ಕಾನ್ ಚಿಟ್ಟೆ

ಕಾನ್ ಚಿಟ್ಟೆ

ಪುಸ್ತಕದ ಲೇಖಕ/ಕವಿಯ ಹೆಸರು
ಶಿವಾನಂದ ಕಳವೆ
ಪ್ರಕಾಶಕರು
ಚೇತನಾ ಸಹಕಾರಿ ಪ್ರಕಾಶನ, ಶಿರಸಿ
ಪುಸ್ತಕದ ಬೆಲೆ
ರೂ.45/-

ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿದ್ದವು.

ಶಿವಾನಂದ ಕಳವೆ ಪುಸ್ತಕದ “ಮೊದಲ ಮಾತಿ”ನಲ್ಲಿ “ಚಿಟ್ಟೆ ಹಾರಾಡಿದ್ದರ” ಹಿನ್ನೆಲೆಯನ್ನು ಹೇಳುತ್ತಾರೆ: “ಮರದ ಉಂಗುರ ವಿಶ್ಲೇಷಣೆಯಲ್ಲಿ ನೆಲದ ಪರಿಸರ ಚರಿತ್ರೆ ಸಾಧ್ಯ. ಡೆಂಡ್ರಾಕ್ರೊನಾಲಜಿ ತಜ್ನರ ವರದಿಗಳು ಮರಗಳ ಜೊತೆ ಮಾತಾಡಲು ಹೇಳಿದವು. ಪಾತರಗಿತ್ತಿಯೆಂಬ ಮಕರಂದ ಮೋಹಿನಿ ಸೆರಗಲ್ಲಿ ಮಾಹಿತಿ ಕಣಜವೇ ಇದೆಯೆಂದು ತಿಳಿದಾಗ ಒಡನಾಡಿದ ಅರಣ್ಯ ಮುಖ ಅಪರಿಚಿತ. ಈ ವರೆಗಿನ ಅರಿವು ಕುಬ್ಜ. ವಾರ್ಷಿಕ 4,000 ಮಿಲಿ ಮೀಟರ್ ಅಬ್ಬರದ ಮಳೆಯಲ್ಲಿ ತೋಯ್ದ ಕರಾವಳಿಯಿಂದ ಆರಂಭಿಸಿ 400 ಮಿಲಿ ಮೀಟರ್ ಮಳೆ ನೆಲದ ಸಸ್ಯಜ್ನಾನ ಖುದ್ದು ನೋಡಿದಾಗ ಕಲಿಯುವ ಬೆಟ್ಟ ಬೇಕಾದಷ್ಟಿದೆ. ಸತ್ಯ ದರ್ಶನ, ಮರ, ಗಿಡ ಮುಳ್ಳುಕಂಟಿಗಳೇ ಮೇಷ್ಟ್ರುಗಳಾಗಿ ಪಾಠ ಹೇಳಿದವು. ಸಂರಕ್ಷಣೆ, ಜನಬಲ ಸಂಕಲ್ಪದಲ್ಲಿ ಕಲ್ಲುಗುಡ್ಡಗಳಲ್ಲಿ ಅರಳಿ ಅರಣ್ಯ ಜನನದ ಅಂತರಂಗ ಕೇಳಿ ಬಂತು. ಚಿಟ್ಟೆ ಹಾರಾಡಿತು.”

ಬೆನ್ನುಡಿಯಲ್ಲಿ “ವಿಜಯ ಕರ್ನಾಟಕ”ದ ಅಂದಿನ ಸಂಪಾದಕ ವಿಶ್ವೇಶ್ವರ ಭಟ್ ಹೀಗೆಂದು ಬರೆದಿದ್ದಾರೆ, “ಇತ್ತೀಚಿನ ವರ್ಷಗಳಲ್ಲಿ ಹೊಸ ಹುಡುಕಾಟ, ಚಿಂತನೆ ಹಾಗು ಹಂಬಲಗಳಿಂದ ಬರೆಯುತ್ತಿರುವವರಲ್ಲಿ ವಾರಿಗೆಯ ಮಿತ್ರ ಶಿವಾನಂದ ಕಳವೆ ಪ್ರಮುಖರು. … ಕಳವೆ ಅವರು ಅಧ್ಯಯನ, ಸಂದರ್ಶನ, ಆಕರ ಗ್ರಂಥ ಶೋಧ ಹಾಗೂ ಮಾಹಿತಿ ಸಂಗ್ರಹದಲ್ಲಿ ತೊಡಗಿ ಬರೆಯುತ್ತಿರುವುದು ನಿಜಕ್ಕೂ ಸಮಾಧಾನಕರ ಸಂಗತಿ. ಅವರ ಬಹುತೇಕ ಬರಹಗಳೆಲ್ಲ ಈ ಮೂಸೆ ಅಥವಾ ನೆಲೆಗಟ್ಟಿನಿಂದಲೇ ಹೊರಹೊಮ್ಮಿವೆ.

ಪರಿಸರ, ಗ್ರಾಮೀಣ ಬದುಕು, ಕಾಡು, ನದಿ, ವನ್ಯಜೀವಿಗಳು ಹಾಗೂ ಇವೆಲ್ಲವುಗಳ ಸುತ್ತ ಆವರಿಸಿರುವ ಜನಜೀವನದ ಆಗುಹೋಗು, ತಳಮಳ, ತಲ್ಲಣಗಳನ್ನು ಸೂಕ್ಷ್ಮ ಸಂವೇದನೆಗಳಿಂದ ಗುರುತಿಸುವ ಕಳವೆ, ಧ್ಯೇಯಪೂರ್ಣ ಹವ್ಯಾಸಿ ಪತ್ರಕರ್ತರು; ಹವ್ಯಾಸಿ ಪತ್ರಿಕೋದ್ಯಮಕ್ಕೊಂದು ಹೊಸ ಭರವಸೆ ಮೂಡಿಸಿದವರು. “ಕಾನ್ ಚಿಟ್ಟೆ” ಅದಕ್ಕೊಂದು ಉತ್ತಮ ನಿದರ್ಶನ. ಇಲ್ಲಿನ ಬರಹಗಳಲ್ಲಿನ ವೈಶಿಷ್ಟ್ಯವೆಂದರೆ ಅವುಗಳ ಸೂಕ್ಷ್ಮತೆ ಹಾಗೂ ವಿಸ್ತಾರ. ಜತೆಗೆ ನಾವು ಬದುಕುವ ನೆಲದಲ್ಲಿನ, ನಮ್ಮ ಕಾಲ ಕೆಳಗೇ ಇದ್ದರೂ ಗಮನಿಸದೇ ಇರುವ ಹಲವಾರು ಸಂಗತಿಗಳ ಅನಾವರಣ. ಒಂದೊಂದೂ ಪರಿಸರ ಸಂಬಂಧಿ ಕತೆಗಳಂತೆ ಬಹುಕಾಲ ನೆನಪಿನಲ್ಲಿ ಉಳಿಯುವಂಥವು….."

ಮೊದಲ ಬರಹ “ಮಲೆನಾಡಿನಲ್ಲಿ “ಇಂಬಳ" ಬರ”. "ಎರಡು ವರ್ಷ ಹಿಂದೆ ಉತ್ತರ ಕನ್ನಡದ ನಿಲ್ಕುಂದದಿಂದ 12 ಕಿಮೀ ದೂರದ ಕುಮಟಾ ಮರ್ಸೆ ಹಳ್ಳಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದೆವು. ಒಮ್ಮೆಗೇ 35 - 40 ಇಂಬಳಗಳು ಕಾಲಿಗೇರಿ ಕಾಡಿಸಿದ್ದು ಇವತ್ತಿಗೂ ತಾಜಾ ನೆನಪು" ಎಂದು ತಿಳಿಸುತ್ತಾರೆ. “ಅಡಿಕೆ ತೋಟಕ್ಕೆ ಹೋದರೆ ನಿತ್ಯ ಇಂಬಳ ಕಡಿಸಿಕೊಳ್ಳುತ್ತಿದ್ದೆವು. ತೋಟದಿಂದ ನಿತ್ಯ ಮನೆಗೆ ಬಂದಾಗ ನಾಲ್ಕಾರು ಇಂಬಳ ಕಡಿದು ಕಾಲು ರಕ್ತಮಯವಾಗಿರುತ್ತಿತ್ತು. (ಈ ವರುಷ) ಈ ವರೆಗೆ ಒಂದೇ ಒಂದು ಇಂಬಳ ಕಡಿದಿಲ್ಲ. ಇಂಬಳಗಳಿಗೆ ಏನಾಗಿದೆ?” ಎಂಬ ಶರಾವತಿ ಕಣಿವೆ ಬಸ್ತಿಬೈಲಿನ ಜಯಪ್ರಕಾಶ ಹೆಗಡೆಯವರ ಆತಂಕವನ್ನು ದಾಖಲಿಸುತ್ತಾರೆ. "ಮಳೆ ಬಿದ್ದ ಹೊತ್ತಿಗೆ ಸಂತಾನಾಭಿವೃದ್ಧಿ ಮಾಡಿಕೊಂಡು ರಕ್ತ ಹೀರಲು ದಂಡೆತ್ತಿ ಬರುವ ಜೀವಿ ಇವತ್ತು ಏನಾಯಿತು? ಜೀವಿಯ ಇಳಿಕೆಯ ಚಕ್ರದ ಬಗೆಗೆ ನಿಶ್ಚಿತ ಅಧ್ಯಯನ ಇಲ್ಲ. ಕಾಡಿನ ಸಿರಿತನಕ್ಕೆ, ಪರಿಸರ ಸಮೃದ್ಧತೆಗೆ ಪುಟ್ಟ ಇಂಬಳಗಳನ್ನು ಸಾಕ್ಷಿಯಾಗಿ ನಂಬಿದ ವನವಾಸಿಗರ ಎದೆಯಲ್ಲಿ ನೆಲದ ನಡೆ ಆತಂಕ ಹುಟ್ಟಿಸಿದೆ.”  ಎಂದು ಬರಹ ಮುಗಿಸುತ್ತಾರೆ.

"ನೀರೆಂದರೆ ಬೇವು, ಜಾಲಿಗೆ ಭಯ!” ಎಂಬ ಎರಡನೇ ಬರಹದಲ್ಲಿ ನೀರಾವಿ ನೆಲದ ಇಂದಿನ ತಲೆಮಾರು ಹೊಲದಲ್ಲಿ ಬೇವು, ಜಾಲಿ ಬೆಳೆದರೆ ಹೇಗೆ ಕೃಷಿ ನಷ್ಟ ಎಂಬುದನ್ನು ಹೇಳಲು ಪಳಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
ಮೂರನೇ ಬರಹ "ಕಾಡಿನೂರಲ್ಲಿ ಕಾರ್ಖಾನೆ ದರ್ಬಾರು". "ಬಾಂಬೆ ಮೂಲದ ಇಂಡಿಯನ್ ಪ್ಲೈವುಡ್ ಮೆನ್ಯುಫ್ಯಾಕ್ಚರಿಂಗ್ ಕಂಪೆನಿ ಕರ್ನಾಟಕದ ದಾಂಡೇಲಿಯಲ್ಲಿ ಕಾರ್ಖಾನೆ ಆರಂಭಿಸುವಾಗ ನೀಡಿದ ರಿಯಾಯಿತಿ ಪ್ರಕಾರ ಹೆದ್ದಿ, ಹೊನ್ನೆ, ನಂದಿ ಮರಗಳ ಬೆಲೆ ಟನ್ನಿಗೆ 20 ರೂಪಾಯಿ. ಬೂರಲು, ಗೊಜ್ಜಲು, ಗುಳಮಾವು, ಮಾವು ಮುಂತಾದ ಮರಗಳಿಗೆ ಟನ್ನಿಗೆ ಒಂದು ರೂಪಾಯಿ ಬೆಲೆ…. ಫ್ಯಾಕ್ಟರಿ ಸ್ಥಾಪನೆಗೆ 61 ಎಕರೆ ನೀಡಿಕೆ. ಪ್ರತಿ ಎಕರೆಗೆ 25 ಪೈಸೆ ಭೂಬಾಡಿಗೆ” ಎಂಬಿತ್ಯಾದಿ ಸರಕಾರ ನೀಡಿದ ರಿಯಾಯ್ತಿಗಳ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಅರಣ್ಯ ನಾಶದ ಬಗ್ಗೆ ಕಣ್ಣು ತೆರೆಸುವ ಬರಹ ಇದು.

“ಹಸುಗೂಸಿನ ಜತೆ ಅಜ್ಜ ಮಾತ್ರ ಇರೋದು!” ಎಂಬ ಬರಹವನ್ನು “ಹೆದ್ದಾರಿ ಅಪಘಾತದಲ್ಲಿ ಬಚಾವಾಗಿ ಉಳಿದಿರೋದು ಅಂದ್ರೆ 93ರ ಅಜ್ಜ ಹಾಗೂ ಆತನ ಕುಟುಂಬದ ಕೊನೆಯ ಕುಡಿ ತಿಂಗಳ ಹಸುಗೂಸು ಮಾತ್ರ" ಎಂದು ಶುರು ಮಾಡುತ್ತಾರೆ. “ನಿಮ್ಮ ಊರಿನ ಪಕ್ಕದ ಕಾಡು, ಬೆಟ್ಟ ಹತ್ತಿ ಸುಮ್ಮನೇ ನೋಡಿ. ನೀವು ಮಾಡಿದ ಹೆದ್ದಾರಿ ಹಾಗೂ ಖುದ್ದು ನೀವೇ ಮಾಡಿದ ಆಕ್ಸಿಡೆಂಟ್ ಕಾಣುತ್ತದೆ. ನೂರಿನ್ನೂರು ವರ್ಷದ ಹಳೇ ಮರಗಳ ಕೆಳಗಡೆ ಇನ್ನೂ ಕುರುಚಲು ಗಿಡಗಳು ಮಾತ್ರ ಕಾಡು ನೆಲದಲ್ಲಿ ನಿಂತಿವೆ. ಅವು ಥೇಟ್ ಆ ಹೆದ್ದಾರಿ ಅಪಘಾತದಲ್ಲಿ ಕುಟುಂಬದ ಸದಸ್ಯರ ಸಾವಿನ ಬಳಿಕ ಉಳಿದ ಅಜ್ಜ ಹಾಗೂ ಹಸುಗೂಸಿನ ಹಾಗೇ ಕಾಣುತ್ತವೆ. ಕಾಡಿನ ಕುಟುಂಬದಲ್ಲಿ ಯಾರ್ಯಾರು ಇರಬೇಕಿತ್ತೋ ಅವೆಲ್ಲ ಬಹುತೇಕ ನಮ್ಮ ಕತ್ತಿ, ಕೊಡಲಿ ಬಾಯಲ್ಲಿ ನಲುಗಿವೆ. ನಾಶದ ಹಾದಿ ಹಿಡಿದಿವೆ” ಎಂದು ಮುಂದುವರಿಸಿ, ಮುಕ್ತಾಯದಲ್ಲಿ, "ನಮ್ಮ ರಕ್ತ ಸಂಬಂಧಿಗಳು ಅಪಘಾತದಲ್ಲಿ ಅಸು ನೀಗಿದಾಗ ಅಳುವ, ಸಾಂತ್ವನ ಹೇಳುವ ನಾವು ನಮ್ಮ ತಲೆಮಾರಿನ ಜನಜೀವನ, ಕೃಷಿ ಬದುಕಿಗೆ ನೆರವಾಗುವ ಕಾಡಿನ ಅಪಘಾತದ ವಿಚಾರದಲ್ಲಿ ಮೌನಿಗಳಾದದ್ದು ಏಕೆ?” ಎಂದು ಪ್ರಶ್ನಿಸುತ್ತಾರೆ. ಈ ಬರಹಕ್ಕೆ ಪೂರಕವಾಗಿವೆ“ಬೀಟೆ ಮರದ ಅಳು ಕೇಳಿದ್ದೀರಾ?” ಮತ್ತು “ಮೇದಾರದ ಬಿದಿರಿಗೆ ಬಜಾರಿನಲ್ಲೇನು ಕೆಲಸ?” ಎಂಬ ಇನ್ನೆರಡು ಬರಹಗಳು.

ಅರಣ್ಯ ನಾಶ ಹಾಗೂ ಅದರ ಪರಿಣಾಮಗಳನ್ನು ದಾಖಲಿಸುತ್ತಲೇ ಅರಣ್ಯ ಸಂರಕ್ಷಣೆಯ ಕತೆಗಳನ್ನು “ಕಾನ್ ಚಿಟ್ಟೆ”ಯಲ್ಲಿ ದಾಖಲಿಸಿದ್ದಾರೆ ಶಿವಾನಂದ ಕಳವೆ. ಉದಾಹರಣೆ "ಕಾರ್ಲಕಟ್ಟೆ ಕಲ್ಲಿನಲ್ಲಿ ಹಸಿರು ಹಾದಿ." ಬರಹದ ಆರಂಭದಲ್ಲೇ ಕಾರ್ಲಕಟ್ಟೆ ಲಮಾಣಿ ತಾಂಡಾದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಧ್ವನಿವರ್ಧಕದಿಂದ ಪ್ರತಿದಿನ ಮುಂಜಾನೆ ಊರಿಗೆ ಕೇಳುವಂತೆ ಪ್ರಸಾರವಾಗುವ ಸಂದೇಶದ ಪ್ರಸ್ತಾಪ: "ಊರ ಮುಂದಿನ ಗುಡ್ಡದಾಗ ಯಾರಾರೂ ಗಿಡ ಮುಟ್ಟಿದರೆ ಅಂಗಾರ (ದೇವರ ಮುಂದಿರುವ ಭಸ್ಮ) ಮುಟ್ಟಿದಂಗ. ಯಾರೂ ತೊಪ್ಪಲಾ ಮುಟ್ಟಬ್ಯಾಡ್ರಿ. ಕಟ್ಟಿಗಿ ಕಡಿಬ್ಯಾಡ್ರಿ.” ಊರ ಜನರೆಲ್ಲ ಈ ಆದೇಶಕ್ಕೆ ತಲೆ ಬಾಗಿದ್ದಾರೆ. "ನನ್ನ ತಂದೆ ತಾಯಿ ಇರಲಿ, ಅಕ್ಕ ತಂಗಿ ಇರಲಿ, ಬಂಧು ಬಳಗ ಇರಲಿ ಯಾರೇ ಕಾಡಿನ ತೊಪ್ಪಲು ಕಡಿದರೂ ಶ್ರೀ ವೆಂಕಟೇಶ್ವರ ದೇವರ ಸಾಕ್ಷಿಯಾಗಿ ನಿಮಗೆ ತಂದು ಒಪ್ಪಿಸೀನಿ” ಎಂದು ಪ್ರತಿಜ್ನೆಗೈಯ್ದು ಕಾಡು ಕಾಯ್ದ ಸೆಕ್ರೆಟರಿ ಶಿವಪ್ಪ ಅವರ ಕಥನ. ದೇವರ ಹುಂಡಿ ಹಣದಿಂದ ಕಾಡಿನ ವಾಚ್‌ಮನ್‌ಗೆ ಪಗಾರ. ತಪ್ಪಿತಸ್ಥರ ಶಿಕ್ಷೆಗೆ ದೇವಾಲಯವೇ ಕೋರ್ಟ್. ಹಿರಿಯರ ನ್ಯಾಯದಾನ. 1948-49ರಲ್ಲಿ ಅಲ್ಲಿನ ಬೆಟ್ಟದಲ್ಲಿ ಬರೀ ಕಲ್ಲು, ಅಲ್ಲೊಂದು ಇಲ್ಲೊಂದು ಮುಳ್ಳುಕಂಟಿಗಳು. ನಂತರ ಬರಗಾಲ ಬಂತು. ದನಕರುಗಳಿಗೆ ಮೇವಿಲ್ಲದಂತಾಯಿತು. ಆಗ ಊರಗುಡಿಯಲ್ಲಿ ಕೂಡಿದ ಜನಸಮೂಹ ಬೋಳಾದ ದೇವರ ಗುಡ್ಡವನ್ನು ಹಸಿರಾಗಿಸಲು ನಿರ್ಧರಿಸಿತು. ಇದಕ್ಕೆ ಸೆಕ್ರೆಟರಿ ಶಿವಪ್ಪನವರ ಮುಂದಾಳುತನ. ಈಗ ಅಲ್ಲಿ ನಳನಳಿಸುತ್ತಿದೆ ಹಸುರುಕಾಡು.

ಇಂತಹದೇ ಇನ್ನೊಂದು ಯಶೋಗಾಥೆ, "ದರೋಜಿ ನೆಲದ ಕರಡಿ-ಕಾಡು”. ಬಳ್ಳಾರಿ ಸೀಮೆ ರಣ ಬಿಸಿಲಿನ ಬಯಲಿನಲ್ಲಿ ಕಾಡು ಬೆಳೆಸಿದ ಕಥನ. ಇಲ್ಲಿನ ಪ್ರತಿಯೊಂದು ಬರಹವೂ ಪರಿಸರ ರಕ್ಷಣೆಯ ತುರ್ತು ಮತ್ತು ಅಗತ್ಯದ ಬಗ್ಗೆ ನಮ್ಮ ಕಣ್ಣು ತೆರೆಸುತ್ತದೆ.
ಈ ಬರಹಗಳ ಸಂದೇಶಗಳನ್ನು ಮನದಾಳಕ್ಕೆ ಇಳಿಸಿಕೊಂಡು, ನಮ್ಮನಮ್ಮ ಊರುಗಳಲ್ಲಿ, ಮನೆಯ ಸುತ್ತಮುತ್ತಲಿನಲ್ಲಿ ಅಳಿದುಳಿದ ಗಿಡಮರಬಳ್ಳಿಹುಲ್ಲುಗಳನ್ನು ಪ್ರಾಣಿಪಕ್ಷಿಗಳನ್ನು ಮುಂದಿನ ತಲೆಮಾರಿಗೂ ಉಳಿಸಲು ನಮ್ಮಿಂದ ಸಾಧ್ಯವಾದದ್ದನ್ನೆಲ್ಲ ಮಾಡಲು ಶುರುಮಾಡೋಣ.