ಕಾಫಿ ಗಿಡ ನಾಟಿ ಮತ್ತು ಸಂರಕ್ಷಣೆ (ಭಾಗ ೨)

ತೋಟಗಳಲ್ಲಿ ಗಿಡ ನೆಡುವುದು : ತೋಟದಲ್ಲಿ ಗಿಡ ನೆಡಲು ರೋಗ ಮುಕ್ತ ಹಾಗೂ ಕಸುವುಳ್ಳ ಸಸಿಗಳನ್ನು ಆಯ್ಕೆ ಮಾಡಬೇಕು. ಬೆಳವಣಿಗೆ ಕುಂಠಿತವಾಗಿರುವ ಮತ್ತು ಅಂಕುಡೊಂಕು ಚಿಗುರುಗಳಿರುವ ಸಸಿಗಳನ್ನು ಕೈಬಿಡಬೇಕು. ಸಾಮಾನ್ಯವಾಗಿ ಎರಡನೇ ಮಡಿಯಲ್ಲಿ ಬೆಳೆಸಿದ ೧೬-೧೮ ತಿಂಗಳ ವಯಸ್ಸಿನ ಸಸಿಗಳನ್ನು ಮಳೆಗಾಲದ ಆರಂಭದಲ್ಲಿ ಅಂದರೆ ಜೂನ್ ನಲ್ಲಿಯೂ , ೬-೮ ತಿಂಗಳ ವಯಸ್ಸಿನ ಬುಟ್ಟಿ ಸಸಿಗಳನ್ನು ಆಗಸ್ಟ್ ಸಪ್ಟೆಂಬರ್‌ನಲ್ಲಿಯೂ ನೆಡಲಾಗುವುದು. ಗಿಡ ನೆಡುವಾಗ ಗುಂಡಿಯ ಮೇಲಿನ ಮಣ್ಣನ್ನು ಸಮ ಮಾಡಿ, ಗುಂಡಿಯ ಮಧ್ಯಭಾಗದಲ್ಲಿ ಕುಳಿಯಲ್ಲಿ ಗಿಡ ನೆಡಬೇಕು. ಬುಟ್ಟಿ ಗಿಡಗಳಾದರೆ ಕೆಳಭಾಗದಲ್ಲಿ ಪಾಲಿಥೀನ್ ಹಾಳೆಯನ್ನು ಕತ್ತರಿಸಬೇಕು. ಗಿಡದ ಬೇರು ಡೊಂಕಾಗಿದ್ದರೆ ಚಿವುಟಬೇಕು. ಎರಡನೇ ಮಡಿಯಲ್ಲಿ ಬೇರು ಗಿಡ ನೆಡುವಾಗ ಅದರ ತಾಯಿ ಬೇರು ಮತ್ತು ಪಾರ್ಶ್ವ ಬೇರುಗಳನ್ನು ಸರಿಯಾಗಿ ಹರಡಿರುವಂತೆ ಕೂರಿಸಿ ನಂತರ ಮಣ್ಣು ಮುಚ್ಚಬೇಕು. ಗಿಡದ ಸುತ್ತ ನೀರು ನಿಲ್ಲುವುದನ್ನು ತಪ್ಪಿಸಲು ಸಸಿಯ ಸುತ್ತ ನೆಲಕ್ಕಿಂತ ಒಂದು ಅಂಗುಲದಷ್ಟು ಎತ್ತರಕ್ಕೆ ಮಣ್ಣನ್ನು ಹಾಕಬೇಕು. ಗಿಡಗಳನ್ನು ಆಳಕ್ಕೆ ನೆಡಬಾರದು. ಸಸಿಗಳಿಗೆ ಗಾಳಿಯ ಹೊಡೆತ ತಪ್ಪಿಸಲು ಕತ್ತರಿ ಗೂಟ ನೆಡಬೇಕು. ಗಿಡದ ಸುತ್ತ ಒಣಗಿದ ಎಲೆಯ ತರಗು ಹಾಕಬೇಕು.
ನೆರಳಿನ ಮರಗಳನ್ನು ನೆಡುವುದು : ಹಾಲುವಾಣವನ್ನು ಕೆಳ ಮಟ್ಟದ ನೆರಳಾಗಿ ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಪ್ರತಿ ಎರಡು ಕಾಫಿ ಗಿಡಕ್ಕೆ ಒಂದರಿಂದ ಎರಡು ಮೀಟರ್ ಉದ್ದದ ಹಾಲುವಾಣದ ರೆಂಬೆಗಳನ್ನು ಮುಂಗಾರು ಪ್ರಾರಂಭವಾಗುವ ಜೂನ್ ತಿಂಗಳಲ್ಲಿ ನೆಡಬೇಕು. ಹಾಲುವಾಣದ ಎಳೆಯ ಕಾಂಡಗಳನ್ನು ಬಿಸಿಲಿನ ಬಾಧೆಯಿಂದ ರಕ್ಷಿಸಲು ಅವುಗಳ ಮೇಲೆ ಸುಣ್ಣ ತಿಳಿ ನೀರು ಹಚ್ಚಬೇಕು ಅಥವಾ ಕತ್ತಾಳೆ ನಾರನ್ನು ಕಾಂಡದ ಸುತ್ತ ಕಟ್ಟಬೇಕು. ಸಿಲ್ವರ್ ಓಕ್‌ಗಳನ್ನು ಸಾಲಿನಲ್ಲಿ ೨೦ ಅಡಿ ಅಂತರದಲ್ಲಿ ಸಾಲಿನಿಂದ ಸಾಲಿಗೆ ೪೦ ಅಡಿ ಅಂತರದಲ್ಲಿ ನೆಡಬೇಕು. ಸಿಲ್ವರ್ ಓಕ್ ಮತ್ತು ಹಾಲುವಾಣ ಸಾಲುಗಳು ಒಂದಾದ ಮೇಲೆ ಒಂದರಂತೆ ಇರಬೇಕು. ಸಿಲ್ವರ್ ಓಕ್ ಮರವು ಮೆಣಸಿನ ಬಳ್ಳಿ ಹಬ್ಬಿಸಲು ಸಹ ಅತಿ ಸೂಕ್ತವಾದ ಮರ. ಕಾಡು ಮರಗಳು ಕಡಿಮೆ ಇದ್ದಾಗ ಶಾಶ್ವತ ನೆರಳಿನ ಮರಗಳನ್ನು ದೂರ ದೂರದಲ್ಲಿ ಬೆಳೆಸಬೆಕು.
ಅಂತರ ಬೆಳೆ, ಹಳೇ ಗಿಡ ಕಿತ್ತು ಹಾಕುವ ಮತ್ತು ಗಿಡಗಳ ಕೆಳಗಡೆ ಸಸಿ ನೆಡುವ ವಿಧಾನಗಳು : ಮೊದಲು ಫಸಲು ಕೊಡಲು ೧೦-೧೨ ವರ್ಷ ಬೇಕು. ಕಾವೇರಿಯಂತ ಮೂರು ವರ್ಷಗಳಲ್ಲೇ ಫಸಲಿಗೆ ಬರುವ ತಳಿಗಳನ್ನು ರೋಬಸ್ಟಾಗಳ ನಡುವಿರುವ ವಿಶಾಲ ಅಂತರಗಳಲ್ಲಿ ಬೆಳೆಸಿ ಲಾಭ ಗಳಿಸಬಹುದು. ಕಾವೇರಿ ಶೀಘ್ರವಾಗಿ ಬೆಳೆಯುವುದರಿಂದ ಗಿಡಗಳು ಬೇಗ ಕೂಡಿಕೊಂಡು ಕಳೆಗಳು ಬೆಳೆಯುವುದು ಸಹ ಕಡಿಮೆಯಾಗುತ್ತದೆ. ಕಾವೇರಿ ತಳಿಯನ್ನು ರೋಬಸ್ಟಾ ನಡುವೆ ಅಂತರ ಬೆಳೆಯಾಗಿ ಬೆಳೆಸುವುದರಿಂದ ಗಿಡಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಉದಾಹರಣೆಗೆ ೧೦' x ೧೦' ಅಂತರದಲ್ಲಿ ರೋಬಸ್ಟಾ ನೆಟ್ಟಿರುವ ಪಟ್ಟಿಯಲ್ಲಿ ಕಾವೇರಿಯನ್ನು ೫' x ೫' ಅಂತರದಲ್ಲಿ ನೆಟ್ಟರೆ ಪ್ರತಿ ಹೆಕ್ಟೇರಿಗೆ ೩೨೩೦ ಹೆಚ್ಚು ಕಾವೇರಿ ಗಿಡಗಳನ್ನು ನೆಡಬಹುದಾಗಿದೆ. ಕಾವೇರಿ ಗಿಡಕ್ಕೆ ಯಥೋಚಿತ ಗೊಬ್ಬರ ಹಾಕಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿದರೆ ಬೇಗ ಫಸಲು ಪಡೆಯಬಹುದು. ರೋಬಸ್ಟಾ ಕಾಫಿ ಕೂಡಿಕೊಳ್ಳಲು ಆರಂಭವಾಗುವಂತೆ ಪಕ್ಕದಲ್ಲಿರುವ ಕಾವೇರಿ ಗಿಡಗಳನ್ನು ಕ್ರಮಬದ್ಧವಾಗಿ ಕಿತ್ತು ಹಾಕಿ ಮುಖ್ಯ ಬೆಳೆಯಾದ ರೋಬಸ್ಟಾ ಚೆನ್ನಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು.
ಹಳೆ ಗಿಡ ಕಿತ್ತು ಹೊಸದಾಗಿ ಗಿಡ ನೆಡಬೇಕಾದರೆ ಎರಡು ವಿಧಾನಗಳನ್ನು ಅನುಸರಿಸಬಹುದು :
೧. ಹಳೆ ಗಿಡದ ನಮೂನೆಯ ತರಹದ ಹೊಸ ಗಿಡ ನೆಡುವಂತಿದ್ದರೆ ಹೊಸ ಗಿಡಗಳನ್ನು ಸಾಲಿನ ಮಧ್ಯದಲ್ಲೇ ಪ್ರತ್ಯೇಕ ಸಾಲಿನ ಹಳೆಯ ಗಿಡಗಳ ಕೆಳಗಡೆ ನೆಡುವುದು ಸೂಕ್ತವಾಗಿದೆ. ಕೆಳಗಡೆ ಹೊಸ ಗಿಡಗಳನ್ನು ನೆಟ್ಟ ೧-೨ ವರ್ಷಗಳ ನಂತರ ಹಳೆ ಗಿಡಗಳ ಕಾಂಡವನ್ನು ಕೆಳಮಟ್ಟದಲ್ಲಿ ಕತ್ತರಿಸಿ ಕಂಬ ಚಿಗುರು ಬೆಳೆಯಲು ಬಿಡಬೇಕು. ಕೆಳಗಿನ ಹೊಸ ಗಿಡಗಳೂ ಕೂಡಿಕೊಳ್ಳುವವರೆಗೆ ಕಂಬ ಚಿಗುರುಗಳಿಂದ ಬಹು ಕಾಂಡ ವ್ಯವಸ್ಥೆಯಲ್ಲಿ ಕೆಲವು ವರ್ಷಗಳ ಕಾಲದವರೆಗೆ ಫಸಲು ಪಡೆಯಬಹುದು.
೨. ಹಳೆ ಗಿಡಗಳನ್ನು ಕಿತ್ತು ಬೇರೆ ಅಂತರ ಬೇಸಾಯದ ವಿಭಿನ್ನ ತಳಿಯ ಗಿಡವನ್ನು ಬೆಳೆಸುವ ಸಂದರ್ಭದಲ್ಲಿ ಹಳೆ ಗಿಡಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಿ ಹೊಸದಾಗಿ ಸಾಲು ಹಿಡಿದು ಹೊಸ ಗಿಡಗಳನ್ನು ನೆಡಬಹುದು. ಪಟ್ಟಯಲ್ಲಿರುವ ಹಳೆ ಗಿಡಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಿದಾಗ ಹೊಸದಾಗಿ ನೆಡುವ ಗಿಡದ ಅವಶ್ಯಕತೆಯಂತೆ ನೆರಳಿನ ವಿಧಾನವನ್ನು ಸರಿಪಡಿಸಲು ಸಾಧ್ಯವಾಗುತ್ತದೆ.
ಗಿಡಗಳ ರಕ್ಷಣೆ :
೧. ಕಾಫಿ ಮತ್ತು ಹಾಲುವಾಣಗಳಿಗೆ ಜಾನುವಾರುಗಳಿಂದ ಹಾನಿಯಾಗದಂತೆ ಬೇಲಿಯನ್ನು ಚೆನ್ನಾಗಿ ಹಾಕಬೇಕು.
೨. ಸಸಿಗಳನ್ನು ನೆಟ್ಟ ನಂತರದ ಕೆಲವು ವರ್ಷಗಳ ಕಾಲ ಗೊಬ್ಬರದ ಹುಳು ಹಾವಳಿಯಿಂದ ರಕ್ಷಿಸಬೇಕು.
೩. ವಿಶೇಷವಾಗಿ ಹುಲ್ಲಿನಂತ ಕಳೆಯನ್ನು ಮುಚ್ಚುಗಡೆ ಮಾಡುವುದ ಮೂಲಕ ಮೊದಲ ವರ್ಷದಲ್ಲೇ ಹತೋಟಿ ಮಾಡಬೇಕು.
೪. ಸಸಿಗಳ ಸುತ್ತಲ ಮಣ್ಣನ್ನು ಸರಿಯಾಗಿ ತರಗಿನಿಂದ ಮುಚ್ಚಬೇಕು.
೫. ನೆರಳಿಲ್ಲದ ಜಾಗಗಳಲ್ಲಿ ಸಸಿಗಳಿಗೆ ಬೇಸಿಗೆಯಲ್ಲಿ ಕಾಡು ಮರಗಳ ರೆಂಬೆಗಳನ್ನು ಬಳಸಿ ಗೂಡು ಕಟ್ಟಿ ಕೃತಕ ನೆರಳು ಒದಗಿಸಬೇಕು.
೬. ಗಿಡ ನೆಟ್ಟ ನಂತರದ ವರ್ಷದ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಒಂದು ಬಾರಿ ಗೊಬ್ಬರ ಹಾಕಬೇಕು.
೭. ಸಾಧ್ಯವಿರುವ ಕಡೆಗಳಲ್ಲಿ ತುಂತುರು ನೀರಾವರಿ, ಮಣ್ಣಿನ ಕೆಳ ಪದರಕ್ಕೆ ನೀರು ಹಾಯಿಸುವ ಹನಿ ನೀರಾವರಿ ವಿಧಾನಗಳ ಮೂಲಕ ನೀರಾವರಿ ಮಾಡಬಹುದು.
೮. ಸೂಚಿಸಿರುವ ಸಸ್ಯ ಸಂರಕ್ಷಣಾ ವಿಧಾನಗಳನ್ನು ಎಚ್ಚರಿಕೆ ವಹಿಸಿ ಅನುಸರಿಸಬೇಕು.
ಅಡಿಕೆ ತೋಟದಲ್ಲಿ ಕಾಫಿ ಬೆಳೆಯನ್ನು ಬೆಳೆಸುವಾಗ ಅಡಿಕೆ ಸಸಿಗೆ ಕನಿಷ್ಟ ಒಂದು ವರ್ಷ ಪ್ರಾಯವಾದರೂ ಆಗಿರಬೇಕು. ಮಧ್ಯಂತರದಲ್ಲಿ ಎರಡು ಸಾಲುಗಳಲ್ಲಿ ನಾಟಿ ಮಾಡಿದರೆ ಉತ್ತಮ. ಒಂದು ಸಾಲು ಬಿಟ್ಟು ಮತ್ತೊಂದು ಸಾಲಿಗೆ ನಾಟಿ ಮಾಡುವುದರಿಂದ ನಿರ್ವಹಣೆ ಸುಲಭವಾಗುತ್ತದೆ. ಪ್ರತ್ಯೇಕ ನೆರಳು ಬೇಕಾಗದ ಕಾರಣ ಆಡಿಕೆ ತೋಟದಲ್ಲಿ ಕಾಫಿ ಬೆಳೆಸುವುದು ಸುಲಭ. ಅದಲ್ಲದೆ ಸಾಗುವಾನಿ (ತೇಗ) ತೋಟದ ಮಧ್ಯೆಯೂ ಕಾಫಿ ಬೆಳೆಸಬಹುದು.
(ಮುಗಿಯಿತು)
ಮಾಹಿತಿ: ರಾಧಾಕೃಷ್ಣ ಹೊಳ್ಳ