ಕಾಡ ಹೂ! ಕಾಡೋ ಹೂ!

“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ ಪುಸ್ತಕಗಳನ್ನ ಕೈಲಿಡ್ದು “ ಅಣ್ಣೋ ತೇಜಸ್ವಿಯವರ್ದು ಕರ್ವಾಲೋ, ಮಾದ್ಹೇವಣ್ಣಂದು ಎದೆಗೆ ಬಿದ್ದ ಅಕ್ಷರ, ಕುವೆಂಪುರವರದ್ದು ಮಂತ್ರ ಮಾಂಗಲ್ಯ, ಬೇಂದ್ರೆ ಅಜ್ಜಂದು ನಾಕುತಂತಿ. ಇವೆಲ್ಲಾ ಕನ್ನಡ ಪುಸ್ತಕಗಳು ಕಣಣ್ಣ, ಒಂದೇ ಒಂದ್ ಪುಸ್ತಕ ತಗೋ ಬಾ ಅಣ್ಣ, ಬಾರಕ್ಕ, ಸಾರ್, ಮೇಡಂ ಅಂತ ಕೂಗಿ -ಕೂಗಿ ಕರ್ದು, ನಾನಾ ನಮೂನಿ ಕನ್ನಡ ಸಾಹಿತ್ಯ ಪುಸ್ತಕಗಳನ್ನ ಮಾರಿ ಇಂದು ಬದ್ಕ ಕಟ್ಕೊಂಡಿವ್ನಿ. ಅವತ್ ನಾನು ಸೂಳೆ ದಿಟ, ಆದ್ರೆ ಇವತ್ ನಾನ್ ಸೂಳೆ ಅಲ್ಲ ಕನ್ರಪ್ಪೋ ಅಂತ ನಿರೂಪಿಸೀವ್ನಿ. ವೇಶ್ಯೆ ಅನ್ನೋ ಹಳೇ ನೀರು ಹರಿದೋಗಿ, ಹೊಸ ಹೆಣ್ಣಾಗಿ ಕನ್ನಡ ಪುಸ್ತಕಗಳ ಹೊಳೇಲಿ ತೇಲ್ತೀವ್ನಿ.” ಒಂದು ಪುಸ್ತಕ ಒಂದು ಬದಲಾವಣೆಗೆ ಕಾರಣವಾಗುತ್ತೆ, ಕಲ್ಲೆದೆಯಲ್ಲೂ ಭಾವನೆಗಳ ನೀರುಕ್ಕಿಸುವ ಕೆಲಸ ಕೆಲವು ಪುಸ್ತಕಗಳು ಮಾಡ್ತವೆ. ಈಗಿನ ಕಾಲದಲ್ಲಿ, ಕೈಲಿ ಪುಸ್ತಕಗಳನ್ನಿಡಿಯೋ ಬದಲು ಮೊಬೈಲ್ಗಳನ್ನ ಹಿಡಿಯೋ ಕೈಗಳೆ ಹೆಚ್ಚಿರುವಾಗ, ನೀನು ಪುಸ್ತಕಗಳನ್ನ ಮಾರಿ ಬದುಕ್ತಿನಿ ಅಂತಿದೀಯ” ಇದು ‘ಕಾಡ ಹೂ! ಕಾಡುವ ಹೂ!’ ಕಾದಂಬರಿಯ ಪುಟಗಳಲ್ಲಿ ಕಂಡ ಸಾಲುಗಳು.
ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ವಿಸ್ಮಿತ ವಿ.ಕುಸ್ಕೂರು. ‘ವೇಶ್ಯೆ ಕೆಟ್ಟವಳಲ್ಲ, ವೇಶ್ಯಾವೃತ್ತಿಯೂ ಕೆಟ್ಟದ್ದಲ್ಲ’ ಎನ್ನುವ ಇವರು ಬರೆದ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “ಮನುಷ್ಯರು ತನ್ನೊಳಗಿನ ಹತಾಶೆ, ಜಿಗುಪ್ಪೆ, ದೌರ್ಬಲ್ಯಗಳನ್ನು ಕಥೆ ಕವಿತೆಗಳಾಗಿಸಿ ಸಮಾಧಾನಿಸುತ್ತಾರೆ. ಪುರಾಣ, ಚರಿತ್ರೆ, ಕಾವ್ಯಗಳ ಸೃಷ್ಟಿಯಲ್ಲೂ ಇಂತಹದ್ದನ್ನೇ ಕಾಣಬಹುದು. ರಾವಣನ ರೂಪದಲ್ಲಿ ಮನೋಬಲ, ಆತ್ಮಬಲದ ಸಂಘರ್ಷವನ್ನು, ಕರ್ಣನ ರೂಪದಲ್ಲಿ ವರ್ಗ ಸಂಘರ್ಷವನ್ನು, ಸುಯೋಧನನ ರೂಪದಲ್ಲಿ ಅಧಿಕಾರ ಸಂಘರ್ಷವನ್ನು ಸಾರುವಲ್ಲಿ ಇಂತಹದ್ದೇ ಸಮಾಧಾನವನ್ನು ಕವಿಗಳು ಕಂಡುಕೊಂಡಿದ್ದಾರೆ. ಅಂತಹುದ್ದೇ ಒಂದು ಸಮ `ಸಮಾಧಾನದ ನೆಲೆಯನ್ನ ಕಂಡುಕೊಳ್ಳಲು ಸ್ನೇಹಿತ, ಬರೆಹಗಾರ ವಿನಾಯಕರು ಪ್ರತಿ ಸಲವು ಪ್ರಯತ್ನಿಸುತ್ತಾರೆ. ಇದನ್ನು ಸತ್ಯ ವಾಗಿಸಲು ನನಗೆ ಸಿಕ್ಕ ವಿವರಗಳು ಅವರ ಬರೆಹದಲ್ಲಿ ತೋರುವ ಪುಸ್ತಕ ಪ್ರೇಮಿಗಳು, ಅಲೆಮಾರಿಗಳ ಜೀವನ ಕ್ರಮ, ಚಿತ್ರದುರ್ಗದ ಸುತ್ತಣ ಪರಿಸರದ ಚಿತ್ರಣ, ಪೂರ್ವಕವಿಗಳ ವಿವರಗಳು, ಇತ್ಯಾದಿ...
ವೇಶ್ಯೆ ಕೆಟ್ಟವಳಲ್ಲ ವೇಶ್ಯೆ ವೃತ್ತಿಯೂ ಕೆಟ್ಟದ್ದಲ್ಲ ಆದರೆ ಈ ವೃತ್ತಿಗೆ ಸೇರುವಂತೆ ಮಾಡುವ ಬಡತನ, ಸಂದರ್ಭ ಕೆಟ್ಟದ್ದು. ಹಾಗಾದರೆ ಈ ಸಂದರ್ಭಗಳನ್ನು ಸೃಷ್ಟಿ ಮಾಡುವ ಅನಿವಾರ್ಯತೆ ಸಮಾಜಕ್ಕೇನಿದೆ?
ಸೂಳೆ ಎನ್ನುವ ಮುನ್ನ ನಾವೆಲ್ಲಾ ಯೋಚಿಸಬೇಕಾದ ಮಹತ್ತರವಾದ ಪ್ರಶ್ನೆಯೊಂದಿದೆ ಸೂಳೆಗಾರಿಕೆ ಸೃಷ್ಟಿ ಹೆಣ್ಣಿನಿಂದ ಆದುದೋ ಗಂಡಿ ನಿಂದಲೋ...? ಇದೊಂದು ಬೀಜವೃಕ್ಷ ನ್ಯಾಯದಂತಹ ಪ್ರಶ್ನೆ ಅನ್ನಿಸುವುದಿಲ್ಲವೇ?
ವಿನಾಯಕರ ಈ ಬರೆಹ ವೇಶೈಯೊಬ್ಬಳ ಜೀವನದಲ್ಲಿ ಪುಸ್ತಕಗಳು ನಿರ್ವಹಿಸಿರುವ ಬಹಳಾ ದೊಡ್ಡ ಜವಾಬ್ದಾರಿಯ ಕುರಿತು ಮಾತನಾಡುತ್ತದೆ. ಹಾಗಾಗಿ ನಾನು ಇಲ್ಲಿ ಪುಸ್ತಕಗಳನ್ನು ಪಾತ್ರಗಳೆಂದೇ ಭಾವಿಸುತ್ತೇನೆ.
ಹೆಸರೇ ಇಲ್ಲದವರಿಗೆ ಹೆಸರನ್ನು ಕರುಣಿಸುವ, ಬದುಕೇ ಇಲ್ಲದವರಿಗೆ ಬದುಕು ಕರುಣಿಸುವ ಇಲ್ಲಿನ ಸಾಹಿತ್ಯವು ನನಗೆ ಮುಖ್ಯ ಪಾತ್ರದಂತೆ ಕಾಣುತ್ತದೆ. ಇಲ್ಲಿನ ಪ್ರೇಮ ಕಥೆ ಇದೆಯಲ್ಲ ಅದೊಂದು ನಿರುತ್ತರದಂತೆ ಬಾಯಿ ಮೇಲೆ ಬೆರಳನಿಡಿಸಿ ಶೂ! ಎಂಬ ಶಬ್ದ ಹೊರಡಿಸಿಬಿಡುವಂತಹದ್ದು ಕಾರಣ ನಾಯಕ ನಾಯಕಿಯರು ಚಿಂದಿ ಆಯುವವರು... ಎಂದಾದರು ಯೋಚಿಸಬಹುದೇ ಇಂತವರ ಮಧ್ಯೆ ಹುಟ್ಟುವ ಒಂದು ಶುದ್ಧ ಪ್ರೇಮವನ್ನು, ಎಂದಾದರು ಯೋಚಿಸಬಹುದೇ ಇಂತವರ ಮಧ್ಯದಲ್ಲಿ ಅರಳುವ ಪುಸ್ತಕ ಪ್ರೀತಿಯನ್ನು.....? ವಿನಾಯಕರ ಕಥೆ ಇಲ್ಲೇ ಗೆದ್ದಿದೆ.
ವೇಶ್ಯಯೊಬ್ಬಳು ತಾನು ಆ ವೃತ್ತಿಯಿಂದ ಹೊರಬಂದು ಹೇಗೆ ಬದುಕಿದಳು, ನಿಜಕ್ಕೂ ಹೇಗೆ ಬದುಕಬಹುದು ಎಂಬುದನ್ನು ತೋರಿಸಿ ಕೊಟ್ಟಂತಿದೆ ಬರೆಹ.ಎದೆಯಾಳದಿಂದ ಹೊರಡುವ ನೀರವ ಭಾವನೆಗಳನ್ನು ಎದುರಿನವರಿಗೆ ಸಂಪೂರ್ಣವಾಗಿ ಸೇರಿಸುವ ಸೂಕ್ತ ಮಾಧ್ಯಮದ ಕೆಲಸವನ್ನು ಪತ್ರಗಳು ಮಾಡುತ್ತವಂತೆ... ನಿರೋಷ ನಿರುತ್ತರನನ್ನು ತಲುಪಿದ್ದು ಪತ್ರದ ತೆರದಲ್ಲಿ...
ತಮಾಷೆ, ದುಃಖ, ಪಶ್ಚಾತ್ತಾಪ, ಸಂತೋಷ, ಸುಖ, ಅರಿವು, ಅರಿಕೆ, ಹತಾಶೆಗಳ ಒಳಗೊಂಡ ಈ ಪತ್ರ ನಿಮಗೂ ತಲುಪಬಹುದು…”