ಕಾನೂನು ದಿನ ಈಗ ಸಂವಿಧಾನ ದಿನ...

ಕಾನೂನು ದಿನ ಈಗ ಸಂವಿಧಾನ ದಿನ...

ಸಂವಿಧಾನ ಎಂದರೇನು ?  ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ? ನೀತಿ ನಿಯಮಗಳೇ ? ಬದುಕೇ ? ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ? ನಾಗರಿಕ ಮಾನದಂಡಗಳೇ ? ಧರ್ಮದ ಮುಂದುವರಿದ ಭಾಗವೇ ? ಅನಿವಾರ್ಯ ಹಕ್ಕು ಮತ್ತು ಕರ್ತವ್ಯಗಳೇ ? ದುಷ್ಟ ಶಿಕ್ಷೆ ಶಿಷ್ಟ ರಕ್ಷಣೆಯ ಸೂತ್ರಗಳೇ ? ಸ್ವಾತಂತ್ರ್ಯ - ಸಮಾನತೆಯ ಲಕ್ಷಣಗಳೇ ? ಮಾನವೀಯ ಮೌಲ್ಯಗಳೇ ? ಸೃಷ್ಟಿಯ ನಿಷ್ಠೆಯೇ ? ಜೀವಪರ ನಿಲುವುಗಳೇ ? ದೇಶ ಮತ್ತು ಜನತೆಯ ನೆಮ್ಮದಿಯ ತಂತ್ರಗಳೇ ? ಅಥವಾ ಇವುಗಳೆಲ್ಲವುಗಳ ಒಟ್ಟು ಸಮೀಕರಣವೇ ?

ಬಹುಶಃ ಭಾರತದ ಸಂವಿಧಾನದ ಪೀಠಿಕೆ ಮತ್ತು ಅದರ ಆಳ ಅಗಲಗಳನ್ನು ಗಮನಿಸಿದಾಗ ಈ ಎಲ್ಲಾ ಸಾರಾಂಶಗಳ ಒಟ್ಟು ಮೊತ್ತ ಎಂದು ನಿರ್ಧರಿಸಬಹುದು. ಧರ್ಮ ಮತ್ತು ಸಂವಿಧಾನ. ಧರ್ಮದ ಮುಂದುವರಿದ ಭಾಗವೇ ಸಂವಿಧಾನ ಎಂದೂ ಅರ್ಥೈಸಬಹುದು. ಆದರೆ ಧರ್ಮವನ್ನು ಮೀರಿದ ಸ್ವಾತಂತ್ರ್ಯ ಸಮಾನತೆ ಮಾನವೀಯತೆ ಸಹಜತೆ ಸಂವಿಧಾನದಲ್ಲಿ ಅಡಕವಾಗಿರುತ್ತದೆ. ಅನೇಕ ಕಾರಣಗಳಿಗಾಗಿ ಎಲ್ಲಾ ಧರ್ಮದಲ್ಲಿ ಒಂದಷ್ಟು ಅಮಾನವೀಯ ಅಸ್ವಾಭಾವಿಕ ಹುಳುಕುಗಳು ಸೇರಿರುತ್ತವೆ. ಶ್ರೇಷ್ಠತೆಯ ವ್ಯಸನ ಧರ್ಮಗಳ ಬಹುದೊಡ್ಡ ಲೋಪ. ಹಾಗೆಯೇ ಸಾಮಾನ್ಯವಾಗಿ ಧರ್ಮಗಳು ಬದಲಾವಣೆಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ.

ಆದರೆ ಸಂವಿಧಾನದಲ್ಲಿ ಆ ರೀತಿಯ ಲೋಪದೋಷಗಳು ತುಂಬಾ ಕಡಿಮೆ ಮತ್ತು ಕಾಲದ ಪ್ರವಾಹದಲ್ಲಿ ಆ ರೀತಿಯ ವ್ಯತ್ಯಾಸ ಕಂಡುಬಂದರೆ ತಿದ್ದುಪಡಿಗೆ ಸದಾ ಅವಕಾಶ ಇದ್ದೇ ಇರುತ್ತದೆ. ಸಂವಿಧಾನ ಮತ್ತು ಧರ್ಮದ ಆಯ್ಕೆಯಲ್ಲಿ ನಮ್ಮ ನಿಲುವು ಯಾವುದಿರಬೇಕು ? ಬಹುಶಃ ಇದು ಪಂಥೀಯ ವಾದಗಳು ಹೆಚ್ಚು ಪ್ರಚಲಿತದಲ್ಲಿರುವ ಈ ಸಂದರ್ಭದಲ್ಲಿ ಬಹುಮುಖ್ಯ ಪ್ರಶ್ನೆಯಂತೆ ಕೆಲವರನ್ನು ಕಾಡುತ್ತಿರಬಹುದು. ಧಾರ್ಮಿಕ ಮೂಲಭೂತವಾದಿಗಳು ಧರ್ಮ ಎಂದರೆ, ಅತಿರೇಕದ ಎಡಪಂಥೀಯರು ಸಂವಿಧಾನ ‌ಎಂದರೆ, ಮಧ್ಯಮ ಮಾರ್ಗಿಗಳು ಎರಡೂ ಮುಖ್ಯ ಎಂದು ಹೇಳುವುದನ್ನು ಗಮನಿಸಿದ್ದೇನೆ. ಸಾಮಾಜಿಕ ರಾಜಕೀಯ ಸಾಮರಸ್ಯ ತೀರಾ ಕೆಳಹಂತದಲ್ಲಿ ಇಳಿದಿರುವಾಗ ಇದು ಸಹಜ. ಹಾಗಾದರೆ ವಾಸ್ತವ ಏನು ?

ಧರ್ಮ ಮತ್ತು ಸಂವಿಧಾನ ಎರಡು ವಿರುದ್ಧ ಚಿಂತನೆಗಳೇನಲ್ಲ. ಸಾಮಾನ್ಯ ಜ್ಞಾನವನ್ನು ಉಪಯೋಗಿಸಿದರೆ ಸಾಕು ಅವು ಎರಡು ಒಂದಕ್ಕೊಂದು ಪೂರಕ. ಅದರಲ್ಲೂ ಭಾರತದ ಸಂವಿಧಾನ ಬಹುತೇಕ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಮುಖ್ಯವಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿದೆ ಎಂದು ಅರ್ಥವಾಗುತ್ತದೆ. ಸಾಮಾನ್ಯ ಜನರಲ್ಲಿ ಸಂವಿಧಾನವನ್ನೇ ಒಂದು ಧರ್ಮ ಎಂದು ಆಚರಿಸುವುದು ಒಂದು ಸಮಸ್ಯೆಯಲ್ಲ. ಸಂವಿಧಾನದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಆಚರಣೆಗೆ ಎಲ್ಲಾ ಅವಕಾಶಗಳು ಇವೆ. ಆದರೆ ಸಮಸ್ಯೆ ಇರುವುದು ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದ ಮುಖಂಡರಿಂದ. ರಾಜಕೀಯ ಮೇಲಾಟಕ್ಕಾಗಿ ಧರ್ಮವನ್ನು ಎಳೆದು ತರುವುದು ಹಾಗೆಯೇ ಧರ್ಮಾಧಿಕಾರಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಧರ್ಮದ ಅಮಲನ್ನು ಜನರಲ್ಲಿ ತುಂಬುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಒಂದು ಸಣ್ಣ ಉದಾಹರಣೆ ನೋಡಿ.

ಧರ್ಮಗಳು ( ಮತಗಳು ) ಜನರನ್ನು ಹಿಂದು, ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ, ವೀರಶೈವ- ಲಿಂಗಾಯತ ಎಂದು ವಿಂಗಡಿಸಿದರೆ ನಮ್ಮ ಸಂವಿಧಾನ ಎಲ್ಲರನ್ನೂ ಭಾರತೀಯರು ಎಂದು ಸಮನಾಗಿ ಕಾಣುತ್ತದೆ. ಹಾಗಾದರೆ ನಮ್ಮ ಆಯ್ಕೆ ವಿಭಜನೆಗೋ ಸಮಾನತೆಗೋ ಯೋಚಿಸಿ ನಿರ್ಧರಿಸಿ.

ಹಾಗಾದರೆ ಸಂವಿಧಾನದಿಂದ ಭಾರತದ ಎಲ್ಲಾ ಪ್ರಜೆಗಳಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ದೊರೆತಿದೆಯೇ ಎಂದರೆ ಖಂಡಿತ ಇಲ್ಲ ಎಂದೇ ಹೇಳಬೇಕಾಗುತ್ತದೆ. ತಾಂತ್ರಿಕವಾಗಿ ಮತ್ತು ಪುಸ್ತಕದಲ್ಲಿ ಸಮಾನತೆ ಇದ್ದರೂ ವಾಸ್ತವದಲ್ಲಿ ಅದು ಬಲಿಷ್ಠರ ಮತ್ತು ಅಪರಾಧಿಗಳ ಆಶ್ರಯ ತಾಣವೇ ಆಗಿದೆ. " ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು " ಎಂಬ ಉದಾತ್ತ ಧ್ಯೇಯದ ದುರುಪಯೋಗ ಎಲ್ಲೆಡೆಯೂ ಕಂಡುಬರುತ್ತಿದೆ. ಹಣ - ಸಾಕ್ಷಿ ಮತ್ತು ತಂತ್ರಗಾರಿಕೆಯೇ ಕಾನೂನಿನ ಮುಖ್ಯ ಆಧಾರ ಸ್ಥಂಭವಾಗಿ ನೈತಿಕತೆಗೆ ಯಾವ ಜಾಗವೂ ಇಲ್ಲ. 

ಆದ್ದರಿಂದಲೇ ಸುಪ್ರೀಂ ಕೋರ್ಟ್ ಸಹ " Courts will delivers the law not the Justice " ( ನ್ಯಾಯಾಲಯಗಳು ಕಾನೂನು ನೀಡುತ್ತವೆಯೇ ಹೊರತು ನ್ಯಾಯವೇ ಆಗಿರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ " ಎಂಬ ಅರ್ಥದ ಮಾತುಗಳನ್ನು ಹೇಳಿದೆ ಎಂದು ವಕೀಲರೊಬ್ಬರು ಹೇಳಿದರು.

ಇದರ ಒಟ್ಟು ತಾತ್ಪರ್ಯ ಇಷ್ಟೇ. ಧರ್ಮವೇ ಇರಲಿ, ಕಾನೂನೇ ಇರಲಿ ವ್ಯಕ್ತಿಗಳಲ್ಲಿ ಮತ್ತು ಸಮಾಜದಲ್ಲಿ ನೈತಿಕತೆ ಮತ್ತು ಮಾನವೀಯತೆ ಕುಸಿದಾಗ ಎಲ್ಲವೂ ವಿಫಲವಾಗುತ್ತದೆ. ಈ ಕ್ಷಣದಲ್ಲಿ ಸಂವಿಧಾನವೂ ಕೂಡ ಸಮಾಧಾನಕರವಾಗಿ ಜನರ ಹಿತ ರಕ್ಷಣೆಯನ್ನು ಮಾಡುತ್ತಿದೆ ಎಂದು ಆತ್ಮಸಾಕ್ಷಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ. 

ಯಾವುದೇ ಅಪರಾಧಗಳಲ್ಲಿ ಶೇಕಡಾ 90 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಪಕ್ಷಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಶಾಸಕರ ಮಾರಾಟ ಬಹಿರಂಗವಾಗಿ ನಡೆಯುತ್ತಿದೆ, ಭ್ರಷ್ಟಾಚಾರ ವಿರೋಧಿ ಕಾನೂನುಗಳು ಇದ್ದರೂ ಇಡೀ ವ್ಯವಸ್ಥೆ ಭ್ರಷ್ಟಗೊಂಡಿದೆ. ಆದ್ದರಿಂದ ಸಂವಿಧಾನ ದಿನದ (ನವೆಂಬರ್ ೨೬) ಇಂದು ಕನಿಷ್ಠ " ಸಂವಿಧಾನ ಎಂಬುದು ಕೇವಲ ಧರ್ಮವಲ್ಲ ಅಥವಾ ಕಾನೂನಲ್ಲ. ಅದು ಭಾರತೀಯ ಸಮಾಜದ ಜೀವನ ವಿಧಾನ. ನಾಗರಿಕ ಸಮಾಜದ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆ. ಮಾನವೀಯ ಮೌಲ್ಯಗಳ ವಿಕಾಸದ ಮಾರ್ಗ. ಅದನ್ನು ಗೌರವಿಸೋಣ - ಅನುಸರಿಸೋಣ - ಕಾಲಕ್ಕೆ ತಕ್ಕಂತೆ ಪ್ರಜಾಪ್ರಭುತ್ವ ನಿಯಮಗಳ ಅಡಿಯಲ್ಲಿ ತಿದ್ದುಪಡಿ  ಒಪ್ಪಿಕೊಳ್ಳೋಣ - ಜನರ ಜೀವನಮಟ್ಟ ಸುಧಾರಿಸಲು ಮತ್ತಷ್ಟು ಬಲಪಡಿಸೋಣ " ಎಂದು ಆತ್ಮಸಾಕ್ಷಿಯ ಪ್ರತಿಜ್ಞೆ ಮಾಡೋಣ. " ಸಂವಿಧಾನ ಪುಸ್ತಕ ರೂಪದ ಅಕ್ಷರಗಳಲ್ಲ. ಅದು ಭಾರತೀಯ ಸಮಾಜದ ಸಾಂಸ್ಕೃತಿಕ ವ್ಯಕ್ತಿತ್ವ "

-ವಿವೇಕಾನಂದ ಹೆಚ್.ಕೆ., ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ