ಕಾಫಿ ಗಿಡದಲ್ಲಿ ಚಿಗುರು ನಿಯಂತ್ರಣ
ಕಾಫಿ ಸಸ್ಯ ೫೦ ವರ್ಷದಾದರೂ ಪೊದರಿನಂತೆ ಇರಬೇಕು. ಹಾಗೆ ಇರಬೇಕಾದರೆ ಗೆಲ್ಲುಗಳ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸುತ್ತಿರಬೇಕು. ಇದನ್ನೇ ಚಿಗುರು ಚಿವುಟುವಿಕೆ ಅಥವಾ ಕಸಿ ಎನ್ನುವುದು. ಕಾಫಿ ಸಸ್ಯವನ್ನು ಅದರಷ್ಟಕ್ಕೇ ಬೆಳೆಯಲು ಬಿಟ್ಟರೆ ೪-೫ ಮೀಟರೆತ್ತರಕ್ಕೂ ಬೆಳೆಯಬಲ್ಲುದು. ಆದರೆ ಅದರಿಂದ ಕಾಫಿ ಕೊಯ್ಯುವುದು ದುಸ್ತರ. ಕಾಫಿ ಇಳುವರಿಯೂ ಕಡಿಮೆಯಾಗುತ್ತದೆ. ಸಸ್ಯಕ್ಕೆ ರೋಗ ಸಾಧ್ಯತೆಯೂ ಅಧಿಕ. ಅದಕ್ಕಾಗಿ ಸಸ್ಯದಲ್ಲಿ ಇಳುವರಿಗೆ ಬೇಕಾಗುವ ಗೆಲ್ಲುಗಳನ್ನು ಮಾತ್ರವೇ ಉಳಿಸಿಕೊಂಡು ಬೆಳೆಸುವುದು ಕ್ರಮ. ಇದನ್ನು ಕಾಫಿ ಸಸ್ಯದ ತರಬೇತಿ ಎನ್ನುತ್ತಾರೆ.
ಗಿಡಗಳ ಬೆಳವಣಿಗೆಯನ್ನು ನಿರ್ಧರಿತ ಎತ್ತರಕ್ಕೆ ಪರಿಮಿತಿಗೊಳಿಸಿ ಸಸ್ಯವನ್ನು ಪೊದರಿನಂತೆ ಬೆಳೆಸುವುದು ಕಾಫೀ ಕೃಷಿಯಲ್ಲಿ ಅಗತ್ಯ. ಇದರಿಂದ ಸಸ್ಯಕ್ಕೆ ಅಪೇಕ್ಷಿತ ಆಕಾರ ದೊರೆಯುತ್ತದೆ. ಸಸ್ಯಕ್ಕೆ ಬೇಕಾಗುವ ಸಧೃಢ ಚೌಕಟ್ಟು ದೊರೆಯುತ್ತದೆ. ಫಸಲು ಕೊಡುವ ರೆಂಬೆಗಳು (ರೆಕ್ಕೆಗಳು) ಹೆಚ್ಚಾಗಿ ಇಳುವರಿ ಹೆಚ್ಚು ಬರುತ್ತದೆ. ಇದನ್ನು ಟ್ರಿಮ್ಮಿಂಗ್ ಎನ್ನುತ್ತಾರೆ.
ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಏಕಕಾಂಡ ಪದ್ದತಿ ಚಾಲ್ತಿಯಲ್ಲಿದೆ. ಬೇರೆ ದೇಶಗಳಲ್ಲಿ ಬಹುಕಾಂಡ ಪದ್ದತಿಯೂ ಇದೆ. ನಮ್ಮ ವಾತಾವರಣಕ್ಕೆ ಏಕಕಾಂಡ ಪದ್ದತಿ ಹೆಚ್ಚು ಸೂಕ್ತ. ಅದನ್ನೇ ಎಲ್ಲಾ ತೋಟಗಾರರೂ ಅನುಸರಿಸುತ್ತಿರುವುದು.
ಏಕಕಾಂಡ ಪದ್ದತಿಯಲ್ಲಿ ಗಿಡವನ್ನು ಎರಡು ಹಂತಗಳಲ್ಲಿ ನಿಯಂತ್ರಿಸಬೇಕಾಗುತ್ತದೆ. ಅರೇಬಿಕಾ ಕಾಫೀ ಗಿಡಗಳು ನಾಟಿ ಮಾಡಿದ ೯-೧೨ ನೇ ತಿಂಗಳಿಗೂ, ರೋಬಸ್ಟಾ ಕಾಫೀ ಗಿಡಗಳು ೧೮ -೨೪ ನೇ ತಿಂಗಳ ಅವಧಿಯಲ್ಲೂ ಮೊದಲನೇ ನಿಯಂತ್ರಣ ಮಟ್ಟವನ್ನು ತಲುಪುತ್ತದೆ. ಸಸ್ಯದ ಎತ್ತರ ತಳಿಯ ಬೆಳವಣಿಗೆಯ ಎತ್ತರದ ಮೇಲೆ ಅವಲಂಬಿತವಾಗಿದೆ. ಎತ್ತರಕ್ಕೆ ಬೆಳೆಯುವ ಅರೇಬಿಕಾ ತಳಿಯಾಗಿದ್ದಲ್ಲಿ ೨.೫ ಅಡಿ, ಕುಬ್ಜ ಅರೇಬಿಕಾ ತಳಿಯಾದರೆ ೩ ರಿಂದ ೪.೫ ಅಡಿ, ರೋಬಸ್ಟಾ ತಳಿಯಾಗಿದ್ದರೆ, ೩.೫ ರಿಂದ ೪ ಅಡಿ ಎತ್ತರಕ್ಕೆ ಮೊದಲನೇ ಮಟ್ಟವನ್ನು ನಿಲ್ಲಿಸಬೇಕು. ಆ ಹಂತ ತಲುಪಿದಾಗ ಸಸಿಯ ಮೇಲೆ ಬೆಳೆಯುವ ಗೆಲ್ಲಿನ ತುದಿಯನ್ನು ಎರಡು ರೆಕ್ಕೆಗಳ ಮೇಲೆ ೨ ಅಂಗುಲ ಉಳಿಸಿ ಚಿವುಟಿ ತೆಗೆಯಬೇಕು. ಆ ಸಮಯದಲ್ಲಿ ಎರಡು ರೆಕ್ಕೆಗಳಲ್ಲಿ ಒಂದನ್ನು ಕತ್ತರಿಸಿ ತೆಗೆದರೆ ನಂತರ ಆ ರೆಕ್ಕೆ ಗೆಲ್ಲು ಬೆಳವಣಿಗೆಯಾಗುವಾಗ ಕಾಂಡ ಸಿಗಿಯಲಾರದು. ಗಿಡವನ್ನು ತುದಿಯಲ್ಲಿ ಮಟ್ಟ ಮಾಡುವುದರಿಂದ ಸಸ್ಯದ ಕಾಂಡ ಮತ್ತು ರೆಕ್ಕೆ ಗೆಲ್ಲುಗಳಿಗೆ ಸಾಕಷ್ಟು ಆಹಾರ ದೊರೆಯುತ್ತದೆ. ಅವು ದಪ್ಪವಾಗಿ ಸಧೃಢವಾಗಿ ಬೆಳೆಯುತ್ತವೆ.
ತುದಿ ಚಿಗುರನ್ನು ಮಟ್ಟ ಮಾಡಿ ತುಂಡು ಮಾಡಿದ ನಂತರ ಆ ಭಾಗದಲ್ಲಿ ಹೊಸ ಕಂಬ ಚಿಗುರುಗಳು ಬರುತ್ತಲೇ ಇರುತ್ತವೆ. ಅದನ್ನು ತೆಗೆಯುತ್ತಲೇ ಇರಬೇಕು. ಕೇವಲ ಕೆಳಮುಖವಾಗಿ ಬೆಳೆಯುವ ರೆಕ್ಕೆ ಗೆಲ್ಲುಗಳನ್ನು ಮಾತ್ರ ಬೆಳೆಯಲು ಬಿಡಬೇಕು. ಇಷ್ಟಲ್ಲದೆ ಮುಖ್ಯ ಕಾಂಡದಲ್ಲಿಯೂ ಕಂಬ ಚಿಗುರುಗಳು ಬರುತ್ತಿರುತ್ತವೆ. ಅದನ್ನು ಸಹ ತೆಗೆಯುತ್ತಾ ಇದ್ದು ಮುಖ್ಯ ಕಾಂಡ ಒಂದನ್ನೇ ಬೆಳೆಯಲು ಬಿಡಬೇಕು.
ಗಿಡವನ್ನು ೬ -೮ ವರ್ಷ ಕಾಲ ಮೊದಲನೇ ಹಂತದಲ್ಲೇ ಬೆಳೆಯಲು ಬಿಡಬೇಕು. ಆಗ ಪ್ರಧಾನ ಕಾಂಡ ಮತ್ತು ರೆಕ್ಕೆಗಳು ಸಧೃಢವಾಗಿ ಬೆಳೆಯಲು ಅನುಕೂಲವಾಗುತ್ತದೆ. ಈ ಸಮಯದ ತನಕವೂ ಕಾಂಡದಲ್ಲಿ ಬೆಳೆಯುವ ಕಂಬ ಚಿಗುರುಗಳನ್ನು ತೆಗೆಯುತ್ತಾ ಇರಬೇಕು. ಈ ಸಮಯಕ್ಕಾಗುವಾಗ ಕಾಫೀ ಗಿಡವು ೨-೩ ಫಸಲನ್ನು ಕೊಟ್ಟಿರುತ್ತದೆ. ಆಗ ತಾಯಿ ರೆಕ್ಕೆ ಗೆಲ್ಲುಗಳಲ್ಲೂ ಕೆಲವು ಅನುತ್ಪಾದಕ ರೆಕ್ಕೆಗಳು ಬರುತ್ತವೆ. ಅದನ್ನು ಚಿಕ್ಕ ಕಸಿ ಮಾಡುವ ಮೂಲಕ ನಿವಾರಿಸಿ ಗಿಡಗಳಲ್ಲಿ ಗೆಲ್ಲುಗಳು( ರೆಕ್ಕೆಗಳು) ಒತ್ತೋತ್ತಾಗಿರದಂತೆ ನೊಡಿಕೊಳ್ಳಬೇಕು. ಆ ನಂತರ ಸಸ್ಯವನ್ನು ಎರಡನೇ ಮಟ್ಟಕ್ಕೆ ಸಿದ್ದಪಡಿಸಬಹುದು. ಮಣ್ಣು ಫಲವತ್ತಾಗಿದ್ದರೆ, ಗಿಡಗಳ ಹರಡುವಿಕೆ ಗಮನಿಸಿ ಎರಡನೇ ಮಟ್ಟ ನಿರ್ಧರಿಸಬೇಕು. ಗಿಡದ ಮೇಲ್ಮೈಯಲ್ಲಿರುವ ಜೋಡಿ ತಾಯಿ ರೆಕ್ಕೆಗಳ ಕೆಳ ಭಾಗದಿಂದ ಹೊರಡುವ ಕಂಬ ಚಿಗುರನ್ನು ನೆಲಮಟ್ಟದಿಂದ ೪.೫ ಅಥವಾ ೫ ಅಡಿ ಎತ್ತರಕ್ಕೆ ಮೊಟಕು ಮಾಡಬೇಕು. ಹಾಗೆ ಮಾಡಿದ ಎರಡನೇ ಮಟ್ಟವು ೨-೩ ವರ್ಷದಲ್ಲಿ ಸಂಪೂರ್ಣ ಆಕಾರವನ್ನು ಪಡೆಯುತ್ತವೆ. ರೋಬಸ್ಟಾ ಕಾಫಿ ಗಿಡಗಳನ್ನು ಏಕ ಕಾಂಡ ಪದ್ದತಿಯಲ್ಲಿ ನೆಲದಿಂದ ೩-೪ ಅಡಿ ಎತ್ತರದಲ್ಲಿ ಒಂದೇ ಬಾರಿ ಮೊಟಕುಗೊಳಿಸಬೇಕಾಗುತ್ತದೆ.
ಕಸಿ ಮಾಡಿದ ಗಿಡಗಳು ಮಳೆಗಾಲ ಬಂದಾಗ ಹೇರಳವಾಗಿ ಹೊಸ ಚಿಗುರನ್ನು ಉತ್ಪತ್ತಿ ಮಾಡುತ್ತವೆ. ಇವು ಜುಲೈ ಆಗಸ್ಟ್ ತಿಂಗಳಿಗೆ ಹೆಚ್ಚು ದೃಢವಾಗಿ ಬೆಳೆದಿರುತ್ತವೆ. ಅದರಲ್ಲಿ ಅನವಶ್ಯಕ ಗೆಲ್ಲುಗಳನ್ನು ಜೂನ್ ಜುಲೈನಲ್ಲೂ ಆಗಸ್ಟ್ ಸಪ್ಟೆಂಬರ್ ನಲ್ಲೂ ತೆಗೆದು ಹಾಕಬೇಕು. ಈ ಕೆಲಸ ಮಾಡುವಾಗ ಅಪೇಕ್ಷಿತ ಗೆಲ್ಲುಗಳನ್ನು ಉಳಿಸಿಕೊಂಡು ಅನಗತ್ಯವಾದುದನ್ನು ತೆಗೆದು ಹಾಕಿ ತೆಳು ಮಾಡಬೇಕು. ಈ ಸಮಯದಲ್ಲಿ ಗಿಡದ ಕಾಂಡದ ಅರ್ಧ ಅಡಿ ಸುತ್ತಳತೆಯಲ್ಲಿ ಮೂಡುವ ಚಿಗುರುಗಳನ್ನು ತೆಗೆಯುತ್ತಾ ನೆತ್ತಿ ಬಿಡಿಸಿಕೊಡಬೇಕು. ಅಡ್ಡಡ್ಡವಾಗಿ ಬೆಳೆದ ಕಂಬ ಚಿಗುರನ್ನೂ ಸಹ ತೆಗೆದು ಹಾಕಬೇಕು. ಕಾಫಿ ಸಸ್ಯದ ನೆತ್ತಿ ಬಿಡಿಸಿ, ಅವಶ್ಯಕ ಮತ್ತು ಉತ್ಪಾದಕ ರೆಕ್ಕೆ ಗೆಲ್ಲುಗಳನ್ನು ಮಾತ್ರ ಉಳಿಸಿಕೊಂಡರೆ ಸಸ್ಯಕ್ಕೆ ರೋಗ ಕಡಿಮೆ. ಇಳುವರಿ ಹೆಚ್ಚು. ಇಳುವರಿ ಮತ್ತು ಸಸ್ಯದ ಸಧೃಢತೆಗೆ ಗಾಳಿ ಬೆಳಕು ಅತ್ಯವಶ್ಯಕ.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ