ಕಾತುರ - ನಿರೀಕ್ಷೆ ಎರಡು ಕವನಗಳು
ಬರಹ
ಕಾತುರ
ಹಳೆಯ ಗಾಯವಾದರೆ ಮಾಸಬಹುದು,
ಮಾಸಗಳು ಕಳೆಯಲು ನೆನಪುಗಳು ಮರೆಯಬಹುದು.
ಬೆಳದಿಂಗಳ ಹಿಡಿಯ ಬಯಸುವ ಮುಗ್ದ ಮನಸಿನ ಪ್ರೀತಿ,
ವಸಂತಕ್ಕೆ ಕಾದು ಮನ ಮಿಡಿತವ ಹಿಡಿದಿಡುವ ಕೋಗಿಲೆಯ ರೀತಿ.
ಮುಗಿಲ ಮರೆಮಾಚುವ ಕಾರ್ಮುಗಿಲ ಕಾದ ನವಿಲಿನಂತೆ,
ನಿನ್ನ ಸವಿ ನುಡಿಗಾಗಿ ಕಾಯುತಿರುವೆ ಮುಂಗಾರಿನ ಮಿಂಚಿನಂತೆ.
ನಿರೀಕ್ಷೆ
ಸಂಜೆ ಸೂರ್ಯ ಕಡಲಿಗಿಳಿದ ಭೂತಾಯಿಯ ಮೈಯ ತೋಯ್ದು ತೋಯ್ದು
ಕಿವ್ ಕಿವ್ ಹಕ್ಕಿಗಳು ಹಾರ ಹತ್ತವು ಆತುರದಿ ಗೂಡತ್ತ ಎದ್ದು ಬಿದ್ದು
ಕೆಂಪು ಗುಲಾಬಿ ಎಸಳ ಮುಚ್ಚುತಿತ್ತು ಬಾರದ ದುಂಬಿಯ ನೆನೆದು ನೆನೆದು
ಮುಗಿಲ ಕವಿದ ಮೋಡ ಧರೆಗಿಳಿಯಿತು ಮಳೆ ನೀರಾಗಿ ಸುರಿದು ಸುರಿದು
ಅಳುವ ಮಗು ನಿದ್ದೆಯ ಮಡಿಲಿಗೆ ಜಾರುತಿದೆ ಮಾಡಿ ಕಣ್ಣೀರ ಬರಿದು
ನಾನಿಲ್ಲಿ ಕಣ್ಣರಳಿಸಿ, ಕಿವಿಯಗಲಿಸಿ ಕೂತಿರುವೆ ಅವಳಿಗಾಗಿ ಕಾದು ಕಾದು