ಕಾನೂನು ಬಾಹಿರ ಕೋಚಿಂಗ್ ಸೆಂಟರ್ ಗಳಿಗೆ ಕಡಿವಾಣ ಬೀಳಲಿ
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ದುಡ್ಡು ಪಡೆದು ಗುಣ ಮಟ್ಟದ ಶಿಕ್ಷಣ ನೀಡದೇ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ವಂಚಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕಾನೂನುಬಾಹಿರ ಕೋಚಿಂಗ್, ಟ್ಯೂಷನ್ ಸೆಂಟರ್ ಗಳ ಹಾವಳಿ ಹೆಚ್ಚಾಗಿದೆ. ಪೋಷಕರಿಗೆ ಶಾಲಾ ಕಾಲೇಜುಗಳ ಶುಲ್ಕಕ್ಕಿಂತ ಟ್ಯೂಷನ್ ಶುಲ್ಕವೇ ಹೊರೆಯಾಗಿದೆ. ಇನ್ನು ಬಹುತೇಕ ಕೋಚಿಂಗ್ ಸೆಂಟರ್ ಗಳು ಕಾನೂನುಬಾಹಿರವಾಗಿಯೇ ನಡೆಯುತ್ತಿವೆ. ಕರ್ನಾಟಕ ಶಿಕ್ಷಣ ಕಾಯ್ದೆ- ೧೯೮೩ರ ನಿಯಮ ೪ ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ - ೨೦೦೯ (ಆರ್ ಟಿ ಇ) ನಿಯಮ ೨೮ರ ಅನ್ವಯ ಮಾನ್ಯತೆ ಪಡೆದ ಯಾವುದೇ ಶಾಲಾ ಕಾಲೇಜು ಕೊಠಡಿಗಳಲ್ಲಿ ಅಥವಾ ಆ ಶಾಲೆಗಳ ಸಿಬ್ಬಂದಿ ಟ್ಯೂಷನ್ ತರಗತಿ ನಡೆಸುವಂತೆ ಇಲ್ಲ. ಒಂದೊಮ್ಮೆ ನಡೆಸಬೇಕೆಂದರೆ ಶಿಕ್ಷಣ ಇಲಾಖೆಯಿಂದ ಮಾನ್ಯತೆ ನಡೆಯಬೇಕು. ಅಲ್ಲದೆ, ಎಲ್ಲ ನಿಯಮಗಳನ್ನು ಅಂದರೆ ನಿವೇಶನ, ಕಟ್ಟಡ, ಮಕ್ಕಳ ಸುರಕ್ಷತೆಯಂಥ ವಿಚಾರಗಳಲ್ಲಿ ಹೊಸ ಶಾಲೆಗಳಿಗಿರುವ ಮಾನದಂಡಗಳನ್ನು ಅನುಸರಿಸಬೇಕು. ಆದರೆ, ರಾಜ್ಯಾದ್ಯಂತ ಸಾವಿರಾರು ಟ್ಯೂಷನ್ ಕೇಂದ್ರಗಳು, ಕೋಚಿಂಗ್ ಸೆಂಟರ್ ಗಳು ಸರಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಪಾಲಿಸದೆ ರಾಜಾರೋಷವಾಗಿ ತಲೆ ಎತ್ತಿದೆ. ಸಾಮಾನ್ಯ ಸೌಲಭ್ಯಗಳಾದ ಪೀಠೋಪಕರಣ, ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಟ, ಸಾಂಸ್ಕೃತಿಕ ಚಟುವಟಿಕೆಯನ್ನೂ ಒದಗಿಸದೆ, ಬೆಳಿಗ್ಗೆ ೭ ಗಂಟೆಯಿಂದ ಸಂಜೆಯವರೆಗೂ ಮಕ್ಕಳನ್ನು ಹಿಡಿದಿಟ್ಟು ಶಿಕ್ಷಣದ ಹೆಸರಲ್ಲಿ ಮೋಸ ಮಾಡಲಾಗುತ್ತಿದೆ. ಆದ್ದರಿಂದ ಕಾನೂನುಬಾಹಿರ ಟ್ಯೂಷನ್ ತರಗತಿಗಳ ವಿರುದ್ಧ ಸರಕಾರ ಕ್ರಮ ಜರುಗಿಸಲೇ ಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೮-೦೭-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ