ಕಾಡ ಸೆರಗಿನ ಸೂಡಿ

ಕಾಡ ಸೆರಗಿನ ಸೂಡಿ

ಪುಸ್ತಕದ ಲೇಖಕ/ಕವಿಯ ಹೆಸರು
ಮಂಜುನಾಥ್ ಚಾಂದ್
ಪ್ರಕಾಶಕರು
ಅಕ್ಷರ ಮಂಡಲ ಪ್ರಕಾಶನ, ರಾಜರಾಜೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೦

ಲೇಖಕ ಮಂಜುನಾಥ್‌ ಚಾಂದ್‌ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು 1930ರ ದಶಕದ ಭಾರತ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ತ್ಯಾಗ ಮತ್ತು ಬಲಿದಾನದ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಜಗದೀಶ್ ಕೊಪ್ಪ ಅವರು “ ಅನೇಕ ರೋಚಕ ತಿರುವುಗಳ ನಡುವೆಯೂ ಈ ಕಾದಂಬರಿಯು ಹಲವು ಬಗೆಯ ಕುತೂಹಲ, ವಿಷಾದಗಳ ಜೊತೆ ರೋಮಾಂಚನವನ್ನುಂಟು ಮಾಡುತ್ತಾ, ಓದಿದ ನಂತರವೂ ಓದುಗರನ್ನು ನಿರಂತರವಾಗಿ ಕಾಡುವ ಗುಣವನ್ನು ಒಳಗೊಂಡಿರುವುದು ವಿಶೇಷವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಪಿ ಶೇಷಾದ್ರಿ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳು ಹೀಗಿವೆ…”’ಇಷ್ಟೆಲ್ಲ ಓದುತ್ತಿರುವಾಗ ಒಂದು ಅಂಶ ನನಗೆ ಪದೇ ಪದೆ ವೇದ್ಯವಾಗುತ್ತಿದೆ. ಈ ಪ್ರಕೃತಿಯಲ್ಲಿ ಒಂದು ದಿವ್ಯವಾದ ಭಾಷೆ ಇದೆ. ಅದು ನೈತಿಕತೆಯನ್ನು ಪ್ರತಿಪಾದಿಸುತ್ತದೆ. ಅದರ ಅಂತರ್ಯದಲ್ಲಿ ಅಡಕವಾಗಿರುವುದು ಪರಿಶುದ್ಧತೆ. ಒಳಿತಷ್ಟೇ ಅದರ ಉದ್ದೇಶ. ಪ್ರಪಂಚದ ಯಾವ ಧರ್ಮವೂ ಈ ಸಿದ್ಧಾಂತಕ್ಕೆ ಅತೀತವಾದುದಲ್ಲ. ಅದನ್ನು ಪ್ರತಿಪಾದಿಸುವ ಪ್ರತಿಯೊಂದು ನೆಲವೂ ದೇವನೆಲವೇ ಆಗಿದೆ…’

ಇದು ನನ್ನ ಮಾತಲ್ಲ ; ಈ ಕಾದಂಬರಿಯಲ್ಲೇ ಹುದುಗಿರುವ ಒಂದು ಸಣ್ಣ ಟಿಪ್ಪ್ಪಣಿ. ಅರ್ಥಪೂರ್ಣವಾದ ಈ ಸಾಲುಗಳನ್ನು ಓದಿದಾಗ ಇದೇ ಈ ಕಾದಂಬರಿಯ ಆತ್ಮ ಅಥವಾ ಆಶಯ ಅನ್ನಿಸಿ ಅವನ್ನು ಮತ್ತೆ ಇಲ್ಲಿ ದಾಖಲಿಸುತ್ತಿದ್ದೇನೆ ಅಷ್ಟೇ.

ಮೋಹನದಾಸ ಕರಮಚಂದ ಗಾಂಧಿ ಈ ನೆಲದ, ದೇಶದ ಒಂದು ಬಹುದೊಡ್ದ ಅಚ್ಚರಿ. ೧೯೩೪ರಲ್ಲಿ ಗಾಂಧಿ ಪುತ್ತೂರು, ಕುಂದಾಪುರ ಮುಂತಾದ ಕಡೆ ಬಂದಿದ್ದರು. ಅವರ ಪ್ರವಾಸ ನಾಡಿನ ತುಂಬ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿತ್ತು. ಆ ಹೊತ್ತಿನ ಗಾಂಧಿಯ ಭೇಟಿಗಳ ಹಿನ್ನಲೆಯನ್ನು ಆಧರಿಸಿ ಡಾ. ಕೆ. ಶಿವರಾಮ ಕಾರಂತರಿಂದ ಹಿಡಿದು ಅನೇಕರು ಕತೆ ಕಾದಂಬರಿಗಳು ರಚಿಸಿದ್ದಾರೆ. ಮಂಜುನಾಥ್ ಚಾಂದ್ ಅವರ ಈ ಕೃತಿ ಆ ಪಟ್ಟಿಗೆ ಹೊಸ ಸೇರ್ಪಡೆ.

ಇಲ್ಲಿ, ಸ್ವಾತಂತ್ರ್ಯ ಪೂರ್ವದ ಒಂದು ಪ್ರದೇಶದ ಜನರ ಬದುಕನ್ನು ಚಾಂದ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಎಲ್ಲೆಲ್ಲೂ ಕಾಲ್ಪನಿಕ ಅನಿಸದೇ, ಅಂದು ನಡೆದಿರಬಹುದಾದ ಕಥನವಿದು ಅನ್ನಿಸುವಷ್ಟರ ಮಟ್ಟಿಗೆ ಸಹಜವಾಗಿ ಮೂಡಿ ಬಂದಿರುವುದು ಈ ಬರಹದ ವಿಶೇಷ. ಕುಂದಾಪ್ರ ಭಾಷೆ, ಕಥೆಯ ಬಂಧ ಮತ್ತು ನಿರೂಪಣಾ ಶೈಲಿ ನಮ್ಮನ್ನು ಮೂವತ್ತರ ದಶಕಕ್ಕೆ ಒಯ್ಯುವ ಶಕ್ತಿಯನ್ನು ಹೊಂದಿದೆ.ಸನ್ನಿವೇಶಗಳು ಮತ್ತು ಪಾತ್ರಗಳು ಚಾಂದ್ ಬಿಡಿಸಿರುವ ಚಿತ್ತಾರದಲ್ಲಿ ಸಶಕ್ತವಾಗಿದ್ದು ಓದುಗರನ್ನು ಮರುಳುಗೊಳಿಸುತ್ತದೆ. ದೇಶ ಮಹಾತ್ಮನ ನೂರೈವತ್ತನೇ ಜನ್ಮ ಸಂಸ್ಮರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಈ ಕೃತಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.” ಸುಮಾರು ೧೯೦ ಪುಟಗಳನ್ನು ಹೊಂದಿರುವ ಈ ಕೃತಿಯು ಉತ್ತಮವಾದ ಓದಿಗೆ ದಾರಿಯಾಗಬಲ್ಲದು.