ಕಾನನದ ಮಡಿಲಲ್ಲಿ ಕಬಿನಿಯ ಸೆರಗಲ್ಲಿ ನೆನಪಿನ ಬುತ್ತಿ !!!
ಬಹಳ ದಿನಗಳಿಂದ ಈ ಪೋಸ್ಟ್ ಪ್ರಕಟಿಸಬೇಕೆಂಬ ಆಸೆ ಇತ್ತು ಕಬಿನಿಯ ಮಡಿಲ ಕಾಕನ ಕೋಟೆ ಅರಣ್ಯ ದಲ್ಲಿನ ಚಿತ್ರಗಳು ಪದೇ ಪದೇ ಕಾಡಿ ಈ ಕಾಡಿನ ಅನುಭವಗಳನ್ನು ನಿಮ್ಮ ಮುಂದೆ ಇಡಲು ಪ್ರೇರೇಪಿಸಿ ಇಂದು ಅದು ನನಸಾಗಿದೆ. ನಮ್ಮ ಮನೆ ದೇವರ ಸನ್ನಿಧಿಗೆ ತೆರಳುವಂತೆ ಈ ಕಾಡಿಗೆ ಪ್ರತೀವರ್ಷ ಸುಮಾರು ಐದು ಸಾರಿತೆರಳಿ ಅಲ್ಲಿನ ಕಾನನದ ವೈಭವವನ್ನು ಅನುಭವಿಸಿದ್ದೇನೆ. ಇದಕ್ಕೆ ಸ್ಪೂರ್ತಿಯಾಗಿ ನನ್ನ ಆತ್ಮೀಯ ಸಂಬಂಧಿಗಳು [ಹೆಂಡತಿಯ ಇಬ್ಬರು ತಂಗಿಯರ ಪತಿರಾಯರುಗಳು ,ಹಾಗು ನಮ್ಮ ಭಾವ ಇವರುಗಳು ಇದೆ ರೀತಿ ಮನೋಭಾವ ಹೊಂದಿ ಜೊತೆಗಿದ್ದರು ] ಹೌದು ನಾವು ಮೂವರು ಅಳಿಯಂದಿರು ನನ್ನ ಮಾವನ ಮನೆಗೆ , ಎಲ್ಲರೂ ಬೇರೆ ಬೇರೆ ಕುಟುಂಬದಿಂದ ಬಂದಿದ್ದರೂ ಅಣ್ಣ ತಮ್ಮಂದಿರ ತರಹ ಸಲಿಗೆ ,ಪ್ರೀತಿ ವಿಶ್ವಾಸವಿದೆ.ಜೊತೆಗೆ ನಮ್ಮ ಹವ್ಯಾಸಗಳೂ ಸಹ ಒಂದೇ ಆಗಿವೆ .ಹಾಗಾಗಿ ನಮ್ಮಲ್ಲಿ ಬಿನ್ನಾಬಿಪ್ರಾಯ ಇಲ್ಲ . ಹಾಗೆ ಈ ಕಾಡು ಸುತ್ತುವ ಹವ್ಯಾಸ.ಪ್ರತೀವರ್ಷ ನಾವುಗಳು ಕಾಡಿಗೆ ಹೋಗಿಯೇ ಸಿದ್ಧ . ನಮ್ಮ ನೆಂಟರೂ ಸಹ ಏನ್ ಅಳಿಯಂದ್ರೆ ಕಾಡಿಗೆ ಹೋಗಿಲ್ವಾ ಅಂತಾ ಚುಡಾಯಿಸ್ತಾರೆ. ಕಾಡಿನಲ್ಲಿ ನಮ್ಮ ಅನುಭವ ಬಹುಕಾಲ ನೆನಪಿನಲ್ಲಿ ಉಳಿದಿದೆ.ಬನ್ನಿ ನಮ್ಮ ಕಾನನದ ನೆನಪಿನ ಲೋಕಕ್ಕೆ ಹೋಗೋಣ.ಬಾಲ್ಯದಿಂದಲೂ ನನಗೆ ಈ ಕಾಡಿನ ಬಗ್ಗೆ ಸೆಳೆತ ಯಾಕೆ? ಅಂಥಾ ಗೊತ್ತಿಲ್ಲ , ಚಿಕ್ಕವನಿದ್ದಾಗ ನಾನು ನನ್ನ ಹಳ್ಳಿಯಿಂದ ನನ್ನ ಅಜ್ಜಿಯ ಜೊತೆ ಅವಳ ಸಹೋದರಿಯರ ಹಾಗು ನನ್ನ ಸೋದರ ಮಾವಂದಿರ ಮನೆಗೆ ಹುಣಸೂರಿನ ಸಮೀಪದ" ಚೆನ್ನಸೋಗೆ'' ಎಂಬ ಹಳ್ಳಿಗೆ ರಜೆಕಳೆಯಲು ಹೋಗುತ್ತಿದ್ದೆ.ಪ್ರತಿಭಾರಿಯೂ ಅಲ್ಲಿ ಕನಿಷ್ಠ ಹತ್ತರಿಂದ ಹದಿನೈದು ದಿನಗಳ ವಾಸ್ತವ್ಯ ಇರುತ್ತಿದ್ದೆವು.ಪ್ರತಿ ನಿತ್ಯ ಮಲಗುವಾಗ ನನ್ನ ಸೋದರ ಮಾವಂದಿರು ಪಕ್ಕದಲ್ಲಿ ಮಲಗಿಸಿಕೊಂಡು ನನಗೆ ಕಾಡಿನ ಕಥೆಗಳನ್ನು ಹೇಳುತ್ತಿದ್ದರು.ಪಕ್ಕದಲ್ಲೇಅಂದರೆ ಸುಮಾರು ಹದಿನೈದುಕಿ.ಮಿ.ಇದ್ದ ನಾಗರ ಹೊಳೆಯ ಕಾಡಿನಬಗ್ಗೆ ಅಲ್ಲಿನ ವನ್ಯ ಜೀವಿಗಳ ಬಗ್ಗೆ ಪ್ರತಿರಾತ್ರಿ ಒಂದೊಂದು ಕಥೆ ಕೇಳಿಯೇ ನಾನು ಮಲಗುತ್ತಿದ್ದುದು.ಹಾಗೆ ಬೆಳೆಯುತ್ತಾ ನನಗೆ ಕಾಡನ್ನು ನೋಡುವ ಬಯಕೆ ಮೊಳಕೆಯೊಡೆಯಲು ಪ್ರಾರಂಭವಾಗಿತ್ತು.ಅಂದು ಚಿಕ್ಕಹುಡುಗನಾಗಿದ್ದಾಗ ನನ್ನ ದೃಷ್ಟಿಯಲ್ಲಿ ಕಾಡಿಗೆ ಹೋದ ಕೂಡಲೇ ಎಲ್ಲಾ ಪ್ರಾಣಿಗಳು ಸಾಲಾಗಿ ನಿಂತು ನನ್ನನ್ನು ಸ್ವಾಗತಿಸಿ ಹಾಯ್ ಹೇಳುತ್ತವೆ!!! ಅಂತಾ ಆಶಾಭಾವ.ಹಾಗು ಎಲ್ಲಾ ಪ್ರಾಣಿಗಳನ್ನೂ ಮುಟ್ಟಿ ಸವರಿ ಚಲನಚಿತ್ರಗಳಲ್ಲಿ ಆಗುವಂತೆ ಅವುಗಳೊಂದಿಗೆ ಆಟವಾಡುವ ಆಸೆ.ಸರಿ ನನ್ನನ್ನು" ನಾಗರ ಹೊಳೆಗೆ " ಕರೆದುಕೊಂಡು ಹೋಗಲು ಸೋದರ ಮಾವಂದಿರನ್ನು ಪೀಡಿಸಲು ಶುರುಮಾಡಿದೆ.ಅವರೂ ಪಾಪ ನನ್ನ ಆಸೆಯನ್ನು ಹೇಗೆ ತೀರಿಸ ಬಹುದೆಂಬ ಕಲ್ಪನೆಯೇ ಇಲ್ಲದೆ ನೋಡು ಮಗೂ ಹುಣಸೂರಿನಿಂದ" ನಾಗರ ಹೊಳೆ'ಗೆ ಇವತ್ತು ಬಸ್ಸು ಇಲ್ವಂತೆ ಇನ್ನು ಮೂರುದಿನದ ನಂತರ ಹೋಗೋಣ ಬಿಡು ಅನ್ನುತಿದ್ದರು ಮೂರುದಿನಗಳನ್ನು ಆಸೆಯಿಂದ ಕಳೆದ ನಾನು ಮತ್ತೆ ಕೇಳಿದಾಗ ಮತ್ತೊಂದು ಸಬೂಬು ಎದುರಾಗುತ್ತಿತ್ತು.ಹೀಗೆ ಇದೆ ಅನುಭವದ ಪುನರಾವರ್ತನೆ ಹಲವು ವರ್ಷಗಳು ನಡೆದು
ಚಿಕ್ಕ ವಯಸ್ಸಿನಲ್ಲಿ ಕಾಡು ನೋಡುವ ಆಸೆ ಮುರುಟಿಹೋಗಿತ್ತು.ಹಾಗೆ ಜೀವನ ಚಕ್ರ ಉರುಳಿ ಗೆಳೆಯರೊಂದಿಗೆ ಕಾಡು ನೋಡುವ ದಿನ ನಾನು ಪಿ.ಯು.ಸಿ. ಯಲ್ಲಿದ್ದಾಗ ಬಂತು.ಕಾಡಿಗೆ ಉತ್ಸಾಹದಿಂದ ಹೋರಾಟ ನಾನು ಮೊಜುಮಾಡಲು ಬಂದಿದ್ದ ನನ್ನ ಗೆಳೆಯರು ಕಾಡು ನೋಡಿದ ಬಗೆ ವಿಚಿತ್ರವಾಗಿತ್ತು,ಕಾಲೇಜಿನ ಹುಡುಗರು ನಾವುಗಳು ,ನಾಗರ ಹೊಳೆ ಅರಣ್ಯ ನೋಡಲು ಹೊರಟೆವು ಯಾರಿಗೂ ಸರಿಯಾದ ಕಲ್ಪನೆ ಕಾಡಿನ ಬಗ್ಗೆ ಇರಲಿಲ್ಲ ನಾಗರ ಹೊಳೆ ತಲುಪಿದ ನಾವು ಮೊದಲು ಮಾಡಿದ ಕೆಲಸ ಸಾರ್ ಇಲ್ಲಿ ಒಳ್ಳೆ ಹೋಟೆಲ್ ಇದ್ಯಾ? ಅಂತಾ ಕೇಳಿ ನಗೆ ಪಾಟಲಿಗೆ ಈಡಾಗಿದ್ದೆವು.ಸಫಾರಿಗೆ ತೆರಳಿ ನಾವು ಮೊದಲು ನೋಡಿದ ಪ್ರಾಣಿ ಆನೆ ಸಫಾರಿ ವ್ಯಾನಿನ ಚಾಲಕರಿಗೆ ಸಾರ್ ಸ್ವಲ್ಪ ನಿಲ್ಸಿ ಕೆಳಗಡೆ ಇಳಿದು ಒಂದುಫೋಟೋ ತೆಗೀತೀನಿ ಅಂದಿದ್ದೆ.ಅದಕ್ಕೆ ಆ ಚಾಲಕ ರೀ ಸುಮ್ನಿರ್ರಿ ಓ ಕೆಳಗೆ ಇಳಿತಾರಂತೆ ಅಂದು ಇಲ್ಲೆಲ್ಲಾ ಪಟ್ಟಣದತರ ಅಲ್ಲಪ್ಪ ಪ್ರಾಣಿಗಳು ಅಟ್ಯಾಕ್ ಮಾಡುತ್ತೆ ಅಂದರು ,
ನಂಗೆ ಆಶ್ಚರ್ಯ!! ಅಲ್ಲಾ ಆನೆ ಫೋಟೋ ತೆಗೆದರೆ ಆನೆಗೆ ಕೊಪಾ ಯಾಕೆ ಬರುತ್ತೆ ?? ಅನ್ಕೊಂಡೆ !!!. ನಾನಾದರೂ ಏನ್ ಮಾಡ್ಲಿ ನಾನು ಓದಿದ ಯಾವ ಶಾಲೆಯಲ್ಲೂ ಕಾಡಿನ ಪ್ರಾಣಿಗಳ ಜೊತೆ ನಾವು ಯಾವ ರೀತಿ ವ್ಯವಹರಿಸಬೇಕೆಂದು ಯಾವ ಶಿಕ್ಷಕರೂ ಹೇಳಿ ಕೊಟ್ಟಿರಲಿಲ್ಲ!!!ಹಾಗು ಯಾವ ಪುಸ್ತಕವೂ ಈ ಬಗ್ಗೆ ಪಟ್ಯವಾಗಿರಲಿಲ್ಲ!! ನಾನು ನನ್ನ ಮಿತ್ರರು ಪ್ರತಿ ಪ್ರಾಣಿ ಕಂಡಾಗಲೂ ಕಾಡಿನ ನಿಶಬ್ಧತೆಯನ್ನು ಹಾಳುಮಾಡುವಂತೆ ಕಿರುಚಿ!!; ನಾವೇ ಪ್ರಾಣಿಗಳಂತೆ ಆಡಿ ಅವುಗಳಿಗೆ ತೊಂದರೆ ಕೊಟ್ಟುವಿಕೃತ ಸಂತೋಷ ಅನುಭವಿಸಿಬಂದಿದ್ದೆವು.ಕಾಡಿನ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದ್ದು ಪುಸ್ತಕ ಓದಲು ಪ್ರಾರಂಭಿಸಿ ದಾಗ ಹಾಗು ಕಾಡಿನ ಬಗ್ಗೆ ಇಂಗ್ಲೀಶ್ ಸಿನೆಮಾ ನೋಡಿದಾಗ.ಅಲ್ಲಿಯವರೆಗೂ ನಾನು; ಅಜ್ಞಾನದ ಸಾಗರದ ಒಡೆಯನಾಗಿದ್ದೆ !!!!ಕಾಡಿನ ದಾರಿಯಲ್ಲಿ ಸಾಗುವಮೊದಲು ಕಾಡಿನ ಬಗ್ಗೆ ತಿಳಿಯಲು ಸ್ವಲ್ಪ ವಿರಮಿಸೋಣ ಆಲ್ವಾ. ನನ್ನ ದೃಷ್ಟಿಯಲ್ಲಿ .ಕಾಡು ಹಾಗಂದ್ರೇನು??? ಇನ್ನೂ ಮುಂತಾದ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುವೆ ವಂದನೆಗಳು.
Comments
ಉ: ಕಾನನದ ಮಡಿಲಲ್ಲಿ ಕಬಿನಿಯ ಸೆರಗಲ್ಲಿ ನೆನಪಿನ ಬುತ್ತಿ !!!
In reply to ಉ: ಕಾನನದ ಮಡಿಲಲ್ಲಿ ಕಬಿನಿಯ ಸೆರಗಲ್ಲಿ ನೆನಪಿನ ಬುತ್ತಿ !!! by Jayanth Ramachar
ಉ: ಕಾನನದ ಮಡಿಲಲ್ಲಿ ಕಬಿನಿಯ ಸೆರಗಲ್ಲಿ ನೆನಪಿನ ಬುತ್ತಿ !!!