಮಿಡಿ ಮಾವಿನಕಾಯಿಯನ್ನು ಮರದಿಂದ ಕೊಯ್ಯುವುದಕ್ಕೂ ಕ್ರಮವಿದೆ! ಸುಶೀಲಕ್ಕ ಹೇಳುತ್ತಾರೆ, “ಉಪ್ಪಿನಕಾಯಿಗೆ ಆಗುವ ಪರಿಮಳದ ಸಣ್ಣ ಮಿಡಿಯ ತಳಿಯನ್ನು ಆಯ್ಕೆ ಮಾಡಿ, ಬುಟ್ಟಿಗೆ ಹಗ್ಗ ಕಟ್ಟಿ, ಮರ ಏರಿ ಕೊಯ್ದು ಪೆಟ್ಟಾಗದಂತೆ ಕೆಳಗಿಳಿಸಿ ತೊಟ್ಟು ಮುರಿದು ಉಪ್ಪಿನಲ್ಲಿ ಹಾಕಿಡಬೇಕು.” ಮಿಡಿ, ಕಡಿದ ಭಾಗ, ಹಸಿಕೆತ್ತೆ, ಇಡಿಕ್ಕಾಯಿ, ಕಾಳುಮೆಣಸು ಮಿಶ್ರ ಮಾಡಿದ ಉಪ್ಪಿನಕಾಯಿಗಳ ರುಚಿ ಪ್ರತ್ಯೇಕ. 
ಚಟ್ನಿ, ತಂಬುಳಿ, ಗೊಜ್ಜು, ಪಲ್ಯ, ತೊಕ್ಕು, ಸಾರು, ನೀರುಸಾರು, ಅಪ್ಪೆಸಾರು, ಬೋಳು ಕೊದಿಲು, ಮೆಣಸುಕಾಯಿ, ಸಾಂಬಾರು, ಚಿತ್ರಾನ್ನ, ಮಜ್ಜಿಗೆಹುಳಿ, ಕಾಯಿಪಲ್ಯಗಳ ಪಾಕವೈವಿಧ್ಯಗಳು ಗಮನ ಸೆಳೆಯುತ್ತವೆ. ಅಂತೆಯೇ ಕಾಡು ಮಾವಿನ ಹಣ್ಣಿನ ಉಪ್ಪಿನಕಾಯಿ, ಮಾಂಬಳ, ಸಾರು, ಸಾಸಿವೆ, ಚಂಡ್ರುಪುಳಿ, ಕಡುಬು, ರಸಾಯನ, ಪಾಯಸ, ಹಲ್ವ, ದೋಸೆ.. ಹೀಗೆ ಒಂದೇ ಎರಡೇ...!
 ಖಾದ್ಯಗಳು ಮಾತ್ರವಲ್ಲ, ಕಾಡುಮಾವಿನ ಔಷಧೀಯ ಗುಣಗಳತ್ತ ಸುಶೀಲ ಭಟ್ ಗಮನ ಸೆಳೆಯುತ್ತಾರೆ. ಒಂದು ಉದಾಹರಣೆ - “ಮಾಗಿದ ಮಾವು ಸಿಹಿಯಾಗಿದ್ದು, ಶಕ್ತಿವರ್ಧಕ.  ವಾತವನ್ನು ಕಡಿಮೆ ಮಾಡುವ, ಹೃದಯಕ್ಕೆ ಹಿತಕಾರಿಯಾದ, ಪಿತ್ತವನ್ನು ಹೆಚ್ಚು ಮಾಡದ ಗುಣಗಳಿಂದ ಕೂಡಿದೆ. ಮಾವಿನ ಅಧಿಕ ಸೇವನೆಯಿಂದ ಅಗ್ನಿಮಾಂದ್ಯ, ವಿಷಮಜ್ವರ, ರಕ್ತದೋಷ, ಬಲಹಾನಿ, ದೃಷ್ಟಿರೋಗ ಉಂಟಾಗಬಹುದು.” ಸುಶೀಲ ಭಟ್ಟರ ಜ್ಞಾನದಲ್ಲಿ ಪಾಕಗಳು ದಾಖಲಾಗಿವೆ. ಐವತ್ತೊಂಭತ್ತು ಪಾಕಗಳು ಸುಲಭದಲ್ಲಿ ಸರಳವಾಗಿ ಅಡುಗೆ ಮನೆಯಲ್ಲಿ ತಯಾರಿಸುವಂತಹುಗಳು. 
ಇವರ ಅಡುಗೆ ಮನೆಯು ಸಂಶೋಧನಾಗಾರ. ಒಂದಲ್ಲ ಒಂದು ಪಾಕೇತನಗಳು ಸಿದ್ಧವಾಗುತ್ತಲೇ ಇರುತ್ತದೆ. ಮಾತಿಗೆ ಸಿಕ್ಕಾಗಲೆಲ್ಲ ಪಾಕಗಳದ್ದೇ ಸುದ್ದಿ. ಹೊಸತರ ಸುಳಿವು. ಇಳಿ ವಯಸ್ಸಲ್ಲೂ ಚಿಮ್ಮು ಉತ್ಸಾಹಿ. ನಂನಮ್ಮ ತೋಟದ ಉತ್ಪನ್ನಗಳನ್ನು ಮನೆಯಲ್ಲೇ ಮೌಲ್ಯವರ್ಧಿಸಬೇಕೆನ್ನುವ ತುಡಿತ. ಮೇಳ, ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ. ಅಲ್ಲೆಲ್ಲಾ ಅನುಭವ ಗಾಥಾ ಪ್ರಸ್ತುತಿ. ಹಾಗಾಗಿ ಸುಶೀಲಕ್ಕನ ಮಾತಿಗೆ ಮೊದಲ ಮಣೆ. ಸುಶೀಲಾ ಭಟ್ಟರ ಎಲ್ಲಾ ಕೆಲಸಗಳ ಹಿಂದೆ ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಮುಖ್ಯಸ್ಥೆ ಡಾ. ಸರಿತಾ ಹೆಗ್ಡೆಯವರ ಪ್ರೋತ್ಸಾಹ. ಇವರ ‘ಹಲಸಿನಿಂದ ಹಲವು ತಿನಿಸು’ ಎನ್ನುವ ಪಾರಂಪರಿಕ ಆಹಾರ ವಿಧಾನಗಳ ಪುಸ್ತಕವು ನೂರಾರು ಅಮ್ಮಂದಿರ ಸ್ವೀಕೃತಿ ಪಡೆದಿದೆ. ಈ ಸಾಲಿಗೆ ಈಗ ‘ಕಾಡು ಮಾವಿನ ಮೆಲುಕು’.
 
 

p.p1 {margin: 0.0px 0.0px 0.0px 0.0px; text-align: justify; font: 10.0px Kedage; -webkit-text-stroke: #000000}
p.p2 {margin: 0.0px 0.0px 0.0px 0.0px; text-align: justify; font: 10.0px Kedage; -webkit-text-stroke: #000000; min-height: 18.0px}
p.p3 {margin: 0.0px 0.0px 0.0px 0.0px; text-align: justify; font: 11.0px Kedage; -webkit-text-stroke: #000000}
span.s1 {font-kerning: none}
span.s2 {font: 10.0px Kedage; font-kerning: none}