ಕಾಫಿ ಗಿಡ ನಾಟಿ ಮತ್ತು ಸಂರಕ್ಷಣೆ (ಭಾಗ ೧)

ಕಾಫಿ ಒಂದು ಧೀರ್ಘಾವಧಿ ಬೆಳೆಯಾಗಿದ್ದು, ಈ ಬೆಳೆಯನ್ನು ಮಲೆನಾಡಿನ ಪ್ರದೇಶದಲ್ಲಿ ಮುಖ್ಯ ಬೆಳೆಯಾಗಿ ಮತ್ತು ಅಂತರ ಬೆಳೆಯಾಗಿ ಬೆಳೆಸಲಾಗುತ್ತಿದೆ. ಕಾಫಿ ಬೆಳೆಯನ್ನು ಬೆಳೆಸುವ ಬೆಳೆಗಾರರು ಸ್ವಲ್ಪ ಸ್ವಲ್ಪ ಪ್ರದೇಶ ವಿಸ್ತರಣೆ ಮಾಡಿ ಮರು ನಾಟಿ ಮಾಡುತ್ತಿದ್ದರೆ ಮಾತ್ರ ಏಕಪ್ರಕಾರದಲ್ಲಿ ಇಳುವರಿ ಪಡೆದು ಆದಾಯದ ಸ್ಥಿರತೆಯನ್ನು ಹೊಂದಲು ಸಾಧ್ಯ. ಕಾಫಿ ಗಿಡದ ನಾಟಿಗೆ ಮಳೆಗಾಲದ ಪ್ರಾರಂಭದ ದಿನಗಳು ಸೂಕ್ತವಾಗಿದ್ದು, ಈ ಸಮಯದಲ್ಲೇ ನಾಟಿ ಮಾಡಿದರೆ ಬದುಕುವ ಪ್ರಮಾಣ ಜಾಸ್ತಿ ಇರುತ್ತದೆ.
ಕಾಫಿ ತೋಟ ಆರಂಭಿಸಲು ಜಮೀನಿನ ಆಯ್ಕೆ ಮಾಡುವಾಗ ಆ ಸ್ಥಳ ಸಮುದ್ರ ಮಟ್ಟಕ್ಕಿಂತ ಇರುವ ಎತ್ತರ, ಬೀಳು, ಮಳೆ, ಗಾಳಿ ಹೊಡೆತ ಮತ್ತು ಸಂಚಾರ ಸೌಲಭ್ಯಗಳ ಬಗ್ಗೆ ಅವಶ್ಯಕ ಗಮನ ಕೊಡಬೇಕು. ಸದಾಕಾಲ ನೀರು ಒದಗಿಸುವ ಮೂಲವಿರುವುದು ಅವಶ್ಯಕ. ಕಳಿತ ಪದಾರ್ಥ ಸಮೃದ್ಧವಾಗಿರುವ ಮತ್ತು ನೀರು ಬಸಿದು ಹೋಗುವಂತಿರುವ ಮೆದು ಇಳಿಜಾರಿನ ಪ್ರದೇಶವನ್ನು ಆಯ್ಕೆ ಮಾಡುವುದು ಸೂಕ್ತ.
ಎತ್ತರ ಮತ್ತು ದಿಕ್ಕು : ಸಮುದ್ರ ಮಟ್ಟದಿಂದ ೩,೩೦೦ ರಿಂದ ೪,೯೦೦ ಅಡಿಗಳ ಎತ್ತರದಲ್ಲಿ ಕಾಫಿ ಚೆನ್ನಾಗಿ ಬೆಳೆಯುತ್ತದೆ. ಆದರೂ ಸಹ ೧,೫೦೦ ರಿಂದ ೫,೪೦೦ ಅಡಿಗಳವರೆಗಿನ ಪ್ರದೇಶಗಳಲ್ಲಿಯೂ ಕಾಫಿ ಬೆಳೆಯಬುದಾಗಿದೆ. ಉತ್ತರ ಅಥವಾ ಪೂರ್ವ ಬೀಳು ಕಾಫಿಗೆ ಸೂಕ್ತವಾಗಿದೆ. ದಕ್ಷಿಣ ಮತ್ತು ಪಶ್ಚಿಮ ಬೀಳುಗಳಲ್ಲಿ ಹೆಚ್ಚಿನ ಕಾಲ ಬಿಸಿಲು ಬಾಧೆಗೊಳಗಾಗುತ್ತದೆ. ಇದು ೩,೦೦೦ ಅಡಿಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಹೆಚ್ಚಾಗಿರುತ್ತದೆ. ಮಧ್ಯಾಹ್ನದ ಬಿಸಿಲಿನಿಂದ ರಕ್ಷಿಸಲು ಈ ಪ್ರದೇಶಗಳಲ್ಲಿ ಹೆಚ್ಚಿನ ನೆರಳು ಒದಗಿಸಬೇಕು.
ಗಾಳಿಯ ಹೊಡೆತ : ಡಿಸೆಂಬರ್ ಜನವರಿ ತಿಂಗಳುಗಳಲ್ಲಿ ಪೂರ್ವದಿಂದ ಬೀಸುವ ಗಾಳಿಯು ಗಿಡಗಳಿಗೆ ನೋವುಂಟು ಮಾಡುತ್ತದೆ. ಇದನ್ನು ತಡೆಯಲು ಉದ್ದನೆಯ ಮರಗಳಾದ ಸಿಲ್ವರ ಓಕ್, ಕಿತ್ತಳೆ ಅಥವಾ ಮರ ಕಾಫಿಗಳನ್ನು ಬೆಳೆಸಬೇಕು. ಜಮೀನನ್ನು ಸಿದ್ಧ ಮಾಡುವುದು. ಕಾಡು ಕಡಿದು ಕಾಫಿ ನೆಡುವಾಗ ಎಲ್ಲಾ ಮರಗಳನ್ನು ಕಡಿಯುವುದು ಉಚಿತವಲ್ಲ. ಕಾಡಿನಲ್ಲಿರುವ ಅಪೇಕ್ಷಣೀಯ ಪ್ರಭೇದಗಳ ಆಯ್ದ ಮರಗಳನ್ನು ನೆರಳಿಗಾಗಿ ಉಳಿಸಿಕೊಳ್ಳಬೇಕು. ಆದರೆ ಅವು ದಟ್ಟವಾಗಿರಕೂಡದು. ಜಮೀನನ್ನು ಅನುಕೂಲಕ್ಕೆ ತಕ್ಕಂತೆ ತಾಕುಗಳಾಗಿ ವಿಂಗಡಿಸಿ, ಮಧ್ಯಮಧ್ಯೆ ರಸ್ತೆ ಮತ್ತು ಕಾಲುದಾರಿಗಳಿರುವಂತೆ ನೋಡಿಕೊಳ್ಳಬೇಕು.
ಕಾಫಿಯ ತೃಪ್ತಿಕರ ಬೆಳವಣಿಗೆಗಾಗಿ ಮೇಲ್ಮಣ್ಣಿನ ಸಂರಕ್ಷಣೆ ಅವಶ್ಯಕ. ನೆರಳು ಸಾಕಾದಷ್ಟು ಇರುವ ಜಮೀನಿನಲ್ಲಿ ಮೆಲ್ಮಣ್ಣಿನ ಸವೆತ ಅತಿ ಕಡಿಮೆಯಾಗಿರುತ್ತದೆ. ತೀವ್ರವಾಗಿ ಇಳಿಜಾರು ಪರದೇಶಗಳಲ್ಲಿ ಸಾಕಷ್ಟು ನೆರಳು ಇಲ್ಲದಿದ್ದಾಗ ಮಣ್ಣಿನ ಕೊರೆತದ ಸಮಸ್ಯೆ ತೀವ್ರವಾಗಿರುತ್ತದೆ. ಅಂತಹ ಪ್ರದೇಶಗಳಲ್ಲಿ ಕೆಳ ಮಟ್ಟದ ನೆರಳಿಗಾಗಿ ಹಾಲುವಾಣ ಮತ್ತು ಸಿಲ್ವರ ಓಕ್ ಗಳನ್ನು ಮೇಲ್ಮಟ್ಟದ ನೆರಳಿಗಾಗಿ ಪೈಕಸ್, ಆಲ್ಬೀಜಿಯಾ ಮತ್ತಿತರ ಜಾತಿಯ ನೆರಳಿನ ಮರಗಳನ್ನು ಬೆಳೆಸಬೇಕು.
ಸಾಲುಗಳನ್ನು ಗುರುತು ಮಾಡುವುದು : ಪ್ರತಿ ಪಟ್ಟಿಯಲ್ಲಿ ಕಾಫಿ ಸಸಿ ನೆಡುವ ಸ್ಥಳವನ್ನು ಸಾಲುಗಳು ಮತ್ತು ಗಿಡಗಳ ನಡುವಿನ ಅಂತರವನ್ನು ಗುರುತು ಮಾಡಿ ನಿಶ್ಚಯಿಸಬೇಕು. ಮಟ್ಟಸವಾದ ಮತ್ತು ಸೂಕ್ಷ್ಮ ಇಳಿಜಾರಿನ ಪ್ರದೇಶಗಳಲ್ಲಿ ಸಮಪಾತಳಿ ವಿಧಾನದಲ್ಲಿ ಗಿಡ ನೆಡುವುದು ಸೂಕ್ತ. ಸಾಲುಗಳ ನಡುವಿನ ದೂರ ಮತ್ತು ಗಿಡಗಳ ನಡುವಿನ ಅಂತರವು ತಳಿ ಮಾದರಿಯನ್ನು ಅವಲಂಭಿಸಿದೆ. ವಿವಿಧ ಕಾಫಿ ತಳಿಗಳಿಗೆ ಸೂಕ್ತವಾದ ಅಂತರವನ್ನು ಕೆಳಗೆ ನೀಡಲಾಗಿದೆ :
ಅರೇಬಿಕಾ ಎತ್ತರದ ಗಿಡಗಳು ೬ x ೬, ೭ x ೬, ೭ x ೭
ಕುಬ್ಜ ಗಿಡಗಳು ೫ x ೫
ರೋಬಸ್ಟಾ ಎನ್.೨೭೪, ಹಳೆರೊಬಸ್ಟಾ ೧೦ x ೧೦, ೧೨ x ೧೨
ಸಿ x ಆರ್ ೮ x ೮ , ೯ x ೯
ಕಾಫಿ ಗುಂಡಿಗಳು :
ಕಾಫಿ ಗುಂಡಿಗಳನ್ನು ಸಾಮಾನ್ಯವಾಗಿ ಮಾರ್ಚ್ ಎಪ್ರಿಲ್ ತಿಂಗಳುಗಳಲ್ಲಿ ಸ್ವಲ್ಪ ಬೇಸಗೆ ಮಳೆ ಬಿದ್ದ ನಂತರ ತೆಗೆಯಲು ಆರಂಭಿಸಲಾಗುವುದು. ಮಣ್ಣಿನ ಸ್ವರೂಪ ಮತ್ತು ಆಳಗಳಿಗನುಗುಣವಾಗಿ ಗುಂಡಿ ಆಳವನ್ನು ನಿಶ್ಚಯಿಸಬೇಕು. ಸಾಮಾನ್ಯವಾಗಿ ಗುಂಡಿಗಳು ೪೫ ಸೆಂ.ಮೀ. ಉದ್ದ, ೪೫ ಸೆಂ.ಮೀ. ಅಗಲ ಮತ್ತು ೪೫ ಸೆಂ.ಮೀ ಆಳವಾಗಿರುವುದು ಒಳ್ಳೆಯದು. ಗುಂಡಿಗಳನ್ನು ತೆರೆದ ನಂತರ ಅವುಗಳಲ್ಲಿ ಗಾಳಿಯಾಡಲು ಅವಕಾಶವಾಗುವಂತೆ ೧೫-೨೦ ದಿನ ಬಿಡಬೇಕು. ನಂತರ ಸುತ್ತಲಿರುವ ಮೇಲ್ಮಣ್ಣನ್ನು ತುಂಬಿ ಗುಂಡಿಗಳನ್ನು ಮುಚ್ಚಬೇಕು. ಮಣ್ಣು ಸಾರಹೀನವಾಗಿದ್ದರೆ ಪ್ರತಿ ಗುಂಡಿಗೆ ಒಂದು ಕಿಲೋದಷ್ಟು ಕಂಪೋಸ್ಟ್ ಅಥವಾ ಹಟ್ಟಿ ಗೊಬ್ಬರವನ್ನು ಗುಂಡಿ ಮುಚ್ಚುವಾಗ ಹಾಕಬೇಕು.
(ಮುಂದೆ: ತೋಟದಲ್ಲಿ ಗಿಡ ನೆಡುವುದು, ಅಂತರ ಬೆಳೆ ಇತ್ಯಾದಿ)
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ