ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!

ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!

ಕಾಡಿನ ಸೆಳೆತ ಒಬ್ಬೊಬ್ಬರಿಗೆ ಒಂದೊಂದು ಅನುಭವ  ನೀಡುತ್ತದೆ . ನನ್ನ ಎರಡನೇ ಕಂತನ್ನು ಸಹೋದರಿಬಿ.ಸೌಮ್ಯ ರವರ "ಹುಚ್ಚು ಮನಸಿನ ಹತ್ತೆಂಟು ಕನಸುಗಳು " ಬ್ಲಾಗಿನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ" ಅರಣ್ಯ ಹಾಗು ನದಿ"   ಕವಿತೆಯ ಕೆಲವು ಸಾಲಿನಿಂದ[ ಅವರ ಅನುಮತಿ ಪಡೆದು ] ಶುರುಮಾಡುತ್ತೇನೆ. ಸುಂದರ ಸಾಲುಗಳಲ್ಲಿ ಅರಣ್ಯ ಹಾಗು ನದಿಯ ಬಗ್ಗೆ  ಸುಂದರ ವರ್ಣನೆ ಇದೆ . ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ

'ನದಿ ಮತ್ತು ಅರಣ್ಯ'....! ವಾಹ್ ಎಂತಹ ಸಾಲುಗಳಲ್ವ ಕಾಡಿನಲ್ಲಿ ಅಲೆಯುವ ನನಗೆ ಒಮ್ಮೊಮ್ಮೆ ಹೀಗೆ ಆನಿಸುತ್ತದೆ.ನಮ್ಮ  ಮೊದಲ ಕಾಡಿನ ಅನುಭವ ಹೀಗೆ ಶುರುವಾಯಿತು.ಮೈಸೂರಿನಿಂದ ಹುಣಸೂರಿನ ಮೂಲಕ ಸಾಗಿ ಹೆಗ್ಗಡದೇವನ ಕೋಟೆ ತಲುಪಿ ನಂತರ ನಾವು ಸಂಜೆ ತಲುಪಿದ ಜಾಗ " ಬಳ್ಳೆ" ಎಂಬ ಜಾಗಕ್ಕೆ .ಇದು ಕಾರಾಪುರ ಮಾನಂದ ವಾಡಿ ರಸ್ತೆಯಲ್ಲಿ ಬರುವ " ನಾಗರ ಹೊಳೆ' ರಕ್ಷಿತಾರಣ್ಯ ಕ್ಕೆ ಸೇರಿದ್ದು ಪ್ರವಾಸಿಗಳಿಗೆ  ನಿಶಿದ್ದ ಪ್ರದೇಶ !!, ಅರಣ್ಯ ಇಲಾಖೆಯ ಅಧಿಕಾರಿಗಳ  ಅನುಮತಿ  ಪಡೆದಿದ್ದ ನಮಗೆ [ಅನುಮತಿ ನೀಡುವ ಮೊದಲು ನಮ್ಮ ಬಗ್ಗೆ ವಿವರ ಪಡೆದಿದ್ದರು ]ಅಲ್ಲಿ ಉಳಿಯಲು  ತಡೆಯಾಗಲಿಲ್ಲ. ತಲುಪುವ ವೇಳೆಗೆ  ಸಂಜೆಯ ವೇಳೆ ಆಗಿತ್ತು. ಆದರದಿ ಸ್ವಾಗತಿಸಿದ ಅಲ್ಲಿನ ಅಧಿಕಾರಿ  ಕಾಫಿ ನೀಡಿ ಸತ್ಕರಿಸಿ  ಪರಿಚಯಿಸಿಕೊಂಡರು.ಬನ್ನಿ ಸಾರ್ ಒಂದು ರೌಂಡು ಹೋಗೋಣ ಅಂತಾ ನಮ್ಮನ್ನು ಕರೆದುಕೊಂಡು ಕಾಡಿನ ಒಳಗೆ ಹೋದರು ನಮಗೋ ಹಿಗ್ಗೋ ಹಿಗ್ಗು ಅರಣ್ಯದೊಳಗೆ ಕಾಲಿಟ್ಟ ಸಂತಸ ಕ್ಷಣ ಮುಧನೀಡಿತ್ತು.ಜೀಪಿನಲ್ಲಿ ಹೊರಟ ನಾವು ಅರಣ್ಯದಲ್ಲಿ ಕ್ಯಾಮರ ಸಿದ್ದ ಪಡಿಸಿಕೊಂಡು  ಬಳ್ಳೆ ಯಿಂದ ಕೈಮರ ಎಂಬ ಜಾಗಕ್ಕೆ ಹೊರಟಿದ್ದೆವು.ಸುಮಾರು ನಾಲ್ಕು ಕಿ.ಮಿ.ಕ್ರಮಿಸಿದ ನಮಗೆ ಗೇಂ   ರೂಟಿನ [ಅರಣ್ಯ ಇಲಾಖೆ ವಾಹನಗಳು ಗಸ್ತು ತಿರುಗುವ ಹಾದಿ ಗೆ ಹಾಗೆ ಕರೆಯುತ್ತಾರೆ ] ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡ ಹುಲ್ಲುಗಳ ಹಾದಿಯಲ್ಲಿ ಬೆಳೆದಿದ್ದ ಪೊದೆಗಳ ಸಾಲು ಸಿಕ್ಕಿತ್ತು. ಮುಂದೆ ಕುಳಿತಿದ್ದ  ನನ್ನ ಸಹೋದರ ವೇಣು " ಹುಲಿ ಹುಲಿ " ಮೆಲುದನಿಯಲ್ಲಿ ಉಸುರಿದರು.[ಚಿತ್ರ ಕೃಪೆ ಅಂತರ್ಜಾಲ ] ದಟ್ಟ ಕಾನನದ ಮಧ್ಯೆ  ಜೀಪಿನಿಂದ ಕೇವಲ ಕೆಲವೇ ಅಡಿಗಳ ದೂರದಲ್ಲಿ  ಹುಲಿರಾಯ ದರ್ಶನ ನೀಡಿದ್ದ !! ಹುಲಿ ನೋಡಲು ಆಸೆ ಯಿಂದ ಎಲ್ಲರು ತವಕಪಡುತ್ತಿರುವಾಗ ಡ್ರೈವರ್ ಸ್ವಲ್ಪ ಜೀಪನ್ನು ಸ್ವಲ್ಪ ಮುಂದೆ ಕೆಲವು ಅಡಿ ಮುನ್ನಡೆಸಿದ್ದರು. ಸ್ವಲ್ಪ ಮುಂದೆ ಬಂದ ಜೀಪು ಗೊರ ಗೊರ ಅಂದು  ಸದ್ದುಮಾಡಿ ನಿಂತೇ ಬಿಟ್ಟಿತು. ಬಾಲೂ ಸಾರ್ ಸ್ವಲ್ಪ ನಿಮ್ಮ ಕಾಲನ್ನು ಬ್ಯಾಟರಿ ಮೇಲಿಂದ  ತೆಗಿರೀ ಅಂದ್ರೂ . ಕೆಳಗೆ ಇಳಿಯಲು ಎಲ್ಲರಿಗೂ ಭಯ  ಹುಲಿರಾಯ ನಮ್ಮಿಂದ ಕೆಲವೇ ಅಡಿಗಳ ಅಂತರದಲ್ಲಿ [ಅಂದಾಜು ಹತ್ತು ಅಡಿ ]ಪೊದೆಯೊಳಗೆ  ನಮ್ಮನ್ನು ಲೆಕ್ಕಿಸದೆ ಕುಳಿತಿದ್ದ.ನಮಗೋ ಇಂತಹ ಅನುಭವ ಜೀವಮಾನದಲ್ಲ್ಲಿ ಹೊಸದು!!!,  . ಕತ್ತಲು ಬೇರೆ  ನಮಗಿದ್ದ ಧೈರ್ಯ ಅಂದ್ರೆ ಡಿಸ್ಕವರಿ , ನ್ಯಾಷನಲ್ ಜಿಯೋಗ್ರಫಿ  ಚಾನಲ್ ನೋಡಿದ್ದ ಅನುಭವ ಅಷ್ಟೇ . ನಮ್ಮ ಜೊತೆಗಿದ್ದ ಅರಣ್ಯಾಧಿಕಾರಿ ಪಿಸು ಮಾತಿನಲ್ಲಿ   ಹೆದರಬೇಡಿ  ಹಾಗೆ ಕುಳಿತಿರಿ ಅಂದ್ರೂ, ದಟ್ಟ ಅರಣ್ಯದ ಮಧ್ಯೆ ಹುಲಿಯ ಸನಿಹದಲ್ಲಿ ಕೆಟ್ಟು ನಿಂತಿರುವ ಜೀಪಿನೊಳಗೆ ರಾತ್ರೀ ವೇಳೆ ಅಲುಗಾಡದೆ ಕುಳಿತು ಪೊದೆಯೊಳಗೆ ಅಡಗಿದ್ದ ಹುಲಿಯನ್ನು ನೆನೆಯುತ್ತಾ ಸುಮಾರು ಮುಕ್ಕಾಲು ಘಂಟೆ ಅಲುಗಾಡದೆ ಉಸಿರು ಬಿಗಿಹಿಡಿದು  ಕುಳಿತಿದ್ದೆವು.ಸ್ವಲ್ಪ ಸಮಯದಲ್ಲಿ ವಾಚರ್ ಒಬ್ಬರು ಸಾ ಹುಲಿ ಓಯ್ತು ಅಂದ್ರು !!! ಸರಿ ತಾಳಿ ಸಡನ್ನಾಗಿ ಇಳೀಬೇಡಿ ಅಂತಾ ಅರಣ್ಯಾಧಿಕಾರಿಗಳು ಮೊದಲು ತಾವು ಇಳಿದು ಸ್ವಲ್ಪ ಸಮಯದ  ನಂತರ ನಮ್ಮನ್ನು ಇಳಿಯಲು ಹೇಳಿದರು. ಹುಲಿಎನೋ ಹೋಯ್ತು  ಆ ಭಯದಲ್ಲಿ ಫೋಟೋ ತೆಗೆಯುವ ಕೈಗಳು ಕ್ಯಾಮರಾವನ್ನು ಕೆಳಗಿಟ್ಟು ಹುಲಿಯ ಫೋಟೋ ತೆಗೆಯಲು ನಿರಾಕರಿಸಿದ್ದವು .ಮುಂದಿನ ಕಾರ್ಯ ಕೆಟ್ಟ ಜೀಪಿನ ರಿಪೇರಿ; ಒಬ್ಬೊಬ್ಬರಾಗಿ ಇಳಿದ ನಾವು ಜೀಪಿನ  ಮುಂಬಾಗ ಬಂದು ತಲೆಗೆ ಕಟ್ಟಿಕೊಂಡಿದ್ದ ಲೈಟ್ ಆನ್ ಮಾಡಿದೆವು .ಜೀಪಿನ ಬ್ಯಾಟರಿ ಸರಿಯಾಗಿತ್ತು ಬಾನೆಟ್ ತೆಗೆದು ನೋಡಿದರೆ ವೈರು ಶಾರ್ಟ್ ಸರ್ಕ್ಯುಟ್ ಆಗಿ ಬೆಂದು ಹೋಗಿತ್ತು. ಸರಿ ರಿಪೇರಿ ಪ್ರಾರಂಭ ನಮ್ಮ ತಂಡದ ಸದಸ್ಯರೇ ಸೇರಿ ವೈರನ್ನು ಡೈರೆಕ್ಟ್  ಲಿಂಕ್ ಮಾಡಿ ಗಾಡಿಯನ್ನು ಸ್ಟಾರ್ಟ್ ಮಾಡಿದರು. ತುಂಬಾ ಹೊತ್ತಾಯ್ತು; ಕೈಮರ ಬೇಡ ವಾಪಸ್ಸು ಹೋಗೋಣ ಅಂತಾ ತೀರ್ಮಾನಿಸಿ ಜೀಪನ್ನು ಹಿಂದಕ್ಕೆ ತಿರುಗಿಸೋಣ ಅಂದ್ರೆ ಜಾಗ ಇದ್ರೆ ತಾನೇ ಹಾದಿಯ ಇಕ್ಕೆಲಗಳಲ್ಲೂ ಪೊದೆ ಮರಗಳಿಂದ  ಜೀಪ್ ತಿರುಗಿಸಲು ಆಗದ ಪರಿಸ್ತಿತಿ.ಸರಿ ನಮ್ಮ ಡ್ರೈವರ್ ಸೈಯದ್ ಸಾಹೇಬರು ಬುಡಿ ಸಾ ರಿವರ್ಸ್ ನಲ್ಲೆ ಹೋಗೋಣ ಅಂತಾ ಸುಮಾರು ಒಂದು ಕಿ.ಮಿ. ರಿವರ್ಸ್ ನಲ್ಲೆ ಜೀಪನ್ನು ಸಾಗಿಸಿ ನಂತರ ಸಿಕ್ಕ ಒಂದು ಜಾಗದಲ್ಲಿ ರಿವರ್ಸ್ ತೆಗೆದು ಮುಖ್ಯ ರಸ್ತೆ ತಂದು ನಮ್ಮನ್ನು ಜೋಪಾನವಾಗಿ; ಮೊದಲಿನ ಜಾಗಕ್ಕೆ ಸೇರಿಸಿ ನಿಟ್ಟುಸಿರು ಬಿಟ್ಟರು .ನಂತರ ಅಲ್ಲಿದ್ದ ರೂಮುಗಳಲ್ಲಿ ಸಿದ್ದವಿದ್ದ ಆಹಾರ ಸೇವಿಸಿ ರಸ್ತೆಯಲ್ಲಿ ಮತ್ತೊಂದು ಸುತ್ತು ಸುಮಾರು ಎರಡು ಮೂರು ಕಿ.ಮಿ. ಹೋಗಿ ಬಂದು ಕೆಲವು ಕಾಡೆಮ್ಮೆ ಹಾಗು ಜಿಂಕೆಗಳನ್ನು ಕಣ್ತುಂಬ ನೋಡಿ ಬಂದು ಮಲಗಿದೆವು. ರಾತ್ರಿ ವೇಳೆ ತೆಗೆದ ಫೋಟೋಗಳು ಅಂದು ಕೊಂಡ ರೀತಿ ಬರದ ಕಾರಣ ನೋಡಿದ್ದಷ್ಟೇ ಭಾಗ್ಯ ಅಂತಾ ನಿದ್ರೆಗೆ ಜಾರಿದೆವು. ನನ್ನ ಮನಸ್ಸಿನಲ್ಲಿ ಅರಣ್ಯಾಧಿಕಾರಿ ಹೇಳಿದ್ದ ಮಾತು ""ಸಾರ್ ನೀವು ಪುಣ್ಯಾ ಮಾಡಿದ್ರೀ ಸಾವಿರಾರು ರುಪಾಯಿ ಖರ್ಚು ಮಾಡಿ ಇಲ್ಲಿಗೆ ಬಂದು ಜಂಗಲ್ ಲಾಡ್ಜ್ ನಲ್ಲಿ ಉಳಿದು ಹಲವಾರು ದಿನ ಅಲೆಯೋ ಜನರಿಗೆ ಹುಲಿ ಸಿಗೋಲ್ಲ ಆದ್ರೆ ನಿಮ್ ಅದೃಷ್ಟ ನೋಡಿ  " ಅನ್ನೋ ಮಾತು ಮನದಲ್ಲಿ ಹಾಗೆ ಉಳಿದು ಮನದಲ್ಲಿ ಮಂಡಿಗೆ ತಿನ್ನುತ್ತಾ ನಿದ್ರೆಗೆ ಜಾರಿದ್ದೆ.ಹುಲಿಯ ಹೆಜ್ಜೆಯಂತೆ  ಈ ಮಾತು ಮನದಲ್ಲಿ ಉಳಿದು ಕನಸುಗಳೂ ಸಹ ಹೆದರಿಕೊಂಡು ಅವಿತುಕೊಂಡು  ಕನಸಿಲ್ಲದ ರಾತ್ರಿಯಲ್ಲಿ ಘಾಡ ನಿದ್ದೆ ಹೊಡೆದಿದ್ದೆ.!!!  ನಿದ್ದೆ ಮಾಡುತ್ತೇನೆ  ತಾಳಿ  ಮುಂದಿನ ಸಂಚಿಕೆಯಲ್ಲಿ ಬಾಕಿ ಪುರಾಣ ಓದೋರಂತೆ. ಅಲ್ಲಿವರ್ಗೆ  ನಿಮಗೆ ವಂದನೆಗಳು .