ಕಾಣದ ಕಡಲಿಗೇ ಹಂಬಲಿಸಿದೇ ಮನ

ಕಾಣದ ಕಡಲಿಗೇ ಹಂಬಲಿಸಿದೇ ಮನ

ಕಾಣದ ಕಡಲಿಗೇ ಹಂಬಲಿಸಿದೇ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೇ ಒಂದು ದಿನ...
ಒಂದಲ್ಲಾ ಒಂದು ರೂಪದಲ್ಲಿ ನಾವೆಲ್ಲರೂ ಅನಿವಾರ್ಯವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಬದುಕಲು ಮತ್ತೊಂದು ಜಗತ್ತು ನಮಗಿಲ್ಲ. ಇನ್ನೊಂದು ಜಗತ್ತು ಸೃಷ್ಟಿಸಿಕೊಳ್ಳಲಾಗದ ನಾವು ನಮ್ಮೊಳಗೇ ಅನೇಕ ಜಗತ್ತುಗಳನ್ನು ನಿಮರ್ಿಸಿಕೊಂಡು ಬದುಕುತ್ತಿದ್ದೇವೆ. ನಮ್ಮೊಳಗಿನ ಜಗತ್ತಿನ ಹಾದಿಯ ಹಲವು ಹಂತಗಳಲ್ಲಿ ಕಾಣದ ಕಡಲು ನಮ್ಮನ್ನು ಕಾಡುತ್ತಲೇ ಇರುತ್ತದೆ, ಕರೆಯುತ್ತಲೇ ಇರುತ್ತದೆ- ಕಾಣುವ ಹಂಬಲಕೆ ಬೀಜ ಬಿತ್ತುತ್ತದೆ.  ಕಡಲನು ಸೇರುವ ಹಾದಿ ನದಿ ಹರಿದಷ್ಟು ಸುಗಮವಲ್ಲ. ಒಂದು ನದಿಗೆ ಒಂದೇ ಕಡಲು. ಕಡಲಿನೆಡೆಗೆ ಗುರಿ ಇಟ್ಟ ಬಾಣದಂತೆ ಸಾಗುವ ನದಿಗೆ ಬಂಡೆಗಳನ್ನೂ ಕರಗಿಸುವ ತಾಕತ್ತು. ಕಲ್ಲು- ಕಣಿವೆಗಳನ್ನು ಕೊರೆದು ತನ್ನದೇ ಜಾಡಿನಲ್ಲಿ ಸಾಗುವ ನದಿಗೆ ಒಂದೇ ಧ್ಯಾನ ಅದು ಕಡಲ ಸೇರುವುದು. ಒಮ್ಮೆ ಕಡಲ ಸೇರಿದರೆ ಸಾಕು- ನದಿ ಕಣ್ಮರೆಯಾಗಿ ಕಡಲು ಮಾತ್ರ ಕಾಣುತ್ತದೆ. ಪ್ರತಿಕ್ಷಣವೂ ಯಾವುದೋ ಪರ್ವತದ ತಪ್ಪಲಿನಲ್ಲಿ ಜನ್ಮತಾಳುವ ನದಿ ಪ್ರತಿ ಕ್ಷಣವು ಹುಟ್ಟುತ್ತದೆ-  ಕಡಲ ಅಗಾಧತೆಯಲ್ಲಿ ಲೀನವಾಗಿ ಪ್ರತಿ ಕ್ಷಣವೂ ಸಾಯುತ್ತದೆ.


ನದಿಗೇ ಒಂದೇ ಕಡಲು...
ನಮಗೋ, ಜೀವನದ ಒಂದೊಂದು ಹಂತದಲ್ಲೂ ಒಂದೊಂದು ಕಡಲು. ಒಂದು ಕಡಲನ್ನು ಸೇರಿದ ಕೂಡಲೇ ಮತ್ತೊಂದು ಕಡಲಿನೆಡೆಗೆ ಮನ ಕಾತರಿಸುತ್ತದೆ. ಇಡೀ ಜಗತ್ತನ್ನೇ ಕಾಡುವ ಕಡಲುಗಳು ಹತ್ತಾರು. ದೇಶವನ್ನು, ರಾಜ್ಯವನ್ನು, ಜಿಲ್ಲೆಯನ್ನು, ತಾಲೂಕನ್ನು, ತಾಲೂಕಿನ ಮೂಲೆಯಲ್ಲಿರುವ ಕುಗ್ರಾಮವನ್ನು, ಕುಗ್ರಾಮದ ಮುರುಕು ಗುಡಿಸಲಿನಲ್ಲಿ ಪುಟ್ಟ ಹಣತೆ ಹಚ್ಚಿಟ್ಟುಕೊಂಡು ದೂರದ ಪ್ರಖರ ವಿದ್ಯುತ್ ದೀಪದ ಕಡೆ ದೃಷ್ಟಿನೆಟ್ಟು, ಅಗಸೆ ಬಾಗಿಲ ದೇಗುಲದ ಭಜನೆಗೆ ಕಿವಿಗೊಟ್ಟಿರುವ ಒಬ್ಬಂಟಿ ಮುದುಕಿಯವರೆಗೂ ಅಲ್ಲಿಗೆ ಸಲ್ಲುವ ಕಡಲುಗಳಿವೆ. ಅಜ್ಜಿಗೆ ಮುಕ್ತಿಯೇ ಕಡಲು, ಅವ್ವನಿಗೆ ಮುಪ್ಪೇ ಕಡಲು, ಅಪ್ಪನಿಗೆ ಬಿಪಿ-ಶುಗರ್ನಿಂದ ಬಿಡುಗಡೆಯೇ ಕಡಲು, ಮಡದಿಗೆ ಹೊಸ ಉದ್ಯೋಗವೇ ಕಡಲು, ಗೆಳೆಯನಿಗೆ ಹೊಸ ನಾಟಕ ಕಟ್ಟುವ ಹಂಬಲದ ಕಡಲು, ಯುವತಿಗೆ ಮದುವೆಯೋ- ಉದ್ಯೋಗವೇ ಎಂಬ ದ್ವೈತದಲಿ ಯಾವುದು ಮೊದಲಾಗುತ್ತೋ ಅದೇ ಕಡಲು, ಗೆಳತಿಗೆ ತನ್ನ ಮಡಿಲಲ್ಲಿ ಮಗುವೊಂದು ಆಡಲಿ ಎಂಬ ಆಸೆಯ ಕಡಲು, ಉದ್ಯಮಿಗೆ ಲಾಭವೇ ಕಡಲು, ನಮ್ಮ ಮಾಜಿ ಮುಖ್ಯಮಂತ್ರಿಗೆ ಹಗರಣಗಳಿಂದ ಮುಕ್ತಿಯೇ ಕಡಲು, ಹಾಲಿ ಮುಖ್ಯಮಂತ್ರಿಗೆ ಉಳಿದ ಅವಧಿ ಸರಾಗವಾಗಿ ಪೂರೈಸುವುದೇ ದೊಡ್ಡ ಕಡಲು, ಟೀಕಾಚಾರ್ಯರಿಗೆ ಯಾವುದೇ ವಿಷಯದ ಬಗ್ಗೆ ಅಡ್ಡ ಮಾತನಾಡಿದಾಗ ಸಿಗುವ ಪ್ರಚಾರದ ಹುಚ್ಚೇ ಕಡಲು.  ಹೋರಾಟಗಾರರಿಗೆ ಲೋಕಪಾಲ ಜಾರಿಯೇ ಕಡಲು, ಬಿಲ್ಲು, ಪರ್ಸಂಟೇಜ್, ಅಧಿಕಾರ, ಪ್ರಮೋಷನ್,  ಮನೆ ಇದ್ದವರಿಗೆ ಒಂದೇ ಮನೆ- ಇಲ್ಲದವರಿಗೆ ನೂರು ಮನೆ, ಕಾಣದ ಕಡಲು- ಕಾಣುವ ಕಡಲು. ಹೀಗೆ ಕಡಲಿನ ಹರವು ಅಪಾರ. 
ಒಂದು ಕಡಲು ಸೇರುತ್ತಿದ್ದಂತೆ ಇನ್ನೊಂದ ಕಡಲಿನ ಮರ್ಮರ ಮತ್ತೆ ಸೆಳೆಯುತ್ತದೆ. ಒಂದು ಕಡಲು ಸೇರಿದ ಆಯಾಸ ಮರೆಯಾಗುವ ಮುನ್ನವೇ ಮತ್ತೊಂದ ಏರುವ ಬಯಕೆಗೆ ಮನ ಭಾರವಾಗುತ್ತದೆ. ಒಂದು ಪಡೆದ ಸಂತಸವನ್ನು ಇನ್ನೊಂದನ್ನು ಪಡೆಯುವ ಆಸೆಯ ಅಲೆ ನುಂಗಿ ಹಾಕುತ್ತದೆ. ಇರುವ ಕಡಲಿನಿಂದೆದ್ದು, ಮೈಕೊಡವಿಕೊಂಡು ಮತ್ತೆ ಹೊರಡುತ್ತೇವೆ. ಮತ್ತಷ್ಟು ನೋವು, ಮತ್ತಷ್ಟು ಆಕ್ರಂದನ, ಮತ್ತಷ್ಟು ಛಲ, ಮತ್ತಷ್ಟು ನಿರೀಕ್ಷೆ, ಮತ್ತಷ್ಟು ಆಸೆ, ಮತ್ತೊಂದು ಹೆಬ್ಬಯಕೆಯ ಚಿಗುರು. ಆಟಿಲ ಕಾನನದ ಕುಟಿಲ ಪಥಗಳಲಿ ದಾರಿ ಹುಡುಕುತ್ತೇವೆ. ಒಳ್ಳೆಯವನೋ, ಕೆಟ್ಟವನೋ, ಭೀತನೋ, ದುರ್ಬಲನೋ, ದಿಗ್ಭ್ರಾಂತನೋ, ಪೀಡಿತನೋ, ಪೀಡಕನೋ ಯಾರಾದರೂ ಕೈ ಹಿಡಿದು ಮುನ್ನಡೆಸಬಹುದು. ಯಾರಾದರೂ ಏಕೆ ನಾವೇ ಸಾಗುತ್ತೇವೆ. ಯಾರ ಆಶ್ರಯವೂ ಬೇಕಿಲ್ಲ... ಯಾರ ಆಸರೆಯೂ ಬೇಕಿಲ್ಲ- ಸ್ವಯಂಭೂಗಳು ನಾವು.
ಮತ್ತೇ ಉತ್ತುಂಗಕ್ಕೇರಿ, ಮಳೆಯಾಗಿ, ನೀರಾಗಿ, ನದಿಯಾಗಿ ಮತ್ತದೇ ಕಡಲ ಸೇರುವ ಆಸೆ. ಏರುವ ಸಾಹಸದಲಿ, ಸೇರುವ ಭರದಲಿ ಅಕ್ಕಪಕ್ಕ ನೋಡಲೂ ಪುರುಸೊತ್ತಿಲ್ಲ. ಪಾಪ ಯಾರದ್ದೋ ಮಗು, ಅಪ್ಪ-ಅಮ್ಮ ಕಾಣುತ್ತಿಲ್ಲ, ದಾರಿ ತಪ್ಪಿರುವಂತಿದೆ, ಹಾಲುಗಲ್ಲದ ಕಂದನ ಕೆನ್ನೆ ಮೇಲೆ ಕಣ್ಣೀರ ಗುರುತು ಢಾಳಾಗಿದೆ.. ಕೈ ಚಾಚುತ್ತಿರುವ ಆ ಮಗುವಿನ ಕೈ ಹಿಡಿದು ರಸ್ತೆ ದಾಟಿಸೋಣ ಅನ್ನುವಷ್ಟರಲ್ಲೇ... ಗ್ರೀನ್ ಸಿಗ್ನಲ್. ಅಯ್ಯೋ ಹೋಗ್ಲಿ ಬಿಡಿ. ನಾವೇನ್ ಮಾಡೋಕಾಗುತ್ತೇ? ಪ್ರಶ್ನೆಯೂ ನನ್ನದೇ- ಉತ್ತರವೂ ನನ್ನದೇ. ನಾನು ಯಾವುದಕ್ಕೂ ಜವಾಬ್ದಾರನಲ್ಲ. ಇಂದಿನ ಕಡಲು ಸೇರುವುದಷ್ಟೇ ನನ್ನ ಗುರಿ.
ಯಾರದ್ದೋ ಕಾರಣಕ್ಕೇ ಯಾರಿಗೋ ನೋವು- ಸಾವಿರ ಮುಖಗಳ ನೋವಿನ ನದಿಗಳು ಕಡಲಿನೆಡೆಗೆ ಸಾಗಲು ಮಾರ್ಗ ಹುಡುಕುತ್ತಿವೆ. ಪರ್ವತದ ತುತ್ತ ತುದಿಯಿಂದ ಜಲಪಾತವಾಗಿ ದುಮುಕಲು, ಶಕ್ತಿ ಮೀರಿ ಬೋರ್ಗರೆಯಲು, ಅಬ್ಬರಿಸಲು ನೆರೆಯುತ್ತಿವೆ. ಎಲ್ಲದರ ಬಣ್ಣವನ್ನೂ ಬಯಲುಗೊಳಿಸುವ ಹಗಲಿಗಿಂತ- ಎಲ್ಲವನ್ನೂ ಮುಚ್ಚುವ, ಕೊನೆಗೆ ಸ್ವಂತ ದೇಹವನ್ನೂ  ಕಾಣದಂತೆ ಮಾಡುವ ಕತ್ತಲೇ ಹೆಚ್ಚು ಪ್ರಿಯವಾಗುತ್ತಿದೆ. ಕತ್ತಲಿನಲ್ಲಿ ಯಾರು, ಯಾವ ಕಡಲನ್ನು, ಹೇಗೆ ಸೇರಿದರು ಎಂಬುದು ಯಾರಿಗೂ ತಿಳಿಯುವುದಿಲ್ಲ.
ಅವರವರ ಕಡಲ ಸೇರುವ ಧಾವಂತದಲಿ ಮನತಟ್ಟುವ ಹಾಡು ಮರೆಯಾಗದಿರಲಿ, ಕೈಚಾಚಿದವರತ್ತ ನಮ್ಮ ಕೈ ಚಾಚದಿದ್ದರೆ ಹೇಗೆ? ಗಂಟು ಮುಖದಲ್ಲೊಮ್ಮೆ ತುಸುನಗೆ ಮೆರೆಯದಿದ್ದರೆ ಹೇಗೆ? ಆರುತ್ತಿರುವ ಇನ್ನೊಬ್ಬರ ದೀಪಕ್ಕೆ ನಾಲ್ಕು ಹನಿ ಎಣ್ಣೆ ಹಾಕುವ ಉದಾರತೆ ಮೂಡದಿದ್ದರೆ ಹೇಗೆ? ಕಲ್ಲೋಲಗೊಂಡ ಕನಸುಗಳ ನೇವರಿಸದಿದ್ದರೆ ಹೇಗೆ? ಕಾಣದ ಕಡಲಿಗಾಗಿ ಕಾಣುವ ಜಗತ್ತನ್ನೇ ಮರೆತರೆ ಹೇಗೆ?
ಕಾಣದ ಕಡಲಿಗೆ ಮನ ಹಂಬಲಿಸುತ್ತಲೇ ಇರುತ್ತದೆ. ಆದರೆ, ಎಲ್ಲರ ಕಡಲೂ ಅಲ್ಲಲ್ಲೇ ಕಾಯುತ್ತಲೇ ಇರುತ್ತದೆ ಎಂಬ ಅರಿವು ಮರೆತೇ ಹೋಗುತ್ತದೆ. ಕಾಣದ ಕಡಲು ಕದಲದು. ಎಷ್ಟೇ ಹಂಬಲಿಸಿದರೂ- ಸೇರುವ ಕಡಲು ಸಿಕ್ಕೇಸಿಗುತ್ತದೆ. ಒಂದಷ್ಟು ತಾಳ್ಮೆ- ನಂಬಿಕೆ, ಒಂದಿಷ್ಟು ಭರವಸೆ- ವಿಶ್ವಾಸ ಇದ್ದಲ್ಲಿ ನಮ್ಮ ಕಡಲು ನಮಗಲ್ಲದೆ ಇನ್ಯಾರಿಗೆ ಸಿಗಲು ಸಾಧ್ಯ. ನಾವೇ ಕಡಲು- ನಮ್ಮೊಳಗೇ ಕಡಲು...
ಕಡಲ ಕೊನೆಗೆ.
ಯಾವ ಕಡಲನೂ ಸೇರುವ ಹಂಬಲ ಇಲ್ಲದ ಜೀವಿ ಇರುವುದೇ? ಇರಲು ಸಾಧ್ಯವೇ?
-ಕನ್ನಡಪ್ರಭದ ಸಂಪಾದಕರ ಸರದಿ ಅಂಕಣದಲ್ಲಿ ಪ್ರಕಟವಾದ ಬರಹ.
 

 

Comments