ಕಾದ ಪಿತಾಮಹ

ಈ ಮಕರ ಸಂಕ್ರಮಣದ
ತೇರನೆಳೆಯುವ ಹೆಗಲಿಗೆ
ಜೊತೆಯಿಲ್ಲವೇಕೊ ಕಾಣೆ
ನಿಲ್ಲದ ಚಕ್ರದಭಿಯಾನ ||
ಕಾದ ಭೀಷ್ಮರ ಯಾತನೆ
ಜೋತಾಡಿ ತಲೆ ಶರಶಯ್ಯೆ
ಕತ್ತ ನೋಯಿಸಿ ಬಳಲಿಕೆ
ಬಾಣದಾಸರೆಯಿಲ್ಲದ ಕೊರಳು ||
ಯಾಕೊ ಕಾಣನಲ್ಲಿ ಪಾರ್ಥ
ಇರಿದು ಇಳೆಯೊಡಲಿಗೆ ಗಂಗೆ
ಜಲಧಾರೆ ಚಿಮ್ಮಿಸಿ ಕತ್ತಿಗಾಸರೆ
ಇಚ್ಛಾಮರಣಕೆ ಕಾದು ಬವಳಿ ||
ಉತ್ತರಾಯಣ ಪುಣ್ಯಕಾಲವಿದು
ತೆರೆದ ಸ್ವರ್ಗದ ಬಾಗಿಲ ಸುದ್ದಿ
ಆಗದಿರೆ ಬಿಡುಗಡೆ ಮತ್ತೆ ಕಾದು
ಮರುಸಂಕ್ರಮಣ ಮರಳೊ ಹಾದಿ ||
ಕಳೆದುವದೆಷ್ಟೊ ಕಾಲ ನಿಲದಲ್ಲ
ಈ ಸಂಕ್ರಾಂತಿಯೂ ಹೊಸದಲ್ಲ
ಎಳ್ಳೊ ಜೊಳ್ಳೊ ಒಳ್ಳೆ ಮಾತಾಡಿ
ಸರದಿಗೆ ಕಾದಿರುವ ಪಿತಾಮಹ ||
- ನಾಗೇಶ ಮೈಸೂರು