ಕಾಣೆಯಾಗಿ ಪತ್ತೆಯಾದ ನಾಯಿಮರಿ ಟಾಮಿ

ಕಾಣೆಯಾಗಿ ಪತ್ತೆಯಾದ ನಾಯಿಮರಿ ಟಾಮಿ

ನಡುರಾತ್ರಿಯಲ್ಲಿ ಟಾಮಿ ನಾಯಿಮರಿ ನಡುಗುತ್ತ ಹೇಳಿತು, “ಬಹಳ ಚಳಿಯಾಗುತ್ತಿದೆ." ಆಗ "ನನಗೆ ಒತ್ತಿಕೊಂಡು ಮಲಗು” ಎಂದಿತು ತಾಯಿ ನಾಯಿ.

“ಇದು ನ್ಯಾಯವಲ್ಲ. ನಾವ್ಯಾಕೆ ಮನೆಯ ಹೊರಗೆ ಚಳಿಯಲ್ಲಿ ಮಲಗಬೇಕು? ಬೆಕ್ಕುಗಳಿಗೆ ಮನೆಯೊಳಗೆ ಬೆಚ್ಚಗೆ ಬುಟ್ಟಿಯಲ್ಲಿ ಮಲಗಲು ಬಿಡುತ್ತಾರೆ” ಎಂದು ಗೊಣಗುಟ್ಟಿತು ಟಾಮಿ ನಾಯಿಮರಿ. “ನನ್ನ ಮುದ್ದಿನ ಮರಿ, ನಾವು ಮನೆ ಕಾಯುವ ನಾಯಿಗಳು. ನಾವು ಈ ಮನೆಯಲ್ಲಿ ಇರಬೇಕೆಂದರೆ ಗಟ್ಟಿಮುಟ್ಟಾಗಿದ್ದು, ಕಷ್ಟಪಟ್ಟು ಕೆಲಸ ಮಾಡಬೇಕು” ಎಂದು ಸಮಾಧಾನ ಪಡಿಸಿತು ತಾಯಿ ನಾಯಿ.

"ನಾನೊಂದು ಬೆಕ್ಕು ಆಗಲು ಇಷ್ಟ ಪಡುತ್ತೇನೆ. ಯಾಕೆಂದರೆ, ಬೆಕ್ಕುಗಳು ತಮ್ಮ ಮೈ ನೆಕ್ಕಿಕೊಂಡು, ಚೆನ್ನಾಗಿ ತಿಂದುಕೊಂಡು, ಮಲಗಿಕೊಂಡು ಇದ್ದರಾಯಿತು" ಎಂದಿತು ಟಾಮಿ. "ನಮ್ಮ ಜೀವನ ಕೆಟ್ಟದಾಗಿಲ್ಲ, ತಿಳಿದುಕೋ. ನಾಯಿ ಆಗಿದ್ದಕ್ಕೆ ಬೇಜಾರು ಪಟ್ಟುಕೊಳ್ಳಬೇಡ. ಮಲಗಿ ವಿಶ್ರಾಂತಿ ತಗೋ. ನಾಳೆ ಬಹಳಷ್ಟು ಕೆಲಸ ಮಾಡಲಿಕ್ಕಿದೆ" ಎಂದು ಗದರಿಸಿತು ತಾಯಿ ನಾಯಿ.

ಮರುದಿನ ಬೇಗನೇ ಎದ್ದ ಟಾಮಿ ನಾಯಿಮರಿ ಮನೆಯ ಎದುರಿನ ಹಾದಿಯಲ್ಲಿ ಅಡ್ಡಾಡಲು ಹೊರಟಿತು. ಹುಲ್ಲಿನ ನಡುವೆ ಓಡುತ್ತಾ ಅದು ಮೊಲಗಳನ್ನು ಓಡಿಸಿತು ಮತ್ತು ಹೂಗಳನ್ನು ಮೂಸಿ ನೋಡಿತು.

ಯಾವಾಗಲೂ ಆ ಹಾದಿಯ ಕೊನೆಗೆ ಹೋದಾಗ ಟಾಮಿ ಹಿಂದಕ್ಕೆ ತಿರುಗಿ ಬರುತ್ತಿತ್ತು. ಆದರೆ ಇವತ್ತು ಅಲ್ಲೊಂದು ಕೆಂಪು ಬಣ್ಣದ ವ್ಯಾನ್ ಮನೆಯೊಂದರ ಮುಂದೆ ನಿಂತಿತ್ತು. ವ್ಯಾನಿನ ಹಿಂಬದಿಯ ಬಾಗಿಲುಗಳು ತೆರೆದಿದ್ದವು. ಅದರೊಳಗೆ ಏನಿದೆ ಎಂದು ನೋಡಲಿಕ್ಕಾಗಿ ಟಾಮಿ ವ್ಯಾನಿಗೆ ಹತ್ತಿತು.

ಆ ವ್ಯಾನಿನಲ್ಲಿ ಹಲವಾರು ಪೀಠೋಪಕರಣಗಳು ಇದ್ದವು. ಕುಷನುಗಳಿದ್ದ ಒಂದು ದೊಡ್ಡ ಕುರ್ಚಿ ಹಿಂಭಾಗದಲ್ಲಿ ಇತ್ತು. ಅದನ್ನು ಹತ್ತಿದ ಟಾಮಿ ನಾಯಿಮರಿ "ನಾನು ಬೆಕ್ಕಿನಂತೆ ಇಲ್ಲಿ ಇಡೀ ದಿನ ತೂಕಡಿಸಬಲ್ಲೆ” ಎಂದು ಯೋಚಿಸಿತು. ಅದರಲ್ಲಿ ಮಲಗಿದ ಟಾಮಿಗೆ ತಕ್ಷಣವೇ ಗಾಢ ನಿದ್ದೆ ಬಂತು.

ಸ್ವಲ್ಪ ಹೊತ್ತಿನ ನಂತರ ಆ ಕುರ್ಚಿ ಜೋರಾಗಿ ಓಲಾಡಿದಾಗ ಟಾಮಿಗೆ ಎಚ್ಚರವಾಯಿತು. “ಓ, ನಾನೀಗ ಮನೆಗೆ ವಾಪಾಸು ಹೋಗಬೇಕು. ತುಂಬ ಕೆಲಸವಿದೆ” ಎಂದು ನೋಡಿದಾಗ, ವ್ಯಾನಿನ ಹಿಂಬದಿಯ ಬಾಗಿಲುಗಳನ್ನು  ಮುಚ್ಚಲಾಗಿತ್ತು!

“ಓ, ನಾನಿಲ್ಲಿ ಸಿಕ್ಕಿ ಬಿದ್ದರೆ ಬಹಳ ತೊಂದರೆಯಾಗಲಿದೆ” ಎಂದು ಯೋಚಿಸಿದ ಟಾಮಿ ಆ ಕುರ್ಚಿಯ ಹಿಂಬದಿಯಲ್ಲಿ ಅಡಗಿ ಕುಳಿತಿತು. ಅನಂತರ ಚಲಿಸುತ್ತಿದ್ದ ವ್ಯಾನ್ ನಿಂತಿತು. ಅದರ ಹಿಂಭಾಗದ ಬಾಗಿಲುಗಳನ್ನು ತೆರೆದು, ಇಬ್ಬರು ಗಂಡಸರು ಅಲ್ಲಿದ್ದ ಪೀಠೋಪಕರಣಗಳನ್ನು ಇಳಿಸತೊಡಗಿದರು. ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ಖಚಿತ ಪಡಿಸಿಕೊಂಡ ಟಾಮಿ, ವ್ಯಾನಿನಿಂದ ಕೆಳಗೆ ಜಿಗಿಯಿತು. ಆದರೆ ಅದು ಟಾಮಿಯ ಹಳ್ಳಿ ಆಗಿರಲಿಲ್ಲ! ಅದು ಗದ್ದಲ ತುಂಬಿದ ದೊಡ್ಡ ನಗರವಾಗಿತ್ತು. ಅಲ್ಲಿದ್ದವು ಹಲವಾರು ದೊಡ್ಡ ಕಟ್ಟಡಗಳು ಮತ್ತು ಕಾರುಗಳು.

ಪಾಪದ ಟಾಮಿಗೆ ತಾನು ಎಲ್ಲಿದ್ದೇನೆಂಬುದೇ ಗೊತ್ತಾಗಲಿಲ್ಲ! “ನನ್ನನ್ನು ವ್ಯಾನು ಇಲ್ಲಿಯ ವರೆಗೆ ತಂದಿದೆ" ಎಂದಷ್ಟೇ ಅದಕ್ಕೆ ಗೊತ್ತಾಯಿತು. ಹೆದರಿಕೆಯೂ ಆಯಿತು. ಇಡೀ ದಿನ ಟಾಮಿ ಅಲ್ಲೆಲ್ಲ ಸುತ್ತಾಡಿತು. ಆದರೆ ಅದಕ್ಕೆ ಮನೆಗೆ ಹಿಂತಿರುಗುವ ದಾರಿ ಗೊತ್ತಾಗಲಿಲ್ಲ. ಕೊನೆಗೆ ಸುಸ್ತಾಗಿ, ಹಸಿವಿನಿಂದ ಕಂಗಾಲಾದ ಟಾಮಿ ರಸ್ತೆ ಬದಿಯಲ್ಲಿ ಕುಳಿತು ಜೋರಾಗಿ ಬೊಗಳ ತೊಡಗಿತು.

ಆಗ ಗಂಡಸೊಬ್ಬ ನಿಂತು ಟಾಮಿಯನ್ನು ನೋಡಿದ. "ಏನಾಯಿತು ನಾಯಿಮರಿ? ನಿನಗೆ ದಾರಿ ತಪ್ಪಿರಬೇಕು. ನಮ್ಮ ಮನೆಗೆ ಬಾ" ಎಂದು ಕೈ ಚಾಚಿದ. ಟಾಮಿ ಅವನ ಕೈಯನ್ನು ನೆಕ್ಕಿತು ಮತ್ತು ಅವನನ್ನು ಹಿಂಬಾಲಿಸಿತು.

ಅವನ ಮನೆ ತಲಪಿದ ಟಾಮಿ ನಾಯಿಮರಿ, ಮನೆಬಾಗಿಲಿನಲ್ಲೇ ಕುಳಿತಿತು - ಅವನು ಏನಾದರೂ ತಿನಿಸನ್ನು ಅಲ್ಲಿಗೇ ತಂದು ಕೊಡುತ್ತಾನೆಂಬ ನಿರೀಕ್ಷೆಯಿಂದ. ಆದರೆ ಆ ಗಂಡಸು “ಅಲ್ಲಿ ಕೂರಬೇಡ, ಒಳಗೆ ಬಾ” ಎಂದು ಟಾಮಿಯನ್ನು ಕರೆದ.

ಮನೆಯೊಳಗೆ ಬಂದ ಟಾಮಿಗೆ ಅಲ್ಲಿ ಇನ್ನೊಂದು ಮುದ್ದಿನ ನಾಯಿಮರಿಯನ್ನು ಕಂಡು ಅಚ್ಚರಿ. ಆ ಪೂಡಲ್ ಜಾತಿಯ ನಾಯಿಮರಿಯ ಮೈಯಲ್ಲಿ ಕೂದಲುಗಳೇ ಇರಲಿಲ್ಲ ಎನ್ನಬಹುದು.

ಟಾಮಿಯ ಧೂಳು ತುಂಬಿದ ಬಿಳಿ ಮೈ ಕಂಡ ಗಂಡಸು “ನೀನು ಆಹಾರ ತಿನ್ನುವ ಮುಂಚೆ ಸ್ನಾನ ಮಾಡು" ಎಂದ. ಒಂದು ದೊಡ್ಡ ಪ್ಲಾಸ್ಟಿಕ್ ಟಬ್‌ನಲ್ಲಿದ್ದ ನೀರಿನಲ್ಲಿ ಟಾಮಿಯನ್ನು ಹಾಕಿ, ಅದರ ಮೈಯನ್ನು ಚೆನ್ನಾಗಿ ತೊಳೆದ ಆ ಗಂಡಸು. “ಅಯ್ಯೋ, ಇದೆಂತಹ ಶಿಕ್ಷೆ" ಎಂದು ಯೋಚಿಸಿತು ಟಾಮಿ. ಯಾಕೆಂದರೆ ಅದಕ್ಕೆ ಆ ವರೆಗೆ ಯಾರೂ ಹಾಗೆ ಸ್ನಾನ ಮಾಡಿಸಿರಲಿಲ್ಲ!   

ಅನಂತರ, ಆ ಗಂಡಸು ಆ ಎರಡೂ ನಾಯಿಗಳಿಗೆ ಪುಟ್ಟ ಪಾತ್ರೆಯಲ್ಲಿ ಪುಟ್ಟ ಬಿಸ್ಕಿಟುಗಳನ್ನು ತಿನ್ನಲು ಕೊಟ್ಟ. ಅವನ್ನು ಮೂಸಿ ನೋಡಿದ ಟಾಮಿ ಅಸಹ್ಯ ಪಟ್ಟು ಮುಖ ತಿರುಗಿಸಿತು. ಯಾಕೆಂದರೆ, ತನ್ನ ಹಳ್ಳಿ ಮನೆಯಲ್ಲಿ ಟಾಮಿ ತಿನ್ನುತ್ತಿದ್ದದ್ದು ಮಾಂಸದ ತುಂಡುಗಳನ್ನು . “ಇದು ಬೆಕ್ಕಿನ ಆಹಾರದಂತಿದೆ” ಎಂದಿತು ಟಾಮಿ. ತದನಂತರ, ಫೂಡಲ್ ಅಡಿಗೆಕೋಣೆಯಲ್ಲಿದ್ದ ಬುಟ್ಟಿಯೊಳಗೆ ನಿದ್ದೆ ಮಾಡಲಿಕ್ಕಾಗಿ ಸೇರಿಕೊಂಡಿತು. ಅದನ್ನು ಕಂಡು ಟಾಮಿಗೆ ಆಶ್ಚರ್ಯ. ಯಾಕೆಂದರೆ ಅದೊಂದು ಬೆಕ್ಕು ಮಲಗುವ ಬುಟ್ಟಿ ಎಂದೆಣಿಸಿತ್ತು ಟಾಮಿ. ಎಷ್ಟು ಹೊರಳಾಡಿದರೂ ಟಾಮಿಗೆ ಬುಟ್ಟಿಯಲ್ಲಿ ನಿದ್ದೆ ಬರಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಟಾಮಿಯ ತಾಯಿ ಜೊತೆಗಿರಲಿಲ್ಲ. “ನನಗೆ ನನ್ನ ಮನೆಗೆ ಹೋಗಬೇಕಾಗಿದೆ” ಎನ್ನುತ್ತಿದ್ದಂತೆ ಟಾಮಿಗೆ ಅಳುವೇ ಬಂತು; ಅದರ ಕಣ್ಣುಗಳಿಂದ ಕಣ್ಣೀರು ತೊಟ್ಟಿಕ್ಕಿತು.

ಮರುದಿನ ಬೆಳಗ್ಗೆ ಆ ಗಂಡಸು ಟಾಮಿಯ ಕುತ್ತಿಗೆಗೆ ಸರಪಳಿ ಬಿಗಿದು, ಅದನ್ನು ಸುತ್ತಾಡಲು ಕರೆದೊಯ್ದ. ಯಾವತ್ತೂ ಈ ರೀತಿಯಲ್ಲಿ ಸುತ್ತಾಟಕ್ಕೆ ಹೋಗಿರದಿದ್ದ ಟಾಮಿಗೆ ಬಹಳ ಸಂಕಟವಾಯಿತು.

ಅವರು ಮಾರ್ಕೆಟಿನ ಪಕ್ಕದಲ್ಲಿ ಹಾದು ಹೋಗುತ್ತಿದ್ದಾಗ, ಟಾಮಿಗೆ ತೀರಾ ಪರಿಚಿತವಾದ ಧ್ವನಿ ಕೇಳಿಸಿತು. ಟಾಮಿ ಸುತ್ತ ನೋಡಿದಾಗ, ತನ್ನ ಮಾಲೀಕನ ಟ್ರಕ್ಕಿನ ಬಾಗಿಲಿನ ಕಿಂಡಿಯಲ್ಲಿ ಟಾಮಿಗೆ ತಾಯಿ ನಾಯಿಯ ಮುಖ ಕಾಣಿಸಿತು. ಟಾಮಿ ಜೋರಾಗಿ ಬೊಗಳಲು ಆರಂಭಿಸಿತು ಮತ್ತು ಆ ಗಂಡಸನ್ನು ಟ್ರಕ್ ನಿಂತಿದ್ದಲ್ಲಿಗೆ ಎಳೆದೊಯ್ದಿತು. ಟಾಮಿಯ ಮಾಲೀಕನಿಗೆ ಅಚ್ಚರಿಯೋ ಅಚ್ಚರಿ. ಟಾಮಿ ಅಷ್ಟು ಶುಚಿಯಾಗಿರುವುದನ್ನು ಅವನು ಕಂಡಿರಲೇ ಇಲ್ಲ! ಆ ಗಂಡಸು ತನಗೆ ಟಾಮಿ ಹೇಗೆ ಸಿಕ್ಕಿತೆಂದು ಮಾಲೀಕನಿಗೆ ವಿವರಿಸಿದ. ಟಾಮಿಯನ್ನು ರಕ್ಷಿಸಿದ್ದಕ್ಕಾಗಿ ಆತನಿಗೆ ಮಾಲೀಕ ಕೃತಜ್ನತೆಗಳನ್ನು ಅರ್ಪಿಸಿದ.

ಹಳ್ಳಿಗೆ ಹಿಂತಿರುಗುವಾಗ, ನಿನ್ನೆಯಿಂದ ಏನೆಲ್ಲ ಆಯಿತೆಂದು ತಾಯಿಗೆ ಟಾಮಿ ಹೇಳಿತು. "ನಿನಗೆ ಮನೆ ಕಾಯುವ ನಾಯಿ ಆಗಲು ಇಷ್ಟವಿಲ್ಲದ ಕಾರಣ ನೀನು ಮನೆ ಬಿಟ್ಟು ಓಡಿ ಹೋಗಿರಬೇಕೆಂದು ನಾನು ಯೋಚಿಸಿದೆ” ಎಂದಿತು ತಾಯಿ ನಾಯಿ.

“ಓ, ಹಾಗಲ್ಲವೇ ಅಲ್ಲ ಅಮ್ಮ. ನನಗೆ ಮನೆ ನಾಯಿಯಾಗಲು ಬಹಳ ಇಷ್ಟ. ನಮ್ಮ ಮನೆಗೆ ಯಾವಾಗ ಹೋಗುತ್ತೇವೆಂದು ಕಾಯುತ್ತಿದ್ದೇನೆ. ಅಲ್ಲಿ ಕೊಡುವ ರಸಭರಿತ ಎಲುಬಿನ ತುಂಡು ಮತ್ತು ಮಲಗಲು ನಕ್ಷತ್ರಗಳ ಕೆಳಗಿನ ಹಾಸಿಗೆ ಯಾವಾಗ ಸಿಕ್ಕೀತೆಂದು ಕಾಯುತ್ತಿದ್ದೇನೆ” ಎಂದಿತು ಗೆಲುವಿನಿಂದ ಟಾಮಿ ನಾಯಿಮರಿ.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ