ಕಾದಿರುವಳು ತಾಯಿ...
ಕಾದಿರುವಳು ಮುಗ್ಧ ತಾಯಿ
ತನ್ನ ಮಗನು ಬರುವನೆಂದು
ಓಡೋಡಿಯೇ ಬರುವನೆಂದು!
ಎನ್ನ ನಿಗಾ ವಹಿಸುವನೆಂದು!
ಸೈನ್ಯಕೆಂದು ಓಡಿ ಹೋದವನು
ಒಂಟಿಯಾಗೇ ತೆರಳಿದವನು
ತುತ್ತು ಕೂಳಿಗಾಗಿ ಅಲೆದವನು
ತಾಯಿ ನೆನಪಲೇ ತೆರಳಿದವನು!
ಸೋದರ ಪ್ರೀತಿ ಗಳಿಸಿದವನು
ಬರೀ ನಿಂದೆಗೊಳಗಾದವನು
ತಂದೆಯ ಕಾಣದ ಮುಗ್ಧನು
ಹಳ್ಳಿಯಿಂದ ಮೇಲೆದ್ದವನು!
ದೇಶಕಾಗಿ ಹೋರಾಡಿದವನು
ತನ್ನ ರಕ್ತವನೇ ಸುರಿಸಿದವನು
ಕೊಟ್ಟಷ್ಟೇ ಸ್ವೀಕರಿಸಿದವನು
ನೂರಾರು ಕನಸ ಹೊತ್ತವನು!
ಆರಂಭವಾಗೆ ಹಾಳು ಯುದ್ಧ
ಕರ್ತವ್ಯಕ್ಕೆ ಓ ಎಂದು ತೆರಳಿದ್ದ
ಎದೆಯುಬ್ಬಿ ಸಮರಕೆ ಹೋದ
ತಾಯ್ನಾಡ ಪ್ರೀತಿಯ ಯೋಧ!
ತಾಯಿ ಕಾದಿಹಳು ಹಗಳಿರುಳು
ಮಗನು ಬಂದೇ ಬರುವನೆಂದು
ವೃಧ್ಯಾಪ್ಯಕೆ ಊರುಗೋಲೆಂದು
ತಾಯ್ನಾಡ ರಕ್ಷಿಪ ಕಲಿಯೆಂದು!
ಇದೆಂದೂ ಮುಗಿಯದ ಯುದ್ಧ
ತಾಯ್ನಾಡ ಹೋರಾಟಕೆ ಬದ್ಧ
ಎಲ್ಲಿಂದಲೋ ಗುಂಡಿನ ಧಾಳಿ
ಪ್ರಾಣ ತೆತ್ತನೇ ಈ ನಾಡ ಗೂಳಿ!
ಕಾದಿರುವಳು ಮುಗ್ಧ ತಾಯಿ...
ತನ್ನ ಮಗನು ಬರುವನೆಂದು...
ಓಡೋಡಿಯೇ ಬರುವನೆಂದು...
ಎನ್ನ ನಿಗಾ ವಹಿಸುವನೆಂದು...
ಬಂದಾ ಎಂದೋಡಿದಳಾ ತಾಯಿ
ತನ್ನ ಮಗನ ಮುಖ ನೋಡಲೆಂದು...
ಪ್ಲೆನಿನಿಂದಿಳಿದಾ ತ್ರಿವರ್ಣ ಪೆಟ್ಟಿಗೆಗೆ
ಸೆಲ್ಯೂಟ್ ಹೊಡೆದಳಾ ವೀರಮಾತೆ!
-ಕೆ ನಟರಾಜ್, ಬೆಂಗಳೂರು
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ
